ಸಮಾವೇಶ ಯಶಸ್ವಿಯಾದರೂ ಯೋಜನೆಗಳು ಜಾರಿಯಾಗುವುದು ಮುಖ್ಯ
ಅಗಸ್ತ್ಯ
ರಾಜ್ಯದಲ್ಲಿ ಮೂರನೇ ಬಂಡವಾಳ ಹೂಡಿಕೆದಾರರ ಸಮಾವೇಶ ತೆರೆ ಬಿದ್ದಿದೆ. ಈ ಸಮಾವೇಶದಲ್ಲಿ 3.08 ಲಕ್ಷ ರೂ. ಬಂಡವಾಳ ರಾಜ್ಯಕ್ಕೆ ಹರಿದುಬಂದಿದೆ. ಆದರೆ, ಈ ಹಿಂದೆ ನಡೆಸಲಾಗಿರುವ ಎರಡು ಸಮಾವೇಶ ಯಶ ಕಂಡಿದೆಯೇ, ಅಲ್ಲಿ ಆದಂತಹ ಒಪ್ಪಂದಗಳ ಪ್ರಕಾರ ಕೈಗಾರಿಕೆಗಳ ಸಂಖ್ಯೆ ಮತ್ತು ಉದ್ಯೋಗಾವಕಾಶದಲ್ಲಿ ವೃದ್ಧಿಯಾಗಲಿದೆಯೇ ಎಂಬ ಅವಲೋಕನ ಮಾಡಿಕೊಳ್ಳಬೇಕಿದೆ. ಈ ಹಿಂದಿನ ಸಮಾವೇಶಗಳ ಬಗ್ಗೆ ರಾಜ್ಯ ಸರ್ಕಾರವೇ ನೀಡುವ ಅಂಕಿ-ಅಂಶಗಳನ್ನು ನೋಡಿದರೆ ಅನೇಕ ಒಪ್ಪಂದಗಳು ಕೇವಲ ಪೇಪರ್‍ನಲ್ಲಿ ಮಾತ್ರ ಉಳಿದುಕೊಂಡಿದ್ದು, ಕಾರ್ಯರೂಪಕ್ಕೆ ಬಂದೇಯಿಲ್ಲ.
ದೇಶದಲ್ಲಿ ಮೊದಲ ಬಾರಿಗೆ ಬಂಡವಾಳ ಹೂಡಿಕೆದಾರರ ಸಮಾವೇಶ ಎಂಬ ಪರಿಕಲ್ಪನೆ ತಂದಿದ್ದು ಈಗಿನ ಪ್ರಧಾನಿ ಮತ್ತು ಹಿಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ. 2003ರಲ್ಲಿ ವೈಬ್ರಂಟ್ ಗುಜರಾತ್ ಹೂಡುಕೆದಾರರ ಸಮಾವೇಶ ಮಾಡುವ ಮೂಲಕ ಕೈಗಾರಿಕಾ ವಲಯಕ್ಕೆ ಉತ್ತೇಜನ ನೀಡಿದರು. ಅದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಹೂಡಿಕೆದಾರರ ಸಮಾವೇಶ ಮಾಡಲು ನಿರ್ಧರಿಸಿದ ಹಿಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಮಾಜಿ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಗ್ಲೋಬಲ್ ಇನ್ವೆಸ್ಟರ್ಸ್ ಮೀಟ್' ಮಾಡಿದರು.
ಕಾರ್ಯರೂಪಕ್ಕೆ ಬಾರದ ಜಿಮ್ ಆಶಯ:
ಬೆಂಗಳೂರು ಕೇಂದ್ರಿತವಾಗಿದ್ದ ಕೈಗಾರಿಕಾ ವಲಯವನ್ನು ಜಿಲ್ಲಾ, ತಾಲೂಕು ಮಟ್ಟಕ್ಕೆ ತೆಗೆದುಕೊಂಡು ಹೋಗಲು 2010ರ ಜೂ.4 ಮತ್ತು 5ರಂದು ಜಿಮ್ ಆಯೋಜಿಸಲಾಗಿತ್ತು. ಸಮಾವೇಶದಲ್ಲಿ ಒಟ್ಟು 3.92 ಲಕ್ಷ ಕೋಟಿ ರೂ. ಮೊತ್ತದ ಯೋಜನೆಗಳಿಗೆ ಸಂಬಂಧಿಸಿದಂತೆ 360 ಎಂಒಯುಗಳು ಸಹಿಯಾಗಿದ್ದವು. ಈ ಹೂಡಿಕೆಯಿಂದ 7.27 ಲಕ್ಷ ಹೊಸ ಉದ್ಯೋಗ ಸೃಷಿಯಾಗುವ ವಿಶ್ವಾಸ ಹೊಂದಲಾಗಿತ್ತು.
