ಸ್ವಚ್ಛತಾ ಅಭಿಯಾನ ಮತ್ತು ಗಿಡ ನೆಡುವ ಕಾರ್ಯಕ್ರಮಗಳ ಮೂಲಕ ಹಸಿರು ಭಾರತ ನಿರ್ಮಿಸಲು ಹೊರಟಿದೆ ಈ ಸಂಸ್ಥೆ

ಶಂಕರ್ ಸಿಂಗ್ ಅವರು ದೇಶದ ಸ್ವಚ್ಛ ಭಾರತ ಮಿಷನ್‌ಗೆ ಹೆಚ್ಚಿನ ಕೊಡುಗೆ ನೀಡುವ ಉದ್ದೇಶದಿಂದ 2019 ರಲ್ಲಿ ದೆಹಲಿಯಲ್ಲಿ ವೃಕ್ಷಿತ್ ಫೌಂಡೇಶನ್ ಅನ್ನು ಪ್ರಾರಂಭಿಸಿ ದೇಶಾದ್ಯಂತ 150 ಕ್ಕೂ ಹೆಚ್ಚು ಸ್ವಚ್ಛತೆ ಮತ್ತು ತೋಟಗಾರಿಕೆ ಅಭಿಯಾನಗಳನ್ನು ಆಯೋಜಿಸಿದ್ದಾರೆ.

ಸ್ವಚ್ಛತಾ ಅಭಿಯಾನ ಮತ್ತು ಗಿಡ ನೆಡುವ ಕಾರ್ಯಕ್ರಮಗಳ ಮೂಲಕ ಹಸಿರು ಭಾರತ ನಿರ್ಮಿಸಲು ಹೊರಟಿದೆ ಈ ಸಂಸ್ಥೆ

Friday October 16, 2020,

4 min Read

ದೆಹಲಿಯ ಬ್ರಿಟಾನಿಯಾ ಚೌಕ್ ಕಸದ ದಿಬ್ಬಗಳು ಮತ್ತು ಅತಿಯಾದ ವಾಸನೆಯಿಂದ ಕೂಡಿರುತ್ತದೆ. ಅದಾಗ್ಯೂ ಕೆಲವು ತಿಂಗಳುಗಳ ಹಿಂದೆ, ಈ ಸ್ಥಳವು ಒಂದು ಬದಲಾವಣೆಗೆ ಸಾಕ್ಷಿಯಾಯಿತು. ಎನ್‌ಜಿಒವೊಂದರ ಯುವ ಉತ್ಸಾಹಿಗಳ ಗುಂಪೊಂದು ಎಲ್ಲಾ ಕಸವನ್ನು ಸಂಗ್ರಹಿಸಿ ಆ ಪ್ರದೇಶವನ್ನು ಶುದ್ಧಗೊಳಿಸಿತು.  


ಭಾರತದ ರಾಷ್ಟ್ರೀಯ ರಾಜಧಾನಿ ಪ್ರಮುಖ ವಾಣಿಜ್ಯ ಮತ್ತು ಕೈಗಾರಿಕಾ ಪ್ರದೇಶಗಳಲ್ಲಿ ಒಂದಾಗಿದ್ದರು ಸಹ, ಸರಕಾರ ಮತ್ತು ಸ್ಥಳಿಯ ಜನರು ಇಲ್ಲಿ ಗುಡ್ಡೆಯಾಗಿರುವ ಕಸವನ್ನು ಕಡೆಗಣಿಸಿದ್ದರು. 

