ಪ್ರತಿನಿತ್ಯ 1000 ಬಡವರ ಹೊಟ್ಟೆ ತುಂಬಿಸುವ ಅನ್ನದಾತ..
ಟೀಮ್.ವೈ.ಎಸ್.ಕನ್ನಡ
ತಾರಾ ಪಾಟ್ಕರ್ ಮೂಲತಃ ಒಬ್ಬ ಪತ್ರಿಕೋದ್ಯಮಿ, 2014ರಲ್ಲಿ ಪತ್ರಿಕೋದ್ಯಮಕ್ಕೆ ಗುಡ್ ಬೈ ಹೇಳಿ ರೊಟ್ಟಿ ಬ್ಯಾಂಕ್ ಒಂದನ್ನು ಆರಂಭಿಸಿದ್ರು. ಬರದಿಂದ ಕಂಗೆಟ್ಟಿರುವ ಬುಂದೇಲ್ಖಂಡದ ಮಹೋಬಾ ಜಿಲ್ಲೆಯ ಬಡವರಿಗೆ, ಅನಾಥರಿಗೆ, ಮನೆಮಠ ಇಲ್ಲದೇ ಬೀದಿಯಲ್ಲಿ ಆಶ್ರಯ ಪಡೆದಿರುವವರಿಗೆ ಉಚಿತವಾಗಿ ಆಹಾರ ಪೂರೈಸುವುದು ಇವರ ಉದ್ದೇಶ. ತಾರಾ ಪಾಟ್ಕರ್ ಮತ್ತು ಇತರ ಸ್ವಯಂ ಸೇವಕರು ಮನೆ ಮನೆಗೆ ಹೋಗಿ ತರಕಾರಿ ಮತ್ತು ರೊಟ್ಟಿಯನ್ನು ಸಂಗ್ರಹಿಸ್ತಾರೆ. ಇದನ್ನು ಪ್ರತಿದಿನ 1000ಕ್ಕೂ ಹೆಚ್ಚು ನಿರ್ಗತಿಕರು ಮತ್ತು ಬಡವರಿಗೆ ಉಣಬಡಿಸ್ತಾರೆ.
ಮಹೋಬಾ ಜಿಲ್ಲೆಯಲ್ಲಿ ಯಾರೊಬ್ಬರ ಸ್ಥಿತಿಯೂ ಹಸಿದ ಹೊಟ್ಟೆಗೆ ತಣ್ಣೀರು ಬಟ್ಟೆ ಎಂಬಂತಾಗಬಾರದು, ಯಾರೂ ಹಸಿದುಕೊಂಡು ಮಲಗಬಾರದು ಅನ್ನೋದೇ ತಾರಾ ಪಾಟ್ಕರ್ ಅವರ ಕಳಕಳಿ. ಇದೇ ಉದ್ದೇಶದಿಂದ 46ರ ಹರೆಯದ ತಾರಾ ಪಾಟ್ಕರ್ ಇತರ 12 ಸದಸ್ಯರೊಂದಿಗೆ ಸೇರಿ `ಬುಂದೇಲಿ ಸಮಾಜ್' ಎಂಬ ಎನ್ಜಿಓ ಒಂದನ್ನು ಸ್ಥಾಪಿಸಿದ್ದಾರೆ. ಈ ರೊಟ್ಟಿ ಬ್ಯಾಂಕ್ ಸೇವೆ ಚಿಕ್ಹಾರಾ ಮತ್ತು ಮುಲ್ಹಾ ಕೋಡಾಗೂ ವಿಸ್ತರಿಸಿದೆ. 1000 ಸ್ವಯಂ ಸೇವಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಈ ರೊಟ್ಟಿ ಬ್ಯಾಂಕ್ ಸಂಪೂರ್ಣವಾಗಿ ಜನರ ದಾನ, ಧರ್ಮದ ಮೇಲೆ ಅವಲಂಬಿತವಾಗಿದೆ. ಫುಡ್ ಬ್ಯಾಂಕ್ಗೆ ತರಕಾರಿ, ರೊಟ್ಟಿ ಕೊಡಲಿಚ್ಛಿಸುವವರು ಸ್ವತಃ ಈ ಸೇವೆಯಲ್ಲಿ ಕೈಜೋಡಿಸಬಹುದು. ``ಇದರಲ್ಲಿ ಯಾವುದೇ ರೀತಿಯ ಹಣದ ವ್ಯವಹಾರವಿಲ್ಲ. ಆರೋಗ್ಯ ತಪಾಸಣೆಗಾಗಿ ಕೆಲ ವೈದ್ಯರನ್ನು ಸಹ ನಾವು ಕರೆಸುತ್ತೇವೆ. ಅವರು ಕೂಡ ಹಣ ಪಡೆಯುವುದಿಲ್ಲ'' ಎನ್ನುತ್ತಾರೆ ತಾರಾ ಪಾಟ್ಕರ್.
