ಆವೃತ್ತಿಗಳು
Kannada

ಕೇವಲ 10 ಸಾವಿರ ಮೂಲಧನದಿಂದ ಭಾರತದ ಅತಿ ದೊಡ್ಡ ಪವರ್ ಬ್ಯಾಕ್ ಅಪ್ ಸಂಸ್ಥೆ ನಿರ್ಮಿಸಿದ ವಾಣಿಜ್ಯೋದ್ಯಮಿ

ಟೀಮ್​ ವೈ.ಎಸ್​​.

YourStory Kannada
21st Sep 2015
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on

ನಾನು 12ನೇ ತರಗತಿಯಲ್ಲಿ ಓದುತ್ತಿರುವಾಗ ಡಾಕ್ಟರ್ ಆಗಬೇಕೆಂದು ಬಯಸಿದ್ದೆ ಅಂತ ಹೇಳಿದ ವ್ಯಕ್ತಿಯ ಹೆಸರೇ ಕುನ್ವಾರ್ ಸಚ್ದೇವ್.. ಇವರನ್ನು ಭಾರತದ ಇನ್ವರ್ಟರ್ ಮ್ಯಾನ್ ಅಂತಲೇ ಕರೆಯುತ್ತಾರೆ.. ಪೆನ್​ಗಳ ಮಾರಾಟ, ಸ್ಟೇಷನರಿಗಳಿಂದ ಹಿಡಿದು ಕಮ್ಯುನಿಕೇಶನ್ ಕಂಪೆನಿಗಳ ಸೇಲ್ಸ್ ಡಿಪಾರ್ಟ್​ಮೆಂಟ್​​ಗಳಲ್ಲಿ ಬೆವರು ಹರಿಸಿ ದುಡಿದು ಬಳಿಕ ಕ್ರಾಂತಿಕಾರಕ ಇನ್ವರ್ಟರ್ ಉದ್ಯಮ ಬೆಳೆಸುವವರೆಗೆ ಕುನ್ವಾರ್ ಸಚ್ದೇವ್​​ರ ವಾಣಿಜ್ಯೋದ್ಯಮದ ಪಯಣ ಯಶಸ್ವಿಯಾಗಿ ಸಾಗುತ್ತಲೇ ಇದೆ..

ದೆಹಲಿಯ ಮಹತ್ವಾಕಾಂಕ್ಷಿ ಪಂಜಾಬಿ ಮದ್ಯಮವರ್ಗದ ಕುಟುಂಬದಲ್ಲಿ ಜನಿಸಿದ ಕುನ್ವಾರ್ ತಮ್ಮ ಚಿಕ್ಕ ಮನೆಯಲ್ಲಿ ಪೋಷಕರು ಹಾಗೂ ಇಬ್ಬರು ಸಹೋದರರೊಂದಿಗೆ ಬಾಲ್ಯ ಕಳೆದರು.. ಅವರ ತಾಯಿ ಭಾರತೀಯ ರೈಲ್ವೇ ಇಲಾಖೆಯಲ್ಲಿ ಕ್ಲರ್ಕ್ ಆಗಿದ್ದರು.. ಅಮ್ಮ ಗೃಹಿಣಿ.. ಪ್ರಾಥಮಿಕ ಶಿಕ್ಷಣವನ್ನು ಖಾಸಗಿ ಶಾಲೆಯಲ್ಲಿ ಪೂರೈಸಿದ ಕುನ್ವಾರ್ ಬಳಿಕ ಹಣಕಾಸಿನ ತೊಂದರೆಯಿಂದ ಸರ್ಕಾರಿ ಶಾಲೆಯಲ್ಲಿ ಮುಂದಿನ ವಿದ್ಯಾಭ್ಯಾಸ ಪೂರೈಸಬೇಕಾಯ್ತು.. ಆದರೂ ಓದಿನಲ್ಲಿ ಮುಂದಿದ್ದ ಕುನ್ವಾರ್ ಮೆಡಿಕಲ್ ಪ್ರವೇಶ ಪರೀಕ್ಷೆಯ ಬೋರ್ಡ್ ಪರೀಕ್ಷೆಯಲ್ಲಿ ಶೇ 50 ಅಂಕಗಳಲ್ಲಿ 49 ಅಂಕಗಳಿಸಿದ್ರು.. 12ನೇ ತರಗತಿಯಲ್ಲಿ ಟಾಪರ್ ಆದರೂ ಪೂರ್ಣ 50 ಅಂಕ ಪಡೆಯಲಾಗಲಿಲ್ಲ ಅಂತ ಹೇಳ್ತಾರೆ ಕುನ್ವಾರ್..