ಹೂಡಿಕೆ, ಆವಿಷ್ಕಾರ, ಉದ್ಯಮಶೀಲತೆ - ಇದು ಕರ್ನಾಟಕದ ಗರಿ
ಆದರೆ ಸಮಾವೇಶದಲ್ಲಿ ಘೋಷಣೆಯಾದ ಮಟ್ಟಿಗೆ ಅನುಷ್ಟಾನಗೊಳ್ಳಲಿಲ್ಲ. ಸರ್ಕಾರವೇ ನೀಡುವ ಅಂಕಿ ಅಂಶಗಳ ಪ್ರಕಾರ 2010ರ ಹೂಡಿಕೆ ಸಮಾವೇಶದಲ್ಲಿ ಘೋಷಣೆಯಾಗಿದ್ದರ ಪೈಕಿ ಹೂಡಿಕೆಯಾಗಿದ್ದು ಕೇವಲ 32, 957 ಕೋಟಿ ರೂ.ಗಳು ಹಾಗೂ ಸೃಷ್ಟಿಯಾಗಿದ್ದು 93,102 ಉದ್ಯೋಗಗಳು. ಆಮೂಲಕ ಜಿಮ್ ಕೇವಲ ಕಾಗದದ ಮೇಲೆ ಉಳಿಯುವಂತಾಯಿತು.
ಎರಡನೇ ಜಿಮ್ ಕೂಡ ಅಷ್ಟಕ್ಕಷ್ಟೆ:
ಮೊದಲ ಜಿಮ್‍ನ ನಂತರ ನಡೆದ ಅನೇಕ ರಾಜಕೀಯ ಪ್ರಹಸನಗಳಿಂದಾಗಿ ಎರಡನೇ ಜಿಮ್ ಎರಡು ವರ್ಷಗಳ ನಂತರ ನಡೆಸಲಾಯಿತು. 2012ರ ಜೂನ್‍ನಲ್ಲಿ ನಡೆದ ಎರಡನೇ ಜಿಮ್‍ನ ನೇತೃತ್ವ ವಹಿಸಿದ್ದವರು ಮಾಜಿ ಸಿಎಂ ಡಿ.ವಿ. ಸದಾನಂದ ಹಾಗೂ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ. ಈ ಜಿಮ್‍ನಲ್ಲಿ ಒಟ್ಟು 2.81 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆಯ 245 ಒಪ್ಪಂದಗಳಾದವು. ಅಲ್ಲದೆ 14 ಲಕ್ಷ ಉದ್ಯೋಗ ಸೃಷ್ಟಿಯಾಗುವ ಭರವಸೆ ಹೊಂದಲಾಗಿತ್ತು. ಅಲ್ಲದೆ 40 ದೇಶಗಳ 800 ಸಂಸ್ಥೆಗಳು ಭಾಗವಹಿಸಿದ್ದವು.
ಆದರೆ ಸರ್ಕಾರ ನೀಡಿದ ಮಾಹಿತಿ ಪ್ರಕಾರ ಮಾಡಿಕೊಳ್ಳಲಾದ ಒಪ್ಪಂದದ ಪೈಕಿ 12,468 ಕೋಟಿ ರೂ.ಗಳ ಮೊತ್ತದ 39 ಯೋಜನೆಗಳು ಮಾತ್ರ ಅನುಷ್ಟಾನಕ್ಕೆ ಬಂದವು. ಇನ್ನು ಉದ್ಯೋಗ ಸೃಷ್ಟಿಯಾಗಿದ್ದು ಕೇವಲ 21,794 ಮಾತ್ರ.
