ಎಕ್ಸ್‌-ರೇ ಬಳಸಿಕೊಂಡು ಕೊರೊನಾವೈರಸ್‌ ಸೋಂಕು ಪತ್ತೆ ಮಾಡುತ್ತೆ ಈ ವಿದ್ಯಾರ್ಥಿಗಳ ತಂತ್ರಾಂಶ

ಮುಂಬಯಿಯ ಧಿರುಭಾಯಿ ಅಂಬಾನಿ ಅಂತರಾಷ್ಟ್ರೀಯ ಶಾಲೆಯ 11ನೇ ತರಗತಿಯ ವಿದ್ಯಾರ್ಥಿಗಳಾದ ಸುಮೀತ್‌ ಮೊಟ್ವಾನಿ ಮತ್ತು ಸಿದ್ದಾರ್ಥ ಪಾರೆಖ್‌, ಮಷೀನ್‌ ಲರ್ನಿಂಗ್‌ ಮಾದರಿಯೊಂದನ್ನು ಅಭಿವೃದ್ಧಿಪಡಿಸಿದ್ದು, ಅದು ಎಕ್ಸ್‌-ರೇ ಮತ್ತು ಸಿಟಿ ಸ್ಕ್ಯಾನ್‌ ಬಳಸಿ ಕೊರೊನಾವೈರಸ್‌ ಸೋಂಕನ್ನು ಪತ್ತೆ ಹಚ್ಚುತ್ತದೆ.

ಎಕ್ಸ್‌-ರೇ ಬಳಸಿಕೊಂಡು ಕೊರೊನಾವೈರಸ್‌ ಸೋಂಕು ಪತ್ತೆ ಮಾಡುತ್ತೆ ಈ ವಿದ್ಯಾರ್ಥಿಗಳ ತಂತ್ರಾಂಶ

Thursday April 23, 2020,

2 min Read

ಭಾರತವು ಕೊರೊನಾವೈರಸ್‌ ವಿರುದ್ಧ ಹೋರಾಡಲು ಅನ್ವೇಷಣೆಗಳನ್ನು ಮಾಡುತ್ತಲಿದೆ. ಹಲವಾರು ಸಂಸ್ಥೆಗಳು ಸ್ವ್ಯಾಬ್‌ (ಗಂಟಲು ದ್ರವದ) ಮತ್ತು ರಕ್ತ ಪರೀಕ್ಷೆಗಳನ್ನೊಳಗೊಂಡ ಅಗ್ಗದ ಕೊರೊನಾವೈರಸ್‌ ಪರೀಕ್ಷಾ ಕಿಟ್‌ಗಳನ್ನು ತಯಾರಿಸಲು ಪ್ರಯತ್ನಿಸುತ್ತಿವೆ.


ಮುಂಬಯಿಯ ಧಿರುಭಾಯಿ ಅಂಬಾನಿ ಅಂತರಾಷ್ಟ್ರೀಯ ಶಾಲೆಯ 11ನೇ ತರಗತಿಯ ವಿದ್ಯಾರ್ಥಿಗಳಾದ ಸುಮೀತ್‌ ಮೊಟ್ವಾನಿ ಮತ್ತು ಸಿದ್ದಾರ್ಥ ಪಾರೆಖ್‌, ಮಷೀನ್‌ ಲರ್ನಿಂಗ್‌ ಮಾದರಿಯೊಂದನ್ನು ಅಭಿವೃದ್ಧಿಪಡಿಸಿದ್ದು, ಅದು ಎಕ್ಸ್‌-ರೇ ಮತ್ತು ಸಿಟಿ ಸ್ಕ್ಯಾನ್‌ ಬಳಸಿ ಕೊರೊನಾವೈರಸ್‌ ರೋಗವನ್ನು ಪತ್ತೆ ಹಚ್ಚುತ್ತದೆ ಎಂದು ಹೇಳಿಕೊಂಡಿದ್ದಾರೆ.


ಸಿದ್ದಾರ್ಥ ಪಾರೆಖ್‌ ಮತ್ತು ಸುಮೀತ್‌ ಮೊಟ್ವಾನಿ


ಯುವರ್‌ಸ್ಟೋರಿ ಯೊಂದಿಗೆ ಮಾತನಾಡಿದ ಸುಮೀತ್‌, ಕೊರೊನಾವೈರಸ್‌ ದೃಢ ಪಟ್ಟ ರೋಗಿಯ ಶ್ವಾಸಕೋಶದಲ್ಲಿ ಕೆಲವು ರಚನಾತ್ಮಕ ಬದಲಾವಣೆಗಳು ಕಂಡುಬಂದಿವೆ. “ಪ್ರಸ್ತುತ, ಸ್ವಾಬ್‌ (ಗಂಟಲು ದ್ರವ) ಪರೀಕ್ಷೆಯನ್ನು ಎಲ್ಲಡೆ ಬಳಸಲಾಗುತ್ತಿದ್ದು, ಅದು 80 ಪ್ರತಿಶತದಷ್ಟು ನಿಖರತೆಯನ್ನು ಹೊಂದಿದೆ. ಆದರೆ ಆ ಪರೀಕ್ಷೆಯು ದುಬಾರಿಯಾಗಿದ್ದು, ದೇಶದಾದ್ಯಂತ ಉಚಿತವಾಗಿ ನಡೆಸುವುದು ಸುಲಭವಲ್ಲ,” ಎಂದರು.


ಮುಂದುವರಿದು ಮಾತನಾಡಿದ ಸುಮೀತ್‌ “ಸಿದ್ದಾರ್ಥ ಮತ್ತು ನಾನು ಸೇರಿ ಮಷೀನ್‌ ಲರ್ನಿಂಗ್‌ ಮಾಡೆಲ್‌ ಒಂದನ್ನು ಅಭಿವೃದ್ಧಿಪಡಿಸಿದ್ದು, ಅದು ಕೊರೊನಾವೈರಸ್‌ ಸೋಂಕು ಇರುವ ಮತ್ತು ಇರದಿರುವ ರೋಗಿಗಳ ರೇಡಿಯೋಗ್ರಾಫಿಕ್‌ ಚಿತ್ರಗಳನ್ನು ವರ್ಗಿಕರಿಸುತ್ತದೆ ಮತ್ತು ಇದರ ನಿಖರತೆ 90 ಪ್ರತಿಶತದಷ್ಟಿದೆ,” ಎನ್ನುತ್ತಾರೆ.


ಇದು ಹೇಗೆ ಕೆಲಸ ಮಾಡುತ್ತದೆ?

“ಪಾಲಿಮರೇಸ್ ಚೈನ್ ರಿಯಾಕ್ಷನ್ (ಪಿಸಿಆರ್) ಬಳಸಿ ರೋಗನಿರ್ಣಯವನ್ನು ದೃಢಪಡಿಸಿದರೆ, ನ್ಯುಮೋನಿಯಾ ಪೀಡಿತ ರೋಗಿಗಳನ್ನು ಅವರ ಎದೆಯ ಎಕ್ಸ್‌-ರೇ ಮತ್ತು ಕಂಪ್ಯೂಟೆಡ್ ತಲಲೇಖನ (ಸಿಟಿ) ಚಿತ್ರಗಳ ಮೂಲಕ ಗುರುತಿಸಬಹುದು, ಈ ಮಾದರಿಯನ್ನು ಬರಿಗಣ್ಣಿನಿಂದ ಗುರುತಿಸುವುದು ತುಂಬಾ ಕಷ್ಟ. ಕರೋನವೈರಸ್ ರೋಗಿಗಳಲ್ಲಿ ದ್ವಿಪಕ್ಷೀಯ ಬಹು ಲೋಬ್ಯುಲರ್ ಮತ್ತು ಘನೀಕರಣಗೊಂಡಿರುವ ಉಪ-ವಿಭಾಗಗಳನ್ನು ಗಮನಿಸಬಹುದು,” ಎಂದು ಸುಮೀತ್ ಹೇಳುತ್ತಾರೆ.


ಸರಳವಾಗಿ ಹೇಳುವುದಾದರೆ, ಶ್ವಾಸಕೋಶದ ಕೆಲವು ಭಾಗಗಳಲ್ಲಿ ದ್ರವದ ಶೇಖರಣೆಯಾಗಿರುತ್ತದೆ, ಇದು ಕರೋನವೈರಸ್ ಸೋಂಕಿತ ರೋಗಿಗಳಲ್ಲಿ ಸ್ವಲ್ಪ ಉರಿಯೂತವನ್ನುಂಟು ಮಾಡುತ್ತದೆ.