ವಿಚಿತ್ರವೆಂದರೆ ಅವರಿಗೆ ಎಂಜಿನಿಯರಿಂಗ್ ಕಲಿಕೆಗೆ ಪ್ರವೇಶ ಲಭಿಸಿತ್ತು ಆದರೆ ಅವರ ಆಸಕ್ತಿ ಇದ್ದಿದ್ದು ಡಾಕ್ಟರ್ ಆಗಬೇಕು ಅನ್ನುವುದು.. ಅಂತಿಮವಾಗಿ ಆಸಕ್ತಿ ಇಲ್ಲದಿದ್ದರೂ ಕುನ್ವಾರ್ ಹಿಂದೂ ಕಾಲೇಜಿನಲ್ಲಿ ಸ್ಟಾಟಿಸ್ಟಿಕಲ್ ಹಾನರ್ಸ್ ಪದವಿ ಪಡೆದುಕೊಂಡರು.. ಶಿಕ್ಷಣದ ಬಳಿಕ ಅವರು ಕಾರ್ಯಕ್ರಮಗಳನ್ನು ಸಂಘಟಿಸುವ ಇವೆಂಟ್ ಆರ್ಗನೈಸರ್ ಆದರು..

ಹಗ್ಗ ಹಿಡಿದು ತಂತ್ರ ಕಲಿಕೆ:

ತಮ್ಮ ಕಾಲೇಜು ದಿನಗಳಿಂದಲೇ ಓದಿನ ಹವ್ಯಾಸ ಹೊಂದಿದ್ದ ಕುನ್ವಾರ್​ಗೆ ವ್ಯವಹಾರದ ಸಮಯದಲ್ಲಿ ಓದಿದ್ದ ವಿಷಯಗಳು ಪ್ರಯೋಜನಕ್ಕೆ ಬಂದಿತು.. ಹಾಗಾಗಿಯೇ ಅವರು ಇನ್ವರ್ಟರ್​​ ಉದ್ಯಮ ಆರಂಭಿಸಲು ಸಾಧ್ಯವಾಯ್ತು.. ತಮ್ಮ ಸಹೋದರರೊಂದಿಗೆ ಪೆನ್ ಹಾಗೂ ಸ್ಟೇಷನರಿ ವಸ್ತುಗಳ ಮಾರಾಟ ಶುರು ಮಾಡಿದ್ರು..

ಪೆನ್​ಗಳ ಮಾರಾಟ ಮಾಡುವುದು ನನ್ನ ಆಯ್ಕೆ ಆಗಿರಲಿಲ್ಲ.. ಆದರೆ ನಾನು 12ನೇ ತರಗತಿ ಓದುತ್ತಿದ್ದಾಗ ನನ್ನ ಅಣ್ಣಂದಿರು ಪೆನ್​ಗಳ ಮಾರಾಟದ ಬಿಸಿನೆಸ್ ಶುರು ಮಾಡಿದ್ದರು.. ನಾನು ಅವರಿಗೆ ಸಹಾಯವಾಗಲೆಂದು ಅವರ ಜೊತೆ ಮಾರಾಟಕ್ಕೆ ನಿಂತೆ.. ಕಾಲೇಜು ಮುಗಿದ ನಂತರ ಪೂರ್ಣಕಾಲಿಕವಾಗಿ ಪೆನ್ ಮಾರಾಟಕ್ಕೆ ಸಹಕರಿಸತೊಡಗಿದೆ ಅಂದಿದ್ದಾರೆ ಕುನ್ವಾರ್.. ದೆಹಲಿ ಯೂನಿವರ್ಸಿಟಿಯಲ್ಲಿ ಕಾನೂನು ಪದವಿ ಪಡೆದ ನಂತರ ಕುನ್ವಾರ್ ಕೇಬಲ್ ಕಮ್ಯೂನಿಕೇಶನ್ ಕಂಪೆನಿಯಲ್ಲ ತಮ್ಮ ಕೊನೆಯ ಉದ್ಯೋಗ ಮಾಡಿದ್ರು..

1988ರಲ್ಲಿ ಕೇಬಲ್ ಕಮ್ಯೂನಿಕೇಶನ್ ಕಂಪೆನಿಯಲ್ಲಿ ನನ್ನ ಮೊದಲ ಪೂರ್ಣಕಾಲಿಕ ಉದ್ಯೋಗದ ಅವಧಿಯಲ್ಲಿ ಬಿಸಿನೆಸ್​​ನ ಶಕ್ತಿ ಸಾಂದ್ರತೆಗಳ ಬಗ್ಗೆ ಸಾಕಷ್ಟು ಅರಿವು ಮೂಡಿಸಿತು.. ಹಾಗಾಗಿ ನಾನು ಉದ್ಯೋಗ ತೊರೆದು ದೆಹಲಿಯಲ್ಲಿ ಹೊಸದೊಂದು ಬಿಸಿನೆಸ್ ಆರಂಭಿಸಿದೆ.. ಅದರ ಹೆಸರೇ ಸು ಕಮ್ ಕಮ್ಯೂನಿಕೇಶನ್ ಸಿಸ್ಟಂ ಅನ್ನುವ ತಮ್ಮ ಉದ್ಯಮದ ಯಶೋಗಾಥೆಯ ಮಾಹಿತಿ ನೀಡಿದ್ದಾರೆ ಕುನ್ವಾರ್..

