ಆಟದಲ್ಲಿ ಬೆಳ್ಳಿ ಗೆದ್ರೂ ಹೃದಯ ಗೆದ್ದ ಭಾರತದ ಬಂಗಾರ..!
ಟೀಮ್ ವೈ.ಎಸ್. ಕನ್ನಡ
ಕೋಟ್ಯಾಂತರ ಭಾರತೀಯರ ಕನಸು ನನಸಾಯಿತು. ರಿಯೋ ಒಲಿಂಪಿಕ್ಸ್ನಲ್ಲಿ ಭಾರತದ ಬ್ಯಾಡ್ಮಿಂಟನ್ ಸ್ಟಾರ್ ಪಿ.ವಿ. ಸಿಂಧು ಹೊಸ ಇತಿಹಾಸ ಬರೆದ್ರು. ಭಾರತೀಯ ಒಲಿಂಪಿಕ್ ಇತಿಹಾಸದಲ್ಲೇ ಹೊಸ ದಾಖಲೆ ಆಯಿತು. ಸೈನಾ ನೆಹ್ವಾಲ್ರಂತಹ ಸೂಪರ್ ಸ್ಟಾರ್ಗಳಿದ್ರೂ ಒಲಿಂಪಿಕ್ಸ್ನಲ್ಲಿ ಪದಕದ ಬರ ಎದುರಿಸಿದ್ದ ಭಾರತ ಪಿ.ವಿ. ಸಿಂಧೂ ಮೂಲದ ಅದನ್ನು ನೀಗಿಸಿಕೊಂಡಿತು.
ಸಿಂಧು ಭಾರತಕ್ಕೆ ಬೆಳ್ಳಿ ಪದಕ ಗೆದ್ದುಕೊಟ್ಟಿರಬಹುದು. ಆದ್ರೆ ಆಕೆ ಕೋಟಿ ಕೋಟಿ ಭಾರತೀಯರ ಪಾಲಿಗೆ ನಿಜವಾದ ಬಂಗಾರ. ಫೈನಲ್ ಪಂದ್ಯದಲ್ಲಿ ಸಿಂಧು ಸೋತಿರಬಹುದು. ಆದ್ರೆ ವಿಶ್ವದ ನಂಬರ್ ವನ್ ಆಟಗಾರ್ತಿ ಸ್ಪೇನ್ನ ಕೆರೊಲಿನ್ ಮರಿನ್ ಕೂಡ ಒಂದುಬಾರಿ ಸಿಂಧು ಆಟಕ್ಕೆ ಬೆಚ್ಚಿಬಿದ್ದಿದ್ದರು. 21 ವರ್ಷದ ಸಿಂಧು 23 ವರ್ಷದ ಮರಿನ್ ವಿರುದ್ಧ ಫೈನಲ್ ಪಂದ್ಯದಲ್ಲಿ ಮೊದಲ ಗೇಮ್ನ್ನು 21-19ರಿಂದ ಗೆದ್ದಾಗ ನಿಜಕ್ಕೂ ಅಚ್ಚರಿ ನಡೆಯುತ್ತೆ ಅಂತ ಲೆಕ್ಕಾಚಾರ ಹಾಕಲಾಗಿತ್ತು. ಆದ್ರೆ ಮರಿನ್ ಅನುಭವ ಎರಡು ಮತ್ತು ಅಂತಿಮ ಗೇಮ್ನಲ್ಲಿ ಕೈ ಹಿಡಿಯಿತು. ಮರಿಯನ್ 12-19 ಮತ್ತು 15 21ರಿಂದ ಸಿಂಧುರನ್ನು ಮಣಿಸಿ ಸ್ವರ್ಣ ಗೆದ್ರು. ಆದ್ರೆ ಭಾರತೀಯರ ಪಾಲಿಗೆ ಸಿಂಧು ಗೆದ್ದ ಬೆಳ್ಳಿ ಪದಕ ಚಿನ್ನದ ಪದಕಕ್ಕೆ ಸಮ.
ಬೆಳ್ಳಿ ಗೆದ್ದ ಮೊದಲ ಭಾರತೀಯ ಮಹಿಳಾ ಕ್ರೀಡಾಪಟು
ಒಲಿಂಪಿಕ್ಸ್ನಲ್ಲಿ ಭಾರತದ ಮಟ್ಟಿಗೆ ಸಿಂಧು ಗೆದ್ದಿರುವ ಬೆಳ್ಳಿ ಪದಕವೇ ಅತೀ ಶ್ರೇಷ್ಠ ಸಾಧನೆ. ಯಾಕಂದ್ರೆ ಒಲಿಂಪಿಕ್ ಇತಿಹಾಸದಲ್ಲಿ ಯಾವ ಭಾರತೀಯ ವನಿತೆ ಕೂಡ ಕಂಚಿನ ಪದಕಕ್ಕಿಂತ ಹೆಚ್ಚಿನ ಸಾಧನೆ ಮಾಡಿಲ್ಲ. ಈ ಹಿಂದೆ ಕರ್ಣಂ ಮಲ್ಲೇಶ್ವರಿ, ಮೇರಿಕೋಮ್, ಸೈನಾ ನೆಹ್ವಾಲ್ ಮತ್ತು ಸಾಕ್ಷಿ ಮಲಿಕ್ ಒಲಿಂಪಿಕ್ ಪದಕ ಗೆದ್ದಿದ್ರೂ ಅದೆಲ್ಲವೂ ಕಂಚಿನ ಪದಕವಾಗಿತ್ತು. ಈಗ ಸಿಂಧು ಗೆದ್ದಿರುವ ಬೆಳ್ಳಿ ಹಲವು ದಶಕಗಳ ಕನಸು ನನಸು ಮಾಡಿದೆ.
2000ದ ಸಿಡ್ನಿ ಒಲಿಂಪಿಕ್ಸ್ನಲ್ಲಿ ಭಾರತದ ವೇಯ್ಟ್ಲಿಫ್ಟರ್ ಕರ್ಣಂ ಮಲ್ಲೇಶ್ವರಿ ಕಂಚಿನ ಪದಕ ಗೆದ್ದಿದ್ದರು. ಸಿಡ್ನಿಯಲ್ಲಿ ಗೆದ್ದಿದ್ದ ಆ ಕಂಚು ಭಾರತವನ್ನು ಪದಕ ಪಟ್ಟಿಯಲ್ಲಿ ಸ್ಥಾನ ಪಡೆಯುವಂತೆ ಮಾಡಿತ್ತು. ಅಷ್ಟೇ ಅಲ್ಲ ಒಲಿಂಪಿಕ್ ಇತಿಹಾದಲ್ಲೇ ಮಲ್ಲೇಶ್ವರಿ ಪದಕ ಗೆದ್ದ ಮೊದಲ ಭಾರತೀಯ ಕ್ರೀಡಾಪಟು ಅನ್ನೊ ಗೌರವ ಪಡೆದುಕೊಂಡಿದ್ದರು.
2012ರ ಲಂಡನ್ ಒಲಿಂಪಿಕ್ಸ್ನಲ್ಲಿ ಇಬ್ಬರು ಮಹಿಳಾ ಕ್ರೀಡಾಪಟುಗಳು ಭಾರತಕ್ಕೆ ಪದಕದ ಗೌರವ ತಂದುಕೊಟ್ಟಿದ್ದರು. ಬಾಕ್ಸಿಂಗ್ನಲ್ಲಿ ಮೇರಿಕೋಮ್ ಕಂಚಿನ ಪದಕ ಪಡೆದ್ರೆ, ಸೈನಾ ನೆಹ್ವಾಲ್ ಬ್ಯಾಡ್ಮಿಂಟನ್ ವಿಭಾಗದ ಕಂಚಿನ ಪದಕ ಬಾಚಿಕೊಂಡಿದ್ದರು. ಮೊನ್ನೆ ಮೊನ್ನೆ ಮುಗಿದ ರಿಯೋ ಒಲಿಂಪಿಕ್ಸ್ನಲ್ಲಿ ಫ್ರೀ ಸ್ಟೈಲ್ ಕುಸ್ತಿಯಲ್ಲಿ ಸಾಕ್ಷಿ ಮಲಿಕ್ ಭಾರತದ ಪಾಲಿಗೆ ಮಹಿಳಾ ವಿಭಾಗದಲ್ಲಿ 4ನೇ ಪದಕ ತಂದುಕೊಟ್ಟಿದ್ದರು. ಈಗ ಸಿಂಧು ಸಾಧನೆ ಅದೆಲ್ಲವನ್ನೂ ಮೀರಿ ನಿಂತಿದೆ. ಭಾರತೀಯರನ್ನು ಹೆಮ್ಮೆಯಿಂದ ಬೀಗುಂತೆ ಮಾಡಿದೆ.
ಕೇವಲ 21 ವರ್ಷದಲ್ಲೇ ಸಾಧನೆ
ಅಂದಹಾಗೇ, ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ಗೆದ್ದಿರುವ ಪಿ.ವಿ. ಸಿಂಧು ಕೇವಲ 21 ವರ್ಷ ವಯಸ್ಸಿನವರು. ಹೀಗಾಗಿ ಇನ್ನೂ ಕಾಲ ಮಿಂಚಿಲ್ಲ. ಈಗಾಗಲೇ ಭಾರತದ ಪಾಲಿನ ಸೂಪರ್ ಸ್ಟಾರ್ ಆಗಿರುವ ಸಿಂಧು ಮುಂದಿನ ದಿನಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಭರವಸೆ ಹುಟ್ಟಿಸಿದ್ದಾರೆ. ರಿಯೋದಲ್ಲಿ ಬೆಳ್ಳಿ ಗೆದ್ದಿರುವ ಸಿಂಧು, ಮುಂದಿನ ಟೋಕಿಯೋ ಒಲಿಂಪಿಕ್ಸ್ನಲ್ಲಿ ಚಿನ್ನ ಗೆಲ್ಲುವಷ್ಟು ಸಾಮರ್ಥ್ಯ ಹೊಂದಿದ್ದಾರೆ. ಭಾರತೀಯ ಆಟಗಾರ್ತಿಯರ ಪೈಕಿ ಅಪರೂಪವಾಗಿ ಕಾಣುವ ಅಗ್ರೆಸ್ಸಿವ್ನೆಸ್ ಸಿಂಧು ಆಟದಲ್ಲಿ ಹೆಚ್ಚು ಕಾಣುತ್ತಿದೆ. ಹೀಗಾಗಿ ವಿಶ್ವದ ಇತರ ಆಟಗಾರ್ತಿರಿಗೆ ಸಿಂಧು ಆಟ ಸೋಲು ತರಿಸಿದ್ರು ಅಚ್ಚರಿ ಇಲ್ಲ.
ಇದನ್ನು ಓದಿ: ಇಳಿ ವಯಸ್ಸಿನಲ್ಲಿ ಉದ್ಯಮ ಆರಂಭಿಸಿ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದ ಸಹೋದರಿಯರು
ಸದ್ಯ ವಿಶ್ವ ಶ್ರೇಯಾಂಕದಲ್ಲಿ 10ನೇ ಸ್ಥಾನ ಪಡೆದಿರುವ ಸಿಂಧು ಇಷ್ಟು ದಿನ ಬ್ಯಾಡ್ಮಿಂಟನ್ನಲ್ಲಿ ಭಾರತದ ಸೂಪರ್ ಸ್ಟಾರ್ ಸೈನಾ ನೆಹ್ವಾಲ್ ಮುಂದೆ ಮಂಕಾಗಿ ಕಾಣುತ್ತಿದ್ದರು. ಆದ್ರೆ ಈಗ ನೆಹ್ವಾಲ್ ಸಾಧನೆಯನ್ನು ಹಿಂದಿಕ್ಕಿ ಮುನ್ನಡೆಯುವ ಭರವಸೆ ನೀಡಿದ್ದಾರೆ. ಅಷ್ಟಕ್ಕೂ ಸೈನಾ ಸಾಧನೆ ಏನು ಕಡಿಮೆ ಅಲ್ಲ. ಹಲವು ಪ್ರಶಸ್ತಿಗಳನ್ನು ಗೆದ್ದಿರುವ ಸೈನಾ, ಬ್ಯಾಡ್ಮಿಂಟನ್ನಲ್ಲಿ ಹಲವು ಪ್ರಶಸ್ತಿಗಳನ್ನು ಗೆದ್ದ ಮೊದಲ ಭಾರತೀಯ ಕ್ರೀಡಾಪಟು ಅನ್ನೋದನ್ನ ನಾವು ಮರೆಯುವ ಹಾಗಿಲ್ಲ.
ಆಟಕ್ಕೆ ಮುನ್ನವೇ ಕೋಚ್ ಕೊಟ್ಟಿದ್ದ ಭರವಸೆ
ತನ್ನ 3ನೇ ವರ್ಷದಿಂದಲೇ ಆಟ ಆರಂಭಿಸಿದ್ದ ಸಿಂಧೂಗೆ ದ್ರೋಣಾಚಾರ್ಯನಾಗಿ ಸಿಕ್ಕಿದ್ದು ಭಾರತದ ಮಾಜಿ ಬ್ಯಾಡ್ಮಿಂಟನ್ ಆಟಗಾರ ಪುಲ್ಲೇಲ ಗೋಪಿಚಂದ್. ಗುರು ಗೋಪಿಚಂದ್ ಗರಡಿಯಲ್ಲಿ ಪಳಗಿದ ಸಿಂಧು ನಿಧಾನವಾಗಿ ಆಟದ ಪಟ್ಟುಗಳನ್ನ ಕಲಿತಿದ್ರು. ಅಷ್ಟೇ ಅಲ್ಲದ ದಿನದಿಂದ ದಿನಕ್ಕೆ ತನ್ನ ಪ್ರದರ್ಶನವನ್ನು ಉತ್ತಮ ಪಡಿಸಿಕೊಂಡ್ರು. ಸಿಂಧು ಒಂದು ಹೊತ್ತಿನ ಊಟವನ್ನು ಬೇಕಾದ್ರೂ ಕೈ ಬಿಡ್ತಾ ಇದ್ರು. ಆದ್ರೆ ಅಭ್ಯಾಸವನ್ನು ಮಾತ್ರ ಎಂದೂ ತಪ್ಪಿಸುತ್ತಿರಲಿಲ್ಲ. ಪ್ರತೀ ದಿನ 8 ರಿಂದ 10 ಗಂಟೆಗಳ ಕಾಲ ಬಿಡುವಿಲ್ಲದೆ ಅಭ್ಯಾಸ ಮಾಡುತ್ತಿದ್ದ ಸಿಂಧು ಕೋಚ್ ಗೋಪಿಚಂದ್ ಮನಸ್ಸಿನಲ್ಲಿ ಆಟಕ್ಕೂ ಮುನ್ನವೇ ಪದಕದ ಭರವಸೆ ಮೂಡಿಸಿದ್ದರು.
