"ಮನೆಯ ಮೇಲೊಂದು ತೋಟವ ಮಾಡಿ"
ಪಿ.ಅಭಿನಾಷ್
ಸಿಲಿಕಾನ್ ಸಿಟಿ ಅಂದ್ರೆ ಕಾಂಕ್ರೀಟ್ ಕಾಡು. ಒಂದಿಷ್ಟು ಜಾಗ ಸಿಕ್ಕಿದ್ರೆ ಸಾಕು ಅಲ್ಲೂ ರಾತ್ರೋ ರಾತ್ರಿ ಕಟ್ಟಡ ತಲೆ ಎತ್ತಿಬಿಡತ್ತೆ. ಜಾಗದ ಕೊರತೆಯಿಂದಾಗಿ ಒಂದಿಷ್ಟು ಹಸಿರು ಬೆಳೆಸೋದು ಕಷ್ಟದ ಕೆಲಸವೇ. ಆದ್ರೆ, ಮನಸಿದ್ದರೆ ಮಾರ್ಗ ಅನ್ನುವಂತೆ, ಇರುವ ಜಾಗದಲ್ಲೇ ಪುಟ್ಟದೊಂದು ತೋಟ ಮಾಡಿ ತಮ್ಮ ಮನೆಗೆ ಬೇಕಾಗಿರುವಷ್ಟು ತರಕಾರಿಯನ್ನ ತಾವೇ ಬೆಳೆದಕೊಳ್ಳುತ್ತಿದೆ ಆ ಮಾದರಿ ಕುಟುಂಬ.
ಅದು ಯಲಹಂಕದ ಸುಗ್ಗಪ್ಪ ಲೇಔಟ್. ಅದೂ ಕೂಡ ಇತರೆ ಏರಿಯಾಗಳಂತೆ ಕೇವಲ ಕಟ್ಟಡಗಳ ಬೀಡು. ಆದ್ರೆ, ಆ ಕಟ್ಟಡಗಳ ನಡುವೆಯೇ ಬೆರುಗುಗೊಳಿಸುವಂತೆ ನಿರ್ಮಾಣವಾಗಿ ಆ ಪುಟ್ಟ ತಾರಸಿ ತೋಟ. ಮೂರನೇ ಮಹಡಿಯಲ್ಲಿ ಉಳಿದಿರುವ ಜಾಗವನ್ನೇ ತೋಟವನ್ನಾಗಿ ಮಾರ್ಪಡಿಸಲಾಗಿದೆ. ಒಂದಾ ಎರಡಾ, ಸುಮಾರು ನೂರು ಬಗೆಯ ಗಿಡಗಳು ಅಲ್ಲಿವೆ. ತರಕಾರಿ ಮಾತ್ರ್ರವಲ್ಲ, ಹಣ್ಣುಗಳು, ಹೂವಿನ ಗಿಡಗಳು, ಸೊಪ್ಪು, ಜೇನು, ಗುಬ್ಬಚ್ಚಿ, ಹೀಗೆ, ಆ ತೋಟ ನೈಜತೆಯಿಂದ ಕೂಡಿದೆ.
1500 ಚದರಿ ಅಡಿ ಜಾಗದಲ್ಲಿದೆ ಆ ತೋಟ. ತೋಟಕ್ಕೆ ಎಂಟ್ರ್ರಿ ಕೊಡ್ತಿದ್ದಂತೆ, ಹಸಿರು ಪ್ರಪಂಚ ತೆರೆದುಕೊಳ್ಳತ್ತೆ. ಒಂದು ಕ್ಷಣಕ್ಕೆ ಇದು ಬೆಂಗಳೂರಾ? ತಾರಸಿ ಮೇಲೂ ಇಂತಾದ್ದೊಂದು ಕೈತೋಟ ಮಾಡುವುದು ಸಾಧ್ಯಾನಾ, ಖಂಡಿತ ಒಂದು ಕ್ಷಣಕ್ಕೆ ಎಂಥವರೂ ಬೆರಗಾಗಬೇಕು. ಏನುಂಟು ಏನಿಲ್ಲ ಇಲ್ಲಿ. ಮಾರುಕಟ್ಟೆಯಲ್ಲೂ ಸಿಗದ ತಾಜಾ ಸೊಪ್ಪು, ತರಕಾರಿ ಇಲ್ಲಿದೆ. ತರಕಾರಿ ಬೆಳೆಯಲು ತಾರಸಿಯ ಬದಿ ಗೋಡೆಯಲ್ಲಿ ತೊಟ್ಟಿ ನಿರ್ಮಾಣ ಮಾಡಲಾಗಿದೆ. ನೆಲದ ಮೇಲೆ ಪಾಟ್‍ಗಳನ್ನ ಅಚ್ಚುಕಟ್ಟಾಗಿ ಜೋಡಿಸಿಡಲಾಗಿದೆ. ಪಾಟ್‍ಗಳನ್ನ ಇಡೋದ್ರಿಂದ, ಟೆರೇಸ್ ಗೆ ಹೆಚ್ಚಿನ ಭಾರ ಬೀಳತ್ತೆ, ಅನ್ನೋದಾದ್ರೆ, ಸಿಮೆಂಟ್ ಚೀಲಗಳಲ್ಲೂ ಗಿಡಗಳನ್ನ ಬೆಳಯಬಹದು ಅಂತಾ ತೋರಿಸಿಕೊಟ್ಟಿದ್ದಾರೆ.
ಬದನೆಕಾಯಿ, ಹಾಗಲಕಾಯಿ, ಹೀರೆಕಾಯಿ, ಬೆಂಡೆಕಾಯಿ, ಈರುಳ್ಳಿ, ಟೊಮ್ಯಾಟೋ, ಬೀನ್ಸ್, ಆಲೂಗಡ್ಡೆ, ಕೋಸು, ಪಡವಲಕಾಯಿ ಸೋರೆ ಕಾಯಿ, ಕುಂಬಳಕಾಯಿ, ಹೀಗೆ 20ಕ್ಕೂ ಹೆಚ್ಚು ಬಗೆಯ ತರಕಾರಿಗಳು, ಕರಿಬೇವು, ದಂಟು, ಪುದೀನ, ಕೊತ್ತಂಬರಿ, ಪಾಲಕ್, ಸೇರಿದಂತೆ ಹತ್ತಕ್ಕೂ ಹೆಚ್ಚು ಬಗೆಯ ಸೊಪ್ಪು. ಪಪ್ಪಾಯ, ಸಪೋಟ, ಸೀಬೆ, ದ್ರಾಕ್ಷಿ, ದಾಳಿಂಬೆ, ಕಲ್ಲಂಗಂಡಿ ಸೇರಿದಂತೆ ಬಾಳೆ ಗಿಡಗೂ ಈ ತಾರಸಿಯಲ್ಲಿದೆ. ನಾವೆಲ್ಲಾ ಸೀಸನ್‍ನಲ್ಲಿ ಮಾತ್ರ ಕಾದು ತಿನ್ನುವ ಅವರೇಕಾಯಿ ಇಲ್ಲಿ ಎಲ್ಲಾ ಸಮಯದಲ್ಲೂ ಸಿಗುತ್ತದೆ.
ಕಳೆದ ಎರಡು ವರ್ಷದಿಂದ ತಾರಸಿಯಲ್ಲಿ ತೋಟವನ್ನ ಮಾಡಲಾಗಿದೆ. ಟೆರೇಸ್ ಮೇಲೆ ಮಣ್ಣು ಹಾಕಿದ್ರೆ ಸಿಪೇಜ್ ಆಗತ್ತೆ ಅನ್ನೋ ಭಯವೂ ಇವ್ರನ್ನ ಕಾಡ್ತಾ ಇಲ್ಲ. ಯಾಕಂದ್ರೆ ಮುನ್ನಚ್ಚರಿಕಾ ಕ್ರಮಗಳನ್ನ ತೆಗೆದುಕೊಂಡು ನೀರು ನಿಲ್ಲದಂತೆ ಎಚ್ಚರವಹಿಸಲಾಗಿದೆ. ಹಾಗಾಗಿ, ಮಹಡಿ ಮೇಲೆ ಗಿಡಗಳಿಂದಾಗಿ ನೀರು ನಿಲ್ಲುವುದೇ ಇಲ್ಲ.
ಇನ್ನೂ ಅಚ್ಚರಿಯ ವಿಷಯ ಅಂದ್ರೆ, ತಾರಿಸಿಯ ಮೇಲೆ ಹನಿ ನೀರಾವರಿ ವ್ಯವಸ್ಥೆ ಮಾಡಿರುವುದು. ಹೌದು, ಎಲ್ಲಾ ಗಿಡಗಳಿಗೂ ಪ್ರತ್ಯೇಕ ನೀರಿನ ಪೈಪ್ ಅಳವಡಿಸಲಾಗಿದ್ದು, ಬೆಳಗ್ಗೆ ಹತ್ತರಿಂದ ಹದಿನೈದು ನಿಮಿಷ ಮೋಟರ್ ಆನ್ ಮಾಡಿದ್ರೆ ಸಾಕು, ಅಗತ್ಯವಿರುವಷ್ಟು ನೀರು ಸಸಿಗಳಿಗೆ ಸಿಗತ್ತೆ.
ಚಿಕ್ಕದೊಂದು ಬಯೋಗ್ಯಾಸ್ ಪ್ಲ್ಯಾಂಟ್ ಕೂಡ ಇಲ್ಲಿದೆ. ಅಲ್ಲದೆ, ಗಿಡಗಳಿಗೆ ಬೇಕಾಗಿರುವ ಸಾವಯವ ಗೊಬ್ಬರವೂ ಇದೇ ಮಹಡಿ ಮೇಲೆ ಸಿದ್ದವಾಗತ್ತೆ. ಉದುರಿದ ಎಲೆಗಳು, ತರಕಾರಿ ಸಿಪ್ಪೆ ಸೇರಿದಂತೆ ಹಸಿತ್ಯಾಜ್ಯದಿಂದಾಗಿ ಮನೆಯಲ್ಲೇ ತಮ್ಮ ಗಿಡಗಳಿಗೆ ಬೇಕಾಗಿರುವಷ್ಟು ಗೊಬ್ಬರವನ್ನೂ ಸಿದ್ದಪಡಿಸಿಕೊಳ್ಳುತ್ತಾರೆ ನಾಗರಾಜ್ ದಂಪತಿ. ಅಲ್ಲದೆ, ಹಸುವಿನ ಗೊಬ್ಬರ, ಕೋಳಿ ಗೊಬ್ಬರವೂ ಗಿಡಗಳಿಗೆ ಸೂಕ್ತ.
ತೋಟ ಮಾಡುವವರಿಗೆ ಇಲ್ಲಿದೆ ಟಿಪ್ಸ್!
ನೀವು ನಿಮ್ಮ ಮನೆಯಲ್ಲೊಂದು ಪುಟ್ಟ ಕೈತೋಟ ಮಾಡಬೇಕು ಅಂತಿದ್ರೆ ಮೊದಲು ಸೊಪ್ಪು ಬೆಳೆಯುವ ಮೂಲಕ ನಿಮ್ಮ ಆಸಕ್ತಿಯನ್ನ ವೃದ್ಧಿಸಿಕೊಳ್ಳಬಹುದು. ದಂಟು, ಪಾಲಕ್, ಕೊತ್ತಂಬರಿ ಸೊಪ್ಪನ್ನ ಸುಲಭವಾಗಿ ಬೆಳೆಯಬಹುದು. ನಂತ್ರ ಹಂತ ಹಂತವಾಗಿ ತರಕಾರಿ ಬೆಳಯುವುದನ್ನ ಅಭ್ಯಾಸ ಮಾಡಿಕೊಳ್ಳಬಹುದು. ಹೆಚ್ಚು ಹಣ ನೀಡಿ, ಯೂರಿಯಾ, ರಾಸಾಯನಿಕ ಗೊಬ್ಬರ ಹಾಕಿ ಬೆಳೆಸಿರುವ ತರಕಾರಿ ತಿನುವ ಬದಲು ನಮ್ಮ ನಮ್ಮ ಅಡುಗೆ ಮನೆಗಾಗುವಷ್ಟು ತರಕಾರಿಯನ್ನ ನಾವೇ ಬೆಳೆದುಕೊಳ್ಳಬಹುದು. ಈಗಂತೂ ಸಾವಯವ ತರಕಾರಿ ಹಾಗೂ ಅಕ್ಕಿ ಬೆಳೆಗೆ ಸಾಕಷ್ಟು ಬೇಡಿಕೆ ಇದ್ದು, ಸಾವಯವ ತರಕಾರಿಯನ್ನ ನಾವೇ ಬೆಳೆದುಕೊಳ್ಳಬಹುದು. ನೋಡಿ, ಅಂಗೈಯಗಲ ಜಾಗವಿದ್ರೆ ಸಾಕು ಬೇಕಾಗುವಷ್ಟು ತಾಜಾ ತರಕಾರಿ ಬೇಕೆಂದಾಗ ಸಿಗತ್ತೆ.