ಕುನ್ವಾರ್​ ಸಚ್​​ದೇವ್​​

ಕುನ್ವಾರ್​ ಸಚ್​​ದೇವ್​​


ಮಾರಾಟ ವಿಭಾಗದಲ್ಲಿ ಉತ್ತಮ ಪ್ರಾವಿಣ್ಯ ಹೊಂದಿದ್ದ ಕುನ್ವಾರ್, ತಂತ್ರಜ್ಞಾನ, ಉತ್ಪಾದನೆ ಹಾಗೂ ಇನ್ಸ್ಟಾಲೇಶನ್ ಪ್ರೋಸೆಸ್​​ನಂತಹ ಸಂಕೀರ್ಣ ಕೆಲಸಗಳ ಬಗ್ಗೆ ಏನೊಂದೂ ತಿಳುವಳಿಕೆ ಹೊಂದಿರಲಿಲ್ಲ.. ಹಾಗಾಗಿ ದೊಡ್ಡ ದೊಡ್ಡ ಹೋಟೇಲ್​ಗಳು ಹಾಗೂ ದೆಹಲಿಯ ಬಹುಮಹಡಿ ಕಟ್ಟಡಗಳಲ್ಲಿ ಸಿಎಟಿವಿ ಹಾಗೂ ಎಮ್ಎಟಿವಿ ಸಿಸ್ಟಂಗಳನ್ನು ಇನ್​ಸ್ಟಾ ಮಾಡಲು ಆರಂಭಿಸಿದ್ರು..

ಹಲವಾರು ಬಾರಿ ತೊಂದರೆಗಳನ್ನು ಅನುಭವಿಸಿದ ಬಳಿಕ ಕುನ್ವಾರ್ ಈ ತಂತ್ರಜ್ಞಾನದಲ್ಲಿ ಪಳಗಿದ ವ್ಯೆಕ್ತಿಗಳ ಜೊತೆ ಹಾಗೂ ಉಪಕರಣಗಳ ಇನ್​ಸ್ಟಾಲೇಷನ್​​​ ವಿಚಾರದಲ್ಲಿ ತನ್ಮಯರಾಗಿ ಕೆಲಸ ಮಾಡತೊಡಗಿದ್ರು.. ಇದರಿಂದ ಕೇವಲ ಅನುಭವ ಮಾತ್ರವಲ್ಲದೇ ತಂತ್ರಜ್ಞಾನ ಹಾಗೂ ಇನ್​ಸ್ಟಾಲೇಷನ್ ಮುಂತಾದ ವಿಚಾರಗಳಲ್ಲಿ ಅನೇಕ ವಿಷಯಗಳು ಅವರ ಅರಿವಿಗೆ ಬಂದಿತು..

ಈ ವಿಷಯದಲ್ಲಿ ನಾನು ಓದಿದ್ದು ಹಾಗೂ ತಿಳಿದಿಕೊಂಡಿದ್ದ ಆಧಾರದಲ್ಲಿ ನನ್ನದೊಂದು ತಂಡ ಕಟ್ಟಿಕೊಂಡು ತರಬೇತಿ ನೀಡತೊಡಗಿದೆ.. ಇದರಿಂದ ನಿಧಾನವಾಗಿ ನನ್ನ ಸಮಸ್ಯೆಗಳು ದೂರವಾಯ್ತು ಅಂತಾರೆ ಕುನ್ವಾರ್..

ಈ ಸಂದರ್ಭದಲ್ಲಿ ಪ್ರತಿಯೊಂದು ಮನೆಗಳಿಗೂ ಅಗತ್ಯವಾದ ಕೇಬಲ್ ಟಿವಿ ಬಿಸಿನೆಸ್ ಅವರಿಗೆ ವರವಾಗಿ ಪರಿಣಮಿಸಿತು.. ಇದರಿಂದ ಅವರಿಗೆ ಬಿಸಿನೆಸ್ ಆಳ ಅಗಲಗಳ ಪರಿಚಯಯದ ಜೊತೆ ಟೆಕ್ನಾಲಜಿ ವಿಚಾರದಲ್ಲಿ ಸಂಪೂರ್ಣ ಮಾಹಿತಿ ಲಭಿಸತೊಡಗಿತು.. ಇದರ ಜೊತೆಗೆ ಟಿವಿಯ ಉಪಕರಣಗಳಾದ ಆ್ಯಂಫಿಯರ್ ಹಾಗೂ ಮಾಡ್ಯುಲೇಟರ್​​ಗಳ ಉತ್ಪಾದನಾ ಅವಕಾಶವೂ ಅವರಿಗೆ ಲಭಿಸಿತು.. ಆ ಸಂದರ್ಭದಲ್ಲಿ ನನ್ನ ಬಹುದೊಡ್ಡ ಹೂಡಿಕೆಯಾದ ಸ್ಪೆಕ್ಟ್ರಮ್ ಅನಲೈಸರ್ ನನಗೆ ಉತ್ತಮ ಕ್ವಾಲಿಟಿಯ ತಂತ್ರಜ್ಞಾನ ನಿರ್ಮಿಸುವಲ್ಲಿ ಹೊಸ ಐಡಿಯಾ ನೀಡಿತು ಅಂದಿದ್ದಾರೆ ಕುನ್ವಾರ್..

ಸ್ಥಾಪಿತ ಉದ್ಯಮದಿಂದ ