ಇನ್ವೆಸ್ಟ್ ಕರ್ನಾಟಕ ಬಂಡವಾಳ ಹೂಡಿಕೆದಾರರ ಸಮಾವೇಶ ರಾಜ್ಯದ ಆರ್ಥಿಕ ಅಭಿವೃದ್ಧಿಗೆ ಪೂರಕವಾಗುತ್ತದೆ ಎಂಬ ನಿರೀಕ್ಷೆಯೊಂದಿಗೆ ಮಾಡಲಾಗುತ್ತದೆ. ಈ ಸಮಾವೇಶ ಮಾಡುವುದಕ್ಕೂ ಮುನ್ನವೇ ರಾಜ್ಯ ಕೈಗಾರಿಕೆಗಳ ಆಗರವಾಗಿದ್ದು, ಉತ್ಪಾದನೆ, ರಕ್ಷಣೆ ಸೇರಿದಂತೆ ಇನ್ನಿತರ ಕ್ಷೇತ್ರಗಳಿಗೆ ಸಂಬಂಧಿಸಿದ ಅನೇಕ ಕೈಗಾರಿಕೆಗಳು ಇಲ್ಲಿವೆ. ಅವುಗಳ ಮೂಲಕ ರಾಜ್ಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗುವಂತಾಗಿದೆ. ಆದರೆ ಇದಕ್ಕೆಲ್ಲಾ ಮೂಲ ಕತೃಗಳೆಂದರೆ ಮೈಸೂರು ಮಹಾರಾಜರು ಮತ್ತು ಸರ್.ಎಂ.ವಿಶ್ವೇಶ್ವರಯ್ಯ.
ಹೂಡಿಕೆದಾರರ ಸಮಾವೇಶದ ಹುಟ್ಟಿಕೊಂಡಿದ್ದು ಮೈಸೂರು ಮಹಾರಾಜರ ಕಾಲದಲ್ಲಿ. ಪ್ರಜಾತಂತ್ರ ವ್ಯವಸ್ಥೆಯನ್ನು ಮೈಸೂರು ರಾಜ್ಯದಲ್ಲಿ ಜಾರಿಗೆ ತಂದ ಕೀರ್ತಿಗೆ ಕಾರಣರಾದ ಮಹಾರಾಜರು ಆರ್ಥಿಕ ನೀತಿಯನ್ನು ಸಮರ್ಪಕವಾಗಿ ಜಾರಿಗೆ ತಂದಿದ್ದಾರೆ. ಅದರಲ್ಲೂ ಪ್ರಮುಖವಾಗಿ ಮಹಾನ್ ಎಂಜಿನಿಯರ್‍ಎನಿಸಿಕೊಂಡಿರುವ ಸರ್.ಎಂ.ವಿಶ್ವೇಶ್ವರಯ್ಯ ಅವರ ಪಾತ್ರ ಬಹಳ ದೊಡ್ಡದಿದೆ. ಸರ್.ಎಂ.ವಿಶ್ವೇಶ್ವರಯ್ಯ ಮೈಸೂರು ಸಂಸ್ಥಾನದ ಮುಖ್ಯ ಎಂಜಿನಿಯರ್ ಆಗಿ ನೇಮಕಗೊಂಡ ಬಳಿಕ ಮೊದಲ ಬಾರಿಗೆ ರಾಜ್ಯದ ಆರ್ಥಿಕ ಪರಿಸ್ಥಿತಿಗೆ ಪೂರಕವಾಗಬಲ್ಲ ನೀತಿ ರೂಪಿಸಲು ಮುಂದಾದರು. 1911ರಲ್ಲಿ ಮೊದಲ ಬಾರಿಗೆ ಆರ್ಥಿಕ ಸಮ್ಮೇಳನ, 1913ರಲ್ಲಿ ಪ್ರತ್ಯೇಕವಾದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ರಚನೆಯಾಗುವುದರೊಂದಿಗೆ ರಾಜ್ಯದ ಆರ್ಥಿಕ ಅಭಿವೃದ್ಧಿಗೆ ಮುನ್ನುಡಿ ಬರೆದರು.
