ಎಂಎನ್‍ಸಿ ಕಂಪನಿಗಳಿಗೆ ನಡುಕ ಹುಟ್ಟಿಸಿದ "ಪತಂಜಲಿ''

ಟೀಮ್​ ವೈ.ಎಸ್​. ಕನ್ನಡ

ಎಂಎನ್‍ಸಿ ಕಂಪನಿಗಳಿಗೆ ನಡುಕ ಹುಟ್ಟಿಸಿದ "ಪತಂಜಲಿ''

Wednesday April 13, 2016,

3 min Read

ಭಾರತೀಯ ಸಂಸ್ಕೃತಿ ಸಂಪ್ರದಾಯಗಳಲ್ಲಿ ಮಿಳಿತವಾಗಿರುವ ಯೋಗಾಸನ ಕೆಲ ವರ್ಷಗಳ ಹಿಂದೆ ಇಡೀ ಇಡೀ ವಿಶ್ವಕ್ಕೇ ಪ್ರೇರಣೆಯಾಗಿತ್ತು. ಆದ್ರೆ ಈಗ ಯೋಗ ಸುದ್ದಿಯಾಗ್ತಿರೋದು ಬೇರೆಯದೇ ಕಾರಣಕ್ಕೆ. ಸಾಧು, ಸಂತರು ಕೂಡ ಉದ್ಯಮಿಗಳನ್ನು ಹಿಂದಿಕ್ಕುವ ಮೂಲಕ ಜಗತ್ತಿನೆಲ್ಲೆಡೆ ಸಂಚಲನ ಸೃಷ್ಟಿಸಿದ್ದಾರೆ. ಅವರಲ್ಲಿ ಪ್ರಮುಖರೆಂದ್ರೆ ಯೋಗ ಗುರು ಬಾಬಾ ರಾಮದೇವ್. ಹರಿದ್ವಾರ ಮೂಲದ ಬಾಬಾ ರಾಮದೇವ್, 2011ರಲ್ಲಿ ನಡೆದ ಜನ್ ಲೋಕಪಾಲ್ ಹೈಡ್ರಾಮಾ ನಡೆದಾಗಿನಿಂದ್ಲೂ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಅದಾದ ಬಳಿಕ 2014ರಲ್ಲಿ ಅವರು ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೆಂಬಲ ಘೋಷಿಸಿದ್ದರು.

ಯೋಗಾಸನ ಶಿಬಿರಗಳ ಮೂಲಕ ಅಪಾರ ಜನಬೆಂಬಲ ಗಳಿಸಿರುವ ಬಾಬಾ ರಾಮದೇವ್ 2006ರಲ್ಲೇ ಆಯುರ್ವೇದ ಸಂಸ್ಥೆಯೊಂದನ್ನು ಆರಂಭಿಸಿದ್ರು. ಬಳಿಕ ಮತ್ತೆ ಪತಂಜಲಿ ಆಯುರ್ವೇದ ಸಂಸ್ಥೆಯನ್ನು ರೀಲಾಂಚ್ ಮಾಡುವ ಮೂಲಕ ಉದ್ಯಮ ಜಗತ್ತಿನಲ್ಲಿ ಹೊಸ ಇತಿಹಾಸವನ್ನೇ ಬರೆದಿದ್ದಾರೆ. ಯೋಗ ಗುರುವಿನ ಪತಂಜಲಿ ಆಯುರ್ವೇದ, ಬಿಲಿಯನ್ ಡಾಲರ್ ವಹಿವಾಟಿನತ್ತ ದಾಪುಗಾಲಿಕ್ಕಿದೆ.

