ತಾಯ್ನಾಡಿನ ಋಣ ತೀರಿಸಲು ಹಂಬಲಿಸುತ್ತಿರುವ ಪಾಪ್ ಗಾಯಕಿ..!
ಕೃತಿಕಾ
ಈ ದೇಶದಲ್ಲಿ ಹುಟ್ಟಿ, ಇಲ್ಲಿ ಕಲಿತು ವಿದೇಶಕ್ಕೆ ಹಾರುವ ಬಹುತೇಕ ಮಂದಿ ತಾಯ್ನಾಡನ್ನು ಮರೆತೇ ಬಿಡುತ್ತಾರೆ. ಅಲ್ಲಿ ಹೋದ ನಂತರ ತಮ್ಮದೇ ಲೋಕದಲ್ಲಿ ಕಳೆದುಹೋಗುತ್ತಾರೆ. ಹಾಗೇ ಕಳೆದು ಹೋಗುವವರಿಗಿಂತ ಭಿನ್ನವಾಗಿ ನಿಲ್ಲುವವರು ಅಂದರೆ ಜೋಯಾ ಮೋಹನ್.
ಭಾರತೀಯ ಮೂಲದ ಜೋಯಾ ಮೋಹನ್ ಅಮೆರಿಕದಲ್ಲಿ ನೆಲೆಸಿದ್ದಾರೆ. ಸಂಗೀತದಲ್ಲಿ ಪದವಿ ಪಡೆದಿರುವ ಜೋಯಾ ಜಾನಪದ ಮತ್ತು ಪಾಪ್ ಹಾಡುಗಾರ್ತಿ. ನೂರಾರು ಸಂಗೀತ ಆಲ್ಬಂಗಳನ್ನು ಹೊರ ತಂದಿರುವ ಜೋಯಾ ಯೂರೋಪ್ ಮತ್ತು ಅಮೆರಿಕಾದಲ್ಲಿ ಬಾರೀ ಜನಪ್ರಿಯತೆ ಗಳಿಸಿದ್ದಾರೆ. ಇದಷ್ಟೇ ಆಗಿದ್ದರೆ ಜೋಯಾ ಬಗ್ಗೆ ಇಲ್ಲಿ ಬರೆಯುವ ಅಗತ್ಯ ಇರುತ್ತಿರಲಿಲ್ಲವೇನೋ. ಆದರೆ ಜೋಯಾ ಸಂಗೀತದ ಜೊತೆಗೆ ಸಮಾಜಮುಖಿ ಕೆಲಸಗಳಲ್ಲೂ ಸಕ್ರಿಯರಾಗಿದ್ದಾರೆ.
ತಾಯ್ನಾಡಿನ ಋಣ ತೀರಿಸುವ ಸಲುವಾಗಿ ಜೋಯಾ ಪ್ರತೀ ವರ್ಷ ಭಾರತಕ್ಕೆ ಬರುತ್ತಾರೆ. ದೇಶದ ನಾನಾ ಭಾಗಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಾರೆ. ಈ ಕಾರ್ಯಕ್ರಮಗಳಿಂದ ಬರುವ ಹಣವನ್ನು ಸರ್ಕಾರಿ ಅಥವಾ ಖಾಸಗಿ ಶಾಲೆಗಳ ಮೂಲಭೂತ ಸೌಕರ್ಯಗಳ ಅಭಿವೃದ್ದಿಗೆ ಬಳಸುತ್ತಾರೆ. ದೇಶದಲ್ಲಿನ ಎಲ್ಲ ವಿಧ್ಯಾರ್ಥಿಗಳಿಗೆ ಶಾಲೆಗಳಲ್ಲಿ ಅಗತ್ಯ ಸೌಲಭ್ಯಗಳು ಸಿಗಬೇಕು ಅನ್ನೋದು ಜೋಯಾ ಮೋಹನ್ ಅವರ ಮಹದಾಸೆ.
