ತನಗೆ ಕಾಲಿಲ್ಲದೆ ಇದ್ರೂ ಸಿಂಹಗಳಿಗೆ ಬೆಂಗಾವಲು..!
ವಿಶ್ವಾಸ್ ಭಾರಾಧ್ವಾಜ್
ಆತನಿಗೆ ಎರಡೂ ಕಾಲುಗಳಿಲ್ಲ. ಆದರೆ ಆತನ ಜೀವನೋತ್ಸಾಹ ಹಾಗೂ ಅಲ್ಲಿನ ಪ್ರಾಣಿಗಳಿಗೆ ಆತ ಧಾರೆ ಎರೆಯುತ್ತಿರುವ ಪ್ರೀತಿ ಎಂತಹವರ ಹೃದಯವನ್ನೂ ಆರ್ದ್ರಗೊಳಿಸುತ್ತೆ. ಕೃತಕ ಕಾಲುಗಳ ಸಹಾಯದಿಂದ ಓಡಾಡುವ ಆ ಝೂ ಕೀಪರ್ ವಯೋವೃದ್ಧ ಸಿಂಹ ಹಾಗೂ ರೋಗಗ್ರಸ್ಥ ಹುಲಿಯನ್ನು ತನ್ನ ಮಕ್ಕಳ ಹಾಗೆ ನೋಡಿಕೊಳ್ತಾನೆ. ಅದ್ರ ಬಗ್ಗೆ ಒಂದು ಚಿಕ್ಕ ಮನಕಲಕುವ ಸ್ಟೋರಿ ಇಲ್ಲಿದೆ ನೋಡಿ.
ನಿಜಾರ್ಥದಲ್ಲಿ ಆತ ಪ್ರಾಮಾಣಿಕ ಸೇವಕ. ಕೊಂಚವೂ ಬೇಸರವಿಲ್ಲದೆ ಅಸಹಾಯಕ ವೃದ್ಧ ವನ್ಯಪ್ರಾಣಿಗಳ ನಿಗಾ ನೋಡಿಕೊಳ್ಳುವ ಆತನಿಗೆ ಎರಡೂ ಕಾಲುಗಳಿಲ್ಲ. ಅಪಘಾತವೊಂದರಲ್ಲಿ ಮಂಡಿ ಕೆಳಗಿನ ಸಂಪೂರ್ಣ ಭಾಗ ಕತ್ತರಿಸಿ, ಕೃತಕ ಕಾಲುಗಳ ಸಹಾಯದಿಂದ ಆತ ನಡೆದಾಡ್ತಾನೆ. ಆದರೆ ತನ್ನ ಅಂಗ ವೈಕಲ್ಯ ಸ್ಥಿತಿ ಆತನಿಗೆ ಎಂದಿಗೂ ಜಿಗುಪ್ಸೆ ತರಿಸಿಲ್ಲ. ಅಪಾರ ಜೀವನೋತ್ಸಾಹದಿಂದ ಬದುಕುವ ಆತ, ಅಷ್ಟೇ ಚಟುವಟಿಕೆಯಿಂದ ಅಲ್ಲಿನ ವನ್ಯ ಮೃಗಗಳ ಸೇವೆ ಮಾಡ್ತಾನೆ. ಅವನ ಹೆಸರೇ ಜಾನ್ ರೆಂಕೇ.
ಕಳೆದ ಹಲವಾರು ವರ್ಷಗಳಿಂದ ಓಕ್ಲೋಹಮಾದ ವ್ಯಾನ್ನೇವುಡ್ನಲ್ಲಿರುವ ಜಿ.ಡಬ್ಲ್ಯೂ ಅನಿಮಲ್ ಪಾರ್ಕ್ನ ಝೂ ಕೀಪರ್ ಆಗಿರುವ ಜೇನ್ ರೇಂಕೆಗೆ ಅಲ್ಲಿನ ಪ್ರಾಣಿಗಳ ಪೋಷಣೆ ವಿನಃ ಬೇರೆ ಜಗತ್ತೇ ಇಲ್ಲ. ಈ ಕೆಲಸವನ್ನು ಪ್ರಾಮಾಣಿಕವಾಗಿ, ಬದ್ಧತೆಯಿಂದ ಮಾಡ್ತಿರುವ ಜಾನ್, ವನ್ಯ ಪ್ರಾಣಿಗಳ ಪೋಷಣೆ ಹಾಗೂ ಆರೈಕೆಯನ್ನು ತನ್ನ ಜೀವನದ ಧ್ಯೇಯವನ್ನಾಗಿಸಿ ಕೊಂಡಿದ್ದಾನೆ. ಅದರಲ್ಲೂ ವೃದ್ಧಾವಸ್ಥೆಯಲ್ಲಿರುವ ನಡೆದಾಡಲು ಕಷ್ಟ ಪಡುವ 226 ಕೆಜಿ ತೂಕದ ಸಿಂಹ ಹಾಗೂ 8 ವರ್ಷದ ರೋಗಗ್ರಸ್ಥ ಹುಲಿಯನ್ನು ಇನ್ನಿಲ್ಲದ ಆಸ್ಥೆಯಿಂದ ಸಾಕುತ್ತಿದ್ದಾನೆ. ಇನ್ನೂ ಶೈಶವಾವಸ್ಥೆಯಲ್ಲಿರುವ ಹುಲಿಮರಿಗಳಿಗೆ ಜಾನ್ ಅಕ್ಕರೆಯಿಂದ ಹಾಲು ಕುಡಿಸ್ತಾನೆ.