ಸಮಾವೇಶದ ಆಶಯ ಜಾರಿಯಾಗಬೇಕಿದೆ:
ಇದೀಗ ಕಾಂಗ್ರೆಸ್ ಸರ್ಕಾರ ಮತ್ತೆ ಬಂಡವಾಳಗಾರರನ್ನು ರಾಜ್ಯಕ್ಕೆ ಕರೆತಂದು ಹೂಡಿಕೆ ಮಾಡಿಸಿದೆ. ಮುಖ್ಯಮಂತ್ರಿ ಸಿದ್ದರಾಮ್ಯ ಮತ್ತು ಕೈಗಾರಿಕಾ ಸಚಿವ ಆರ್. ವಿ. ದೇಶಪಾಂಡೆ ನೇತೃತ್ವದಲ್ಲಿ ಇನ್ವೆಸ್ಟ್ ಕರ್ನಾಟಕ ಹೆಸರಿನಲ್ಲಿ ನಡೆದ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ 3.08 ಲಕ್ಷ ಕೋಟಿ ರೂ. ಹೂಡಿಕೆಯ ಭರವಸೆ ದೊರೆತಿದ್ದು, 6.70 ಲಕ್ಷ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಹೊಂದಲಾಗಿದೆ. ಸಮಾವೇಶದಲ್ಲಿ ಮಾಡಿಕೊಳ್ಳಲಾಗುವ ಒಪ್ಪಂದಗಳು ಸರಿಯಾಗಿ ಜಾರಿಯಾಗುವಂತೆ ಮಾಡಲು ಪೂರಕ ವಾತಾವರಣ ಸೃಷ್ಟಿಸುವುದು ರಾಜ್ಯ ಸರ್ಕಾರದ ಮೇಲಿರುವ ದೊಡ್ಡ ಹೊಣೆಗಾರಿಕೆಯಾಗಿದೆ. ಇಲ್ಲದಿದ್ದರೆ ಹಿಂದಿನ ಸಮಾವೇಶಗಳ ನಂತರದ ಬೆಳವಣಿಗೆ ಈಗಲೂ ಮುಂದುವರೆಯಲಿದೆ.
ಹಿಂದಿನ ತೊಡಕುಗಳೇನು:
ಹಿಂದಿನ ಎರಡು ಸಮಾವೇಶಗಳಲ್ಲಾದ ಬಂಡವಾಳ ಹೂಡಿಕೆ ಒಪ್ಪಂದ ಜಾರಿಯಾಗದೇ ಇರಲು ಪ್ರಮುಖ ಕಾರಣ ಸರ್ಕಾರದ ನಿರ್ಲಕ್ಷ್ಯ. ಕೈಗಾರಿಕಾ ವಲಯಕ್ಕಾಗಿ ಸರ್ಕಾರದ ಏಕಗವಾಕ್ಷಿ ವ್ಯವಸ್ಥೆ ಜಾರಿಯಲ್ಲಿನ ನಿರ್ಲಕ್ಷ್ಯ, ಗಣಿಗಾರಿಕೆ ಮೇಲೆ ನಿಷೇಧ ಹೇರಿದ್ದು, ಭೂಸ್ವಾಧೀನ ಪ್ರಕ್ರಿಯೆಯಲ್ಲಾದ ವಿಳಂಬಗಳೇ ಕಾರಣ ಎನ್ನಲಾಗುತ್ತಿದೆ. ಈ ಬಾರಿಯ ಸಮಾವೇಶದ ಒಪ್ಪಂದಗಳು ಜಾರಿಯಾಗಬೇಕೆಂದರೆ ಅದನ್ನೆಲ್ಲಾ ಸರಿಪಡಿಸಬೇಕಾದ ಅವಶ್ಯಕತೆ ಇದೆ.
1.ಇನ್ವೆಸ್ಟ್ ಕರ್ನಾಟಕ ಮತ್ತು ಸ್ಟಾರ್ಟ್ಅಪ್ಗಳು ಸಾಮಾಜಿಕ ಪರಿಣಾಮ ಬೀರಬೇಕು: ಟಾಟಾ ಬಿರ್ಲಾ
2.ಬೆಂಗಳೂರನ್ನು ವಾಸಕ್ಕೆ ಯೋಗ್ಯ ಮಾಡಿ - ಸರ್ಕಾರಕ್ಕೆ ದಿಗ್ಗಜ ಉದ್ಯಮಿಗಳ ಮನವಿ
3.ಕರ್ನಾಟಕದ ಚಿತ್ರಣ ಬದಲಾಯಿಸಲಿವೆ ವಿನೂತನ ಯೋಜನೆಗಳು - ಇದು ದೇಶಕ್ಕೆ ಮಾದರಿ