ಗ್ರಾಮೀಣ ಶಾಲೆಗಳಲ್ಲಿ ಶೌಚಾಲಯ ಕಟ್ಟಿಸುವುದು, ಗ್ರಂಥಾಲಯಗಳಿಗೆ ಪುಸ್ತಕಗಳನ್ನು ಒದಗಿಸುವುದು, ಆಟದ ಸಾಮಗ್ರಿ, ಎಲೆಕ್ಟ್ರಿಕ್ ವಸ್ತುಗಳು ಸೇರಿದಂತೆ ಶಾಲೆಗಳಿಗೆ ಅಗತ್ಯವಿರುವ ಎಲ್ಲವನ್ನೂ ನೀಡುತ್ತಿದ್ದಾರೆ. ಮಹಾರಾಷ್ಟ್ರ ಮತ್ತು ರಾಜಸ್ತಾನದ ಹಲವು ಶಾಲೆಗಳಿಗೆ ಜೋಯಾ ಹಲವು ಆಧುನಿಕ ಸೌಕರ್ಯಗಳನ್ನು ಕಲ್ಪಿಸಿದ್ದಾರೆ.
ಭಾರತೀಯ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಬೇಕು. ಎಲ್ಲಾ ಮಕ್ಕಳೂ ಉನ್ನತ ವ್ಯಾಸಂಗ ಮಾಡಬೇಕು, ಆ ಮೂಲಕ ಈ ದೇಶ ಅಭಿವೃದ್ಧಿ ಪಥದತ್ತ ಮುನ್ನಗ್ಗಬೇಕು ಅನ್ನೋದು ಜೋಯಾ ಮೋಹನ್ ಅವರ ಕನಸು. ಅಮೆರಿಕ ಸೇರಿದಂತೆ ಮುಂದುವರೆದ ದೇಶಗಳಲ್ಲಿ ಮಕ್ಕಳ ಶೈಕ್ಷಣಿಕ ಪ್ರಗತಿ ಉತ್ತಮವಾಗಿದೆ. ಆದರೆ ಭಾರತದಲ್ಲಿನ ಪ್ರಾಥಮಿಕ ಶಾಲೆಗಳಲ್ಲಿ ಮೂಲಸೌಕರ್ಯ ಮತ್ತು ಪರಿಣಾಮಕಾರಿ ಶಿಕ್ಷಣ ವ್ಯವಸ್ಥೆ ಇಲ್ಲ. ಹಾಗಾಗಿ ನಮ್ಮ ಶಿಕ್ಷಣ ವ್ಯವಸ್ಥೆ ಸುಧಾರಣೆಯಾಗಬೇಕು ಎಂಬುದು ಜೋಯಾ ಹಂಬಲ.
ದುಡ್ಡು, ಜನಪ್ರಿಯತೆ ಎಲ್ಲವನ್ನೂ ಚಿಕ್ಕವಯಸ್ಸಿನಲ್ಲೇ ಪಡೆದಿರುವ ಜೋಯಾಗೆ ಇವೆರೆಡೇ ಮುಖ್ಯವಲ್ಲ. ಇದರ ಜೊತೆಗೆ ತನ್ನ ದೇಶದ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕಗ್ಷಣ ಸಿಗಬೇಕು, ಉತ್ತಮ ಗುಣಮಟ್ಟದ ಪರಿಸರ ನಿರ್ಮಾಣವಾಗಬೇಕು ಆ ಮೂಲಕ ಜನರ ಜೀವನ ಮಟ್ಟ ಉತ್ತಮಗೊಳ್ಳಬೇಕು ಎಂಬ ಕನಸಿಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ. ಅತೀ ಕಿರಿಯ ವಯಸ್ಸಿಗೆ ಸಾರ್ಥಕ ಜೀವನದ ಮಾರ್ಗ ಕಂಡುಕೊಂಡಿರುವ ಜೋಯಾ ಅವರ ಸಾಧನೆ ಇಂದಿನ ಯುವ ಪೀಳಿಗೆಗೆ ಪ್ರೇರಣೆ.