ಆವೃತ್ತಿಗಳು
Kannada

ಮದುವೆಯಾದ ಮೇಲೆ ಉದ್ಯಮಿಯಾದ ಮಹಿಳೆ

ಟೀಮ್​​ ವೈ.ಎಸ್​​. ಕನ್ನಡ

YourStory Kannada
18th Nov 2015
Add to
Shares
2
Comments
Share This
Add to
Shares
2
Comments
Share

ಹೊರಗೆ ಕೆಲಸ ಮಾಡಿಕೊಂಡು ಮನೆಯಲ್ಲೂ ಮಕ್ಕಳನ್ನು ನೋಡಿಕೊಂಡು, ಸಂಸಾರ ಮುನ್ನಡೆಸೋದರ ಕಷ್ಟ ಕೆಲಸದಲ್ಲಿರುವ ತಾಯಂದಿರಿಗೇ ಗೊತ್ತು. ಅತ್ತ ಕೆಲಸದಲ್ಲೂ ಸರಿಯಾಗಿ ಗಮನ ಹರಿಸಲಾಗದೇ, ಇತ್ತ ಮನೆಯಲ್ಲೂ ಕೆಲಸ ಮಾಡಲಾಗದೇ, ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳಲಾಗುತ್ತಿಲ್ಲವಲ್ಲಾ ಎಂಬ ಪಾಪಪ್ರಜ್ಞೆ ಒಮ್ಮೆಯಾದ್ರೂ ಕಾಡೇ ಕಾಡುತ್ತದೆ. ಈ ಒತ್ತಡಗಳ ನಡುವೆ ಒಮ್ಮೆ ತಲೆ ಸಿಡಿಯುವುದೊಂದೇ ಬಾಕಿ ಎನಿಸಿದರೆ, ಕೆಲವೊಮ್ಮೆ ಈ ಎಲ್ಲಾ ಕಷ್ಟಗಳ ನಡುವೆ ಕೆಲಸ ಮಾಡಿಕೊಂಡೇ, ಮಕ್ಕಳಿಗೆ ಒಳ್ಳೆ ಶಿಕ್ಷಣ, ಸೌಲಭ್ಯ ಕೊಡುತ್ತಿರುವ ಸಮಾಧಾನ ಇರುತ್ತೆ.

ಒಂದೇ ಜಾಗದಲ್ಲಿ ಕುಳಿತುಕೊಂಡು ಪ್ರಪಂಚದ ಬಗ್ಗೆ ತಿಳಿದುಕೊಳ್ಳುವ ಕುರಿತು ಸೆಳೆತಕ್ಕೊಳಗಾದವರು ಮೋನಿಕಾ ಅರುಣ್. ಅವರೇ ನಮ್ಮ ಇಂದಿನ ಕಥಾನಾಯಕಿ. ವಾಣಿಜ್ಯ ನಗರಿ ಮುಂಬೈನಲ್ಲೇ ಹುಟ್ಟಿ, ಬೆಳೆದವರು ಮೋನಿಕಾ. ಪ್ರವಾಸ ಮತ್ತು ಪ್ರವಾಸೋದ್ಯಮಗಳ ಕೋರ್ಸ್ ಪೂರ್ಣಗೊಳಿಸಿದ ಮೋನಿಕಾರಿಗೆ, ಥಾಮಸ್ ಕುಕ್, ಕಾಕ್ಸ್ & ಕಿಂಗ್ಸ್, ಎಸ್‍ಓಟಿಸಿಯಂತಹ ಪ್ರತಿಷ್ಠಿತ ಕಂಪನಿಗಳಲ್ಲಿ ಸುಮಾರು 20 ವರ್ಷಗಳ ಕಾಲ ದುಡಿದ ಅನುಭವವಿದೆ.

