`ಒಪಿನಿಯೋ'ಗೆ ಬಂಡವಾಳದ ಹರಿವು
ಭಾರತಿ ಭಟ್
ಬಿ2ಬಿ ಹೈಪರ್ ಲೋಕಲ್ ಡೆಲಿವರಿ ಉದ್ಯಮ `ಒಪಿನಿಯೋ' ಸದ್ಯ ಲಾಜಿಸ್ಟಿಕ್ಸ್ ಕಂಪನಿಗಳಾದ `ಡೆಲ್ಲಿವರಿ', `ಸ್ಯಾಂಡ್ಸ್ ಕ್ಯಾಪಿಟಲ್' ಮತ್ತು `ಎಕ್ಸೆಲ್ ಪಾರ್ಟ್‍ನರ್ಸ್'ನಿಂದ 7 ಮಿಲಿಯನ್ ಡಾಲರ್‍ನಷ್ಟು ಸಿರೀಸ್ ಎ ನಿಧಿಯನ್ನು ಹೆಚ್ಚಿಸಿಕೊಂಡಿದೆ. ಈ ಬಂಡವಾಳವನ್ನು ವಿವಿಧ ನಗರಗಳಲ್ಲಿ ವಹಿವಾಟು ವಿಸ್ತರಣೆಗೆ ಬಳಸಿಕೊಳ್ಳಲಾಗುತ್ತೆ. ಅಷ್ಟೇ ಅಲ್ಲ, ತಂತ್ರಜ್ಞಾನ ವೇದಿಕೆಯನ್ನು ಬಲಪಡಿಸಲು ಕೂಡ ಯೋಜನೆ ಹಾಕಿಕೊಳ್ಳಲಾಗಿದೆ. `ಒಪಿನಿಯೋ'ಗೆ ಬಂಡವಾಳ ದೊರೆಯುತ್ತಿರುವುದು ಇದೇ ಮೊದಲೇನಲ್ಲ. `ಎಕ್ಸೆಲ್ ಪಾರ್ಟ್‍ನರ್ಸ್' ಮತ್ತು `ಟ್ರಾಕ್ಸನ್ ಲ್ಯಾಬ್ಸ್'ನಿಂದ 1.3 ಮಿಲಿಯನ್ ಬಂಡವಾಳ ಸಂಗ್ರಹಿಸುವಲ್ಲಿ `ಒಪಿನಿಯೋ' ಯಶಸ್ವಿಯಾಗಿದೆ. ವಿಶೇಷ ಅಂದ್ರೆ ಜುಲೈನಲ್ಲಿ ಒಪಿನಿಯೋ ಕಾರ್ಯಾರಂಭ ಮಾಡಿದ್ದು, ಅದಾಗಿ ಕೇವಲ 7 ವಾರಗಳೊಳಗೆ ಸಂಸ್ಥೆಗೆ ಬಂಡವಾಳ ಹರಿದು ಬಂದಿದೆ.
`ಒಪಿನಿಯೋ' ಸಣ್ಣ ಪುಟ್ಟ ಉದ್ಯಮಗಳಿಗೆ ನೆರವಾಗುತ್ತಿದೆ. ರೆಸ್ಟೋರೆಂಟ್‍ಗಳು, ದಿನಸಿ ಅಂಗಡಿಗಳು, ಬೇಕರಿಗಳು, ಲಾಂಡ್ರಿಗಳಿಗೆ ಅಗತ್ಯವಾದ ವಿತರಣೆ ಸೇವೆಯನ್ನು ನೀಡುತ್ತಿದೆ. ಕಳೆದ ತಿಂಗಳು 500 ವ್ಯಾಪಾರಿಗಳ ಸಹಯೋಗದೊಂದಿಗೆ ಬೆಂಗಳೂರಿನ 15 ಸ್ಥಳಗಳಲ್ಲಿ ಹಾಗೂ ದೆಹಲಿಯ ಮೂರು ಕಡೆಗಳಲ್ಲಿ ಸೇವೆಯನ್ನು ಆರಂಭಿಸಿದೆ. ಸದ್ಯ `ಒಪಿನಿಯೋ' ವಾರದಿಂದ ವಾರಕ್ಕೆ ಶೇಕಡಾ 30ರಷ್ಟು ಬೆಳವಣಿಗೆ ಹೊಂದುತ್ತಿದೆ.
ಈಗ ಸಿಕ್ಕ ಬಂಡವಾಳದ ನೆರವಿನಿಂದ ಇನ್ನು 6 ತಿಂಗಳುಗಳಲ್ಲಿ 200 ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲು `ಒಪಿನಿಯೋ' ಮುಂದಾಗಿದೆ. ಬಂಡವಾಳ ಬಳಕೆ ಹಾಗೂ ತಂತ್ರಜ್ಞಾನ ಅಭಿವೃದ್ಧಿ ಬಗ್ಗೆ ಒಪಿನಿಯೋದ ಸಿಟಿಓ ಹಾಗೂ ಸಹಸಂಸ್ಥಾಪಕ ಲೋಕೇಶ್ ಜಂಗಿದ್ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಹೈಪರ್ ಲೋಕಲ್ ಲಾಜಿಸ್ಟಿಕ್ ಅನ್ನೋದು ಪರಿಣಾಮಕಾರಿಯಾಗಿ ಮತ್ತು ಲಾಭದಾಯಕವಾಗಿ ತಂತ್ರಜ್ಞಾನದ ಮೂಲಕ ಪರಿಹರಿಸಬಲ್ಲ ಸಮಸ್ಯೆ ಎನ್ನುತ್ತಾರೆ ಅವರು. ಹಣಪಾವತಿ, ಸೇವೆ ಉತ್ತಮಪಡಿಸುವಿಕೆ, ವ್ಯಾಪಾರಿ ವರ್ತನೆ ಮುಂತಾದ ಸಮಸ್ಯೆಗಳಿಗೆ ಪರಿಹಾರ ಹುಡುಕುವ ನಿಟ್ಟಿನಲ್ಲಿ ಒಪಿನಿಯೋದ ಉತ್ಪನ್ನ ವಿಭಾಗದ ತಂಡ ಹೊಸ ಹೊಸ ಆವಿಷ್ಕಾರಗಳನ್ನು ಮಾಡುತ್ತಿದೆ ಅಂತಾ ಲೋಕೇಶ್ ತಿಳಿಸಿದ್ದಾರೆ.
ಇನ್ನು `ಎಕ್ಸೆಲ್ ಪಾರ್ಟ್‍ನರ್ಸ್'ನ ಉಪಾಧ್ಯಕ್ಷ ಅಭಿನವ್ ಚತುರ್ವೇದಿ ಕೂಡ ಬಂಡವಾಳ ಹೂಡಿಕೆ ಬಗ್ಗೆ ಮಾತನಾಡಿದ್ದಾರೆ. ವಿತರಣೆ ಅನ್ನೋದು ಈಗ ಸರ್ವೇಸಾಮಾನ್ಯ ಎಂಬಂತಾಗಿದೆ. ಆದ್ರೆ `ಒಪಿನಿಯೋ' ವಿಸ್ತಾರವಾದ ಮಾರುಕಟ್ಟೆಯಲ್ಲಿ ಕೊನೆ ಹಂತದವರೆಗೂ ಸ್ಥಿರ ಬೆಲೆಯನ್ನು ಸರಳೀಕರಿಸುವ ಮೂಲಕ ಆಯಕಟ್ಟಿನ ಆಸ್ತಿಯನ್ನು ಸಂಪಾದಿಸಿದೆ ಎನ್ನುತ್ತಾರೆ ಅಭಿನವ್ ಚತುರ್ವೇದಿ. ಒಪಿನಿಯೋದ ಕಾರ್ಯವೈಖರಿ ಬಗ್ಗೆ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದಾರೆ. ಒಪಿನಿಯೋಗೆ ಬಂಡವಾಳದ ನೆರವು ನೀಡಿದ ಎಕ್ಸೆಲ್ ಪಾರ್ಟ್‍ನರ್ಸ್ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.
ಬಿರುಸಿನ ಕಾರ್ಯಚಟುವಟಿಕೆ...
ಕಳೆದ 10 ತಿಂಗಳಲ್ಲಿ ಹೈಪರ್ ಲೋಕಲ್ ಉದ್ಯಮಗಳು 200 ಮಿಲಿಯನ್ ಡಾಲರ್‍ನಷ್ಟು ರಿಸ್ಕ್ ಬಂಡವಾಳವನ್ನು ಸಂಗ್ರಹಿಸಿರುವ ಬಗ್ಗೆ `ಯುವರ್‍ಸ್ಟೋರಿ ಡಾಟ್ ಕಾಮ್' ವರದಿ ಮಾಡಿತ್ತು. `ಅಸೋಚಾಮ್ ಪಿಡಬ್ಲ್ಯೂಸಿ' ವರದಿಯ ಪ್ರಕಾರ 2014ರಲ್ಲಿ 40 ಮಿಲಿಯನ್ ಗ್ರಾಹಕರು ಆನ್‍ಲೈನ್‍ನಲ್ಲಿ ಉತ್ಪನ್ನಗಳನ್ನು ಖರೀದಿಸಿದ್ದಾರೆ. ಈ ಸಂಖ್ಯೆ ಪ್ರಸಕ್ತ ವರ್ಷ 65 ಮಿಲಿಯನ್‍ಗೆ ಏರಿಕೆಯಾಗುವ ಸಾಧ್ಯತೆಯಿದೆ. ಈ ವಲಯದಲ್ಲಿ ವಿಸಿ ಹೂಡಿಕೆಗಳು ಕೂಡ ತೀವ್ರಗತಿಯಲ್ಲಿವೆ. `ವೈಎಸ್ ಸಂಶೋಧನೆ'ಯ ಪ್ರಕಾರ ಲಾಜಿಸ್ಟಿಕ್ಸ್ ವಿತರಣೆ ಬೇಡಿಕೆ ವಲಯದಲ್ಲಿ 38 ಮಿಲಿಯನ್ ಅಮೆರಿಕನ್ ಡಾಲರ್‍ಗೂ ಅಧಿಕ ಬಂಡವಾಳ ಹೂಡಿಕೆಯಾಗಿದೆ. ಈ ಬಂಡವಾಳ `ಲೊಗಿ ನೆಕ್ಷ್ಟ್'ನಂತಹ ಕಂಪನಿಗಳಿಗೆ ಕೂಡ ತಲುಪುತ್ತಿದೆ. ವಿಳಂಬ ಊಹಿಸಲು, ವೆಚ್ಚವನ್ನು ಉಳಿಸಲು ಮತ್ತು ವಿಶ್ವಾಸಾರ್ಹ ಗ್ರಾಹಕ ಸೇವೆಯನ್ನು ಒದಗಿಸಲು ಈ ಕಂಪನಿಗಳು ಬಂಡವಾಳವನ್ನು ಬಳಸಿಕೊಳ್ಳುತ್ತಿವೆ.