ಈ ತಂತ್ರಜ್ಞಾನವನ್ನು ಹೇಗೆ ಬಳಸುವುದೆಂದು ಕೇಳಿದಾಗ, ಚಿತ್ರಗಳನ್ನು ಮಷೀನ್‌ ಲರ್ನಿಂಗ್‌ ಮಾದರಿಯಲ್ಲಿ ಅಪ್‌ಲೋಡ್‌ ಮಾಡಿದರೆ, ಕೆಲವೇ ಕ್ಷಣಗಳಲ್ಲಿ ಫಲಿತಾಂಶ ದೊರೆಯುತ್ತದೆ ಎಂದರು ಸುಮೀತ್.‌


ಅಂತರ್ಜಾಲದಲ್ಲಿ ಬೇಕಾದ ವಿವರಣೆಯನ್ನು ಪಡೆದ ನಂತರ ಇಬ್ಬರು ಈ ತಂತ್ರಾಂಶದ ಮೇಲೆ ಕೆಲಸ ಮಾಡಲು ಆರಂಭಿಸಿದರು. ಕೊರೊನಾವೈರಸ್‌ ರೋಗಿಯ ಎದೆಯ ಎಕ್ಸ್‌-ರೇ ಮತ್ತು ಸಾಮಾನ್ಯರ ಎಕ್ಸ್‌-ರೇ ಹೇಗೆ ವಿಭಿನ್ನವಾಗಿದೆ ಎಂದು ಉಲ್ಲೇಖಿಸಲಾಗಿರುವ ಲ್ಯಾನ್ಸೆಟ್‌ ಜರ್ನಲ್‌ ಅನ್ನು ಅಭ್ಯಸಿಸಿ, ಮೂಲಾಧಾರವಾಗಿಟ್ಟುಕೊಂಡು ಈ ಯೋಜನೆಯನ್ನು ಪ್ರಾರಂಭಿಸಿದೆ ಜೋಡಿ.


ಕೊರೊನಾವೈರಸ್‌ ಕುರಿತ ದತ್ತಾಂಶ ನೀಡುವ ಜಾಲತಾಣಗಳಲ್ಲಿ ಲಭ್ಯವಿರುವ 150 ಎಕ್ಸ್‌-ರೇಗಳಲ್ಲಿ ಮಷೀನ್‌ ಲರ್ನಿಂಗ್‌ ಕೋಡ್‌ಅನ್ನು ಪರೀಕ್ಷಿಸಿದ್ದಾಗಿ ಸುಮೀತ್‌ ಹೇಳಿಕೊಂಡಿದ್ದಾರೆ. ಅವರ ಪ್ರಕಾರ, ಈ ಪರೀಕ್ಷೆಯು ಕೊರೊನಾವೈರಸ್‌ ದೃಢೀಕೃತ ರೋಗಿಗಳನ್ನು ಪತ್ತೆಹಚ್ಚುವಲ್ಲಿ 90 ಪ್ರತಿಶತದಷ್ಟು ನಿಖರತೆಯನ್ನು ಹೊಂದಿದೆ. ‌


ಕೊರೊವೈರಸ್‌ ಯುದ್ಧ

ಇವರಿಬ್ಬರು ತಮ್ಮ ಪ್ರಸ್ತಾವನೆಯನ್ನು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಶನ್‌ನ (ಬಿಎಂಸಿ) ಅಧಿಕಾರಿಯೊಬ್ಬರಿಗೆ ಪ್ರಸ್ತುತ ಪಡಿಸಿದ್ದಾರೆ ಮತ್ತು ಮುಂದಿನ ವಾರದ ವೇಳೆಗೆ ಇನ್ನೂ ಕೆಲವರಿಗೆ ಪ್ರಸ್ತುತ ಪಡಿಸಲಿದ್ದಾರೆ ಎಂದು ಸುಮೀತ್ ಹೇಳಿದ್ದಾರೆ. ಯೋಜನೆಯಲ್ಲಿ ಭಾಗಿಯಾಗಿರುವ ವೈದ್ಯರು, ಆಸ್ಪತ್ರೆಗಳು ಮತ್ತು ಅಧಿಕಾರಿಗಳ ಬಗ್ಗೆ ವಿವರಗಳನ್ನು ಬಹಿರಂಗಪಡಿಸಲು ಸುಮೀತ್ ನಿರಾಕರಿಸಿದರು.