image


ಹೊಸ ಪ್ರಯಾಣದ ಪ್ರಾರಂಭ

ಪತಿಯ ಕೆಲಸದಿಂದಾಗಿ ಮೋನಿಕಾ ತನ್ನ ಕೆಲಸವನ್ನೂ ತೊರೆಯಬೇಕಾಯ್ತು. ಮೂರು ವರ್ಷಗಳ ಹಿಂದೆ ತಮ್ಮ ಒಂದು ವರ್ಷದ ಮಗುವಿನೊಂದಿಗೆ ಮೋನಿಕಾ ಅರುಣ್ ದಂಪತಿ ಬೆಂಗಳೂರಿಗೆ ಬಂದರು. ಅಷ್ಟು ವರ್ಷಗಳ ಕಾಲ ಕೆಲಸ ಮಾಡಿದ್ದ ಮೋನಿಕಾ ಅವರಿಗೆ ಮನೆಯಲ್ಲಿ ಸುಮ್ಮನೆ ಕೂರಲಾಗಲಿಲ್ಲ. ವೃತ್ತಿಜೀವನದಲ್ಲಿ ಸಾಕಷ್ಟು ಜನರ ಗೆಳೆತನ ಸಂಪಾದಿಸಿಕೊಂಡಿದ್ದ ಮೋನಿಕಾ, ಅವರ ಬಳಿ ಮನೆಯಲ್ಲೇ ಕುಳಿತು ಮಾಡುವಂತಹ ಕೆಲಸಗಳ ಕುರಿತು ಮಾಹಿತಿ ಪಡೆದುಕೊಂಡರು. ನಂತರ ಆ ಕೆಲಸಗಳಿಗೆ ನೋದಾಯಿಸಿಕೊಂಡು ಕೆಲಸ ಮಾಡತೊಡಗಿದರು. ಆದ್ರೆ ಕಾಲಮಿತಿಯಿಂದಾಗಿ ಹೆಚ್ಚು ಒತ್ತಡವಿರುತ್ತಿದ್ದ ಕಾರಣ ಮನೆಯಲ್ಲಿ ಕುಳಿತು ಮಾಡುವ ಕೆಲಸಗಳೂ ಅವರಿಗೆ ಸರಿಹೋಗಲಿಲ್ಲ.

ಮೋನಿಕಾ ಕೆಲಸ ಹುಡುಕುವಾಗ, ಅವರ ಮಾಜಿ ಬಾಸ್ ಒಬ್ಬರು ಅವರಿಗೊಂದು ಐಡಿಯಾ ಕೊಟ್ಟರು. ಪ್ರವಾಸೋದ್ಯಮದಲ್ಲಿ ಒಳ್ಳೆ ಅವಕಾಶಗಳಿರೋದಾಗಿ ಮೋನಿಕಾಗೆ ತಿಳಿಸಿದ್ರು. ಅದಕ್ಕೆ ಹೆಚ್ಚು ಬಂಡವಾಳವೂ ಬೇಕಿಲ್ಲ, ಅಲ್ಲದೇ ಪ್ರವಾಸೋದ್ಯಮ ಮೋನಿಕಾರ ಅಚ್ಚುಮೆಚ್ಚಿನ ವಲಯವಾಗಿತ್ತು. ಆದ್ರೆ ಹೊಸ ಕ್ಷೇತ್ರ ಎಂಬ ಭಯವಂತೂ ಇದ್ದೇಯಿತ್ತು.

‘ಉದ್ಯಮ ನನಗೆ ಆಗಿಬರುವ ಕೆಲಸವಲ್ಲ. ಬೇಕಾದ್ರೆ ಉದ್ಯಮದಲ್ಲಿ ತೊಡಗುವವರಿಗೆ ಏನ್ ಮಾಡಬೇಕು, ಹೇಗೆ ಮಾಡಬೇಕು ಅಂತ ಮಾರ್ಗದರ್ಶನ ನೀಡಬಲ್ಲೆ. ಆದ್ರೆ ನೀನೇ ವ್ಯಾಪಾರ- ವ್ಯವಹಾರ ಮಾಡು ಅಂದ್ರೆ, ಅದು ನನಗಾಗದು. ನನಗೆ ಆತ್ಮವಿಶ್ವಾಸವೇ ಇಲ್ಲ.’ ಅಂತ ಮೋನಿಕಾ ಅಂದು ಅವರ ಮಾಜಿ ಬಾಸ್‍ಗೆ ಹೇಳಿದ್ದರಂತೆ.