ನೈರ್ಮಲ್ಯ, ಗಾಳಿಯ ಗುಣಮಟ್ಟ, ತ್ಯಾಜ್ಯ ನಿರ್ವಹಣೆ, ಮತ್ತು ಪರಿಸರ ಸುಸ್ಥಿರತೆಯಂತಹ ಅಂಶಗಳನ್ನು 2018ರಲ್ಲಿ ಮೌಲ್ಯಮಾಪನ ಮಾಡಿದ ಪರಿಸರ ಕಾರ್ಯಕ್ಷಮತೆ ಸೂಚ್ಯಂಕದ (ಇಪಿಐ) ಪ್ರಕಾರ, ಭಾರತವು ಸ್ವಚ್ಛತೆಯ ಪಟ್ಟಿಯಲ್ಲಿ 180 ದೇಶಗಳಲ್ಲಿ 177 ನೇ ಸ್ಥಾನದಲ್ಲಿದೆ. ಹೆಚ್ಚಿನ ಮಾಲಿನ್ಯದ ಮಟ್ಟದಿಂದಾಗಿ ದೇಶದ ಹಲವಾರು ಭಾಗಗಳು ತತ್ತರಿಸಿವೆ ಮತ್ತು ಅದರ ಘನತ್ಯಾಜ್ಯವನ್ನು ವ್ಯವಸ್ಥಿತವಾಗಿ ಮತ್ತು ವೈಜ್ಞಾನಿಕ ರೀತಿಯಲ್ಲಿ ಸಂಸ್ಕರಿಸಲು ಹೆಣಗಾಡುತ್ತಿವೆ.  


ತ್ವರಿತ ನಗರೀಕರಣ, ಅರಿವಿನ ಕೊರತೆ, ಮೂಲಸೌಕರ್ಯದಲ್ಲಿನ ಅಸಮರ್ಪಕತೆ ಮತ್ತು ತ್ಯಾಜ್ಯ ವಿಲೇವಾರಿ ವ್ಯವಸ್ಥೆಯಲ್ಲಿನ ಲೋಪದೋಷಗಳು ಇದರ ಕೆಲವು ಪ್ರಮುಖ ಕಾರಣಗಳಾಗಿವೆ. 


ಪರಿಸ್ಥಿತಿಯನ್ನು ಸುಧಾರಿಸಲು ಮತ್ತು ಸ್ವಚ್ಛತೆಯೆಡೆಗೆ ದಾರಿ ಮಾಡಿಕೊಡಲು, ಸರ್ಕಾರವು 2014 ರ ಅಕ್ಟೋಬರ್‌ನಲ್ಲಿ ಸ್ವಚ್ಛ ಭಾರತ್ ಮಿಷನ್ ಅನ್ನು ಪ್ರಾರಂಭಿಸಿತು. ಈ ಅಭಿಯಾನವು ಉತ್ತಮ ನೈರ್ಮಲ್ಯ ವ್ಯವಸ್ಥೆಗಳು ಮತ್ತು ಹೆಚ್ಚು ಪರಿಣಾಮಕಾರಿಯಾದ ತ್ಯಾಜ್ಯ ಸಂಸ್ಕರಣೆ/ಮರುಬಳಕೆ ಘಟಕಗಳನ್ನು ನಿರ್ಮಿಸುವತ್ತ ಪ್ರಗತಿ ಸಾಧಿಸಿದ್ದರೂ, ಆಗಬೇಕಾದ ಕೆಲಸ ಇನ್ನೂ ತುಂಬಾ ಇದೆ. 


23 ವರ್ಷದ ಶಂಕರ್ ಸಿಂಗ್ ಅವರು 2019 ರಲ್ಲಿ ತಮ್ಮ ಕೆಲವು ಬಾಲ್ಯದ ಗೆಳೆಯರೊಂದಿಗೆ ದೆಹಲಿಯಲ್ಲಿ ವೃಕ್ಷಿತ್ ಪ್ರತಿಷ್ಠಾನವನ್ನು ಪ್ರಾರಂಭಿಸಿದರು. ಅಂದಿನಿಂದ, ಜನರು ಉಸಿರಾಡಲು ಯೋಗ್ಯ ಮತ್ತು ಆರೋಗ್ಯಕರ ಪರಿಸರವನ್ನು ರಚಿಸಲು ಸ್ವಯಂಸೇವಾ ಸಂಸ್ಥೆ ದಣಿವರಿಯಿಲ್ಲದೆ ಕೆಲಸ ಮಾಡುತ್ತಿದೆ.     