image


ಬುಟ್ಟಿಯಲ್ಲಿ ಹೊಸ ವೈಶಿಷ್ಟ್ಯ

ಆರಂಭದಲ್ಲಿ ಪತಂಜಲಿ ವೈದ್ಯಕೀಯ ಉಪಯೋಗದ ಉತ್ಪನ್ನಗಳನ್ನು ಮಾತ್ರ ಉತ್ಪಾದನೆ ಮಾಡುತ್ತಿತ್ತು. ಆದ್ರೆ 2014ರಲ್ಲಿ ಇನ್‍ಸ್ಟಂಟ್ ನೂಡಲ್ಸ್, ಡಿಚರ್ಜೆಂಟ್ಸ್, ಪರ್ಸನಲ್ ಕೇರ್ ಪ್ರಾಡಕ್ಟ್ಸ್ ಹೀಗೆ ಎಲ್ಲವನ್ನೂ ತಯಾರಿಸಲಾರಂಭಿಸಿದೆ. ಪತಂಜಲಿ ಆನ್‍ಲೈನ್ ವೇದಿಕೆಯನ್ನು ಹೊಂದಿದ್ದು, 5,000 ಫ್ರಾಂಚೈಸಿ ಮಳಿಗೆಗಳಿವೆ. ಫ್ಯೂಚರ್ ಗ್ರೂಪ್ ಮತ್ತು ಬಿಜ್ ಬಜಾರ್ ಜೊತೆಗೂ ಪತಂಜಲಿ ಟೈಅಪ್ ಮಾಡಿಕೊಂಡಿದೆ. ಆನ್‍ಲೈನ್ ದಿನಸಿ ಪೋರ್ಟಲ್ ಬಿಗ್ ಬಾಸ್ಕೆಟ್‍ನಂತಹ ವೇದಿಕೆಗಳಲ್ಲೂ ಪತಂಜಲಿ ಉತ್ಪನ್ನಗಳು ಲಭ್ಯವಿವೆ. ಆದ್ರೆ ತುಪ್ಪ, ಜೇನುತುಪ್ಪ ಹಾಗೂ ಟೂತ್‍ಪೇಸ್ಟ್ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಗಳಿಸಿವೆ. ಉಳಿದ ಉತ್ಪನ್ನಗಳು ಅಷ್ಟೇನೂ ಯಶಸ್ಸು ಕಂಡಿಲ್ಲ. ಕನ್ಸಲ್ಟಿಂಗ್ ಸಂಸ್ಥೆ ಟೆಕ್ನೋಪಾಕ್ ಅಧ್ಯಕ್ಷ ಅರವಿಂದ್ ಸಿಂಘಾಲ್ ಅವರ ಪ್ರಕಾರ ಸಮರ್ಥ ಪೂರೈಕೆ ಸರಪಳಿ ಹಾಗೂ ಸ್ಥಳೀಯ ಮಟ್ಟದಲ್ಲಿನ ಲಭ್ಯತೆಯೇ ಪತಂಜಲಿಯ ಶಕ್ತಿ. ಎಂಎನ್‍ಸಿ ಕಂಪನಿಗಳಂತೆ ಪತಂಜಲಿ ಮಾರ್ಕೆಟಿಂಗ್‍ಗೆ ಹೆಚ್ಚು ಹಣ ವ್ಯಯಿಸುತ್ತಿಲ್ಲ, ಸಾಂಪ್ರದಾಯಿಕ ಎಫ್‍ಎಂಸಿಜಿ ಚಾನೆಲ್‍ಗಳ ಮೂಲಕವೇ ವಿತರಣೆ ಮಾಡುತ್ತಿದೆ.

ಇದನ್ನು ಓದ: ಸಾಂಸ್ಕೃತಿಕ ನಗರಿಯ ಹೊಸ ಶೈಕ್ಷಣಿಕ ಸಾಧನೆ

ಆಗಸ್ಟ್ 2015ರಲ್ಲಿ ಸಿಎಲ್‍ಎಸ್‍ಎ ಸಂಶೋಧನೆಯ ವರದಿ ಪ್ರಕಾರ ಕಳೆದ ನಾಲ್ಕು ವರ್ಷಗಳಲ್ಲಿ ಪತಂಜಲಿ ಆದಾಯ ನಾಲ್ಕು ಪಟ್ಟು ಹೆಚ್ಚಾಗಿದೆ. ಕಳೆದ ತ್ರೈಮಾಸಿಕದಲ್ಲಿ ಪತಂಜಲಿ 2500 ಕೋಟಿ ರೂಪಾಯಿ ಆದಾಯ ಗಳಿಸಿದೆ. ಮುಂದಿನ ತ್ರೈಮಾಸಿಕ ಅಂತ್ಯದ ವೇಳೆಗೆ ಆದಾಯ ದುಪ್ಪಟ್ಟಾಗಲಿದ್ದು 5000 ಕೋಟಿಗೆ ತಲುಪಲಿದೆ. ಇತ್ತೀಚಿನ ವರದಿ ಪ್ರಕಾರ ಈಗಾಗ್ಲೇ 4500 ಕೋಟಿ ರೂಪಾಯಿ ಆದಾಯ ಪತಂಜಲಿ ಜೋಳಿಗೆಯಲ್ಲಿದೆ. ಹಾಗಾಗಿ 2016-17ರಲ್ಲಿ 7000 ಕೋಟಿ ಆದಾಯ ಗಳಿಸಬಹುದು ಅನ್ನೋದು ತಜ್ಞರ ಲೆಕ್ಕಾಚಾರ.

