ಓಲಾ, ಉಬರ್ಗಳಿಗೆ ಟಾಂಗ್ ನೀಡಲು ಸಿದ್ಧತೆ- ಸದ್ದಿಲ್ಲದೆ ರೆಡಿಯಾಗುತ್ತಿದೆ ಹೊಸ ಆ್ಯಪ್..!
ಟೀಮ್ ವೈ.ಎಸ್. ಕನ್ನಡ
ರಾಜ್ಯಸರಕಾರದ ಸಾರಿಗೆ ನೀತಿಗಳು ಕ್ಯಾಬ್ ಸರ್ವೀಸ್ಗಳಾದ ಓಲಾ ಮತ್ತು ಉಬರ್ ಸೇವೆಗಳ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿದೆ. ಓಲಾ ಮತ್ತು ಉಬರ್ ಡ್ರೈವರ್ಗಳು ಹೊಟ್ಟೆ ತುಂಬಿಸಲು ಕೂಡ ಪರದಾಡುತ್ತಿದ್ದಾರೆ. ಬೆಂಗಳೂರಿನಲ್ಲಿರುವ ಓಲಾ, ಉಬರ್ ಡ್ರೈವರ್ಗಳು ಕೂಡ ಕಂಗೆಟ್ಟಿದ್ದಾರೆ. ಓಲಾ, ಉಬರ್ ಡ್ರೈವರ್ಗಳು ತಮ್ಮ ಅಸೋಸಿಯೇಶನ್ಗಳ ಮೂಲಕ ಕಂಪನಿಗಳ ವಿರುದ್ಧ ನಡೆಸಿದ್ದ ಪ್ರತಿಭಟನೆಯೂ ಯಶಸ್ಸು ಕಂಡಿಲ್ಲ. ಆದ್ರೆ ಕ್ಯಾಬ್ ಸರ್ವೀಸ್ ಡ್ರೈವರ್ಗಳು ಈಗ ಹೊಸ ಲೆಕ್ಕಾಚಾರ ಹಾಕೊಕೊಂಡಿದ್ದಾರೆ. ಓಲಾ, ಉಬರ್ಗಳಂತೆ ತಮ್ಮದೇ ಆ್ಯಪ್ ಒಂದನ್ನು ತಯಾರಿಸಿ, ಗ್ರಾಹಕರಿಗೆ ಸೇವೆ ನೀಡುವ ಬಗ್ಗೆ ಚಿಂತನೆಗಳು ನಡೆಯುತ್ತಿವೆ.
ಹೊಸ ಆ್ಯಪ್ ಮೂಲಕ ಓಲಾ ಮತ್ತು ಉಬರ್ಗಳಿಗೆ ಟಾಂಗ್ ನೀಡುವುದಕ್ಕೆ ಡ್ರೈವರ್ಗಳ ಅಸೋಸಿಯೇಶನ್ ಮಾತುಕತೆಯನ್ನೂ ನಡೆಸಿದೆ. ಮಾರ್ಚ್ 1ರಂದು ಫ್ರೀಡಂ ಪಾರ್ಕ್ನಲ್ಲಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದ ವೇಳೆ ಈ ನಿರ್ಧಾರ ಮಾಡಲಾಗಿದೆ. ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಜೊತೆ ಡ್ರೈವರ್ಗಳ ಅಸೋಸಿಯೇಶನ್ ಮುಖ್ಯಸ್ಥ ತನ್ವೀರ್ ಪಾಶಾ ಮಾತುಕತೆ ಕೂಡ ನಡೆಸಿದ್ದಾರೆ. ಮಾಜಿ ಮುಖ್ಯಮಂತ್ರಿಗಳಿಂದ ಪಾಸಿಟಿವ್ ರಿಪ್ಲೈ ಕೂಡ ಬಂದಿದೆ.
ದಿ ನ್ಯೂಸ್ ಮಿನಿಟ್ ವರದಿ ಪ್ರಕಾರ ಡ್ರೈವರ್ಗಳ ಅಸೋಸಿಯೇಶನ್ ತಯಾರು ಮಾಡುವ ಆ್ಯಪ್ಗೆ ಜೆಡಿಎಸ್ ಮುಖಂಡ ಕುಮಾರಸ್ವಾಮಿ, ಫಂಡಿಂಗ್ ಮಾಡಲಿದ್ದಾರೆ ಎನ್ನಲಾಗಿದೆ. ಆ್ಯಪ್ ತಯಾರಿಸಲು ಎಂಜಿನಿಯರ್ಗಳನ್ನು ಕೂಡ ನೇಮಕ ಮಾಡಿಕೊಳ್ಳಲಾಗುತ್ತಿದೆ. ವಿವಿಧ ಡ್ರೈವರ್ಸ್ ಯೂನಿಯನ್ಗಳು ಕೂಡ ಹೊಸ ಆ್ಯಪ್ಗೆ ತಮ್ಮ ಬೆಂಬಲವನ್ನು ಸೂಚಿಸಿವೆ. ಸುಮಾರು 8000 ಕ್ಯಾಬ್ ಡ್ರೈವರ್ಗಳು ಹೊಸ ಆ್ಯಪ್ ಮೂಲಕ ಬಹುರಾಷ್ಟ್ರೀಯ ಕಂಪನಿಗಳಿಗೆ ಟಾಂಗ್ ಕೊಡಲು ತಮ್ಮ ಬೆಂಬಲವನ್ನೂ ಸೂಚಿಸಿದ್ದಾರೆ. ಕಸ್ಟಮರ್ ಸರ್ವೀಸ್ ಟೀಮ್ ಅನ್ನು ಕೂಡ ಸಜ್ಜುಗೊಳಿಸಲಾಗುತ್ತಿದೆ.