ಪ್ರಾಣಿಗಳ ಪೋಷಣೆ ಜಾನ್ಗೆ ಕುಟುಂಬದ ಬೆಂಬಲವೂ ಇದೆ. ಜಾನ್ ಪತ್ನಿ ಕಿರ್ಸ್ತಿ ಹಾಗೂ ಎರಡು ಮಕ್ಕಳು ನೆರವಾಗ್ತಿದ್ದಾರೆ. ಇದರಲ್ಲಿ ಸಿಂಹ ಹುಟ್ಟಿವಾಗಲೇ ಮೂಳೆಯ ರೋಗಕ್ಕೆ ತುತ್ತಾಗಿತ್ತು. ಮೃಗಾಲಯದ ಪ್ರಾಧಿಕಾರ ಸಿಂಹವನ್ನು ಇಂಜೆಕ್ಷನ್ ಮೂಲಕ ಇಲ್ಲವಾಗಿಸುವ ನಿರ್ಧಾರಕ್ಕೂ ಬಂದಿತ್ತು. ಆದರೆ ಇದನ್ನು ಉಗ್ರವಾಗಿ ವಿರೋಧಿಸಿದ ಜಾನ್ ಖುದ್ದಾಗಿ ವನರಾಜನ ನಿಗಾ ವಹಿಸುವ ಹೊಣೆ ವಹಿಸಿಕೊಂಡ. ಅಲ್ಲಿಂದೀಚೆಗೆ ಆ ವ್ಯಾಘ್ರಗಳ ಪಾಲೈಕೆಯೇ ಜಾನ್ ಜೀವನದ ಅತಿ ಮುಖ್ಯ ಕರ್ತವ್ಯವಾಗಿಬಿಡ್ತು.
ಜಾನ್ ರೆಂಕಿಗೂ ಆ ಸಿಂಹ ಹಾಗೂ ಉಳಿದ ಪ್ರಾಣಿಗಳಿಗೂ ಅವಿನಾಭಾವ ಸಂಬಂಧವಿದೆ. ಜಾನ್ ತನ್ನ ಮುದ್ದು ನಾಯಿ ಮರಿಗಳನ್ನು ಸಿಂಹದೊಂದಿಗೆ ಗೆಳೆತನ ಮಾಡಿಸಿದ್ದಾನೆ. ಸ್ವತಃ ನಿಂತು ಪ್ರತಿನಿತ್ಯ ಹಸಿ ಮಾಂಸದ ಊಟ ಮಾಡಿಸ್ತಾನೆ. ಆಗಾಗ ಆ ಪ್ರಾಣಿಗಳಿಗೆ ಸ್ನಾನ ಮಾಡಿಸುವ ಜೊತೆಗೆ ಅಗತ್ಯ ಚಿಕಿತ್ಸೆ ಕೂಡಾ ಕೊಡಿಸ್ತಾನೆ. ಅದೇನೆ ಇರ್ಲಿ, ಆ ವನ್ಯ ಪ್ರಾಣಿಗಳ ಬಗೆಗಿನ ಜಾನ್ ವಾತ್ಸಲ್ಯ ಹಾಗೂ ಸೇವಾ ಮನೋಭಾವನೆ ಮಾತ್ರ ಜಗತ್ತೆ ಮೆಚ್ಚುವಂತದ್ದು ಅನ್ನೋದು ನಿರ್ವಿವಾಧಿತ.