ಶ್ವಾಸ್ನಲ್ಲಿ ಮಕ್ಕಳ ಜೀವನದ ಭವಿಷ್ಯವಾಗಿ ಕಿಂಜಲ್ ಶಾ ಉಸಿರಾಡಿದಾಗ..
ಆರ್.ಪಿ.
ವಯಸ್ಸು 25 ಆಗುತ್ತಿದ್ದಂತೆ ಹೆಚ್ಚಿನವರಿಗೆ ವೃತ್ತಿಯಲ್ಲಿ ಅಂಬೆಗಾಲು, ಸ್ನೇಹಿತರೊಂದಿಗೆ ಪಾರ್ಟಿ ಮಸ್ತಿ, ಸ್ವೇಚ್ಛಾಚಾರ ಜೀವನದ ಸಮಯ ಬಂದುಬಿಡುತ್ತದೆ. ಆದ್ರೆ ಕಿಂಜಾಲ್ ಶಾ ವಿಷಯದಲ್ಲಿ ಹಾಗಲ್ಲ. ಜೀವನದ ಪ್ರಮುಖ ಘಟ್ಟದಲ್ಲಿ ಆಕೆ ಎಚ್ಚರಿಕೆಯ ಹಜ್ಜೆಯಿಟ್ಟಳು. ಶ್ವಾಸ್- ಜೀವನದ ಉಸಿರಾಟ, ಒಂದು ಲಾಭರಹಿತ ಸಂಸ್ಥೆಯಾಗಿದ್ದು ಕಿಂಜಾಲ್ ಅದರಲ್ಲಿ ಟ್ರಸ್ಟಿಯಾಗಿದ್ದಾಳೆ. ಶ್ವಾಸ್ ಅವಕಾಶವಂಚಿತ ಮಕ್ಕಳ ವಿದ್ಯಾಭ್ಯಾಸದ ಕೊರತೆ ದೂರವಾಗಿಸೋ ಸಂಘಟನೆ. ಬಯೋಮೆಡಿಕಲ್ ಎಂಜಿನಿಯರಿಂಗ್ ಪದವೀಧರೆಯಾಗಿರೋ ಕಿಂಜಾಲ್ ಅಹಮದಾಬಾದ್ ನಿವಾಸಿ. ಎಂಜಿನಿಯರಿಂಗ್ 2ನೇ ವರ್ಷದಲ್ಲಿದ್ದಾಗ ಕಿಂಜಾಲ್ ಸಮಾನ ಮನಸ್ಕ ಸ್ನೇಹಿತರೊಂದಿಗೆ ವಾರಾಂತ್ಯದಲ್ಲಿ ಕೊಳಚೆ ಪ್ರದೇಶದ ಮಕ್ಕಳಿಗೆ ಬೋಧನೆ ಶುರುಮಾಡಿದಳು.
“ಅವರು ಶುರುಮಾಡಿದರು, ನಾನು ಅವರನ್ನು ಹಿಂಬಾಲಿಸಿದೆ. ಶಿಕ್ಷಣ ಕ್ಷೇತ್ರದಲ್ಲಿ ಏನಾದರೊಂದು ಸಾಧನೆ ಮಾಡಬೇಕೆಂದು ನಾನು ಬಹಳ ದಿನಗಳಿಂದ ಕನಸುಕಟ್ಟಿಕೊಂಡಿದ್ದೆ”. ಎಂಜಿನಿಯರಿಂಗ್ ಮುಗಿದ ನಂತ್ರ ಕಿಂಜಾಲ್ ಕೆಲಸಕ್ಕೆ ಸೇರಿಕೊಂಡರೂ ಕೇವಲ ಆರೇ ತಿಂಗಳಿಗೆ ಅಲ್ಲಿಂದ ಹೊರಬರುತ್ತಾಳೆ. ಮನಸ್ಸು ಬೇರೆಡೆ ಇದ್ದಾಗ ಮಾಡುವ ಕೆಲಸಕ್ಕೆ ನ್ಯಾಯ ಸಲ್ಲಿಸಲು ಸಾಧ್ಯವಿಲ್ಲವೆಂದು ಆಕೆಗೆ ಗೊತ್ತಿತ್ತು.