ಇದನ್ನು ಓದಿ: ಕೃಷಿಕ ಎಸಿಪಿ ಆಗಿದ್ದು ಹೇಗೆ..? ಧಿಘವ್ಕರ್ ಕಥೆ ಕೇಳಿ..!
ಡ್ರೈವರ್ಗಳು ಓಲಾ, ಉಬರ್ಗಳಂತಹ ವಿದೇಶಿ ಕಂಪನಿಗಳ ನಿಯಮಗಳಿಗೆ ತಲೆಬಾಗಬಾರದು ಅನ್ನುವ ಉದ್ದೇಶದಿಂದ ಕೆಲಸ ಶುರುಮಾಡಲಾಗಿದೆ. ಆ್ಯಪ್ ಅಭಿವೃದ್ಧಿಯ ಜೊತೆಗೆ ವಿವಿಧ ನಗರಗಳ ಡ್ರೈವರ್ಗಳನ್ನು ಕೂಡ ಒಂದುಗೂಡಿಸಲು ಪ್ರಯತ್ನಗಳು ಸಾಗುತ್ತಿವೆ. ಈಗಾಗಲೇ ಓಲಾ ಮತ್ತು ಉಬರ್ ಕಂಪನಿಗಳು ಡ್ರೈವರ್ಗಳಿಂದ ಹೆಚ್ಚಿನ ಕಮಿಷನ್ಗಳನ್ನು ಪಡೆಯುತ್ತಿವೆ. ಕಡಿಮೆ ಇನ್ಸೆಂಟಿವ್ಸ್ ನೀಡುವ ಮೂಲಕ ಡ್ರೈವರ್ಗಳ ಪಾಲಿಗೆ ರಾಕ್ಷಸನಾಗಿಬಿಟ್ಟಿದೆ. ಕಡಿಮೆ ಆದಾಯ ಮತ್ತು ಹೆಚ್ಚು ಅವಧಿ ಕೆಲಸ ಡ್ರೈವರ್ಗಳ ಜೀವನಕ್ಕೆ ಮುಳ್ಳಾಗಿ ಬಿಟ್ಟಿವೆ. ಈ ಬಗ್ಗೆ ಟ್ಯಾಕ್ಸಿ ಡ್ರೈವರ್ಗಳು ಸ್ಟ್ರೈಕ್ ಮಾಡಿದರೂ ಪ್ರಯೋಜನವಾಗಿಲ್ಲ. ಅಷ್ಟೇ ಅಲ್ಲ ಈ ಡ್ರೈವರ್ಗಳು ಕಂಪನಿ ಕೊಡುವಷ್ಟು ದುಡ್ಡಿಗೆ ಮತ್ತು ಅವರ ನಿಯಮಗಳಿಗೆ ಅನುಗುಣವಾಗಿ ಕೆಲಸ ಮಾಡುವ ಅನಿವಾರ್ಯತೆಗೆ ಬಿದ್ದಿದ್ದಾರೆ.
ಉಬರ್ ಮತ್ತು ಓಲಾ ವಿರುದ್ಧ ಪ್ರತಿಭಟನೆ ಮುಂದುವರೆಯುತ್ತಾ ಇದ್ರೂ ಹೊಟ್ಟೆಪಾಡಿಗಾಗಿ ಕೆಲಸ ಮಾಡುತ್ತಿರುವ ಡ್ರೈವರ್ಗಳ ಸಂಖ್ಯೆ ಹೆಚ್ಚಿದೆ. ಡ್ರೈವರ್ಗಳು ಮತ್ತು ಕಂಪನಿಗಳ ನಡುವೆ ಸಂಭಂಧ ಗಟ್ಟಿಯಾಗುವುದು ಸಂಶಯವೇ ಆಗಿದೆ. ಹೀಗಾಗಿ ಹೊಸ ಆ್ಯಪ್ನ ಕನಸಿನಲ್ಲಿ ಡ್ರೈವರ್ಗಳು ಕಾಲ ಕಳೆಯುತ್ತಿದ್ದಾರೆ.
1. ಹಸಿದವರ ಹೊಟ್ಟೆ ತುಂಬಿಸಲು ನೆರವು ಕೇಳಿದ ಆಸ್ಕರ್ ವಿಜೇತ ನಟಿ
2. ಧರೆಗುರುಳುವ 5000 ಮರಗಳನ್ನು ಕಾಪಾಡಿದ ಪರಿಸರ ಪ್ರೇಮಿ..!
3. ಔಷಧ ಉದ್ಯಮದ ಯಶಸ್ವಿ ಸಾರಥಿ : ದೇಶದ 2ನೇ ಶ್ರೀಮಂತ ದಿಲೀಪ್ ಸಾಂಘ್ವಿ