ಆದ್ರೂ ಒಮ್ಮೆ ಪ್ರಯತ್ನಿಸಿಬಿಡೋಣ ಅಂತ ಮೋನಿಕಾ ಒಂದು ಪ್ರಾಜೆಕ್ಟ್‍ಗೆ ಕೈ ಹಾಕಿದ್ರು. ಕಡಿಮೆ ಗ್ರಾಹಕರಿದ್ದ ಕಾರಣ ತಾವೇ ವಿಶೇಷವಾಗಿ ಗಮನ ಹರಿಸಿ ಕೆಲಸ ಮಾಡುತ್ತಿದ್ದರು. ಇದರಿಂದ ಅವರಿಗೆ ಒಳ್ಳೆಯ ಪ್ರತಿಕ್ರಿಯೆ ದೊರಕಿತು. ಇದು ಅವರಿಗೆ ತಮ್ಮದೇ ಒಂದು ಉದ್ಯಮ ಆರಂಭಿಸಲು ಸ್ಫೂರ್ತಿ ನೀಡಿತು. ಈ ಮೂಲಕ ಗ್ಲೋಬಲ್‍ಟ್ರಾಟರ್ಸ್ ಟ್ರಾವಲ್ ಕ್ಲಬ್ ಎಲ್‍ಎಲ್‍ಪಿಯನ್ನು ಪ್ರಾರಂಭಿಸಿಯೇಬಿಟ್ರು ಮೋನಿಕಾ.

ಆರಂಭದ ದಿನಗಳು

‘ನಾನು ನನ್ನ ಕಾರ್‍ಅನ್ನು ಪಾರ್ಕ್ ಮಾಡುತ್ತಿದ್ದಾಗ, ಗೋಡೌನ್‍ನಲ್ಲಿ ಖಾಲಿ ಜಾಗ ಇರೋದನ್ನು ನೋಡಿದೆ. ಅದನ್ನೇ ನನ್ನ ಕಚೇರಿಯನ್ನಾಗಿ ಮಾಡಿಕೊಳ್ಳುವ ಐಡಿಯಾ ಹೊಳೆಯಿತು. ತಕ್ಷಣ ತಡ ಮಾಡದೇ, ನಮ್ಮ ಕಾಂಪ್ಲೆಕ್ಸ್​​​ನ ಅಸೋಸಿಯೇಷನ್‍ನವರನ್ನು ಸಂಪರ್ಕಿಸಿ ಆ ಗೋಡೌನ್‍ಅನ್ನೇ ಗ್ಲೋಬಲ್‍ಟ್ರಾಟರ್ಸ್ ಟ್ರಾವಲ್ ಕ್ಲಬ್ ಆಫೀಸ್ ಮಾಡಿಕೊಂಡೆ’ ಅಂತ ಹೇಳ್ತಾರೆ ಮೋನಿಕಾ.

ಎರಡೂವರೆ ವರ್ಷಗಳ ಹಿಂದೆ ಕಚೇರಿ ಪ್ರಾರಂಭಿಸಿದ ಬಳಿಕ, ಹೆಚ್ಚು ಜನರನ್ನು ನಿಭಾಯಿಸಲು ಹೆಚ್ಚು ಸಿಬ್ಬಂದಿ ಬೇಕಾಗಬಹುದು ಅನ್ನೋದನ್ನು ಅರಿತ ಮೋನಿಕಾ ಹೊಸಬರನ್ನು ಕೆಲಸಕ್ಕೆ ಸೇರಿಸಿಕೊಳ್ಳಲು ಮುಂದಾದ್ರು. ಆದ್ರೆ ಕತ್ತಲಿಂದ ಕೂಡಿದ್ದ ಗೋಡೌನ್‍ನಂತಹ ಜಾಗದಲ್ಲಿ ಕೆಲಸ ಮಾಡಲು ಬಹುತೇಕ ಮಂದಿ ಹಿಂದೇಟು ಹಾಕಿದ್ರು. ಹೀಗಾಗಿಯೇ ಕೆಲಸಗಾರರಿಗೆ ಅನುಗುಣವಾಗಿ ಶಿಫ್ಟ್​​​ನಲ್ಲಿ ಕೆಲ ಬದಲಾವಣೆ ಮಾಡಿದ್ರು ಮೋನಿಕಾ. ಅಲ್ಲದೇ ಕೆಲಸ ಮಾಡಲಿಚ್ಛಿಸುವ ತಾಯಂದಿರಿಗಾಗಿಯೇ ವಿಶೇಷ ನೋಟಿಸ್ ಹಾಕಿದ್ರು ಮೋನಿಕಾ. ಆದ್ರೆ ಯಾರೂ ಕೆಲಸಕ್ಕೆ ಬರಲಿಲ್ಲವಷ್ಟೇ.