“ಸಿಂಧು ಆಟ ತುಂಬಾ ಚೆನ್ನಾಗಿದೆ. ವಿಶ್ವದ ಟಾಪ್ ಆಟಗಾರ್ತಿರು ಮಾಡಬಹುದಾದ ಸಾಧನೆಯನ್ನು ಸಿಂಧು ಮಾಡಬಲ್ಲಳು. ಕೆಲವೊಂದು ಕಡೆ ಸಿಂಧು ಆಟದಲ್ಲಿ ಇನ್ನೂ ಪಕ್ವತೆ ಬರಬೇಕಿದೆ. ಆದ್ರೆ ಆಕೆ ತನ್ನ ಸಾಮರ್ಥ್ಯಕ್ಕೆ ತಕ್ಕ ಆಟ ಆಡುವುದು ಖಚಿತ”
- ಪಿ. ಗೋಪಿಚಂದ್, ಬ್ಯಾಡ್ಮಿಂಟನ್ ಕೋಚ್
ಘಟಾನುಘಟಿಗಳಿಗೆ ಸೋಲುಣಿಸಿದ್ದ ಸಿಂಧು
ಸಿಂಧು ರಿಯೋದಲ್ಲಿ ಆಟಕ್ಕೆ ವಿಶ್ವದ ಘಟಾನುಘಟಿ ಆಟಗಾರ್ತಿಯರ ಲೆಕ್ಕಾಚಾರವೇ ತಲೆಕೆಳಗಾಗಿತ್ತು. ಗ್ರೂಪ್ ಹಂತದಲ್ಲಿ ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡಿದ ಸಿಂಧು ಎದುರಾಳಿಗೆ ಅವಕಾಶವೇ ನೀಡದ ಪಂದ್ಯಗಳನ್ನು ಗೆದ್ದಿದ್ದರು. ಕ್ವಾರ್ಟರ್ ಫೈನಲ್ನಲ್ಲಿ ವಿಶ್ವದ 2ನೇ ಶ್ರೇಯಾಂಕಿತ ಆಟಗಾರ್ತಿ ಚೀನಾ ಯಿಹಾನ್ ವಾಂಗ್ ಸವಾಲು ಎದುರಾದಗಳು ಈ ಗಟ್ಟಿಗಿತ್ತು ಧೈರ್ಯ ಕೆಡಲಿಲ್ಲ. ಬದಲಾಗಿ ಚೀನಾ ಆಟಗಾರ್ತಿಯ ತಂತ್ರಕ್ಕೆ ಪ್ರತಿತಂತ್ರ ಹೆಣೆದು ಆಕೆಯನ್ನು ಮಣಿಸಿದ್ರು. ಸೆಮಿಫೈನಲ್ನಲ್ಲಿ ಜಪಾನ್ನ ನೊಝೋಮಿ ಒಕುಹರ ಸವಾಲು ಕೂಡ ಸಿಂಧು ಪಾಲಿಗೆ ಭಿನ್ನವಾಗಿತ್ತು. ಆದ್ರೆ ಒಕುಹರ ಆಟದಲ್ಲಿನ ಮೈನಸ್ ಪಾಯಿಂಟ್ಗಳನ್ನ ತನ್ನ ಸ್ಟ್ರೆಂಥ್ ಆಗಿ ಪರಿವರ್ತಿಸಿಕೊಂಡ ಸಿಂಧು ಆಕೆಯನ್ನು ಕೂಡ ಮನೆಗೆ ಕಳುಹಿಸಿದ್ರು. ಫೈನಲ್ಗೂ ಮುನ್ನ ಸಿಂಧು ಪಾಲಿಗೆ ಬೆಳ್ಳಿ ಪದಕ ಖಚಿತವಾಗಿದ್ರೂ, ಸುಲಭವಾಗಿ ಎದುರಾಳಿಗೆ ಚಿನ್ನದ ಗೌರವ ನೀಡಲು ಸಿದ್ಧವಿರಲಿಲ್ಲ. ಹೀಗಾಗಿ ಸ್ಪೇನ್ನ ಕೆರೊಲಿನ್ ಮರಿನ್ ವಿರುದ್ಧ ಪಂದ್ಯ ಸೋತ್ರೂ ಅದ್ರಲ್ಲಿ ತೀವ್ರ ಹೋರಾಟವಿತ್ತು.
ಭಾರತೀಯ ಬ್ಯಾಡ್ಮಿಂಟನ್ನ ದ್ರೋಣಾಚಾರ್ಯ
ಇವತ್ತು ಭಾರತ ಬ್ಯಾಡ್ಮಿಂಟನ್ನಲ್ಲಿ ವಿಶ್ವದ ಅನೇಕ ಆಟಗಾರರು ಮತ್ತು ಆಟಗಾರ್ತಿಯರಿಗೆ ಸವಾಲೊಡ್ಡಬಲ್ಲ ಕ್ರೀಡಾಪಟುಗಳನ್ನು ಸಿದ್ಧಮಾಡಿದೆ. ಆದ್ರೆ ಆ ಕ್ರೀಡಾಪಟುಗಳ ಪೈಕಿ ಬಹುತೇಕರು ಪುಲ್ಲೇಲ ಗೋಪಿಚಂದ್ ಅಕಾಡೆಮಿಯಲ್ಲಿ ತರಬೇತಿ ಪಡೆದವರೇ ಆಗಿದ್ದಾರೆ. ಭಾರತದ ಮಾಜಿ ಆಟಗಾರನಾಗಿರುವ ಗೋಪಿಚಂದ್ ಹೈದ್ರಬಾದ್ನಲ್ಲಿ ಅಕಾಡೆಮಿ ಹೊಂದಿದ್ದಾರೆ. ಭಾರತದ ಸೂಪರ್ ಸ್ಟಾರ್ ಆಟಗಾರ್ತಿ ಸೈನಾ ನೆಹ್ವಾಲ್ ಕೂಡ ಇದೇ ಅಕಾಡೆಮಿಯಲ್ಲಿದ್ದಾಗಲೇ ಒಲಿಂಪಿಕ್ ಕಂಚಿನ ಪದಕ ಗೆದ್ದಿದ್ದರು ಅನ್ನೋದು ಮತ್ತೊಂದು ವಿಶೇಷತೆ.
ಅಂದಹಾಗೇ ಗೋಪಿಚಂದ್ ಅಕಾಡೆಮಿ ಸ್ಥಾಪಿಸಲು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಸರಕಾರದಿಂದ ಭೂಮಿ ಪಡೆಯೋದಕ್ಕೆ ಬೆವರನ್ನೇ ಸುರಿಸಿದ್ದರು. ಆದ್ರೆ ಹಠ ಬಿಡದ ಗೋಪಿಚಂದ್ ಅಂದುಕೊಂಡಿದ್ದನ್ನು ಸಾಧಿಸಿಯೇ ಬಿಟ್ಟರು. ಸದ್ಯ ದೇಶದ ನಂಬರ್ ವನ್ ಬ್ಯಾಡ್ಮಿಂಟನ್ ಅಕಾಡೆಮಿಗೆ ಗೋಪಿಚಂದ್ ಒಡೆಯ. ಇಲ್ಲಿ ಸುಮಾರು 120 ಬ್ಯಾಡ್ಮಿಂಟನ್ ಸ್ಟಾರ್ಗಳು ಅಭ್ಯಾಸ ಮಾಡುತ್ತಿದ್ದಾರೆ. ಪಿ.ವಿ. ಸಿಂಧು, ಸೈನಾ ನೆಹ್ವಾಲ್, ಶ್ರೀಕಾಂತ್ ಕಿದಂಬಿ, ಪಾರುಪಳ್ಳಿ ಕಶ್ಯಪ್ ಸೇರಿದಂತೆ ಹಲವು ಆಟಗಾರರು ಗೋಪಿಚಂದ್ ಅಕಾಡೆಮಿಯಲ್ಲೇ ತರಬೇತಿ ಪಡೆದವರು.
ರಕ್ತದಲ್ಲೇ ಬಂದಿತ್ತು ಆಟದ ಪಟ್ಟು
ಸಿಂಧು ಅಪ್ಪ ಪಿ.ವಿ. ರಮಣ ಮತ್ತು ತಾಯಿ ಪಿ. ವಿಜಯ ಕೂಡ ಕ್ರೀಡಾಪಟುಗಳೇ. ರಮಣ ವಾಲಿಬಾಲ್ನಲ್ಲಿ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ್ದರು. ಅಷ್ಟೇ ಅಲ್ಲ ಅರ್ಜುನ ಪ್ರಶಸ್ತಿಯನ್ನೂ ಪಡೆದಿದ್ದರು. ಅಮ್ಮ ವಿಜಯಾ ಕೂಡ ವಾಲಿಬಾಲ್ ಕ್ರೀಡಾಪಟು. ಹೀಗಾಗಿ ಸಿಂಧೂ ರಕ್ತದಲ್ಲೇ ಆಟದ ಆಸಕ್ತಿ ಬಂದಿತ್ತು. ಸಿಂಧು ಹಿರಿಯ ಸಹೋದರಿ ದಿವ್ಯಾ ಕೂಡ ನೆಟ್ಬಾಲ್ನಲ್ಲಿ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ್ದರು.
