ಬ್ಯೂಟಿ ಕ್ವೀನ್ ಆದಳು, ಚಿಂದಿ ಆಯುವವಳ ಮಗಳು..!

ವಿಶಾಂತ್​​

ಬ್ಯೂಟಿ ಕ್ವೀನ್ ಆದಳು, ಚಿಂದಿ ಆಯುವವಳ ಮಗಳು..!

Tuesday January 19, 2016,

3 min Read

ಕಾಣದ ಕನಸೂ ನನಸಾಗುತ್ತಾ? ಇಂತಹ ಒಂದು ಸಾಧನೆ ನಾನು ಮಾಡ್ತೀನಿ ಅಂತ ಕನಸು, ಮನಸಿನಲ್ಲಿ ಅಂದುಕೊಂಡಿರದಿದ್ರೂ, ಅದು ಈಡೇರುತ್ತಾ? ಅಕಸ್ಮಾತ್ ಆ ಆಸೆ ನೂರು ಕೋಟಿಯಲ್ಲೊಬ್ಬರಿಗೆ ನೆರವೇರಬಹುದೇನೋ? ಇವತ್ತು ಅಂತಹ ಶತಕೋಟಿಯಲ್ಲೊಬ್ಬರ ಸ್ಟೋರಿ ಹೇಳ್ತೀವಿ.

image


ಚಿಂದಿ ಡಸ್ಟ್​ಬಿನ್‍ಗಳ ಮುಂದೆ ನಿಂತ ಚಿಂದು ಆಯುವ ಮಹಿಳೆಯ ಕಾಲನ್ನು ಮುಟ್ಟಿ ನಮಸ್ಕರಿಸುತ್ತಿರೋ ಬ್ಯೂಟಿಫುಲ್ ಬಾಲೆಯನ್ನು ನೋಡಿ ಇವಳಿಗೇನು ಹುಚ್ಚು ಹಿಡಿದಿದ್ಯಾ ಅಂದುಕೊಳ್ಬೇಡಿ. ಅಥವಾ ಇದು ಯಾವುದೋ ರಿಯಾಲಿಟಿ ಶೋನ ಶೂಟಿಂಗ್ ಅಂತಲೂ ಭಾವಿಸಬೇಡಿ. ಯಾಕಂದ್ರೆ ಇದು ರೀಲ್ ಅಲ್ಲ, ಫೇಕ್ ಅಂತೂ ಅಲ್ಲವೇ ಅಲ್ಲ. ಬದಲಿಗೆ ಇದು ರಿಯಾಲಿಟಿ ಶೋ, ಅಲ್ಲಲ್ಲ ರಿಯಲ್ ಶೋ. ಮುದ್ದು ಮಗಳೊಬ್ಬಳು ಹೆತ್ತ ತಾಯಿಯ ಕಾಲು ಮುಟ್ಟಿ ನಮಸ್ಕರಿಸಿ, ಆಶೀರ್ವಾದ ಪಡೆಯುತ್ತಿರುವ ಫೋಟೋ ಇದು.

image


ಅಪ್ಪ ದೂರಾದ, ಅಮ್ಮ ಹತ್ತಿರವಾದಳು!

ಹೌದು, ಈ ಬ್ಯೂಟಿ ಕ್ವೀನ್ ಹೆಸರು ಖನ್ನಿತ್ತಾ ಮಿಂಟ್ ಫಾಸೇಂಗ್. ವಯಸ್ಸು ಕೇವಲ 17. ಚಿಕ್ಕ ವಯಸ್ಸಿನಲ್ಲೇ ಅಪ್ಪ ಅಮ್ಮನನ್ನು ತೊರೆದರು. ಬಡತನದಿಂದಾಗಿ ಕುಟುಂಬದ ಜವಾಬ್ದಾರಿ ತಾಯಿ ಹೆಗಲ ಮೇಲೆ ಬಿತ್ತು. ಹೀಗಾಗಿಯೇ ಖನ್ನಿತ್ತಾ ಮಿಂಟ್ ಫಾಸೇಂಗ್ ತಾಯಿ ಚಿಂದಿ ಆಯತೊಡಗಿದರು. ಪ್ಲಾಸ್ಟಿಕ್ ಬಾಟಲಿಗಳನ್ನು ಕಲೆಕ್ಟ್ ಮಾಡುವುದು, ಪೇಪರ್, ಕವರ್, ಕಬ್ಬಿಣ, ರಟ್ಟನ್ನು ಆಯ್ದು, ಗುಜರಿಗೆ ಮಾರಾಟ ಮಾಡುತ್ತಿದ್ದರು. ಅದರಿಂದ ಬಂದ ಹಣದಿಂದ ಬದುಕಿನ ಬಂಡಿ ಸಾಗುತ್ತಿತ್ತು.

image


ಬಡತನ, ಅರ್ಧಕ್ಕೇ ನಿಂತ ಶಿಕ್ಷಣ

ಮುದ್ದಿನ ಮಿಂಟ್ ತಾನೂ ಅಮ್ಮನೊಂದಿಗೆ ಕೈಜೋಡಿಸತೊಡಗಿದಳು. ಹೀಗಾಗಿ ತಾನೂ ಪ್ರಾಥಮಿಕ ಶಾಲೆಯಲ್ಲೇ ಓದು ತೊರೆಯಬೇಕಾಯ್ತು. ಇದರ ನಡುವೆ ಹೇಗೋ ಆಕೆಯನ್ನು ನೋಡಿದ ಬ್ಯೂಟಿ ಪೇಜೆಂಟ್‍ನವರು ಮಿಂಟ್ ಸೌಂದರ್ಯ ಹಾಗೂ ಪ್ರತಿಭೆ ಗುರುತಿಸಿದ್ರು. ಅದರೊಂದಿಗೆ ಆಕೆಯನ್ನು ಮಾಡೆಲಿಂಗ್ ಲೋಕಕ್ಕೆ ಪರಿಚಯಿಸಿದ್ರು. ತರಬೇತಿ ನೀಡಿದ್ರು. ಈ ಮೂಲಕ ಮೇಕಪ್ ಕಿಟ್‍ಅನ್ನೂ ಖರೀದಿಸಲಾಗದ ಮಿಂಟ್, ಮಾಡೆಲಿಂಗ್ ಲೋಕದಲ್ಲಿ ಮಿಂಚತೊಡಗಿದಳು.

ಮಿಸ್ ಅನ್‍ಸೆನ್ಸಾರ್ಡ್ ನ್ಯೂಸ್ ಥಾಯ್ಲೆಂಡ್ – 2015

ಹೀಗೆ ಮಾರ್ಜಾಲ ನಡಿಗೆ ಮೂಲಕ ಸಾಕಷ್ಟು ಹೆಸರು ಮಾಡಿದಳು ಮಿಂಟ್. ಇದರ ನಡುವೆಯೇ ಥಾಯ್ಲೆಂಡ್‍ನಲ್ಲಿ ಪ್ರತಿಷ್ಠಿತ ‘ಮಿಸ್ ಅನ್‍ಸೆನ್ಸಾರ್ಡ್ ನ್ಯೂಸ್ ಥಾಯ್ಲೆಂಡ್ – 2015’ಕ್ಕೆ ಸ್ಪರ್ಧಿಸುವ ಅವಕಾಶ ದೊರೆಯಿತು. ಕಳೆದ ಅಕ್ಟೋಬರ್‍ನಲ್ಲಿ ನಡೆದ ಈ ಮಿಸ್ ಅನ್‍ಸೆನ್ಸಾರ್ಡ್ ನ್ಯೂಸ್ ಥಾಯ್ಲೆಂಡ್ – 2015 ಪೇಜೆಂಟ್‍ನಲ್ಲಿ ಎಲ್ಲಾ ಪ್ರತಿಸ್ಪರ್ಧಿಗಳನ್ನು ಹಿಂದಕ್ಕೆ ಹಾಕಿದ ಮಿಂಟ್, ತಾನೇ ಗೆದ್ದು ಬೀಗಿದ್ದಾಳೆ. ಈ ಮೂಲಕ 30 ಸಾವಿರ ಬಹ್ತ್ ಹಣವನ್ನು ತನ್ನ ಜೇಬಿಗೆ ಇಳಿಸಿಕೊಂಡಳು.

image


ಆದ್ರೆ ಇಲ್ಲೂ ಒಂದು ಸಮಸ್ಯೆ ಎದುರಾಗಿತ್ತು. ಯಾಕಂದ್ರೆ ಈ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಬೇಕು ಅಂದ್ರೆ ಕನಿಷ್ಠ 12 ಲೆವೆಲ್‍ವರೆಗೆ ಶಿಕ್ಷಣ ಪಡೆದಿರಬೇಕು. ಆದ್ರೆ ಬಡತನದಿಂದಾಗಿ 6ನೇ ಲೆವೆಲ್‍ಗೇ ಮಿಂಟ್ ಶಾಲೆ ತೊರೆದಿದ್ದಳು. ಇದರಿಂದ ಗೆದ್ದು ಕಿರೀಟ್ ಧರಿಸಿದ ಮಿಂಟ್, ಆ ಸ್ಪರ್ಧೆಯಿಂದ ಅನರ್ಹಗೊಳ್ಳುವ ಆತಂಕ ಎದುರಾಗಿತ್ತು. ಆದ್ರೆ ಕಾರಣಾಂತರಗಳಿಂದ ದೊಡ್ಡ ಮನಸ್ಸು ಮಾಡಿದ ಈ ಸ್ಪರ್ಧೆಯ ಆಯೋಜಕರು ಓದಿಗೂ, ಸೌಂದರ್ಯಕ್ಕೂ ಏನು ಸಂಬಂಧ ಬಿಡಿ ಅಂತ ಮಿಂಟ್‍ಅನ್ನೇ ವಿನ್ನರ್ ಎಂದು ಘೋಷಿಸಿದ್ರು.

ಮಿಂಟ್ ಈಗ ಎಲ್ಲರ ಕೇಂದ್ರಬಿಂದು

ಮಿಸ್ ಅನ್‍ಸೆನ್ಸಾರ್ಡ್ ನ್ಯೂಸ್ ಥಾಯ್ಲೆಂಡ್ – 2015 ಗೆಲ್ಲುತ್ತಲೇ ಮಿಂಟ್ ಈಗ ಎಲ್ಲೆಡೆ ಫೇಮಸ್ ಆಗಿದ್ದಾಳೆ. ಹೀಗಾಗಿಯೇ ಖಾಸಗೀ ಕಾರ್ಯಕ್ರಮಗಳಿಗೆ ಆಮಂತ್ರಣ, ಜಾಹಿರಾತು ಮಾತ್ರವಲ್ಲ ಸಿನಿಮಾಗಳಲ್ಲೂ ನಟಿಸಲು ಆಕೆಗೆ ಸಾಲು ಸಾಲು ಆಫರ್‍ಗಳು ಬಂದಿವೆ. ಆದ್ರೆ ಇತ್ತ ನೋಡಿದ್ರೆ ಮಿಂಟ್ ತಾಯಿಗೆ ಇದಾವುದರ ಅರಿವೂ ಇಲ್ಲ. ಆದ್ರೆ ಹಠಾತ್‍ಆಗಿ ಮಾಧ್ಯಮದವರು, ಸಿನಿಮಾ ಮಂದಿ ಸೇರಿದಂತೆ ಹೆಚ್ಚೆಚ್ಚು ಜನ ಮಿಂಟ್‍ಳನ್ನು ಹುಡುಕಿಕೊಂಡು ಬರೋದನ್ನು ನೋಡಿ, ಮಗಳ ಭವಿಷ್ಯದ ಕುರಿತು ಚಿಂತೆಯೂ ಪ್ರಾರಂಭವಾಗಿದೆ. ಬಣ್ಣದ ಲೋಕದ ಆಸೆಗೆ ಬಿದ್ದು ಮಗಳು ತಪ್ಪು ದಾರಿ ಹಿಡಿಯುವ ಆತಂಕವೂ ಇಲ್ಲ ಅಂತೇನಿಲ್ಲ. ಆದ್ರೆ ಮಿಂಟ್ ಮಾತ್ರ ತನ್ನ ಅಮ್ಮನ ಮಾತು ಮೀರೋದಿಲ್ಲವಂತೆ. ‘ನನ್ನಮ್ಮ ಒಬ್ಬಳೇ ಕುಟುಂಬದ ಬಂಡಿಯನ್ನು ನಡೆಸಿದ್ದಾಳೆ. ನನಗೆ ಅವಳೇ ಎಲ್ಲ. ಹೀಗಾಗಿಯೇ ಅವಳ ಮಾತನ್ನು ನಾನೆಂದೂ ಮೀರೋದಿಲ್ಲ’ ಅಂತಾಳೆ ಮಿಂಟ್.

image


ಮಗಳು ಪ್ರತಿಷ್ಠಿತ ಸೌಂದರ್ಯ ಸ್ಪರ್ಧೆಯನ್ನು ಗೆದ್ದಿದ್ದರೂ, ಮಿಂಟ್ ತಾಯಿ ಮಾತ್ರ ಈಗಲೂ ಚಿಂದಿ ಆಯುವುದನ್ನು ಮುಂದುವರಿಸಿದ್ದಾರೆ. ಹಾಗಂತ ಮಗಳನ್ನು ಮಾತ್ರ ಈಗ ಚಿಂದಿ ಮುಟ್ಟಲು ಬಿಡುತ್ತಿಲ್ಲ. ಅದೇ ಮನೆ, ಅದೇ ಜೀವನ... ಅದೇನೇ ಇರಲಿ ಮಿಂಟ್‍ಳ ಈ ರಿಯಲ್ ಸ್ಟೋರಿ ನೋಡಿದ್ರೆ, ಕುಚೇಲ ಕುಬೇರನಾದ ಕಥೆ ನೆನಪಿಗೆ ಬಾರದೇ ಇರದು. ಮಿಂಟ್ ಮತ್ತು ಆಕೆಯ ತಾಯಿಗೆ ಶುಭವಾಗಲಿ...