‘ನಾನು ಸ್ವಭಾವತಃ ಬಹಳ ಸಾಮಾಜಿಕ ವ್ಯಕ್ತಿ. ಹೀಗಾಗಿಯೇ ಕೆಲವೇ ದಿನಗಳಲ್ಲಿ ಮಹಿಳಾ ಉದ್ಯಮಿಗಳು ಹಾಗೂ ಪ್ರವಾಸೀ ಸಂಬಂಧಿತ ತಂಡಗಳಲ್ಲಿ ನಾನೂ ಗುರುತಿಸಿಕೊಳ್ಳತೊಡಗಿದೆ. ಜೊತೆಗೆ ಉದ್ಯಮಕ್ಕೆ ಸಂಬಂಧಿಸಿದ ಕೆಲ ಸಭೆಗಳಲ್ಲೂ ಭಾಗವಹಿಸತೊಡಗಿದೆ. ಅದರಿಂದ ನನಗೆ ಗ್ರಾಹಕರೂ ಹೆಚ್ಚಾಗತೊಡಗಿದರು. ನನ್ನ ಉದ್ಯಮವನ್ನು ಕಟ್ಟಿ ಬೆಳೆಸಿರುವ ಕಾರಣ ಈಗ ನನಗೆ ಮುಂಬೈಗಿಂತ ಬೆಂಗಳೂರೇ ಮನೆಯಂತಾಗಿದೆ.’ ಅಂತ ಮಂದಹಾಸ ಬೀರುತ್ತಾರೆ ಮೋನಿಕಾ.

ಸಾಮಾನ್ಯವಾಗಿ ದಿನಪೂರ್ತಿ ಕಚೇರಿ ಮತ್ತು ಮನೆಗೆಲಸಗಳಲ್ಲಿ ಬ್ಯುಸಿಯಾಗುವ ಕಾರಣ, ಮೋನಿಕಾ ಪ್ರವಾಸಕ್ಕೆ ಪ್ಲ್ಯಾನ್ ಮಾಡುವ ಕಸ್ಟಮರ್‍ಗಳನ್ನು ರಾತ್ರಿ ಊಟದ ಬಳಿಕ ಮಾತ್ರ ಭೇಟಿಯಾಗುತ್ತಾರೆ. ಈ ಮೂಲಕ ಆರಾಮಾಗಿ ಕುಳಿತು ಚರ್ಚಿಸಬಹುದು ಅನ್ನೋ ಐಡಿಯಾ ಅವರದು. ಹಾಗೇ ಬಹುತೇಕ ಟ್ರಾವಲ್ ಏಜೆಂಟ್‍ಗಳು ತಮಗೆ ಎಲ್ಲಿ ಹೆಚ್ಚು ಕಮಿಷನ್ ದೊರೆಯುತ್ತದೋ, ಆ ಪ್ರವಾಸೀ ತಾಣಗಳಿಗೆ ಹೋಗಲು ಗ್ರಾಹಕರ ಮೇಲೆ ಒತ್ತಡ ಹೇರುತ್ತಾರೆ. ಆದ್ರೆ ಮೋನಿಕಾ ಎಲ್ಲರಿಗಿಂತ ಭಿನ್ನ. ಪ್ರವಾಸಪ್ರಿಯರ ಬಜೆಟ್‍ಗೆ ಅನುಗುಣವಾಗಿ, ಅವರ ತಲೆಯಲ್ಲೇನಿದೆ ಅನ್ನುವುದನ್ನು ಅರಿತು, ಅವರಿಗೆ ಇಷ್ಟವಾಗುವ ಸ್ಥಳಗಳನ್ನು ಆಯ್ಕೆ ಮಾಡಿಕೊಡೋದೇ ಅವರ ವಿಶೇಷತೆ. ಹಾಗೇ ಅವರ ಗ್ರಾಹಕರು ಆ ನಿರ್ದಿಷ್ಟ ಸ್ಥಳ ತಲುಪುವ ಒಂದು ತಾಸಿನೊಳಗೆ ಮೋನಿಕಾ ತಂಡದವರು ಡ್ರೈವರ್ ಮತ್ತು ಹೋಟೆಲ್‍ನವರಿಗೆ ಕರೆ ಮಾಡಿ ಎಲ್ಲ ಸಿದ್ಧತೆಗಳನ್ನು ಮಾಡಿಸಿರುತ್ತಾರೆ. ಈ ಮೂಲಕ ಪ್ರವಾಸಿಪ್ರಿಯರು ಆ ಸ್ಥಳಕ್ಕೆ ಹೋಗಿ ಓಡಾಡಲು ಕಾರ್ ಮತ್ತು ತಂಗಲು ಹೋಟೆಲ್ ಹುಡುಕುವ ತೊಂದರೆ ತಪ್ಪುತ್ತದೆ.

