ಕಬಾಲಿಯಿಂದ ಕಲಿಬೇಕು ಪ್ರಚಾರಕಲೆ

ಟೀಮ್​​ ವೈ.ಎಸ್​​.ಕನ್ನಡ

ಕಬಾಲಿಯಿಂದ ಕಲಿಬೇಕು ಪ್ರಚಾರಕಲೆ

Sunday July 17, 2016,

4 min Read

ಸ್ಟೈಲ್ ಕಿಂಗ್, ಸೂಪರ್‍ಸ್ಟಾರ್ ರಜನಿಕಾಂತ್ ಅಭಿನಯದ ಈ ವರ್ಷದ ಬಹುನಿರೀಕ್ಷಿತ ಸಿನಿಮಾ ‘ಕಬಾಲಿ’. ಪ. ರಂಜಿತ್ ನಿರ್ದೇಶಿಸಿರುವ ಈ ಅಂಡರ್‍ವರ್ಲ್ಡ್​​ ಡ್ರಾಮಾ ಇದೇ ಜುಲೈ 22ರಂದು ವಿಶ್ವದಾದ್ಯಂತ ರಿಲೀಸ್ ಆಗುತ್ತಿದೆ. ರಜಿನಿಕಾಂತ್ ಅವರಿಗೆ ಚಿತ್ರದಲ್ಲಿ ರಾಧಿಕಾ ಆಫ್ಟೆ ನಾಯಕಿಯಾಗಿದ್ದಾರೆ. ಉಳಿದಂತೆ ತೈವಾನೀಸ್ ನಟ ವಿನ್ಸ್​ಟನ್ ಚಾವ್, ಧನ್ಸಿಕಾ, ದಿನೇಶ್ ರವಿ, ಜಾನ್ ವಿಜಯ್ ಸೇರಿದಂತೆ ಕನ್ನಡದ ‘ಹುಲಿ’ ಖ್ಯಾತಿಯ ನಟ ಕಿಶೋರ್ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚೆನ್ನೈ, ಬ್ಯಾಂಕಾಕ್, ಹಾಂಗ್‍ಕಾಂಗ್ ಹಾಗೂ ಮಲೇಷ್ಯಾಗಳಲ್ಲಿ ಚಿತ್ರದ ಶೂಟಿಂಗ್ ಮಾಡಲಾಗಿದೆ. ಕಬಾಲಿಯಲ್ಲಿ ಒಟ್ಟು 5 ಹಾಡುಗಳಿದ್ದು ಸಂತೋಷ್ ನಾರಾಯಣ್ ಸಂಗೀತ ನೀಡಿದ್ದಾರೆ. ಸೂಪರ್‍ಸ್ಟಾರ್ ರಜನಿಕಾಂತ್ ಅವರಿಗೆ ಭಾರತದಲ್ಲಿರುವಂತೆ ವಿದೇಶಗಳಲ್ಲೂ ಲಕ್ಷಾಂತರ ಫ್ಯಾನಗಳಿದ್ದಾರೆ. ಹೀಗಾಗಿಯೇ ಏಪ್ರಿಲ್‍ನಲ್ಲಿ ಲಾಂಚ್ ಆದ ಚಿತ್ರದ ಟೀಸರ್‍ಗೆ ಕೇವಲ 24 ತಾಸುಗಳಲ್ಲಿ ಬರೊಬ್ಬರಿ 50 ಲಕ್ಷ ಹಿಟ್ಸ್ ಪಡೆದಿತ್ತು. ಇದುವರೆಗೆ 2 ಕೋಟಿಗೂ ಹೆಚ್ಚು ಬಾರಿ ಯುಟ್ಯೂಬ್‍ನಲ್ಲಿ ವೀಕ್ಷಣೆಗೊಳಗಾಗಿದೆ ಈ ಟೀಸರ್. ವಿಶೇಷ ಅಂದರೆ ಕಬಾಲಿ ನಿರ್ಮಾಪಕ ಕಲೈಪುಲಿ ಎಸ್. ತನು ಈ ಚಿತ್ರದ ಪ್ರಚಾರಕ್ಕೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಯಾಕೆಂದರೆ ವಿಶ್ವದಾದ್ಯಂತ ಇರುವ ರಜನಿಕಾಂತ್ ಅಭಿಮಾನಿಗಳೇ ತಮ್ಮ ನೆಚ್ಚಿನ ನಟನ ಸಿನಿಮಾಕ್ಕೆ ಬೇಕಾದಷ್ಟು ಪ್ರಮೋಷನ್ ನೀಡುತ್ತಿದ್ದಾರೆ. ವಿನೂತನ ಪ್ರಚಾರದ ಐಡಿಯಾಗಳು ಸದ್ಯ ಹೊಸ ಹೊಸ ಉದ್ಯಮಗಳ ಪ್ರಾರಂಭಕ್ಕೆ ನಾಂದಿ ಹಾಡಿರೋದು ವಿಶೇಷ.