"ಅನೇಕ ಬಾರಿ, ಜನರು ತಮ್ಮ ಅಕ್ಕಪಕ್ಕದ ಜಾಗವನ್ನು ಅಚ್ಚುಕಟ್ಟಾಗಿ ಇಟ್ಟುಕೊಳ್ಳದೆ ಸರ್ಕಾರಿ ಅಧಿಕಾರಿಗಳನ್ನು ದೂಷಿಸುತ್ತಾರೆ. ಆದರೆ ಅವರು ತಿಳಿದುಕೊಳ್ಳದ ಸಂಗತಿಯೆಂದರೆ ಸ್ವಚ್ಛತೆ ಒಂದು ಸಾಮೂಹಿಕ ಜವಾಬ್ದಾರಿ. ನಮ್ಮ ಗುರಿ ಇದನ್ನು ಜನರಿಗೆ ತಿಳಿಸಿ, ತಳಹದಿಯಿಂದಲೆ ನಾಗರೀಕರನ್ನು ಒಳಗೊಳ್ಳುವುದಾಗಿದೆ," ಎನ್ನುತ್ತಾರೆ ವೃಕ್ಷಿತ್ ಫೌಂಡೇಶನ್‌ನ ಸಂಸ್ಥಾಪಕ ಮತ್ತು ಅಧ್ಯಕ್ಷ ಶಂಕರ್ ಸಿಂಗ್.

ವೃಕ್ಷಿತ್ ಫೌಂಡೇಶನ್‌ನ ಸಂಸ್ಥಾಪಕ ಮತ್ತು ಅಧ್ಯಕ್ಷ ಶಂಕರ್ ಸಿಂಗ್

ಆರಂಭಿಕ ಹಂತ  


ಶಂಕರ್ ಹುಟ್ಟಿ ಬೆಳೆದದ್ದು ಸಾಂಪ್ರದಾಯಿಕ ಸಂತೆಗಳು ಮತ್ತು ಬೊಟಾನಿಕಲ್‌ ಮನೆಗಳಿಂದ ಕೂಡಿರುವ ನಗರ ದೆಹಲಿಯಲ್ಲಿ. ಶಾಲಾ ಶಿಕ್ಷಣದ ನಂತರ, ಅವರು ಮುರ್ತಾಲ್ (ಸೋನೆಪತ್)ನ ದೀನ್‌ಬಂಧು ಚೋತು ರಾಮ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ಎಂಜಿನಿಯರಿಂಗ್ ಓದಿದರು. ಅವರ ವೃತ್ತಿಜೀವನವು ಟೆಕ್ ಕಂಪನಿಯೊಂದರಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಶುರುವಾಯಿತು.  


ಮೇ 2019 ರಲ್ಲಿ, ಅಸ್ಸೋಚಮ್ನ ಮುಂಬೈ ನಗರವನ್ನು ಸ್ವಚ್ಛಗೊಳಿಸುವ ಯೋಜನೆಯ ಪೋಸ್ಟರ್ ನೋಡಿ ಪ್ರೇರಿತರಾಗಿ ಶಂಕರ ಈ ಕೆಲಸಕ್ಕೆ ಕೈ ಹಾಕಿದರು.

“ಯಮುನಾ ನದಿ ದೆಹಲಿಯ ಪ್ರಮುಖ ನೀರಿನ ಮೂಲಗಳಲ್ಲಿ ಒಂದಾಗಿದೆ ಎಂದು ನನಗೆ ತಿಳಿದಿತ್ತು. ಅದರ ನೀರಿನ ಮೇಲ್ಮೈಯಲ್ಲಿ ತೇಲುತ್ತಿರುವ ನೊರೆ ಪದರಗಳನ್ನು ಸಹ ನಾನು ಗಮನಿಸಿದ್ದೇನೆ. ಮಾಲಿನ್ಯಕಾರಕಗಳು, ಒಳಚರಂಡಿ ಮತ್ತು ಕೈಗಾರಿಕಾ ತ್ಯಾಜ್ಯಗಳನ್ನು ನದಿಗೆ ಹರಿಸುವುದರಿಂದ ಅದು ವಿಷಕಾರಿಯಾಗಿದೆ ಎಂದು ಅನೇಕ ವರದಿಗಳು ಹೇಳಿವೆ. ಆದ್ದರಿಂದ, ನಾನು ಮತ್ತು ನನ್ನ ಕೆಲವು ಸ್ನೇಹಿತರು ನಮ್ಮ ಕೈಗಳನ್ನು ಕೊಳಕು ಮಾಡಿಕೊಂಡು ನದಿಯ ಒಂದು ಭಾಗವನ್ನು ಸ್ವಚ್ಛಗೊಳಿಸಲು ನಿರ್ಧರಿಸಿದೆವು,” ಎಂದು ಶಂಕರ್ ನೆನಪಿಸಿಕೊಳ್ಳುತ್ತಾರೆ.  


ಶಂಕರ್ ಮತ್ತು ಅವರ ಗೆಳೆಯರು ಮೊಣಕಾಲಷ್ಟಿದ್ದ ನೀರಿನಲ್ಲಿ ಪಾಲಿಥೀನ್ ಕವರ್, ಕಾಗದದ ತ್ಯಾಜ್ಯ, ಕೊಳೆತ ಹೂಮಾಲೆ, ಹಣ್ಣುಗಳು, ಬಟ್ಟೆಗಳು ಮತ್ತು ಇತರ ವಸ್ತುಗಳನ್ನು ಹೊರತೆಗೆದರು. ಸ್ವಚ್ಛಗೊಳಿಸುವ ಮೊದಲು ಮತ್ತು ಸ್ವಚ್ಛವಾದ ಬಳಿಕ ತೆಗೆದ ನದಿಯ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದಾಗ, ಅವರಿಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತು. "ಬಹಳಷ್ಟು ಜನರು ನಮಗೆ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಸಂದೇಶಗಳನ್ನು ಕಳುಹಿಸಿ ನಮ್ಮ ಕೆಲಸವನ್ನು ಶ್ಲಾಘಿಸಿದ್ದರು ಮತ್ತು ಕೆಲವೊಬ್ಬರು ನಮ್ಮ ಭವಿಷ್ಯದ ಸ್ವಚ್ಛಗೊಳಿಸುವ ಅಭಿಯಾನದ ಪ್ರಯತ್ನಗಳಿಗೆ ಅವರು ಸೇರಬಹುದೇ ಎಂದು ವಿಚಾರಿಸಿದರು,” ಎಂದು ಶಂಕರ್ ಹೇಳುತ್ತಾರೆ. 


ಆ ಕ್ಷಣದಲ್ಲಿಯೇ, ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸುವ ಸ್ವಯಂಪ್ರೇರಿತ ಸಂಘಟನೆಯನ್ನು ಸ್ಥಾಪಿಸುವ ಆಲೋಚನೆಯೊಂದಿಗೆ ಸೆಪ್ಟೆಂಬರ್ 2019 ರಲ್ಲಿ ಶಂಕರ್ ವೃಕ್ಷಿತ್ ಪ್ರತಿಷ್ಠಾನಕ್ಕೆ ಚಾಲನೆ ನೀಡಿದರು.  


ಸಂಸ್ಥೆ ಆಯೋಜಿಸಿದ ಮೊದಲ ಸ್ವಚ್ಛತೆಯ ಅಭಿಯಾನದಲ್ಲಿ ಕೇವಲ ನಾಲ್ಕು ಸ್ವಯಂಸೇವಕರು ಭಾಗವಹಿಸಿದ್ದರು. ಕಾಲಾನಂತರದಲ್ಲಿ, ಹೆಚ್ಚಿನ ಜನರು ಸೇರಲು ಪ್ರಾರಂಭಿಸಿದರು.  


ವಿದ್ಯಾರ್ಥಿಗಳು ಮತ್ತು ಕೆಲಸ ಮಾಡುವ ವೃತ್ತಿಪರರ ಅನುಕೂಲಕ್ಕಾಗಿ ವಾರಾಂತ್ಯದಲ್ಲಿ ಹೆಚ್ಚಿನ ಸಂಸ್ಥೆಯ ಕೆಲಸಗಳು ನಡೆಯುತ್ತವೆ. ಸ್ಥಳವನ್ನು ಎರಡೂ ಆಧಾರದ ಮೇಲೆ ನಿರ್ಣಯಿಸಲಾಗುತ್ತದೆ ಒಂದು ಪ್ರಜೆಗಳ ವಿನಂತಿಯಮೆರೆಗೆ ಅಥವಾ ದೈಹಿಕ ಸಮೀಕ್ಷೆಗಳ ತಂಡದ ಮೂಲಕ. ಇದರಲ್ಲಿ ಎನ್‌ಜಿಒ ಹೆಚ್ಚಿನ ಕೆಲಸಗಳಿಗೆ ವೈಯಕ್ತಿಕ ದೇಣಿಗೆ ಅಥವಾ ಆನ್‌ಲೈನ್ ಕ್ರೌಡ್‌ಸೋರ್ಸಿಂಗ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಹಣವನ್ನು ಒದಗಿಸುತ್ತದೆ. 


"ಕಳೆದ ವರ್ಷದಲ್ಲಿ, ನಮ್ಮ ಸ್ವಯಂಪ್ರೇರಿತರ ಸಂಖ್ಯೆ ದೆಹಲಿಯ ಹೊರತಾಗಿ ಬೆರೆಕಡೆಗಳಲ್ಲೂ ವಿಸ್ತರಿಸಿದೆ. ಈಗ 11 ರಾಜ್ಯಗಳಲ್ಲಿ ಹಲವಾರು ಪ್ರದೇಶಗಳಲ್ಲಿ ಸ್ವಯಂಸೇವಕರನ್ನು ಹೊಂದಿದ್ದೇವೆ. ಆದ್ದರಿಂದ, ಅವರಲ್ಲಿ ಯಾರಾದರೂ ಆಟದ ಮೈದಾನ, ಕೊಳೆಗೇರಿ ಅಥವಾ ಕಸದಿಂದ ತುಂಬಿ ತುಳುಕುತ್ತಿರುವಾಗ ನೀರನ್ನು ಕಂಡಾಗ ಸಂಸ್ಥೆಗೆ ತಿಳಿಸುತ್ತಾರೆ. ತ್ವರಿತ ಪರಿಶೀಲನೆಯ ನಂತರ ನಾವು ಸಾಮಾನ್ಯವಾಗಿ ಸ್ವಚ್ಛತೆಯ ಅಭಿಯಾನ ನಡೆಸುತ್ತೇವೆ,” ಎಂದು ಶಂಕರ್ ವಿವರಿಸುತ್ತಾರೆ.  


ಈವೆಂಟ್‌ನ ಸಮಯ ಮತ್ತು ಸ್ಥಳವನ್ನು ಅಂತಿಮಗೊಳಿಸಿದ ನಂತರ, ಎನ್‌ಜಿಒ ತಮ್ಮ ಸಾಮಾಜಿಕ ಜಾಲತಾಣದ ಪುಟಗಳಲ್ಲಿ ನೋಂದಣಿ ಲಿಂಕ್‌ನೊಂದಿಗೆ ವಿವರಗಳನ್ನು ನೀಡುತ್ತದೆ. ವೃಕ್ಷಿತ್ ಫೌಂಡೇಶನ್ ಆಯೋಜಿಸುವ ಅಭಿಯಾನಗಳಲ್ಲಿ ಯಾವುದೇ ಹಣವನ್ನು ಕೇಳುವುದಿಲ್ಲ ಮತ್ತು ಅದು ಎಲ್ಲರಿಗೂ ಮುಕ್ತವಾಗಿರುತ್ತದೆ. ಸುರಕ್ಷತಾ ಸಾಧನಗಳು ಕೈಗವಸುಗಳು, ಮುಖವಾಡಗಳು, ಸಲಿಕೆಗಳು ಮುಂತಾದ ಇತರ ಸಾಧನಗಳನ್ನು ಸಹ ಸ್ವಯಂಸೇವಕರು ಸ್ಥಳಕ್ಕೆ ಬಂದ ಕೂಡಲೇ ಒದಗಿಸಲಾಗುತ್ತದೆ.   


ಎಲ್ಲಾ ಸಂಗ್ರಹಿಸಿದ ಕಸವನ್ನು ಬೇರ್ಪಡಿಸಿ ಮರುಬಳಕೆಗೆ ಅಥವಾ ಪುರಸಭೆಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಗುತ್ತದೆ.  


ಈ ಹಾದಿಯಲ್ಲಿ ಅವರಿಗೆ ಎದುರಾದ ಸವಾಲುಗಳ ಬಗ್ಗೆ ಕೇಳಿದಾಗ ಶಂಕರ್ "ನಾವು ಕಷ್ಟಪಟ್ಟು ಕೆಲಸ ಮಾಡುತ್ತಿದ್ದರೂ ಮತ್ತು ಸಾರ್ವಜನಿಕ ಪ್ರದೇಶಗಳನ್ನು ಸ್ವಚ್ಛಗೊಳಿಸುತ್ತಿದ್ದರು, ಒಂದು ಅಥವಾ ಎರಡು ವಾರಗಳಲ್ಲಿ ಅದು ಮತ್ತೆ ಅದರ ಮೂಲ ಸ್ಥಿತಿಗೆ ಬಂದಿರುವುದನ್ನು ನಾವು ಗಮನಿಸಿದ್ದೇವೆ. ಪ್ರದೇಶದ ನಿವಾಸಿಗಳು ಮತ್ತು ಅಂಗಡಿಯ ಮಾಲೀಕರೊಂದಿಗೆ ಸ್ವಚ್ಛತೆಯನ್ನು ಕಾಪಾಡಿಕೊಳ್ಳಲು ಮನವಿ ಮಾಡುವ ಮೂಲಕ ನಾವು ಈ ಸವಾಲನ್ನು ಜಯಿಸಿದ್ದೇವೆ. ಆಶಯವನ್ನು ಪೂರೈಸಲು ಸ್ಥಳೀಯ ಸಮುದಾಯವನ್ನು ಒಳಗೊಳ್ಳುವುದು ಕಡ್ಡಾಯವಾಗಿದೆ.” 


ಸಂಸ್ಥೆ ಇಲ್ಲಿವರೆಗೂ 150ಕ್ಕೂ ಹೆಚ್ಚು ಸ್ವಚ್ಛತಾ ಅಭಿಯಾನಗಳನ್ನು ದೆಹಲಿ, ಜೈಪುರ್ ಅಜಮೀರ್, ಅಮೃತ್ಸರ್, ಬೆಂಗಳೂರು, ಹೈದರಾಬಾದ್‌, ಚೆನ್ನೈ ಸೇರಿದಂತೆ 15 ಕ್ಕೂ ಹೆಚ್ಚಿನ ನಗರಗಳಲ್ಲಿ ನಡೆಸಿದೆ. ಅದಲ್ಲದೆ ಜಾಗೃತಿ ಅಭಿಯಾನಗಳನ್ನು ಮತ್ತು ಖಾಲಿ ಜಾಗ, ಮೈದಾನಗಳಲ್ಲಿ ದೊಡ್ಡ ಮಟ್ಟದಲ್ಲಿ ಗಿಡ ನೆಡುವ ಕೆಲಸವನ್ನು ಪ್ರಾರಂಭಿಸಿದೆ.


ಸ್ವಚ್ಛತೆಯಿಲ್ಲದ, ಕಸದಿಂದ ತುಂಬಿಹೋಗಿರುವ ಸಾರ್ವಜನಿಕ ಸ್ಥಳಗಳು ಪರಿಸರಕ್ಕೂ ಮಾರಕವಾಗಿರುವುದಲ್ಲದೆ, ಮಾನವನ ಆರೋಗ್ಯಕ್ಕೂ ಹಾನಿಯುಂಟುಮಾಡುತ್ತದೆ.

“ಕಸದಿಂದ ಬರುವ ಇಂಗಾಲದ ಡೈ ಆಕ್ಸೈಡ್‌ ಮತ್ತು ಮಿಥೆನ್‌ ಅನಿಲಗಳು ಪರಿಸರಕ್ಕೆ ದೊಡ್ಡ ಹಾನಿ ಮಾಡುತ್ತದೆ. ಈ ಕಸವನ್ನು ಸಂಸ್ಕರಿಸದೆ ತುಂಬಾ ದಿನದವರೆಗೆ ಹಾಗೆ ಬಿಟ್ಟರೆ ಅದು ಅಂತರ್ಜಲವನ್ನು ಕಲುಷಿತಗೊಳಿಸುತ್ತದೆ. ಇದೆಲ್ಲವನ್ನು ಜನರು ತಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಛಗೊಳಿಸುವುದರಿಂದ ತಡೆಯಬಹುದಾಗಿದೆ,” ಎನ್ನುತ್ತಾರೆ ಶಂಕರ್‌.