ರೋಟಿ ಬ್ಯಾಂಕ್ ಅನ್ನು ಬುಂದೇಲ್ಖಂಡದ ಇತರ 13 ಜಿಲ್ಲೆಗಳಿಗೂ ವಿಸ್ತರಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಉತ್ತರಪ್ರದೇಶ ಮತ್ತು ಮಧ್ಯಪ್ರದೇಶದ ಬಡವರಿಗೂ ನೆರವಾಗಬೇಕೆಂಬ ಹೆಬ್ಬಯಕೆ ತಾರಾ ಪಾಟ್ಕರ್ ಅವರದ್ದು. ಬಂದಾ, ಅತ್ತರ, ಲಲಿತ್ಪುರ್, ಮತ್ತು ಒರೈಗೆ ಭೇಟಿ ನೀಡಿರುವ ತಾರಾ ಅಲ್ಲಿನ ಸ್ಥಿತಿಗತಿ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಉಳಿದ ಗ್ರಾಮಗಳತ್ತಲೂ ಗಮನಹರಿಸಿದ್ದಾರೆ.
ಬಡವರಿಗೆ ಅನ್ನ ಹಾಕುವುದು ಅಂದ್ರೆ ಬುಂದೇಲ್ಖಂಡದ ಬಹದೊಡ್ಡ ಪಿಡುಗಿಗೆ ಅಂತ್ಯ ಹಾಡಿದಂತೆ. ಯಾಕಂದ್ರೆ ಬಡತನ ಬುಂದೇಲ್ಖಂಡದ ಅತಿ ದೊಡ್ಡ ಸಮಸ್ಯೆ. ಬಡ ರೋಗಿಗಳಿಗೆ ಏಮ್ಸ್ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆಗೆ ಅವಕಾಶ ಮಾಡಿಕೊಡಬೇಕು ಅನ್ನೋದು ತಾರಾ ಪಾಟ್ಕರ್ ಅವರ ಬೇಡಿಕೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಗಮನಸೆಳೆಯಲು ಸ್ಥಳೀಯರೊಂದಿಗೆ ಸೇರಿ ಅವರು 80 ದಿನಗಳ ಕಾಲ ಉಪವಾಸ ಕೂಡ ಮಾಡಿದ್ದಾರೆ.
ಮಹೋಬಾ ಜಿಲ್ಲೆಯಲ್ಲಿ ಕಲ್ಲು ಕ್ವಾರಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ನರಕಯಾತನೆ ಅನುಭವಿಸುತ್ತಿದ್ದಾರೆ. ಸುಮಾರು 2 ಲಕ್ಷ ಕಾರ್ಮಿಕರು ಸಿಲಿಕೊಸಿಸ್ ಎಂಬ ಖಾಯಿಲೆಯಿಂದ ಬಳಲುತ್ತಿದ್ದಾರೆ. ಇದು ಸಿಲಿಕಾ ಧೂಳಿನಿಂದ ಬರುವ ಶ್ವಾಸಕೋಶ ಸಮಸ್ಯೆ, ಉಸಿರಾಟದ ತೊಂದರೆ. ``ಈ ಪ್ರದೇಶಗಳಲ್ಲಿ ಆರೋಗ್ಯ ಕೇಂದ್ರಗಳ ಕೊರತೆಯಿದೆ. ಅಲ್ಲಿ ಚಿಕಿತ್ಸೆಗೆ ಬೇಕಾದ ಉಪಕರಣಗಳು, ಔಷಧಗಳಿಲ್ಲ. ಇಡೀ ಜಿಲ್ಲೆಗೆ ಇರುವುದು ಕೇವಲ 20 ವೈದ್ಯರು ಮಾತ್ರ. ಆದಷ್ಟು ಬೇಗ ಸಮಸ್ಯೆ ಬಗೆಹರಿಸದೇ ಇದ್ರೆ ಪೂರ್ಣ ಪ್ರಮಾಣದ ಉಪವಾಸ ಆರಂಭಿಸುತ್ತೇನೆ'' ಅಂತಾ ತಾರಾ ಪಾಟ್ಕರ್ ಎಚ್ಚರಿಸಿದ್ದಾರೆ.
ಇದನ್ನೂ ಓದಿ..