image


ಕಬಾಲಿ ಟೀ ಶರ್ಟ್

ಹೌದು, ಸಾಮಾನ್ಯವಾಗಿ ಹಾಲಿವುಡ್‍ನ ಸೂಪರ್‍ಹೀರೋ ಸಿನಿಮಾಗಳು ಬಂದಾಗ ಸೂಪರ್‍ಮ್ಯಾನ್, ಸ್ಪೈಡರ್‍ಮ್ಯಾನ್, ಐರನ್‍ಮ್ಯಾನ್ ಪ್ರಿಂಟ್ ಆಗಿರುವ ಟೀಶರ್ಟ್‍ಗಳಿಗೆ ಬೇಡಿಕೆ ಹೆಚ್ಚಾಗುತ್ತದೆ. ಅದೇ ರೀತಿ ಈಗ ಕಬಾಲಿ ಟೀಶರ್ಟ್‍ಗಳೂ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ತಮಿಳುನಾಡಿನಲ್ಲಂತೂ ಕಬಾಲಿ ಟೀಶರ್ಟ್‍ಗಳ ಹೊಸ ಟ್ರೆಂಡ್ ಸೃಷ್ಟಿಯಾಗಿದೆ. ಅಲ್ಲಿ ಮಾತ್ರವಲ್ಲ ಬೆಂಗಳೂರಿನಲ್ಲೂ ಕೂಡ ರಜನಿ ಅಭಿಮಾನಿಗಳು ಕಬಾಲಿ ಪ್ರಿಂಟೆಡ್ ಟೀಶರ್ಟ್‍ಗಳನ್ನು ಆನ್‍ಲೈನ್‍ನಲ್ಲಿ ಮಾರಾಟ ಮಾಡುತ್ತಿದ್ದಾರೆ. ಫೇಸ್‍ಬುಕ್, ಟ್ವಿಟರ್, ವೆಬ್‍ಸೈಟ್‍ಗಳಲ್ಲಿ ಕಬಾಲಿಮೇನಿಯಾ ಪ್ರಾರಂಭವಾಗಿದೆ.

image


ಏರ್ ಏಷಿಯಾ ಕಬಾಲಿ ವಿಮಾನ!

ಕಬಾಲಿ ಚಿತ್ರದ ಅಫಿಶಿಯಲ್ ಏರ್‍ಲೈನ್ಸ್ ಪಾರ್ಟ್‍ನರ್ ಆಗಿರುವ ಮಲೇಷ್ಯಾ ಮೂಲದ ಏರ್ ಏಷಿಯಾ ಅಂತೂ ಇದುವೆರೆಗೆ ವಿಶ್ವದ ಯಾವ ಚಿತ್ರರಂಗೂ ಮಾಡಿರದ ಹೊಸ ಸಾಹಸ ಮಾಡಿದೆ. ತನ್ನ ವಿಮಾನವೊಂದರ ಮೈತುಂಬ ಕಬಾಲಿ ಪೋಸ್ಟರ್ ಅಂಟಿಸಿ ಪ್ರಯಾಣಿಕರನ್ನು ಕೈಬೀಸಿ ಕರೆಯುತ್ತಿದೆ. ಇದು ಕಬಾಲಿ ಚಿತ್ರ ಮಾತ್ರವಲ್ಲ ಏರ್ ಏಷಿಯಾಗೂ ಒಳ್ಳೆಯ ಪ್ರಚಾರ ಕೊಡಿಸುತ್ತಿದೆ. ಆದರೆ ವಿಶೇಷ ಅಂದರೆ ಕಬಾಲಿ ಚಿತ್ರವನ್ನು ಫಸ್ಟ್ ಡೇ ಫಸ್ಟ್ ಶೋ ನೋಡಲು ಇಚ್ಛಿಸುವವರಿಗೆ ಬೆಂಗಳೂರಿನಿಂದ ಚೆನ್ನೈಗೆ ನೇರ ವಿಮಾನ ಹಾಗೂ ಟಿಕೆಟ್ ವ್ಯವಸ್ಥೆಗಳನ್ನೊಳಗೊಂಡ ಸ್ಪೆಷಲ್ ಪ್ಯಾಕೇಜ್‍ಅನ್ನೂ ಏರ್ ಏಷಿಯಾ ಲಾಂಚ್ ಮಾಡಿದೆ.

image


ಕಬಾಲಿ ಕಾರ್, ವ್ಯಾನ್ ಹಾಗೂ ಟ್ರಕ್‍ಗಳು

ಸಾಮಾನ್ಯವಾಗಿ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಅಥವಾ ಸಿನಿಮಾದ ಹೆಸರನ್ನು ಬರೆಸಿ ಸ್ಟಿಕರ್‍ನಂತೆ ತಮ್ಮ ವಾಹನಗಳ ಮೇಲೆ ಅಂಟಿಸಿಕೊಳ್ಳುವುದು ವಾಡಿಕೆ. ಆದರೆ ಮಲೇಷ್ಯಾದಲ್ಲಿ ಸಂಪೂರ್ಣವಾಗಿ ಕಬಾಲಿ ಪೋಸ್ಟರ್‍ನಿಂದಲೇ ಕಂಗೊಳಿಸುತ್ತಿರುವ ಹತ್ತಾರು ಸೂಪರ್‍ಕಾರ್‍ಗಳು, ವ್ಯಾನ್‍ಗಳು ಹಾಗೂ ಟ್ರಕ್‍ಗಳು ನೋಡಲು ಸಿಗುತ್ತವೆ. ಹಾಗಂತ ಚಿತ್ರತಂಡದವರೇ ಪ್ರಮೋಷನ್‍ಗಾಗಿ ಈ ರೀತಿ ಮಾಡುತ್ತಿದ್ದಾರೆ ಅಂತಲ್ಲ. ಬದಲಾಗಿ ರಜನಿಕಾಂತ್ ಅವರ ಹಾರ್ಡ್‍ಕೋರ್ ಅಭಿಮಾನಿಗಳು ಈ ರೀತಿ ತಮ್ಮ ಅಭಿಮಾನ ಮೆರೆಯುತ್ತಿದ್ದಾರೆ.

image


ಎಲ್ಲೆಲ್ಲೂ ಪೋಸ್ಟರ್ ಹಾಗೂ ಬ್ಯಾನರ್‍ಗಳೇ

ತಮಿಳು ಮಾತ್ರವಲ್ಲ ಕಬಾಲಿ ಚಿತ್ರ ಹಿಂದಿ ಹಾಗೂ ತೆಲುಗಿಗೂ ಡಬ್ ಆಗುತ್ತಿದೆ. ಹೀಗಾಗಿಯೇ ಉತ್ತರ ಭಾರತದ 1000 ಥಿಯೇಟರ್‍ಗಳೂ ಸೇರಿದಂತೆ ವಿಶ್ವಾದ್ಯಂತ ಬರೊಬ್ಬರಿ 5 ಸಾವಿರಕ್ಕೂ ಹೆಚ್ಚು ಸ್ಕ್ರೀನ್‍ಗಳಲ್ಲಿ ಕಬಾಲಿ ರಿಲೀಸ್ ಆಗಲಿದೆ. ಹೀಗಾಗಿಯೇ ತಮಿಳು ನಾಡು ಮಾತ್ರವಲ್ಲ ಭಾರತದ ಹಲವೆಡೆ ಕಬಾಲಿ ಪೋಸ್ಟರ್ ಹಾಗೂ ಬ್ಯಾನರ್‍ಗಳನ್ನು ನೋಡಬಹುದು. ಅಷ್ಟೇ ಯಾಕೆ ಮಲೇಷ್ಯಾದಲ್ಲೂ ರಜಿನಿಕಾಂತ್ ಅವರಿಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಹೀಗಾಗಿಯೇ ಮಲೇಷ್ಯಾದ ನ್ಯಾಷನಲ್ ಹೈವೇಗಳಲ್ಲಿ, ಬಸ್ ಸ್ಟ್ಯಾಂಡ್‍ಗಳಲ್ಲಿ ಹಾಗೂ ಇತರೆ ಪ್ರಮುಖ ರಸ್ತೆಗಳಲ್ಲಿ ಕಬಾಲಿ ಪೋಸ್ಟರ್ ಹಾಗೂ ಬ್ಯಾನರ್‍ಗಳು ರಾರಾಜಿಸುತ್ತಿವೆ.

image


ವಾಟ್ಸ್​ಆ್ಯಪ್‍ಗೆ ಬಂತು ಕಬಾಲಿ ಎಮೊಜಿ!

ಕಬಾಲಿ ಫೀವರ್ ಈಗ ವಾಟ್ಸ್​ಆ್ಯಪ್ ಮೆಸೆಂಜರ್‍ಗೂ ಬಂದಿದೆ. ಅದಕ್ಕೆ ನಿದರ್ಶನವೆಂಬಂತೆ ಕಬಾಲಿಯಲ್ಲಿ ಸೂಟು - ಬೂಟು ತೊಟ್ಟ ರಜಿನಿಕಾಂತ್ ಅವರ ಪೋಸ್‍ಅನ್ನೇ ಹೋಲುವ ಹೊಸ ಎಮೊಜಿಯನ್ನು ವಾಟ್ಸ್​ಆ್ಯಪ್ ಮೆಸೆಂಜರ್ ಪರಿಚಯಿಸಿದೆ. ಸದ್ಯ ಈ ಎಮೊಜಿ ರಜನಿ ಫ್ಯಾನ್‍ಗಳಿಗೆ ಅತೀವ ಸಂತಸ ನೀಡಿದ್ದು, ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚಾಗಿ ಬಳಕೆಯಾಗುತ್ತಿದೆ.

image


ಕಬಾಲಿ ಗೊಂಬೆಗಳು

ಸೂಪರ್‍ಹೀರೋ ಗೊಂಬೆಗಳಂತೆಯೇ ಕಬಾಲಿ ಗೊಂಬೆಗಳೂ ಈಗ ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ. ಸದ್ಯ ಒಂದೇ ಒಂದು ಮಾದರಿಯ ಗೊಂಬೆಗಳು ಉತ್ಪಾದನೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಕಬಾಲಿಯಲ್ಲಿ ರಜನಿಕಾಂತ್ ಅವರ ವಿಭಿನ್ನ ಗೆಟಪ್ ಹಾಗೂ ಸ್ಟೈಲ್‍ಗಳನ್ನು ಹೋಲುವ ಹೊಸ ಹೊಸ ಗೊಂಬೆಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಕುರಿತೂ ಯೋಜನೆಗಳು ನಡೆದಿವೆ. ವಿಶೇಷ ಅಂದರೆ ಇದನ್ನೂ ರಜನಿ ಅವರ ಅಭಿಮಾನಿಗಳೇ ಮಾಡುತ್ತಿದ್ದು, ಆ ಮೂಲಕ ಉದ್ಯಮ ಲೋಕಕ್ಕೆ ಕಾಲಿಡುತ್ತಿದ್ದಾರೆ.

image


ಕಬಾಲಿ ಪಾಪ್‍ಕಾರ್ನ್!