ಕೆಲ ತಿಂಗಳ ನಂತ್ರ ಆಕೆ ಮತ್ತೆ ತನ್ನ ಗೆಳೆಯರ ಬಳಗ ಸೇರಿಕೊಂಡಳು. “ಹತ್ತಿರದ ಮುನಿಸಿಪಾಲಿಟಿ ಶಾಲೆ, ಪಾಠದ ಅವಧಿ ಮುಗಿದ ಮೇಲೆ ಮಕ್ಕಳಿಗೆ ಬೋಧನೆ ಮಾಡಲು ಅನುಮತಿ ಕೊಟ್ಟಿತ್ತು. ಶಾಲೆಯ ಪಠ್ಯದಲ್ಲಿ ಕಲಿಸದ್ದನ್ನು ನಾವು ಸುಮಾರು 40-45 ವಿದ್ಯಾರ್ಥಿಗಳಿಗೆ ಕಲಿಸುತ್ತಿದ್ದೆವು. ನೈರ್ಮಲ್ಯ, ಪೋಷಣೆ ಮತ್ತು ಪೂರಕ ಶಿಕ್ಷಣವನ್ನು ಮಕ್ಕಳಿಗೆ ಕಲಿಸಲಾಗುತ್ತಿತ್ತು” ಎನ್ನುತ್ತಾಳೆ ಕಿಂಜಾಲ್.
“ಮಕ್ಕಳೊಂದಿಗೆ ಹತ್ತಿರದಿಂದ ಕೆಲಸ ಮಾಡಿದಾಗ ಅವರೂ ಎಲ್ಲರಂತೆಯೇ ಎಂದು ಅರಿವಿಗೆ ಬಂತು. ಆದ್ರೆ ಅವರು ಅವಕಾಶ ವಂಚಿತ ಮಕ್ಕಳಷ್ಟೇ” ಅಂತಾರೆ ಕಿಂಜಾಲ್. ಮೊದಮೊದಲು ಕಿಂಜಾಲ್ ಶ್ರಮ ವ್ಯರ್ಥವಾಗುತ್ತದೆ ಎಂದು ಆಕೆಯ ಪೋಷಕರು ಅನುಮಾನ ಪಟ್ಟರೂ, ದಿನಕಳೆದಂತೆ ಶ್ರಮದ ಪ್ರತಿಫಲ ಅವರ ಅನುಮಾನಗಳನ್ನು ದೂರಮಾಡಿತು.
ಇನ್ನೂ ಎತ್ತರಕ್ಕೆ
ವಾರಾಂತ್ಯದಲ್ಲಿ ಬೋಧನೆ ಮಾಡೋದು ಆಕೆಯ ಪಾಲಿಗೆ ಮುಂದಿನ ಮೂರು ವರ್ಷಗಳಿಗೆ ದೈನಂದಿನ ಚಟುವಟಿಕೆ ಆಗಿಹೋಗಿತ್ತು. ಆದ್ರೆ ಆಕೆಗೆ ಒಂದು ತೀವ್ರವಾದ ಯೋಚನೆ ಹೊಳೆದಿತ್ತು. ಈ ಮಕ್ಕಳ ಬುದ್ಧಿವಂತಿಕೆಯನ್ನು ಬಳಸಿಕೊಂಡು ಇವರನ್ನು ಮುಖ್ಯವಾಹಿನಿಗೆ ಯಾಕೆ ತರಬಾರದು ಎಂದುಕೊಂಡಳು. “ಇದೇ ಯೋಜನೆಯಲ್ಲಿ ಸ್ನೇಹಿತರು ಮತ್ತು ಕುಟುಂಬದವರ ಬಳಿ ನಾವು ಹಣ ಸಂಗ್ರಹಿಸಲು ಪ್ರಾರಂಭಿಸಿದೆವು. ಇದರಿಂದ ಮೊದಲು ನಾಲ್ಕು ಮಕ್ಕಳನ್ನು ಒಳ್ಳೆಯ ಶಾಲೆಗೆ ಸೇರಿಸಿದೆವು. ಕೆಲ ದಿನಗಳಲ್ಲೇ ಅವರು ತಮ್ಮ ಪಠ್ಯಗಳಲ್ಲಿ ಗಮನಾರ್ಹ ಸಾಧನೆ ತೋರಿದರು” ಎಂದು ಕಿಂಜಾಲ್ ಹೆಮ್ಮೆ ಪಡುತ್ತಾಳೆ.
