ಬೆಂಗಳೂರು ಟೆಕ್ಕಿಯ ವಿಭಿನ್ನ ಪ್ರಯತ್ನ ‘ದಿ ಕೋವಿಡ್ ಅನ್ಯಾಲಿಟಿಕ್ಸ್ʼ
ಕೇವಲ 3 ದಿನಗಳಲ್ಲಿ ಸಿದ್ಧವಾಗಿರುವ ‘ದಿ ಕೋವಿಡ್ ಅನ್ಯಾಲಿಟಿಕ್ಸ್ʼ ಡ್ಯಾಶ್ಬೋರ್ಡ್ ಕೊರೊನಾವೈರಸ್ ಬಗೆಗಿನ ಅಂಕಿ ಅಂಶಗಳನ್ನು ನೀಡುತ್ತದೆ.
ಕೊರೊನಾವೈರಸ್ ಲಾಕ್ಡೌನ್ ನಡುವೆ ಬೆಂಗಳೂರಿನಲ್ಲಿ ಟೆಕ್ಕಿಯಾಗಿ ಕಾರ್ಯ ನಿರ್ವಹಿಸುತ್ತಿರುವ ವಿಜಯ ಶರ್ಮಾ ‘ದಿ ಕೋವಿಡ್ ಅನ್ಯಾಲಿಟಿಕ್ಸ್ʼ ಎಂಬ ಡ್ಯಾಶ್ಬೋರ್ಡ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. ಇದು ಭಾರತದಲ್ಲಿ ಕೊರೊನಾವೈರಸ್ ಹೇಗೆ? ಎಲ್ಲೆಲ್ಲಿ ಹರಡುತ್ತಿದೆ? ಅದರ ಪ್ರಮಾಣವೆಷ್ಟು ಎಂಬೆಲ್ಲ ಮಾಹಿತಿಗಳನ್ನು ಒಂದೇ ಸೂರಿನಡಿ ಸರಳವಾಗಿ ಮತ್ತು ಚೊಕ್ಕವಾಗಿ ನೀಡುತ್ತದೆ.
ಕೊರೊನಾವೈರಸ್ ಬಗೆಗಿನ ಪರಿಹಾರಗಳಿಗಾಗಿ ಆಯೋಜಿಸಲಾಗಿದ್ದ ಹ್ಯಾಕಥಾನ್ಗಾಗಿ ಈ ಯೋಜನೆಯನ್ನು ಪ್ರಸ್ತಾಪಿಸಿದ್ದರು ವಿಜಯ. ಅಲ್ಲಿಂದ ಹಸಿರು ನಿಶಾನೆ ಸಿಕ್ಕೊಡನೆ ಕೇವಲ 3 ದಿನಗಳಲ್ಲಿ ಹಗಲು ರಾತ್ರಿಗಳನ್ನು ವ್ಯಯಿಸಿ ‘ದಿ ಕೋವಿಡ್ ಅನ್ಯಾಲಿಟಿಕ್ಸ್ʼ ಸಿದ್ಧಪಡಿಸಿದ್ದಾರೆ.
“ಇದರ ಮುಖ್ಯ ಉದ್ದೇಶ ಸಾರ್ವಜನಿಕರು ಮತ್ತು ಸಂಸ್ಥೆಗಳು ಹೇಗೆ ಕೊರೊನಾವೈರಸ್ ಹರಡುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕೆಂಬುದು,” ಎನ್ನುತ್ತಾರೆ ವಿಜಯ.
ಇದರ ಅವಶ್ಯಕತೆಯನ್ನು ಹೇಳಲು ಒಂದು ಸಣ್ಣ ಉದಾಹರಣೆಯನ್ನು ನೀಡಿದ ಅವರು, “ಕೊರೊನಾವೈರಸ್ ನಿಂದಾಗುವ ಸಾವಿನ ಪ್ರಮಾಣ ಹಿರಿಯರಲ್ಲಿ ಹೆಚ್ಚು, ಈ ದತ್ತಾಂಶದಿಂದ ಹೆಚ್ಚು ಹಿರಿಯರಿರುವ ಪ್ರದೇಶಗಳನ್ನು ಮುಂಚಿತವಾಗಿ ಐಸೋಲೇಷನ್ ಗೆ ಒಳಪಡಿಸಬಹುದು,” ಎನ್ನುತ್ತಾರೆ.
ಇವರ ಡ್ಯಾಶ್ಬೋರ್ಡ್ಗೆ ಹ್ಯಾಕಥಾನ್ನಲ್ಲಿ ಒಳ್ಳೆಯ ಪ್ರತಿಕ್ರಿಯೆ ಬಂದಿದ್ದು, ಸದ್ಯದಲ್ಲೆ ಇಟಲಿಯಲ್ಲೂ ಪ್ರಾರಂಭ ಮಾಡುವ ಕೆಲಸ ನಡೆಯುತ್ತಿದೆ.
ಇದಕ್ಕೆ ಬೇಕಾಗುವ ದತ್ತಾಂಶಗಳನ್ನು ಆಯಾ ರಾಜ್ಯದಲ್ಲಿ ಬರುವ ಲಘು ವಾರ್ತಾ ಪ್ರಕಟನೆಗಳು (ಬುಲೆಟಿನ್), ವಿಶ್ವ ಆರೋಗ್ಯ ಸಂಸ್ಥೆ ಮತ್ತು ಜಾಹ್ನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದಂತಹ ವಿಶ್ವಾಸಾರ್ಹ ಮೂಲಗಳಿಂದ ಪಡೆಯುತ್ತಾರೆ. ಈ ಎಲ್ಲ ದತ್ತಾಂಶಗಳನ್ನು ಅರಿತು, ತಮ್ಮ ಡ್ಯಾಶ್ಬೋರ್ಡ್ನಲ್ಲಿ ಅಳವಡಿಸಿಕೊಳ್ಳುವಂತೆ ಪ್ರೋಗ್ರಾಂ ಬರೆದಿದ್ದಾರೆ ವಿಜಯ. ಎಲ್ಲ ಮಾಹಿತಿಗಳನ್ನು ಕಲೆಹಾಕಿ, ವಿಂಗಡಿಸಿ ರೇಖಾಚಿತ್ರ ಸಹಿತ ವಿಶ್ಲೇಷಣೆಯನ್ನು ‘ದಿ ಕೋವಿಡ್ ಅನ್ಯಾಲಿಟಿಕ್ಸ್ʼ ಒದಗಿಸುತ್ತದೆ.
ಈ ಯೋಜನೆಯಲ್ಲಿ ತಮ್ಮ ಪತ್ನಿ ಅನ್ವಿಕಾ ಅವರ ಸಹಕಾರವು ಇದೆ ಎನ್ನುತ್ತಾರವರು.
ಈ ಡ್ಯಾಶ್ಬೋರ್ಡ್ ಕೊರೊನಾ ಮಹಾಮಾರಿಯ ದೈನಿಕ ಬೆಳವಣಿಗೆ, ದ್ವಿಗುಣಗೊಳ್ಳುತ್ತಿರುವ ಪ್ರಮಾಣ, ಈ ದಿನ ಜರುಗಬಲ್ಲಂತಹ ಪ್ರಕರಣಗಳ ಊಹೆ, ರಾಜ್ಯವಾರು ಸೋಂಕಿತರ ಪ್ರಮಾಣ, ಮರಣ ಪ್ರಮಾಣ ಮತ್ತು ಚೇತರಿಕೆ ಪ್ರಮಾಣದ ಪಟ್ಟಿಯನ್ನು ಒಳಗೊಂಡಿದೆ. ಅಲ್ಲದೆ ಮಹಾಮಾರಿಯ ಬೆಳವಣಿಗೆಯ ಗತಿ, ಹೆಚ್ಚು ಸೋಂಕಿತರಿರುವ ಪ್ರದೇಶ, ಚೇತರಿಕೆ ಪ್ರಮಾಣ ಮತ್ತು ಮರಣ ಪ್ರಮಾಣಗಳನ್ನು ವಿಶ್ಲೇಷಿಸಿ, ಒಳನೋಟಗಳನ್ನು ಒದಗಿಸುತ್ತದೆ.
ಪ್ರಸ್ತುತ ಆಂಗ್ಲ ಭಾಷೆಯಲ್ಲಿ ಮಾತ್ರ ಇರುವ ಈ ಡ್ಯಾಶ್ಬೋರ್ಡ್ ಅನ್ನು ಕನ್ನಡ, ತಮಿಳು ಮತ್ತು ಇತರ ಭಾರತೀಯ ಭಾಷೆಗಳಲ್ಲಿ ಅನುವಾದ ಮಾಡಲು ವಿಜಯ ಸ್ವಯಂ ಸೇವಕರನ್ನು ಹುಡುಕುತ್ತಿದ್ದಾರೆ. ಆಗ ಈ ಪ್ರಯತ್ನ ಇನ್ನೂ ಹೆಚ್ಚು ಜನರನ್ನು ತಲುಪುತ್ತದೆ ಎನ್ನುತ್ತಾರೆ.