ಗಾಂಧಿವಾದಿ ಅಣ್ಣಾ ಹಜಾರೆ ಅವರ ಜೀವನಗಾಥೆ - ಭಾಗ 2

ಟೀಮ್ ವೈ.ಎಸ್.ಕನ್ನಡ 

ಗಾಂಧಿವಾದಿ ಅಣ್ಣಾ ಹಜಾರೆ ಅವರ ಜೀವನಗಾಥೆ - ಭಾಗ 2

Monday August 22, 2016,

2 min Read

ತಂದೆ-ತಾಯಿಯಿಂದ ಸಿಕ್ಕ ಸಂಸ್ಕಾರದ ಫಲವಾಗಿಯೇ ಕಿಷನ್ ಬಾಲ್ಯದಲ್ಲೇ ಎಲ್ಲರ ಅಣ್ಣನಾಗಿ ಬದಲಾದ್ರು. ಅಣ್ಣಾ ಹಜಾರೆ ಸರಳತೆಯ ಪ್ರತಿರೂಪ. ಅವರ ನಡತೆ, ಊಟ-ಉಪಹಾರ, ಕಾರ್ಯವೈಖರಿ ಎಲ್ಲದರಲ್ಲೂ ಸರಳತೆ ಮೈದಳೆದಿದೆ. ಅವರು ಖಾದಿ ವಸ್ತ್ರವನ್ನೇ ಧರಿಸುತ್ತಾರೆ. ಯಾವಾಗಲೂ ಬಿಳಿ ಬಣ್ಣದ ಧೋತಿ ಮತ್ತು ಕುರ್ತಾವನ್ನೇ ತೊಟ್ಟುಕೊಳ್ಳುತ್ತಾರೆ. ತಲೆ ಮೇಲಿನ ಗಾಂಧಿ ಟೋಪಿ ಅವರ ವಿಶಿಷ್ಟ ವೇಷಭೂಷಣದ ಪ್ರಮುಖ ಆಕರ್ಷಣೆ. ಅಣ್ಣಾ ಶುದ್ಧ ಸಸ್ಯಾಹಾರಿ, ಮಾದಕ ವಸ್ತುಗಳನ್ನು ಎಂದೂ ಸೇವಿಸಿದವರಲ್ಲ. ಸದಾ ಜನರ ನೆರವಿಗೆ ಧಾವಿಸುವ ಉದಾರ ವ್ಯಕ್ತಿತ್ವ ಅವರದ್ದು.

ಅಣ್ಣಾ ಅವರ ಪ್ರತಿ ಕೆಲಸದಲ್ಲೂ ಅವರ ತಂದೆ-ತಾಯಿಯ ಪ್ರತಿರೂಪವನ್ನು ಕಾಣಬಹುದು. ಬಾಲ್ಯದಿಂದಲೇ ತಾನು ತಂದೆ-ತಾಯಿಯಿಂದ ಬಹಳಷ್ಟು ಕಲಿತಿದ್ದೇನೆ ಎನ್ನುತ್ತಾರೆ ಅವರು. ಪೋಷಕರಿಂದ ದೊರೆತ ಸಂಸ್ಕಾರವೇ ಅನ್ಯಾಯದ ವಿರುದ್ಧ ಹೋರಾಡಲು ಅವರನ್ನು ಪ್ರೇರೇಪಿಸಿದ್ದು. ತಾಯಿ ಶಿಕ್ಷಕರಿಂದ ಶಿಕ್ಷೆ ಮತ್ತು ಶಾಲೆಯಲ್ಲಿ ಅವಮಾನದಿಂದ ಮಾತ್ರ ಅಣ್ಣಾ ಅವ್ರನ್ನು ಬಚಾವ್ ಮಾಡಿರಲಿಲ್ಲ, ಬದಲಾಗಿ ಮಹಾನ್ ಮತ್ತು ಆದರ್ಶಮಯ ಚರಿತ್ರೆಯ ಪಾಠಗಳನ್ನು ಕಲಿಸಿದ್ದರು. ತಾನು ಹೇಳಿದ ಸುಳ್ಳನ್ನು ಮುಚ್ಚಿಡಲು ತಾಯಿಯಿಂದ ಸುಳ್ಳು ಹೇಳಿಸಿದ್ದ ಅಣ್ಣಾ, ಮತ್ತೆಂದೂ ಜೀವನದಲ್ಲಿ ಸುಳ್ಳು ಹೇಳಲೇ ಇಲ್ಲ.

ಚಿಕ್ಕ ವಯಸ್ಸಿನಲ್ಲೇ ಅಣ್ಣಾಗೆ ಅವರ ತಾಯಿ ಒಳ್ಳೆಯ ಸಂಸ್ಕಾರ ಕಲಿಸಲು ಆರಂಭಿಸಿದ್ರು. ``ನಾನು ಚಿಕ್ಕವನಿದ್ದಾಗ ಯಾರಿಗೂ ಕೆಟ್ಟದ್ದು ಮಾಡಬಾರದೆಂದು ಅಮ್ಮ ಹೇಳಿಕೊಟ್ಟಿದ್ದರು. ಕಳವು ಮಾಡಬಾರದು, ಯಾರ ಜೊತೆಗೂ ಜಗಳ ಆಡಬಾರದು, ಸಮಾಜಕ್ಕೆ ಒಳಿತು ಮಾಡಬೇಕೆಂಬ ಪಾಠ ಕಲಿಸಿದ್ದರು'' ಅಂತಾ ಅಣ್ಣಾ ವಿವರಿಸ್ತಾರೆ. ಜಾಸ್ತಿ ಏನನ್ನೂ ಮಾಡಲಾಗದೇ ಇದ್ರೆ ನಿನ್ನಿಂದ ಎಷ್ಟು ಸಾಧ್ಯವೋ ಅಷ್ಟು ಒಳ್ಳೆ ಕಾರ್ಯಗಳನ್ನು ಮಾಡು, ಯಾವಾಗಲೂ ಇತರರ ದುಖಃ ದೂರ ಮಾಡು ಎಂದು ತಾಯಿ ಲಕ್ಷ್ಮಿಬಾಯಿ ಅಣ್ಣಾಗೆ ಹಿತವಚನ ಹೇಳಿದ್ದರು. ಆಗಲೇ ಅಣ್ಣಾ ಅವರ ಮನಸ್ಸಿನ ಮೇಲೆ ಅಮ್ಮನ ಮಾತು ಅಪಾರ ಪ್ರಭಾವ ಬೀರಿತ್ತು. ಅಮ್ಮನ ಮಾತುಗಳಿಂದ ನನ್ನ ಮನಸ್ಸು ಸಾಮಾಜಿಕ ಮನಸ್ಸಿನಂತಾಯಿತು ಎನ್ನುತ್ತಾರೆ ಅವರು.

ಅಣ್ಣಾ ಅವರದ್ದು ಬಡ ಕುಟುಂಬ. ಅಣ್ಣಾ ಕೂಡ ಬಡತನದ ಕಷ್ಟವನ್ನು ಅರಿತಿದ್ದಾರೆ. ಕುಟುಂಬ ನಿರ್ವಹಣೆಗೆ ಪತಿಗೆ ಹೆಗಲಾಗಲು ಅಣ್ಣಾ ಅವರ ತಾಯಿ ಕೂಡ ಅಕ್ಕಪಕ್ಕದ ಮನೆಗಳಲ್ಲಿ ಪಾತ್ರೆ ತೊಳೆಯುತ್ತಿದ್ರು. ``ನನ್ನ ಅಮ್ಮನ ಬಳಿ ಹೆಚ್ಚು ಹಣವಿರಲಿಲ್ಲ. ಆಕೆ ಶ್ರೀಮಂತಳೂ ಅಲ್ಲ. ಆದ್ರೆ ಅವರ ವ್ಯಕ್ತಿತ್ವ ಮಾತ್ರ ಅದ್ಭುತವಾಗಿತ್ತು'' ಅನ್ನೋದು ಅಣ್ಣಾರ ಹೆಮ್ಮೆಯ ನುಡಿ. ಅಣ್ಣಾ ಅವರ ಮೇಲೆ ತಂದೆ ಬಾಬುರಾವ್ ಅವರ ಪ್ರಭಾವವೂ ಇದೆ. ತಂದೆ ಹಗಲು-ರಾತ್ರಿ ಹೇಗೆ ಕಷ್ಟಪಡುತ್ತಿದ್ದಾರೆ ಅನ್ನೋದನ್ನು ಅಣ್ಣಾ ಬಾಲ್ಯದಲ್ಲೇ ಗಮನಿಸುತ್ತಿದ್ರು. ಬಹಳಷ್ಟು ವಿಷಯಗಳಲ್ಲಿ ಅಣ್ಣಾ ತಮ್ಮ ತಂದೆಯನ್ನು ಅನುಕರಣೆ ಮಾಡಿದ್ದಾರೆ.

``ನನ್ನ ತಂದೆ ಸರಳ ಮನುಷ್ಯ. ಅವರದ್ದು ನೇರ ನುಡಿ. ಮಾದಕ ವಸ್ತುಗಳನ್ನೆಂದೂ ಸೇವಿಸಿದವರಲ್ಲ. ಇತರರ ಸಂಪತ್ತನ್ನು ದೋಚಲು ಎಂದೂ ಯತ್ನಿಸಿಲ್ಲ. ಇವೆಲ್ಲವೂ ನನ್ನ ಮೇಲೆ ಪ್ರಭಾವ ಬೀರಿವೆ. ಅವರು ಹೆಚ್ಚು ಓದಿದವರಲ್ಲ, ಅಲ್ಪ ಶಿಕ್ಷಣ ಪಡೆದಿದ್ದರಷ್ಟೆ. ನಾನು ಬೆಳಗ್ಗೆಯಿಂದ ಸಂಜೆವರೆಗೂ ಅವರನ್ನು ಗಮನಿಸುತ್ತಿದ್ದೆ. ಅವರೇನು ತಿನ್ನುತ್ತಾರೆ? ಏನು ಕುಡಿಯುತ್ತಾರೆ? ಹೇಗಿರ್ತಾರೆ? ಹೇಗೆ ನಡೆಯುತ್ತಾರೆ? ಎಲ್ಲವನ್ನೂ ನೋಡುತ್ತಿದ್ದೆ, ಅದು ನನ್ನ ಮೇಲೆ ಪ್ರಭಾವ ಬೀರಿದೆ'' ಎನ್ನುತ್ತಾರೆ ಅಣ್ಣಾ ಹಜಾರೆ.

ಈಗ ಕೆಲ ಪೋಷಕರು ತಮ್ಮ ಮಕ್ಕಳು ಸಂಸ್ಕಾರವಂತರಾಗಬೇಕೆಂಬ ಕಾರಣಕ್ಕೆ ಅವರನ್ನು ಸಂಸ್ಕಾರ ಕೇಂದ್ರಕ್ಕೆ ಕಳುಹಿಸುತ್ತಿದ್ದಾರೆ ಅನ್ನೋದನ್ನು ಅಣ್ಣಾ ಪ್ರಸ್ತಾಪಿಸಿದ್ರು. ``ಸಂಸ್ಕಾರ ಕೇಂದ್ರಕ್ಕೆ ಕಳುಹಿಸಿದ್ರೆ ತಮ್ಮ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಸಿಗುತ್ತದೆ ಎಂದು ಎಷ್ಟೋ ಪೋಷಕರು ಭಾವಿಸಿದ್ದಾರೆ. ಆದ್ರೆ ಅದು ತಪ್ಪು. ಸರಿಯಾದ ಸಂಸ್ಕಾರ ಮಕ್ಕಳಿಗೆ ತಮ್ಮ ತಂದೆ-ತಾಯಿಯಿಂದ್ಲೇ ಸಿಗುತ್ತದೆ'' ಅನ್ನೋದು ಅಣ್ಣಾರ ಅನುಭವದ ಮಾತು. ಎಲ್ಲ ಕುಟುಂಬವನ್ನೂ ಸಂಸ್ಕಾರ ಕೇಂದ್ರವನ್ನಾಗಿ ಮಾಡಬೇಕು ಅನ್ನೋದು ಅಣ್ಣಾ ಹಜಾರೆ ಅವರ ಸಂದೇಶ.

ಇದನ್ನೂ ಓದಿ..

ಮಾರುಕಟ್ಟೆಯಲ್ಲಿ ನಿಮ್ಮ ಚಿತ್ರಣ ಸೃಷ್ಟಿಸಿ ಉದ್ಯಮದ ಕಹಳೆ ಮೊಳಗಿಸಿ

ಜನಸೇವಕ, ಗಾಂಧಿವಾದಿ ಅಣ್ಣಾ ಹಜಾರೆ ಅವರ ಜೀವನಗಾಥೆ..