‘ಮುಂದಿನ ದಿನ ನಮ್ಮ ಗ್ರಾಹಕರು ಎಲ್ಲಿಗೆ ಹೋಗಲಿದ್ದಾರೆ, ಯಾವ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ ಅನ್ನೋದನ್ನು ಅವರಿಗೆ ಒಂದು ದಿನ ಮುಂಚಿತವಾಗಿಯೇ ತಿಳಿಸುತ್ತೇವೆ. ನಮ್ಮ ಟ್ರಾವೆಲ್ ಏಜೆಂಟ್‍ಗಳೂ ಅವರೊಂದಿಗೆ ಪ್ರತಿ ಸ್ಥಳಗಳಿಗೆ ಭೇಟಿ ನೀಡ್ತಾರೆ. ನನ್ನ ಕ್ಲೈಂಟ್ ಭಾರತದಿಂದ ವಿದೇಶ ಪ್ರವಾಸಕ್ಕೆ ಹೊರಟ ತಕ್ಷಣ ನನ್ನ ಕೆಲಸ ಮುಗಿಯುತ್ತೆ ಅಂತಲ್ಲ. ಬದಲಾಗಿ ಅವರು ವಾಪಸ್ ಭಾರತಕ್ಕೆ ಬಂದು ನನ್ನೊಂದಿಗೆ ಮಾತನಾಡೋವರೆಗೂ ಅವರು ನನ್ನ ಜವಾಬ್ದಾರಿಯೇ ಆಗಿರ್ತಾರೆ’ ಅಂತಾರೆ ಮೋನಿಕಾ ಅರುಣ್.

ಇದುವರೆಗಿನ ಪಯಣ

ಉದ್ಯಮಕ್ಕೆ ಕಾಲಿಡುವ ಮೊದಲು ಹಿಂದೆ ಮುಂದೆ ನೋಡುತ್ತಿದ್ದ ಮೋನಿಕಾ, ಈಗ ತುಂಬಾ ಉತ್ಸಾಹದಿಂದ ತಮ್ಮ ಕೆಲಸಗಳಲ್ಲಿ ತೊಡಗಿದ್ದಾರೆ. ಜೊತೆಗೆ ಬೆಂಗಳೂರಿನಲ್ಲೇ ತಮ್ಮ ಈ ಉದ್ಯಮವನ್ನು ವಿವಿಧ ಪ್ರದೇಶಗಳಿಗೆ ವಿಸ್ತರಿಸುವ ಯೋಜನೆ ಹೊಂದಿದ್ದಾರೆ. ಹೀಗಾಗಿಯೇ ಹೆಚ್ಚು ಜನರಿಗೆ ಕೆಲಸ ನೀಡಿ, ತರಬೇತಿ ನೀಡಲು ಚಿಂತನೆ ನಡೆಸಿದ್ದಾರೆ. ಮೊದಲು ಪರಿಚಿತ ಸ್ನೇಹಿತರಿಗೆ ಮತ್ತು ಕುಟುಂಬವರ್ಗದವರಿಗಷ್ಟೇ ಟ್ರಿಪ್ ಪ್ಲ್ಯಾನಿಂಗ್ ಮಾಡುತ್ತಿದ್ದ ಮೋನಿಕಾರನ್ನೇ ಈಗ ಪ್ರತಿದಿನ ಹತ್ತಾರು ಜನ ಹುಡುಕಿಕೊಂಡು ಬರ್ತಾರೆ. ಅಂಥವರಿಗೆ ದೇಶ- ವಿದೇಶಗಳ ಟ್ರಿಪ್ ಪ್ಲ್ಯಾನ್ ಮಾಡಿಕೊಟ್ಟು, ಒಳ್ಳೆಯ ಸೇವೆ ಒದಗಿಸುವ ಮೂಲಕ ದಿನೆ ದಿನೆ ಗ್ರಾಹಕರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಜೊತೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇವರ ಸಂಪರ್ಕವೂ ಗಟ್ಟಿಯಾಗತೊಡಗಿದೆ.

‘ನಾನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರ ಮಾಡುತ್ತಿಲ್ಲ. ನಿಜ ಹೇಳಬೇಕೆಂದ್ರೆ ಪ್ರಚಾರ ಮತ್ತು ಜಾಹೀರಾತಿಗೋಸ್ಕರ ನಾನು ಇದುವರೆಗೂ ಒಂದು ರೂಪಾಯಿಯನ್ನೂ ಖರ್ಚು ಮಾಡಿಲ್ಲ. ನನ್ನ ಬಳಿ ಕಂಪನಿಯ ಕುರಿತ ಒಂದು ವೆಬ್‍ಸೈಟ್ ಕೂಡ ಇಲ್ಲ. ಬಾಯಿಂದ ಬಾಯಿಗೆ ಹರಡಿ ಅದಾಗಿಯೇ ನನ್ನ ಕಂಪನಿ ಬಗ್ಗೆ ಪ್ರಚಾರ ಸಿಗುತ್ತಿದೆ. ನನ್ನ ಕ್ಲೈಂಟ್‍ಗಳೇ ನನಗೆ ಸ್ಫೂರ್ತಿಯಾಗಿದ್ದಾರೆ. ನನಗೆ ಇದಕ್ಕಿಂತ ಇನ್ನೇನು ಬೇಕು ಹೇಳಿ?’ ಅಂತ ಪ್ರಶ್ನಿಸುತ್ತಾರೆ ಮೋನಿಕಾ.

image


‘Promise less and deliver more’ ಅರ್ಥಾತ್ ಕಡಿಮೆ ಭರವಸೆ, ಹೆಚ್ಚು ಫಲಿತಾಂಶದ ಗುರಿಯೊಂದಿಗೆ, ಅತ್ಯುತ್ತಮ ಬೆಲೆಯಲ್ಲಿ ಅತ್ಯುತ್ತಮ ಸೇವೆ ನೀಡುವ ಮೂಲಕ ಗ್ರಾಹಕರನ್ನು ಸಂತೃಪ್ತಿಗೊಳಿಸೋದು ಮೋನಿಕಾ ಅವರ ಗುರಿಯಾಗಿದೆ. ‘ಎಂದೂ ಕೆಲಸ ಮಾಡಿರದಿದ್ದರೂ, ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ ಅಂತ ಎಲ್ಲ ತಾಯಂದಿರಿಗೂ ಹೇಳಲು ಇಚ್ಛಿಸುತ್ತೇನೆ. ತೆರೆದ ಮನಸ್ಸಿನೊಂದಿಗೆ ಅವರು ಹೆಚ್ಚೆಚ್ಚು ಜನರೊಂದಿಗೆ ಬೆರೆಯಬೇಕು. ಕೆಲಸಗಳನ್ನು ಪಡೆಯುವ ಅವಕಾಶಕ್ಕಾಗಿ ಮಾತ್ರವಲ್ಲ, ಹವ್ಯಾಸಗಳ ಕುರಿತು ಮತ್ತು ದೈನಂದಿನ ಆಗುಹೋಗುಗಳ ಬಗ್ಗೆ ಚರ್ಚಿಸಲು ಜನರೊಂದಿಗೆ ಒಳ್ಳೆಯ ಸಂಪರ್ಕ ಬೆಳೆಸಿಕೊಳ್ಳಬೇಕು.’ ಅಂತ ಕೊನೆಗೆ ಕಿವಿಮಾತನ್ನೂ ಹೇಳುತ್ತಾರೆ ಮೋನಿಕಾ ಅರುಣ್.

ಲೇಖಕರು: ದಿವ್ಯಾಚಂದ್ರ

ಅನುವಾದಕರು: ವಿಶಾಂತ್​​​​

Add to
Shares
2
Comments
Share This
Add to
Shares
2
Comments
Share
Report an issue
Authors

Related Tags