ಅಚ್ಚರಿಯ ವಿಜೇತ

ಪೈಪೋಟಿ ದಿನೇ ದಿನೇ ಹೆಚ್ಚುತ್ತಿರುವುದರಲ್ಲಿ ಅನುಮಾನವೇ ಇಲ್ಲ. ಪತಂಜಲಿಯ ಎಫೆಕ್ಟ್‍ನಿಂದಾಗಿ ಎಂಎನ್‍ಸಿ ಕಂಪನಿಗಳು ಭಾರತದಲ್ಲಿ ಹೊಸ ಯೋಜನೆ ರೂಪಿಸಲೇಬೇಕಾಗಿದೆ. 

"ನೈಸರ್ಗಿಕ ಉತ್ಪನ್ನಗಳೊಂದಿಗೆ ಅವರು ಪೈಪೋಟಿಗಿಳಿದರೂ ರಾತ್ರೋ ರಾತ್ರಿ ಭಾರತಕ್ಕಾಗಿ ಹೊಸ ಫಾರ್ಮುಲಾ ಹುಡುಕುವುದು ಸಾಧ್ಯವಿಲ್ಲ. ಭಾರತೀಯ ಪರಿಸರಕ್ಕೆ ಅನುಗುಣವಾಗಿ ಅದನ್ನು ತಿರುಚಲೇಬೇಕು'' 
                           -ಅರವಿಂದ್

ಕೇವಲ ನೆಸ್ಲೆ, ಕೋಲ್ಗೇಟ್, ಐಟಿಸಿ ಕಂಪನಿಗಳಿಗೆ ಮಾತ್ರವಲ್ಲದೆ ಡಾಬರ್ ಮತ್ತು ಗೋದ್ರೇಜ್ ಕಂಪನಿಗಳಿಗೆ ಕೂಡ ಪತಂಜಲಿಯಿಂದ ಭಾರೀ ಸ್ಪರ್ಧೆ ಎದುರಾಗಿದೆ. ಪತಂಜಲಿಯ ವ್ಯಾಪಾರ ಬೆಳವಣಿಗೆ ಹೊಸ ಪೀಳಿಗೆಯ ಮಾದರಿಯನ್ನು ಹೋಲುತ್ತದೆ. ಊಬರ್ ಮತ್ತು ಓಲಾಗಳಂತೆ ಪತಂಜಲಿ ಕೂಡ ಮಹಾರಾಷ್ಟ್ರ ಸರ್ಕಾರದೊಂದಿಗೆ ಟೈಅಪ್ ಮಾಡಿಕೊಳ್ಳುತ್ತಿದ್ದು, ಕಾಡುಗಳಲ್ಲಿ ಲಭ್ಯವಿರುವ ವಿಪರೀತ ಉತ್ಪನ್ನಗಳನ್ನು ಕೊಂಡುಕೊಳ್ಳಲಿದೆ.

ಮಧ್ಯಪ್ರದೇಶ, ಮಹಾರಾಷ್ಟ್ರ ಸೇರಿದಂತೆ ದೇಶದಲ್ಲಿ ಒಟ್ಟು 5 ಫುಡ್ ಪಾರ್ಕ್ ನಿರ್ಮಾಣ ಮಾಡುವುದಾಗಿ ಬಾಬಾ ರಾಮದೇವ್ ಹೇಳಿದ್ದಾರೆ. ಅವರದ್ದೇ ಸ್ವಂತ ಜಮೀನಿನಿಂದ್ಲೇ ಕಚ್ಚಾ ವಸ್ತುಗಳನ್ನು ಬಳಸಿಕೊಳ್ಳುತ್ತಿರುವುದು ವಿಶೇಷ. ಕಂಪನಿ ಹಾಗೂ ರೈತರ ಮಧ್ಯೆ ಮಧ್ಯವರ್ತಿಗಳ ಹಾವಳಿ ಇರುವುದಿಲ್ಲ. ಬೆಲೆ ಡಾಬರ್‍ನಂತಹ ಕಂಪನಿಗಳಿಗಿಂತ ಶೇ.30ರಷ್ಟು ಕಡಿಮೆ ಇರಲಿದೆ. ಲಾಭ ಶೇ.20ರಷ್ಟ ಹೆಚ್ಚಾಗಲಿದೆ. ಚಿಲ್ಲರೆ ಮಾರಾಟಗಾರರಿಗೆ ಶೇ.10-20ರಷ್ಟು ಮತ್ತು ವಿತರಕರಿಗೆ ಶೇ.4-5ರಷ್ಟು ಲಾಭ ದೊರೆಯಲಿದೆ.

