23 ಸಾವಿರ ಗಿಡ ನೆಡುವಂತೆ ಮಾಡಿದ ರಿಕ್ಷಾ ಚಾಲಕ
ಆಟೋರಿಕ್ಷಾ ಚಾಲಕರಾದ ಶ್ಯಾಮ ಕುಮಾರ್ ಹವ್ಯಾಸಿ ಓದುಗರು ಮತ್ತು ಪರಿಸರವಾದಿ. ಅವರು ಪ್ರತಿದಿನ ತಮ್ಮ ಆಟೋದಲ್ಲಿ 10 ಲೀ. ನೀರು ತೆಗೆದುಕೊಂಡು ಹೋಗಿ ಪಲಕ್ಕಡ್‌ನಲ್ಲಿ ನೆಟ್ಟ ಗಿಡಗಳಿಗೆ ನೀರುಣಿಸುತ್ತಾರೆ.
ಶ್ಯಾಮ್ ಕುಮಾರ್ ಆಟೋಚಾಲಕರಾಗಿದ್ದು ಕೇರಳದ ಪಲಕ್ಕಡ್‌ನ ಥೆಂಕುರಿಸ್ಸಿಯವರಾಗಿದ್ದಾರೆ. ವಿಶೇಷವೆಂಬಂತೆ ಅವರು ಪುಸ್ತಕ ಓದುವುದು, ಪರಿಸರ ಸಂರಕ್ಷಣೆಯಲ್ಲಿ ಆಸಕ್ತಿ ಹೊಂದಿದ್ದಾರೆ.
ವೃಕ್ಷಾಯುರ್ವೇದಂ ಎಂಬ ಪುಸ್ತಕವನ್ನು ಓದಿದ ನಂತರ ಇವರು ಗಿಡ ಮರಗಳಿಂದ ಮಕ್ಕಳ ಜೀವನದಲ್ಲಿ ಆಗುವ ಬದಲಾವಣೆಗಳು ಮತ್ತು ಇತರ ಉಪಯೋಗಗಳನ್ನು ಮನಗಂಡು ದೊಡ್ಡ ಪ್ರಮಾಣದಲ್ಲಿ ಗಿಡ ನೆಡಲು ನಿರ್ಧರಿಸಿದರು.
“ಕಳೆದ 18 ವರ್ಷದಿಂದ ನಾನು ಈ ಕೆಲಸ ಮಾಡಿಕೊಂಡು ಬಂದಿದ್ದೇನೆ, ಇದರಲ್ಲಿ ನನ್ನ ಪತ್ನಿ ಮತ್ತು ಮಗನು ಜತೆಯಾಗಿದ್ದಾರೆ. ಇಷ್ಟು ವರ್ಷದಲ್ಲಿ ನಮ್ಮಿಂದ ಪ್ರೇರಿತರಾಗಿ ಜನರು 23,000 ಕ್ಕೂ ಅಧಿಕ ಗಿಡಗಳನ್ನು ನೆಟ್ಟಿದ್ದಾರೆ. ಈಗ ಅವುಗಳಲ್ಲಿ ಶೇ 90 ರಷ್ಟು ಗಿಡಗಳು ದೊಡ್ಡ ನೆರಳು ನೀಡುವ, ಹಣ್ಣು ಬಿಡುವ ಮರಗಳಾಗಿ ಬೆಳೆದಿವೆ,” ಎಂದು ಶ್ಯಾಮ್ ದಿ ಹಿಂದೂಗೆ ತಿಳಿಸಿದರು.
ಅರಣ್ಯ ಸಚಿವರೆಂದೆ ಖ್ಯಾತಿ ಪಡೆದಿರುವ ಶ್ಯಾಮ್ ಅವರಿಗೆ ಕೇರಳ ರಾಜ್ಯದ ಜೈವಿಕ ವೈವಿಧ್ಯತೆ ಮಂಡಳಿಯ ಹರಿಥಾ ವ್ಯಕ್ತಿ ಪ್ರಶಸ್ತಿ ಸೇರಿದಂತೆ 10 ಪ್ರಶಸ್ತಿಗಳು ಸಂದಿವೆ. ಪತ್ರಕರ್ತ ಮತ್ತು ಪರಿಸರವಾದಿ ಪಿ ವಿ ಥಂಪಿಯವರ ಸ್ಮರಣೆಯಲ್ಲಿ ನೀಡುವ 23 ನೇ ಪಿವಿ ಥಂಪಿ ಸ್ಮರಣೆ ಪ್ರಶಸ್ತಿಗು ಇವರು ಆಯ್ಕೆಯಾಗಿದ್ದಾರೆ.
ಗಿಡ ನೆಡುವುದರ ಹೊರತಾಗಿ ಶ್ಯಾಮ್ ಹನಿ ನೀರಾವರಿಯ ಮೂಲಕ ಗಿಡಗಳು ಬೆಳೆಯಲು ನೆರವಾಗಿದ್ದಾರೆ. ಇದಕ್ಕಾಗಿ ಅವರು ಪ್ರತಿ ಗಿಡದ ಬುಡದಲ್ಲಿ ಒಂದು ಪ್ಲಾಸ್ಟಿಕ್ ಬಾಟಲ್ ಇಡುತ್ತಾರೆ. ಗಿಡಗಳಿಗೆ ನೀರು ಹಾಕಲೆಂದೆ ಅವರು ಪ್ರತಿದಿನವು ಆಟೋದಲ್ಲಿ 10 ಲೀ. ನೀರು ತೆಗೆದುಕೊಂಡು ಹೋಗುತ್ತಾರೆ.
ಅವರ ಆಟೋ ಹಿಂದೆ ಮಲಯಾಳಂನಲ್ಲಿ ‘ಮನಂ ಓರು ವರಂʼ ಎಂದು ಬರೆದಿದೆ, ಅದರರ್ಥ ಗಿಡ ಒಂದು ಆಶೀರ್ವಾದ.
ಗಿಡಗಳನ್ನು ಪ್ರೀತಿಸುವುದರ ಜತೆಗ ಶ್ಯಾಮ್ ಪಕ್ಷಿಗಳಲ್ಲಿಯೂ ಆಸಕ್ತಿ ಹೊಂದಿದ್ದಾರೆ. “ನನ್ನ ಮನೆಯ ಆವರಣ ಒಂದು ಸಣ್ಣ ಪಕ್ಷಿ ಧಾಮದಂತಿದೆ. ಪಲಕ್ಕಡ್ ತುಂಬಾ ಶೆಖೆಯಿರುವ ಪ್ರದೇಶ, ಅದರಲ್ಲೂ ಬೇಸಿಗೆಯಲ್ಲಿ ತಾಪಮಾಣ 40 ಡಿಗ್ರಿ ದಾಟುತ್ತದೆ,” ಎಂದು ಶ್ಯಾಮ್ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಹೇಳಿದರು.
“ಹಕ್ಕಿಗಳ ಹೊರತಾಗಿ ಹಾವು, ಮುಂಗಲಿಗಳಂತಹ ಪ್ರಾಣಿಗಳು ದಾಹದಿಂದ ನೀರನ್ನರಸಿ ಬರುತ್ತವೆ,” ಎಂದರು ಅವರು.