ಹೌದು, ಮಲೇಷ್ಯಾದ ಥಿಯೇಟರ್‍ಗಳಲ್ಲಿ ಹಾಗೂ ಮಲ್ಟಿಪ್ಲೆಕ್ಸ್​​ಗಳಲ್ಲಿ ಪ್ರತಿ ಚಿತ್ರಕ್ಕೂ ಮುನ್ನ ಕಬಾಲಿ ಟೀಸರ್ ಅನ್ನು ಪ್ರದರ್ಶಿಸಲಾಗುತ್ತಿದೆ. ಜತೆಗೆ ಕಬಾಲಿಯ ಪೋಸ್ಟರ್, ಬ್ಯಾನರ್, ಬಂಟಿಂಗ್ ಹಾಗೂ ಸ್ಟ್ಯಾಂಡಿಗಳನ್ನೂ ಇಡಲಾಗಿದೆ. ಆದರೆ ಇನ್ನೂ ಒಂದು ಹೆಜ್ಜೆ ಮುಂದು ಹೋಗಿರುವ ರಜನಿ ಅಭಿಮಾನಿಗಳು ಥಿಯೇಟರ್‍ಗಳಲ್ಲಿ ರಜನಿ ಪಾಪ್‍ಕಾರ್ನ್‍ಗಳನ್ನೂ ಮಾರಾಟ ಮಾಡುತ್ತಿದ್ದಾರೆ.

ಇದನ್ನು ಓದಿ: ಸವಿ ನೆನಪುಗಳಿಗೆ ಪುಸ್ತಕ ರೂಪ ನೀಡುವ ಆನ್​ಲೈನ್​ ಸೇವೆ..!

ಅಭಿಮಾನಿಗಳೇ ಪೋಸ್ಟರ್ ಡಿಸೈನರ್‍ಗಳು!

ಇಷ್ಟು ಮಾತ್ರವಲ್ಲ ಸಿನಿಮಾ ಟೀಮ್ ಏನೋ ಪ್ರಮೋಷನ್‍ಗಾಗಿ ಮೂರ್ನಾಲ್ಕು ವಿಧದ ಪೋಸ್ಟರ್‍ಗಳು ಹಾಗೂ ಫಸ್ಟ್ ಲುಕ್‍ಗಳನ್ನು ಲಾಂಚ್ ಮಾಡಿದೆ. ಆದರೆ ರಜಿನಿಕಾಂತ್ ಅಭಿಮಾನಿಗಳು ಮಾತ್ರ ತಮ್ಮ ಆರಾರ್ಧಯ ದೈವನ ಸಿನಿಮಾಕ್ಕಾಗಿ ತಾವೇ ಹೊಸ ಹೊಸ ಬಗೆಯ ಪೋಸ್ಟರ್‍ಗಳನ್ನು ಡಿಸೈನ್ ಮಾಡಿ ಲಾಂಚ್ ಮಾಡುತ್ತಿದ್ದಾರೆ. ಹಿಂದಿ ಚಿತ್ರ ಮದಾರಿ, ಜೇಮ್ಸ್ ಬಾಂಡ್, ಟರ್ಮಿನೇಟರ್ ಹೀಗೆ ಬೇರೆ ಬೇರೆ ಸಿನಿಮಾಗಳ ಪೋಸ್ಟರ್‍ಗಳನ್ನು ಹೋಲುವಂತೆಯೇ ಕಬಾಲಿ ಪೋಸ್ಟರ್‍ಅನ್ನು ಡಿಸೈನ್ ಮಾಡಿದ್ದಾರೆ. ಅವುಗಳನ್ನು ಫೇಸ್‍ಬುಕ್, ಟ್ವಿಟರ್‍ಗಳಲ್ಲಿ ಶೇರ್ ಮಾಡಿ ಲೈಕ್ಸ್ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಆ ಮೂಲಕ ತಾವೂ ಕಬಾಲಿ ಪ್ರಚಾರದಲ್ಲಿ ಕೈ ಜೋಡಿಸಿದ್ದಾರೆ.

image


ಕಬಾಲಿ ಚಾಕ್‍ಲೇಟ್

ಇನ್ನು ಚೆನ್ನೈನ ಬೇಕರಿಯೊಂದರಲ್ಲಿ ಕಬಾಲಿ ಲುಕ್‍ನಲ್ಲಿರುವ ರಜನಿಕಾಂತ್ ಅವರನ್ನು ಹೋಲುವ ಬೃಹತ್ ಚಾಕ್‍ಲೇಟ್‍ಅನ್ನೇ ತಯಾರಿಸಲಾಗಿದೆ. ಸುಮಾರು 60 ಕೆಜಿ ತೂಕದ ಈ ಚಾಕ್‍ಲೇಟ್‍ಅನ್ನು ನೋಡಲೆಂದೇ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಆ ಬೇಕರಿಗೆ ಮುಗಿಬಿದ್ದಿದ್ದರು. ವಿಶೇಷ ಅಂದರೆ ಆ ಚಾಕ್‍ಲೇಟ್‍ನಿಂದ ಆ ಬೇಕರಿಗೆ ಗಿರಾಕಿಗಳೂ ಹೆಚ್ಚಾದ ಕಾರಣ ಬೇಕರಿ ಮಾಲೀಕರಿಗೂ ಸಾಕಷ್ಟು ಲಾಭವಾಯಿತು.

ಕಬಾಲಿ ಮಗ್!

ಇನ್ನುಮುಂದೆ ಸೂಪರ್‍ಸ್ಟಾರ್ ಅಭಿಮಾನಿಗಳು ಬೆಳಗ್ಗೆ ಕಾಫಿ ಅಥವಾ ಟೀ ಸವಿಯುವಾಗಲೂ ತಮ್ಮ ನೆಚ್ಚಿನ ನಟನನ್ನು ಸ್ಮರಿಸಿಕೊಳ್ಳಬಹುದು. ಕಾರಣ ಕಬಾಲಿ ಮಗ್‍ಗಳೂ ಸಹ ಮಾರುಕಟ್ಟೆಗೆ ಕಾಲಿಟ್ಟಿವೆ.

ಕಬಾಲಿ ಫೋನ್ ಕವರ್

ಹೌದು, ವಿಶ್ವದ ಹಲವೆಡೆ ಪ್ರಾರಂಭವಾಗಿರುವ ಈ ಕಬಾಲಿ ಮೇನಿಯಾವನ್ನು ಕೆಲ ಬುದ್ಧಿವಂತರು ವ್ಯಾಪಾರ ಮಾಡಿಕೊಂಡಿದ್ದಾರೆ. ಸದ್ಯ ಆನ್‍ಲೈನ್‍ನಲ್ಲಿ ಕಬಾಲಿ ಮೊಬೈಲ್ ಕೇಸ್ ಕವರ್‍ಗಳು ಲಭ್ಯ ಇವೆ. ಈ ಕಪ್ಪು ಬಣ್ಣದ ಈ ಆಂಡ್ರಾಯ್ಡ್ ಮೊಬೈಲ್ ಕವರ್‍ಗಳ ಹಿಂದೆ ರಜನಿಕಾಂತ್ ಅವರ ಕಬಾಲಿ ಪೋಸ್ಟರ್‍ನ ಗ್ರಾಫಿಕ್ಸ್​ ಇದೆ. ಇವು ಕೂಡ ಹಾಟ್ ಕೇಕ್‍ನಂತೆ ಮಾರಾಟವಾಗುತ್ತಿವೆ. ಕಬಾಲಿ ಕ್ರೇಜ್ ಹೇಗಿದೆ ಅಂದರೆ ರಿಲೀಸ್‍ಗೂ ಮುನ್ನವೇ ಈ ಚಿತ್ರ ಬರೊಬ್ಬರಿ 200 ಕೋಟಿ ರೂಪಾಯಿ ಬಿಜಿನೆಸ್ ಮಾಡಿದೆ! ಹಾಗೇ ಸಿನಿಮಾ ವಿಶ್ವಾದ್ಯಂತ ಬರೊಬ್ಬರಿ 5000 ಥಿಯೇಟರ್‍ಗಳಲ್ಲಿ ರಿಲೀಸ್ ಆಗಲಿದ್ದು, 500 ಕೋಟಿ ರೂಪಾಯಿಗೂ ಹೆಚ್ಚು ಗಳಿಕೆ ಕಾಣುವ ನಿರೀಕ್ಷೆ ಚಿತ್ರತಂಡದ್ದು.

image


ಕಬಾಲಿ ಬೆಳ್ಳಿ ಕಾಯಿನ್‍ಗಳು

ಕಬಾಲಿ ಚಿತ್ರದೊಂದಿಗೆ ಒಪ್ಪಂದ ಮಾಡಿಕೊಂಡಿರುವ ಕೇರಳ ಮೂಲದ ಮುತ್ತೂಟ್ ಪಿನ್‍ಕಾರ್ಪ್‍ನವರು ರಜನಿಕಾಂತ್ ಅವರ ಕಬಾಲಿ ಲುಕ್ ಅಚ್ಚಿರುವಂತಹ ಬೆಳ್ಳಿ ನಾಣ್ಯಗಳನ್ನು ಲಾಂಚ್ ಮಾಡಿದ್ದಾರೆ. ಶುಕ್ರವಾರದಿಂದ (ಜುಲೈ 15) ಮುತ್ತೂಟ್ ಬ್ರ್ಯಾಂಚ್‍ಗಳಲ್ಲಿ ನಾಣ್ಯಗಳನ್ನು ಬುಕ್ ಮಾಡಬಹುದು. ಈ ಕಾಯಿನ್‍ಗಳು ಮೂರು ವಿಧದಲ್ಲಿ ಲಭ್ಯವಿದ್ದು 5 ಗ್ರಾಮ್ ನಾಣ್ಯಕ್ಕೆ 350 ರೂ., 10 ಗ್ರಾಮ್ ನಾಣ್ಯಕ್ಕೆ 700 ರೂ. ಹಾಗೂ 20 ಗ್ರಾಂ ನಾಣ್ಯಕ್ಕೆ 1400 ರೂ. ಹಣ ನೀಡಬೇಕು. ಈಗ ಬುಕ್ ಮಾಡಿದರೆ, ಸಿನಿಮಾ ರಿಲೀಸ್ ಆದ ಮೇಲಷ್ಟೇ ಆ ನಾಣ್ಯಗಳು ನಿಮ್ಮ ಕೈ ಸೇರಲಿವೆ.

ಕಬಾಲಿಗೆ ಮೀಸಲಾದ ಕಾಲಿವುಡ್ ಕೆಫೆ!

ವಿಶೇಷ ಅಂದರೆ ಕೊಯಮತ್ತೂರಿನ ಆರ್.ಎಸ್.ಪುರಂನಲ್ಲಿ ಕಬಾಲಿಗೆ ಮೀಸಲಾದ ರೆಸ್ಟೋರೆಂಟ್ ಪ್ರಾರಂಭವಾಗಿದೆ. ಹೆಸರು ಕಾಲಿವುಡ್ ಕೆಫೆ. ಆ ಹೋಟೆಲ್‍ನ ಗೋಡೆ ತುಂಬೆಲ್ಲ ರಜನಿಕಾಂತ್ ಅವರ ಪೋಸ್ಟರ್‍ಗಳು ರಾರಾಜಿಸುತ್ತಿವೆ. ಪ್ರತಿ ಟೇಬಲ್‍ನಲ್ಲು ಮೆನು ಜೊತೆಯಲ್ಲೆ ರಜನಿಕಾಂತ್ ಅವರ ಕುರಿತ ಮಾಹಿತಿಗಳಿರುವ ಬ್ರೋಷರ್‍ಗಳಿವೆ. ಸೂಪರ್‍ಸ್ಟಾರ್‍ಗೆ ಸಂಬಂಧಿಸಿದ ಪದಬಂಧವೂ ಇದೆ. ಹಾಗೇ 6 ಅಡಿ ಉದ್ದದ ರಜಿನಿಕಾಂತ್ ಅವರ ಸ್ಟ್ಯಾಂಡಿ ಇದ್ದು, ಗ್ರಾಹಕರು ಅದರೊಂದಿಗೆ ಸೆಲ್ಫೀ ಕ್ಲಿಕ್ಕಿಸಿಕೊಳ್ಳಬಹುದು. 

ಇದನ್ನು ಓದಿ:

1. ಕನ್ನಡ ಪದ ಹಾಡಿ ಗೆದ್ದರು- ದೇಸಿ ಸ್ಟೈಲ್ ಹಾಡುಗಾರನಿಗೆ ವಿಶ್ವದಾಧ್ಯಂತ ಅಭಿಮಾನಿಗಳು

2. ನಿಮ್ಮ ಸ್ಮಾರ್ಟ್​ಫೋನ್​ನ್ನು ಕಣ್ಣಿನಿಂದಲೇ ನಿಯಂತ್ರಿಸಿ..!

3. ಕನ್ನಡ ಚಿತ್ರರಂಗಕ್ಕೆ ಕಾರ್ಪೊರೇಟ್ ಎಂಟ್ರಿ!