ರಾಜ್ಯದ ಕೈಗಾರಿಕಾ ಇತಿಹಾಸ:
ರಾಜ್ಯದಲ್ಲಿ ಮೊದಲ ಬಾರಿಗೆ ಕೈಗಾರಿಕೆ ಎಂಬುದು ಆರಂಭವಾಗಿದ್ದು 1884ರಲ್ಲಿ. ಈಗಿನ ಕಲಬುರಗಿಯಲ್ಲಿ ಕಲಬುರ್ಗಾ ಮಿಲ್ ಆರಂಭಿಸಲಾಯಿತು. ನಂತರ ಕ್ರಮೇಣ ಎಂಎಸ್‍ಕೆ ಮಿಲ್ಸ್, ಗೋಕಾಕ್ನಲ್ಲಿ ಟೆಕ್ಸ್‍ಟೈಲ್ ಮಿಲ್, ಹರಿಹರದಲ್ಲಿ ಪಾಲಿ ಫೈಬರ್, ವಾಡಿಯಲ್ಲಿ ಎಸಿಸಿ ಸಿಮೆಂಟ್, ಬೆಂಗಳೂರಿನಲ್ಲಿ ಲಾರ್ಸನ್ ಆ್ಯಂಡ್ ಟುಬ್ರೊ, ಅಮ್ಕೋ ಬ್ಯಾಟರೀಸ್, ಮೈಸೂರು ಚರ್ಮೋತ್ಪನ್ನ ಕಾರ್ಖಾನೆ, ಸರ್ಕಾರಿ ಸಾಬೂನು ಕಾರ್ಖಾನೆಗಳು ಸ್ಥಾಪನೆಯಾದವು. ಇನ್ನು ಉಕ್ಕು ಕಾರ್ಖಾನೆ, ಕೆನರಾ ವರ್ಕ್‍ಶಾಪ್ ಲಿಮಿಟೆಡ್, ಮಿನರ್ವ ಮಿಲ್, ಕೆಜಿಎಫ್ ಚಿನ್ನದ ಗಣಿ ಕಂಪೆನಿ ಕೂಡ ಸ್ಥಾಪಿಸಲಾಯಿತು. ಹೀಗೆ ರಾಜ್ಯದ ನಾನಾ ಭಾಗಗಳಲ್ಲಿ ಅನೇಕ ಕೈಗಾರಿಕೆಗಳನ್ನು ಆರಂಭಿಸಲಾಯಿತು. ಅವುಗಳು ರಾಜರ, ಬ್ರಿಟೀಷರ, ಖಾಸಗಿಯವರ ಒಡೆತನದಲ್ಲಿ ಆರಂಭವಾದ ಕೈಗಾರಿಕೆಗಳಾಗಿದ್ದವು.
ಜಾಗತೀಕ ಹೆಸರು ತಂದಿರುವ ಕಾರ್ಖಾನೆಗಳು:
ಕೇವಲ ಸಣ್ಣಪುಟ್ಟ ಕೈಗಾರಿಕೆಗಳಲ್ಲದೆ ರಾಜ್ಯದಲ್ಲಿ ಜಾಗತಿಕ ಮಟ್ಟದಲ್ಲಿ ಹೆಸರುವಾಸಿಯಾದಂತಹ ಅನೇಕ ಕೈಗಾರಿಕೆಗಳಿವೆ. ಅವುಗಳಲ್ಲಿ ಪ್ರಮುಖವಾಗಿ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್, ನ್ಯಾಷನಲ್ ಏರೋಸ್ಪೇಸ್ ಲ್ಯಾಬೊರೆಟರೀಸ್, ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್, ಹಿಂದೂಸ್ಥಾನ್ ಮೆಷಿನ್ ಟೂಲ್ಸ್ ಕೇಂದ್ರ ಕಚೇರಿ ಬೆಂಗಳೂರಿನಲ್ಲಿವೆ. ಅದರೊಂದಿಗೆ ಬಾಹ್ಯಾಕಾಶ ಸಂಸ್ಥೆ ಇಸ್ರೋ, ಕೇಂದ್ರೀಯ ವಿದ್ಯುತ್ ಸಂಶೋಧನಾ ಸಂಸ್ಥೆಗಳು ರಾಜ್ಯದಲ್ಲಿವೆ. ಅದರೊಂದಿಗೆ ಬಾಷ್, ಟೊಯೋಟಾ, ಕೋಕಾ-ಕೋಲಾ ಸೇರಿದಂತೆ ಅನೇಕ ಬಹುರಾಷ್ಟ್ರೀಯ ಕಂಪೆನಿಗಳ ಉತ್ಪಾದನಾ ಘಟಕಗಳು ರಾಜ್ಯದಲ್ಲಿ ನೆಲೆಯೂರಿವೆ.
ಐಟಿ ಹಬ್ ಮತ್ತು ಇನ್ನಿತರ ಹೆಮ್ಮೆ:
ದೇಶದಲ್ಲಿ ಐಟಿ ಉದ್ದಿಮೆಯ ಪ್ರಮುಖ ರಾಜ್ಯ ಎಂದು ಕರ್ನಾಟಕ ಕರೆಸಿಕೊಳ್ಳುತ್ತಿದೆ. ಹೀಗಾಗಿಯೇ ಇಲ್ಲಿ 2084 ಐಟಿ ಕಂಪನಿಗಳಿವೆ. ಈ ಕಂಪೆನಿಗಳಲ್ಲಿ 5.50 ಲಕ್ಷ ಉದ್ಯೋಗ ಮಾಡುತ್ತಿದ್ದಾರೆ. ಅದರೊಂದಿಗೆ 103 ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳು, 743 ಬಹುರಾಷ್ಟ್ರೀಯ ಸಂಸ್ಥೆಗಳು, ಜಗತ್ತಿನ 4ನೇ ಅತಿದೊಡ್ಡ ಟೆಕ್ನಾಲಜಿ ಕ್ಲಸ್ಚರ್ ಹಾಗೂ 1,003 ಕೈಗಾರಿಕಾ ತರಬೇತಿ ಸಂಸ್ಥೆಗಳು ರಾಜ್ಯದಲ್ಲಿವೆ. ಇಷ್ಟೇ ಅಲ್ಲದೆ ರಾಜ್ಯದಲ್ಲಿ 5 ಲಕ್ಷಕ್ಕೂ ಅಧಿಕ ಸಣ್ಣ ಕೈಗಾರಿಕಾ ಘಟಕಗಳಿದ್ದು, ಸುಮಾರು 25 ಲಕ್ಷಕ್ಕೂ ಹೆಚ್ಚು ಮಂದಿಗೆ ಉದ್ಯೋಗಾವಕಾಶ Àಲ್ಪಿಸಲಾಗಿದೆ.
ರಫ್ತಿನಲ್ಲೂ ಮುಂದು:
ರಾಜ್ಯದ ಒಟ್ಟು ರಫ್ತು ಮೌಲ್ಯ 5,200 ಕೋಟಿ ಡಾಲರ್ ಮೊತ್ತ ತಲುಪಿದ್ದು, ಇದು ದೇಶದ ರಫ್ತಿನಲ್ಲಿ ಶೇ.13 ರಷ್ಟಿದೆ. ಅದೇ ರೀತಿ ರಾಜ್ಯದ ಒಟ್ಟು ದೇಶೀಯ ಉತ್ಪನ್ನ 12 ಸಾವಿರ ಕೋಟಿ ಡಾಲರ್‍ನಷ್ಟಿದೆ. 2004ರಿಂದ 2015ರವರೆಗೆ ಜಿಎಸ್‍ಡಿಪಿಯಲ್ಲಿ ಶೇ.12.04 ರಷ್ಟು ಹೆಚ್ಚಳವಾಗಿದೆ. ಅದರಲ್ಲಿ ಕೈಗಾರಿಕಾ ಪಾಲು 6,150 ಕೋಟಿ ಅಮೆರಿಕನ್ ಡಾಲರ್.
ಸಂಪನ್ಮೂಲಕ್ಕೂ ಕೊರತೆಯಿಲ್ಲ:
ರಾಜ್ಯ ಕೈಗಾರಿಕೆಗಳೊಂದಿಗೆ ಸಂಪನ್ಮೂಲಕ್ಕೂ ಯಾವುದೇ ಕೊರತೆ ಇಲ್ಲದಂತಿದೆ. ಅದಿರು, ವಿದ್ಯುತ್, ನೀರು ಎಲ್ಲವೂ ಇಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೆ ಪೂರಕ ಎನ್ನುವಂತಿವೆ. ವಿದ್ಯುತ್ ಉದ್ಪಾದನೆ ಹೆಚ್ಚಳಕ್ಕೆ ಈಗಾಗಲೆ ಕ್ರಮ ಕೈಗೊಳ್ಳುತ್ತಿದ್ದು, ಭೂಮಿಯನ್ನು ಒದಗಿಸಲು ಯೋಜನೆ ರೂಪಿಸಲಾಗಿದೆ.