ಸೂಪರ್ ಸ್ಟಾರ್ ಸಿಂಧು
• ಸಿಂಧು ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ಗೆದ್ದ ಭಾರತ ಮೊದಲ ಮಹಿಳಾ ಕ್ರೀಡಾಪಟು
• ಒಲಿಂಪಿಕ್ಸ್ನಲ್ಲಿ ಪದಕ ಗೆದ್ದ ಭಾರತದ ಐದನೇ ಕ್ರೀಡಾಪಟು. (ಕರ್ಣಮಲ್ಲೇಶ್ವರಿ, 2000- ಸಿಡ್ನಿ ಒಲಿಂಪಿಕ್ಸ್, ಎಂ.ಸಿ. ಮೇರಿಕೋಮ್, 2012- ಲಂಡನ್ ಒಲಿಂಪಿಕ್ಸ್, ಸೈನಾ ನೆಹ್ವಾಲ್ 2012- ಲಂಡನ್ ಒಲಿಂಪಿಕ್ಸ್, ಸಾಕ್ಷಿ ಮಲಿಕ್ 2016- ರಿಯೋ ಒಲಿಂಪಿಕ್ಸ್)
• ಸಿಂಧು ಭಾರತದ ಪರ ರಜತ ಪದಕ ಗೆದ್ದ 4ನೇ ಕ್ರೀಡಾಪಟು. 2004ರ ಅಥೆನ್ಸ್ ಒಲಿಂಪಿಕ್ಸ್ನಲ್ಲಿ ರಾಜ್ಯವರ್ಧನ ಸಿಂಗ್ ರಾಥೋರ್, 2012ರ ಲಂಡನ್ ಒಲಿಂಪಿಕ್ಸ್ನಲ್ಲಿ ವಿಜಯ್ ಕುಮಾರ್ ಮತ್ತು ಕುಸ್ತಿ ಪಟು ಸುಶೀಲ್ ಕುಮಾರ್ ಭಾರತದ ಪಾಲಿಗೆ ಬೆಳ್ಳಿ ಗೆದ್ದು ಕೊಟ್ಟಿದ್ದರು.
ಸಿಂಧು ಇವತ್ತು ಇಡೀ ದೇಶದ ಸೂಪರ್ ಸ್ಟಾರ್. ಅಷ್ಟೇ ಅಲ್ಲ ಎಲ್ಲರಿಗೂ ಮಾದರಿ. ಮುಂದಿನ ಒಲಿಂಪಿಕ್ಸ್ಗಳಲ್ಲಿ ಭಾರತ ಮತ್ತಷ್ಟು ಪದಕ ಗೆಲ್ಲಲಿ ಅನ್ನೋದೇ ನಮ್ಮೆಲ್ಲರ ಆಶಯ.
1. ಎಲ್ಲಾ ಕೆಲಸಗಳನ್ನು ಮುಗಿಸುತ್ತೆ ಒಂದೇ ಕರೆ- ಅಧಿಕಾರಿಗಳ ಜೊತೆ ಸಂವಹನಕ್ಕೆ ಆ್ಯಪ್ ಮೊರೆ
2. ಕೌಟುಂಬಿಕ ಜವಾಬ್ಧಾರಿಯಲ್ಲಿ ಸಿಕ್ಕು ಮಹಿಳೆಯರ ಒದ್ದಾಟ : ಜಾಹೀರಾತುಗಳಲ್ಲೂ ಇದೆಂಥಾ ಸಂದೇಶ?
3. ತಾಯ್ತನದ ಹೊಸ್ತಿಲಲ್ಲಿದ್ದೀರಾ? ನಿಮಗಿದೆ ವರ್ಕ್ ಫ್ರಮ್ ಹೋಂ ಅವಕಾಶ..