ಮುನಿಸಿಪಾಲಿಟಿ ಶಾಲೆಗಳಲ್ಲಿ 8ನೇ ತರಗತಿ ನಂತ್ರ ವಿದ್ಯಾಭ್ಯಾಸಕ್ಕೆ ಅವಕಾಶ ಇಲ್ಲ. ಇದರಿಂದ ಹೆಚ್ಚಿನ ಮಕ್ಕಳು ಓದು ಮುಂದುವರಿಸಲಾಗದೇ ಶಾಲೆ ಬಿಡಬೇಕಾದ ಪರಿಸ್ಥಿತಿ ಇದೆ. ವಿದ್ಯಾಭ್ಯಾಸಕ್ಕೆ ಅವಕಾಶ ಇದ್ದರೂ ಹೆಣ್ಣುಮಕ್ಕಳ ಪೋಷಕರು ದೂರದ ಶಾಲೆಗೆ ಕಳಿಸಲು ಹಿಂದೇಟು ಹಾಕುತ್ತಾರೆ. ಇದಕ್ಕಾಗಿ ನಾವು ಪೋಷಕರಿಗೆ ಸಲಹೆಗಳನ್ನು ನೀಡಿ ಒಳ್ಳೆಯ ಶಾಲೆಗೆ ಮಕ್ಕಳನ್ನು ಸೇರಿಸುವಂತೆ ಮನವರಿಕೆ ಮಾಡಿದೆವು.
ಆಗಲೇ ಶ್ವಾಸ್ ಹುಟ್ಟಿಕೊಂಡಿದ್ದು. ಮುಖ್ಯವಾಹಿನಿಯ ಶಾಲೆಗಳಿಗೆ ಹೋಗೋ ಅವಕಾಶ ವಂಚಿತ ಮಕ್ಕಳಿಗೆ ಪಠ್ಯಗಳು, ಶಾಲಾ ಸಮವಸ್ತ್ರಗಳನ್ನು ಕೊಡುತ್ತಾ ಬಂದೆವು. ಸೋಮವಾರದಿಂದ ಶುಕ್ರವಾರದವರೆಗೆ ಶ್ವಾಸ್ನ ಸ್ವಯಂ ಸೇವಕರು ಮತ್ತು ಟ್ರಸ್ಟಿ ಕಿಂಜಾಲ್ ಮುಖ್ಯವಾಹಿನಿ ಶಾಲೆಗೆ ಹೋಗುವ ಮಕ್ಕಳಿಗೆ ಬೋಧನೆ ಮಾಡುತ್ತಿದ್ದರು. ವಾರಾಂತ್ಯದಲ್ಲಿ ಇವರು ಎಲ್ಲ ಮಕ್ಕಳಿಗೂ ಪಠ್ಯಗಳನ್ನು ಕಲಿಸುತ್ತಿದ್ದರು.