ದೊಡ್ಡ ಹೊಡೆತಗಳಿಲ್ಲ

ಬಹುತೇಕ ಕಂಪನಿಗಳೆಲ್ಲ ಜಾಹೀರಾತಿಗಾಗಿ ಹೆಚ್ಚು ಹಣ ವೆಚ್ಚ ಮಾಡುತ್ತಿವೆ. ಆದ್ರೆ ಪತಂಜಲಿಯದ್ದು ಕಡಿವೆ ವೆಚ್ಚ ನಿರ್ವಹಣಾ ತಂಡ. ಹೈಪ್ರೊಫೈಲ್ ಹೆಸರುಗಳಿಲ್ಲ, ಆಯುರ್ವೇದ ಮತ್ತು ದಾನದ ಮೂಲಕ ಸಾಮಾಜಿಕ ಪರಿಣಾಮ ಬೀರುವಂತೆ ಮಾಡಬಲ್ಲ ಪ್ರತಿಭಾವಂತ ಯುವಕರಿದ್ದಾರೆ. ಕಂಪನಿಯಲ್ಲಿ ಬಾಬಾ ರಾಮದೇವ್ ಅವರ ಶೇರುಗಳಿಲ್ಲ ಎನ್ನಲಾಗ್ತಿದೆ, ಯೋಗ ಮತ್ತು ಆಯುರ್ವೇದ ತಜ್ಞರಾಗಿರುವ ಆಚಾರ್ಯ ಬಾಲಕೃಷ್ಣ ಕಂಪನಿಯ ಸಹ ಸಂಸ್ಥಾಪಕರು ಜೊತೆಗೆ ಮ್ಯಾನೇಜಿಂಗ್ ಡೈರೆಕ್ಟರ್ ಕೂಡ ಹೌದು. ಸಿಇಓ ಆಗಿದ್ದ ಎಸ್‍ಕೆ ಪಾತ್ರಾ 2014ರಲ್ಲಿ ಕಂಪನಿಯನ್ನು ತ್ಯಜಿಸಿದ್ದಾರೆ.

ಉದ್ಯಮಕ್ಕೆ ಕೇವಲ ಎಂಬಿಎ ಪದವಿ ಇದ್ದರೆ ಸಾಲದು. ಬಿಲ್ ಗೇಟ್ಸ್, ಮಾರ್ಕ್ ಜುಕರ್‍ಬರ್ಗ್ ಅರ್ಧಕ್ಕೆ ಕಾಲೇಜು ಬಿಟ್ಟು ಉದ್ಯಮ ಆರಂಭಿಸಿದವರು. ಆದ್ರೆ ಮುಂದಿನ ಕೆಲ ವರ್ಷಗಳವರೆಗೆ ಪತಂಜಲಿ ಓಟಕ್ಕೆ ಬ್ರೇಕ್ ಬೀಳುವ ಸಾಧ್ಯತೆಗಳು ಕಡಿಮೆ.

ದೊಡ್ಡ ನಿರೀಕ್ಷೆಗಳು

ಈ ಬೆಳವಣಿಗೆಗೆ ರಾಮದೇವ್ ಅವರ ಜನಪ್ರಿಯತೆ ಹಾಗೂ ಅಭಿಮಾನಿಗಳ ಕೊಡುಗೆಯೇ ಕಾರಣ ಎನ್ನಬಹುದು. ``ಅವರು ಶ್ರೀಮಂತರ ಗುರುವಲ್ಲ, ಆದ್ರೂ ಶ್ರೀಮಂತರು ಪತಂಜಲಿ ಉತ್ಪನ್ನಗಳನ್ನು ಖರೀದಿಸುತ್ತಿದ್ದಾರೆ. ಆದ್ರೆ ಈಗ ನಿರೀಕ್ಷೆಗಳು ಹೆಚ್ಚಿವೆ, ಮ್ಯಾಗಿ ಕೊಟ್ಟಂತಹ ಹೊಡೆತವನ್ನು ಜನರು ತಡೆದುಕೊಳ್ಳುವುದಿಲ್ಲ'' ಅನ್ನೋದು ಅರವಿಂದ್ ಅವರ ಅಭಿಪ್ರಾಯ. ಆರ್ಟ್ ಆಪ್ ಲಿವಿಂಗ್‍ನ ಶ್ರೀ ಶ್ರೀ ರವಿಶಂಕರ್ ಗುರೂಜಿ ಕೂಡ ಇದೇ ರೀತಿಯ ಬ್ಯುಸಿನೆಸ್ ಮಾಡ್ತಿದ್ದು ಅದರೊಂದಿಗೆ ಪತಂಜಲಿಯನ್ನು ಹೋಲಿಕೆ ಮಾಡಲಾಗುತ್ತಿದೆ. 10 ವರ್ಷ ಪ್ರಾಯದ ಶ್ರೀ ಶ್ರೀ ಆಯುರ್ವೇದ ಕಂಪನಿ ಧಾನ್ಯಗಳು, ಆರೋಗ್ಯಕರ ಪಾನೀಯ ಹಾಗೂ ಪರ್ಸನಲ್ ಕೇರ್ ಐಟಂಗಳನ್ನು ಮಾರಾಟ ಮಾಡುತ್ತಿದೆ. ಆನ್‍ಲೈನ್ ವೇದಿಕೆ ಜೊತೆಗೆ 600 ಫ್ರಾಂಚೈಸಿ ಮಳಿಗೆಗಳನ್ನು ಹೊಂದಿದೆ. ಆದ್ರೆ ಯಾರು ಪತಂಜಲಿ ದಾಖಲೆಗಳನ್ನು ಮುರಿಯುತ್ತಾರೆ ಅನ್ನೋದನ್ನು ಕಾದು ನೋಡಬೇಕಿದೆ. ಯಾಕಂದ್ರೆ ಪತಂಜಲಿಯನ್ನು ಸದ್ಯ ಫ್ಲಿಪ್‍ಕಾರ್ಟ್ ಜೊತೆಗೆ ಹೋಲಿಕೆ ಮಾಡಬಹುದಷ್ಟೆ. ಪತಂಜಲಿ ಪ್ರಾರಂಭವಾಗಿ ವರ್ಷದ ಬಳಿಕ ವಹಿವಾಟು ಆರಂಭಿಸಿದ ಫ್ಲಿಪ್‍ಕಾರ್ಟ್ 2 ವರ್ಷಗಳ ಹಿಂದೆ 1 ಬಿಲಿಯನ್ ಡಾಲರ್ ಸಮಗ್ರ ವಾಣಿಜ್ಯ ಮೌಲ್ಯವನ್ನು ಹೊಂದಿತ್ತು.

ಆಧ್ಯಾತ್ಮಿಕ ಸಂಪತ್ತಿನಿಂದ ಹೆಸರು ಮಾಡಿದ್ದ ಬಾಬಾ ರಾಮದೇವ್ ಅವರನ್ನು ಒಬ್ಬ ಮಲ್ಟಿ ಬಿಲಿಯನ್ ಡಾಲರ್ ಉದ್ಯಮಿಯ ರೂಪದಲ್ಲಿ ಎಂಬಿಎ ವಿದ್ಯಾರ್ಥಿಗಳು ಅಧ್ಯಯನ ಮಾಡಬೇಕಾದ ದಿನಗಳು ದೂರವಿಲ್ಲ.

ಲೇಖಕರು: ಅಥಿರಾ ಎ.ನಾಯರ್

ಅನುವಾದಕರು: ಭಾರತಿ ಭಟ್ 

ಇದನ್ನು ಓದಿ:

1. ರೈತನ ಸಮಸ್ಯೆಗೆ ಸ್ಪಂದಿಸುವ ಜಿಕೆವಿಕೆಯ ಆ್ಯಪ್

2. ವೈದ್ಯರ ಮಾಹಿತಿಗಾಗಿ ಇದೆ ಪ್ರಾಕ್ಟೋ ಆ್ಯಪ್

3. ಇದು ಮಕ್ಕಳಿಂದ ಮಕ್ಳೇ ಮಾಡಿದ ಚಿತ್ತಾರದ ಶಾಲೆ