ಜುಲೈನಲ್ಲಿ ಹೂಡಿಕೆಯಾದ 11 ಮಿಲಿಯನ್ ಡಾಲರ್ ಬಂಡವಾಳದಲ್ಲಿ ಅತ್ಯಧಿಕ ಪಾಲನ್ನು `ರೋಡ್‍ರನ್ನರ್ ಸ್ನ್ಯಾಪ್ಡ್' ಪಡೆದುಕೊಂಡಿದೆ. ತಮ್ಮ ಸಿಬ್ಬಂದಿ ಸಾಮರ್ಥ್ಯವನ್ನು ಉತ್ತಮಗೊಳಿಸಲು ಆ ಬಂಡವಾಳವನ್ನು ಬಳಸಿಕೊಳ್ಳುತ್ತಿದೆ. `ಅಮೇಝಾನ್' ಹಾಗೂ `ಓಲಾ' ಈಗಾಗ್ಲೇ ಬೆಂಗಳೂರಿನಲ್ಲಿ ತಮ್ಮ ಪ್ರಾಜೆಕ್ಟ್ ಅನ್ನು ಯಶಸ್ವಿಯಾಗಿ ಮುನ್ನಡೆಸುತ್ತಿವೆ. ಅಮೇಝಾನ್ ಕಿರಾಣಾ, ಓಲಾ ಸ್ಟೋರ್ಸ್, ಓಲಾದ ಹೈಪರ್ ಲೋಕಲ್ ದಿನಸಿ ಮೊಬೈಲ್ ಆ್ಯಪ್‍ನಿಂದಾಗಿ ಮಾರುಕಟ್ಟೆಯಲ್ಲಿ ಭಾರೀ ಸಂಚಲನ ಶುರುವಾಗಿದೆ. ಈ ವಲಯದಲ್ಲಿ ಭರ್ಜರಿ ಹೂಡಿಕೆಯ ಜೊತೆ ಜೊತೆಗೆ ಪೈಪೋಟಿ ಕೂಡ ತೀವ್ರಗೊಳ್ಳುತ್ತಿದೆ. ಒಬ್ಬರನ್ನೊಬ್ಬಲು ಹಿಂದಿಕ್ಕಲು ಯಾವ ರೀತಿಯ ರಣತಂತ್ರ ರೂಪಿಸ್ತಾರೆ ಅನ್ನೋದೇ ಸದ್ಯದ ಕುತೂಹಲ.
ಬಂಡವಾಳ ಲಭ್ಯತೆಯ ಜೊತೆಜೊತೆಗೆ ಪೈಪೋಟಿಯೂ ಹೆಚ್ಚುತ್ತಿರುವುದರಿಂದ ಪರಸ್ಪರರನ್ನು ಹಿಂದಿಕ್ಕಲು ಆಕ್ರಮಣಕಾರಿ ಯೋಜನೆಗಳನ್ನು ಹಮ್ಮಿಕೊಳ್ಳಬೇಕಿದೆ. ಹೊಸ ತಂತ್ರಜ್ಞಾನ ಅಳವಡಿಕೆ ಮತ್ತು ನೂತನ ಆವಿಷ್ಕಾರಗಳ ಮೂಲಕ ಸೇವೆಯನ್ನು ಉತ್ತಮಪಡಿಸಲೇಬೇಕಾದ ಅನಿವಾರ್ಯತೆ ಈ ಸಂಸ್ಥೆಗಳ ಮುಂದಿದೆ. ಈ ನಿಟ್ಟಿನಲ್ಲಿ ಎಲ್ಲಾ ಕಂಪನಿಗಳು ಕಾರ್ಯಾರಂಭ ಮಾಡಿವೆ. ವೇಗ ಹಾಗೂ ಕಾರ್ಯದಕ್ಷತೆಯನ್ನು ಹೆಚ್ಚಿಸಿಕೊಂಡಲ್ಲಿ ಮಾತ್ರ ಸಂಸ್ಥೆಗಳು ಮಾರುಕಟ್ಟೆಯಲ್ಲಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳಬಹುದು.