ದೇಶದ ಮೊಟ್ಟಮೊದಲ ಹೊಗೆರಹಿತ ಗ್ರಾಮ..! ಹಳ್ಳಿಯ ಮನೆ-ಮನೆಯಲ್ಲೂ ಎಲ್‍ಪಿಜಿ ಸ್ಟೌವ್ ಕ್ರಾಂತಿ..!
ಈಶಾನ ಪಾಲ್ತಾಡಿ
ಭಾರತ ದೇಶದ ಮೊಟ್ಟಮೊದಲ ಹೊಗೆರಹಿತ ಗ್ರಾಮ ಎಂಬ ಕೀರ್ತಿಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಕುಗ್ರಾಮವೊಂದು ಪಾತ್ರವಾಗಿದೆ. ಸಾಂಪ್ರದಾಯಿಕ ಸೌದೆ ಒಲೆಗೆ ಗುಡ್‍ಬಾಯ್ ಹೇಳಿರುವ ಎಲ್ಲಾ ಮಹಿಳೆಯರು ಇದೀಗ ಎಲ್‍ಪಿಜಿ ಸ್ಟೌವ್ ಬಳಸಿ ಹೊಸ ಕ್ರಾಂತಿ ಮಾಡಿದ್ದಾರೆ. ದೇಶದಲ್ಲೇ ಮೊಟ್ಟ ಮೊದಲ ಹೊಗರಹಿತ ಗ್ರಾಮ ಎಂಬ ಖ್ಯಾತಿ ವೈಚೂಕರಹಳ್ಳಿ ಕರ್ನಾಟಕದಲ್ಲಿರೋದು ಹೆಮ್ಮೆಯ ವಿಚಾರ.
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ವೈಚಕೂರಹಳ್ಳಿ ಸರಿಸುಮಾರು 270 ಕ್ಕೂ ಹೆಚ್ಚು ಮನೆಗಳನ್ನ ಹೊಂದಿರುವ ಕುಗ್ರಾಮ. ಇದೀಗ ಈ ಗ್ರಾಮ ರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿಗೆ ಪಾತ್ರವಾಗಿದೆ. ಸಾಂಪ್ರದಾಯಿಕ ಸೌದೆ ಒಲೆಗೆ ಗುಡ್‍ಬಾಯ್ ಹೇಳಿರುವ ಇಲ್ಲಿನ ಮಹಿಳೆಯರು ಎಲ್‍ಪಿಜಿ ಸ್ಟೌವ್ ಮೂಲಕ ಅಡುಗೆ ಮಾಡುತ್ತಿದ್ದಾರೆ. ನಾಲ್ಕೈದು ಗುಡಿಸಲು ಮನೆಗಳನ್ನ ಹೊರತುಪಡಿಸಿ, ಪ್ರತಿ ಮನೆ-ಮನೆಯಲ್ಲೂ ಈಗ ಸ್ಟೀಲ್ ಎಲ್‍ಪಿಜಿ ಸ್ಟೌವ್ ಹಾಗೂ ಸಿಲಿಂಡರ್ ಗಳದ್ದೇ ಕಾರುಬಾರು. ಸದಾ ಸಾಂಪ್ರಾದಾಯಿಕ ಸೌದೆ ಒಲೆಯಿಂದ ಅಡುಗೆ ಮಾಡಿ ಶತಮಾನಗಳಿಂದ ಹೊಗೆಯಲ್ಲೇ ಮುಳುಗಿದ್ದ ಇಲ್ಲಿನ ಮಹಿಳೆಯರಿಗೆ ಸದ್ಯ ಬಿಗ್ ರಿಲೀಫ್ ಸಿಕ್ಕಿದ್ದು, ಮಹಿಳೆಯರಲ್ಲಿ ಸಂತಸ ಮನೆ ಮಾಡಿದೆ.
ಈ ಗ್ರಾಮದಲ್ಲಿ ಎಲ್‍ಪಿಜಿ ಸ್ಟೌವ್ ಕ್ರಾಂತಿಗೆ ನಾಂದಿ ಹಾಡಿದ್ದು ಸರ್ಕಾರ ಹಾಗೂ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಸಹಭಾಗಿತ್ವದ ಕಾರ್ಯ. ದೇಶದ ಹಲವು ಅನಕೂಲಕಸ್ಥ ಎಲ್‍ಪಿಜಿ ಬಳಕೆದಾರರು ವಾಪಸ್ ಮಾಡಿದ ಎಲ್‍ಪಿಜಿಯ ಸಬ್ಸಿಡಿ ಹಣ ಹಾಗೂ ಐಓಸಿಯ ಸೋಷಿಯಲ್ ರೆಸ್ಪಾನ್ಸಿಬಲ್ ಫಂಡ್ ನ ಹಣದಿಂದ 4500 ರೂಪಾಯಿಯ ಎಲ್‍ಪಿಜಿ ಗ್ಯಾಸ್ ಕನೆಕ್ಷನ್ ಗೆ ಈ ಗ್ರಾಮದ ಮಹಿಳೆಯರಿಂದ ಕೇವಲ 2000 ರೂಪಾಯಿ ಮಾತ್ರ ಪಡೆಯಲಾಗಿತ್ತು. ಹೀಗಾಗಿ 2000 ಸಿಕ್ಕ ಗ್ಯಾಸ್ ಸಂಪರ್ಕವನ್ನ ಈ ಗ್ರಾಮದ ಮಹಿಳೆಯರು ಸಂಪೂರ್ಣವಾಗಿ ಸದುಪಯೋಗಪಡಿಸಿಕೊಂಡಿದ್ದಾರೆ.
ಈ ಗ್ರಾಮದಲ್ಲಿ ಈ ಮೊದಲೇ ಹಲವು ಮನೆಗಳಲ್ಲಿ ಗ್ಯಾಸ್ ಸಂಪರ್ಕವನ್ನು ಪಡೆದಿದ್ರು. ಆದ್ರೆ ಈಗ ಉಳಿದಿದ್ದ 93 ಮನೆಗಳಿಗೆ ಸಂಪೂರ್ಣ ಗ್ಯಾಸ್ ಸಂಪರ್ಕ ನೀಡಿ, ಗ್ರಾಮವನ್ನ ಸಂಪೂರ್ಣ ಹೊಗೆಮುಕ್ತ ಗ್ರಾಮವನ್ನಾಗಿ ರೂಪಿಸಲಾಗಿದೆ. ವೈಚಕೂರನಹಳ್ಳಿ ಗ್ರಾಮವನ್ನ ಗೌರಿಬಿದನೂರಿನ ಶ್ರೇಣಿಕ್ ಗ್ಯಾಸ್ ಏಜೆನ್ಸಿ ಮೂಲಕ ಪೈಲೆಟ್ ಕಾರ್ಯ ರೂಪಿಸುವ ಸಲುವಾಗಿಯೇ ಆಯ್ಕೆ ಮಾಡಲಾಗಿತ್ತು. ಈ ಕಾರ್ಯವನ್ನ ಯಶಸ್ವಿಯಾಗಿ ನಿಭಾಯಿಸಿದ ಕಾರ್ಯಕ್ಕೆ ದೇಶದ ಪೆಟ್ರೋಲಿಯಂ ಸಚಿವ ಧರ್ಮೇಂಧ್ರ ಪ್ರಧಾನ್ ಟ್ವೀಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಈ ಗ್ರಾಮದ ಮಹಿಳೆಯರಿಗೆ ಸಾಂಪ್ರಾದಾಯಿಕ ಸೌದೆ ಒಲೆಯ ಪಡಿಪಾಟಲಿಂದ ಪಾರಾಗಿದ್ದಲ್ಲದೇ, ಹೊಗೆಯ ಸಹವಾಸವೂ ತಪ್ಪಿ ಆರೋಗ್ಯವೂ ವೃದ್ದಿಯಾಗಿದೆ. ಈ ಗ್ರಾಮದಲ್ಲಿ ವಾಸ್ತವವಾಗಿ ಆಡುಗೆ ಮಾಡಲು ಮಾತ್ರ ಎಲ್‍ಪಿಜಿ ಗ್ಯಾಸ್ ಸ್ಟೌವ್ ಬಳಕೆ ಮಾಡಲಾಗುತ್ತಿದ್ದು. ನೀರು ಕಾಯಿಸಲು ಸೌದೆ ಓಲೆಯನ್ನೇ ಬಳಕೆ ಮಾಡಲಾಗ್ತಿದೆ. ಹೀಗಾಗಿ ದೇಶದ ಮಟ್ಟದಲ್ಲೇ ಹೊಗೆರಹಿತ ಗ್ರಾಮಗಳನ್ನ ಸೃಷ್ಠಿಸುವ ಸರ್ಕಾರದ ಕಾರ್ಯಕ್ಕೆ ಸ್ವಲ್ಪ ಮಟ್ಟದ ಹಿನ್ನೆಡೆಯಾಗಿದೆ. ಇನ್ನೂ ಇದೇ ರೀತಿ ಹಲವು ಗ್ರಾಮಗಳನ್ನ ಹೊಗೆರಹಿತ ಮಾಡಲು ಮುಂದಾಗಿರೋ ಸರ್ಕಾರ ಮುಂದಿನ ದಿನಗಳಲ್ಲಿ ಈ ಬಗ್ಗೆ ಕೂಡ ಯೋಚನೆ ಮಾಡಬೇಕಾಗಿದೆ.