"ನಾವು ಮುಂದಿನ ವಾರದಲ್ಲಿ ಕೆಲವು ಆಸ್ಪತ್ರೆಗಳಲ್ಲಿ ನಮ್ಮ ಪ್ರಯೋಗವನ್ನು ಪ್ರಾರಂಭಿಸುತ್ತೇವೆ ಮತ್ತು ಪೂರಕ ಪರೀಕ್ಷೆಯನ್ನು ನಡೆಸುತ್ತೇವೆ. ಇದು ಉತ್ತಮವಾಗಿ ಕಾರ್ಯನಿರ್ವಹಿಸಿದರೆ, ಮುಂದಿನ ತಿಂಗಳೊಳಗೆ ಅದನ್ನು ವ್ಯಾಪಕ ಪ್ರಮಾಣದಲ್ಲಿ ಕಾರ್ಯಗತಗೊಳಿಸುವುದು ನಮ್ಮ ಗುರಿ,” ಎಂದು ಸುಮೀತ್ ಹೇಳಿದರು.


ಅನುಷ್ಠಾನದ ಬಗಗೆ ಮಾತನಾಡುತ್ತಾ ಸುಮೀತ್‌, ಪ್ರಸ್ತಾವನೆಯು ನಿಯಂತ್ರಕರ ಅನುಮೋದನೆಯನ್ನು ಪಡೆದ ನಂತರ, ಈ ಯೋಜನೆಯನ್ನು ಅಭಿವೃದ್ಧಿಗಾಗಿ ತೆರೆದಿಡಲಿದ್ದೇವೆ. ಅನುಮೋದನೆ ಎರಡು ವಾರಗಳಲ್ಲಿ ಸಿಗಬಹುದು. ಅದಲ್ಲದೆ ಈಗಾಗಲೇ ೩ ನವೋದ್ಯಮಗಳು ಅವರನ್ನು ಸಂಪರ್ಕಿಸಿವೆ ಎಂದರು.


ಮುಂದುವರೆದು ಮಾತನಾಡುತ್ತಾ ಸುಮೀತ್‌, ಕೊರೊನಾವೈರಸ್‌ ಪತ್ತೆಮಾಡಲು ರೇಡಿಯೋಗ್ರಾಫಿಕ್‌ ಚಿತ್ರಗಳನ್ನು ಬಳಸುವುದು ಹೊಸದೇನಲ್ಲ, ನಿಖರವಾದ ಪರೀಕ್ಷೆಗಾಗಿ ಯುಕೆಯ ವೈದ್ಯರು ಸಿಟಿ ಸ್ಕ್ಯಾನ್‌ ಮತ್ತು ಸ್ವ್ಯಾಬ್‌ ಪರೀಕ್ಷೆ ಎರಡನ್ನು ಬಳಸುತ್ತಿದ್ದಾರೆ ಎಂದರು.

“ಎಮ್‌ಎಲ್‌ ಮಾದರಿಯು ವೈದ್ಯರು ಪರೀಕ್ಷಾ ವರದಿಗಳನ್ನು ಓದುವಾಗ ಆಗಬಹುದಾದ ಮಾನವ ದೋಷದ ತಪ್ಪು ವಿಶ್ಲೇಷಣೆಯನ್ನು ತಡೆಯುತ್ತದೆ. ಜೊತೆಗೆ, ಎಮ್‌ಎಲ್‌ ಮಾದರಿಯು ಗಂಟೆಗೆ 3,000 ಚಿತ್ರಗಳನ್ನು ವಿಶ್ಲೇಷಿಸುವುದರಿಂದ, ಇದು ಪರೀಕ್ಷಾ ಸಮಯವನ್ನು ಗಣನೀಯವಾಗಿ ಉಳಿಸುತ್ತದೆ,” ಎನ್ನುತ್ತಾರೆ ಸುಮೀತ್.