ಸಂಪೂರ್ಣ ಕೆಲಸ ಮತ್ತು ಸಂಪೂರ್ಣ ಆಟ, ಮಕ್ಕಳೂ ಖುಷಿ
ಶ್ವಾಸ್ ಸರಳ ಗುರಿಯನ್ನು ಅನುಸರಿಸುತ್ತದೆ. ಮಕ್ಕಳ ಖುಷಿಗೆ ಸಂಪೂರ್ಣ ಕೆಲಸ ಮತ್ತು ಸಂಪೂರ್ಣ ಆಟದ ತತ್ವವನ್ನು ಅಳವಡಿಸಿಕೊಂಡಿದೆ. ಪ್ರಾಪಂಚಿಕ ಜ್ಞಾನವನ್ನು ಹೆಚ್ಚಿಸಲು ಪ್ರತಿತಿಂಗಳೂ ಮಕ್ಕಳನ್ನು ಮನರಂಜನಾ ತಾಣ, ಕಾರ್ಖಾನೆಗಳಿಗೆ ಕರೆದುಕೊಂಡು ಹೋಗುತ್ತಿದ್ದರು. “ಮಕ್ಕಳು ಹೊರಜಗತ್ತಿಗೆ ತೆರೆದುಕೊಂಡರೆ ಅವರು ಪ್ರಾಯೋಗಿಕವಾಗಿ ಕಲಿಯಲು ಹೆಚ್ಚು ಸಹಕಾರಿಯಾಗುತ್ತದೆ” ಅನ್ನೋದು ಕಿಂಜಾಲ್ ಮಾತು. ಮಕ್ಕಳಿಗೆ ಸಾಕಷ್ಟು ಸಾಮರ್ಥ್ಯಗಳು ಇದೆ. ಆದ್ರೆ ಸರಿಯಾದ ಮಾರ್ಗದರ್ಶನ ಮತ್ತು ಅವಕಾಶ ಸಿಕ್ಕರೆ ಅವರು ಪ್ರಜ್ವಲಿಸುತ್ತಾರೆ ಅನ್ನೋದನ್ನು ತಮ್ಮ ಇಷ್ಟು ದಿನದ ಅನುಭವದಲ್ಲಿ ಕಿಂಜಾಲ್ ಕಲಿತಿದ್ದಾರೆ.
ಇತ್ತೀಚೆಗಷ್ಟೇ ಅವಕಾಶವಂಚಿತ ಶಿಲ್ಪಾ ಎಂಬ ಬಾಲಕಿ ಹ್ತತನೇ ತರಗತಿ ಬೋರ್ಡ್ ಎಕ್ಸಾಂಅನ್ನು ಪಾಸ್ ಮಾಡಿದ್ದಾಳೆ. ಇದು ಶ್ವಾಸ್ ಸದಸ್ಯರಿಗೂ ಸಾಧನೆ ವಿಚಾರವೇ. ಈ ಬಗ್ಗೆ ಕಿಂಜಾಲ್ ಹೇಳೋದು ಹೀಗೆ, “ಅವರೆಲ್ಲರೂ ಬುದ್ಧಿವಂತರೇ. ಸರಿಯಾದ ಅವಕಾಶ ಅವರ ಆಸಕ್ತಿಯ ದಾರಿಗೆ ತಂದು ಬಿಡುತ್ತದೆ.
2008 ರಿಂದಲೂ ಟೀಚ್ ಫಾರ್ ಇಂಡಿಯಾದ ಮುಖ್ಯಸ್ಥೆಯಾಗಿರೋ ಶಹೀನ್ ಮಿಸ್ತ್ರಿಯನ್ನು ಕಿಂಜಾಲ್ ಮಾದರಿಯನ್ನಾಗಿ ಸ್ವೀಕರಿಸಿದ್ದು ಆಶ್ಚರ್ಯವೇನಲ್ಲ. “ಆಕೆಯನ್ನು ನಿಜವಾಗಿಯೂ ಆರಾಧಿಸುತ್ತೇನೆ. ಆಕೆಯ ಬೋಧನಾ ವಿಧಾನವನ್ನು ಕಲಿಯಲು ಬಯಸುತ್ತೇನೆ” ಎನ್ನುತ್ತಾಳೆ ಕಿಂಜಾಲ್. ಹತ್ತಿರದ ಶಾಲೆಯಲ್ಲಿ ಕಿಂಜಾಲ್ ಈಗ ಪ್ರಿನ್ಸಿಪಾಲ್ ಗೆ ಸಹಾಯಕಿಯಾಗಿದ್ದಾಳೆ.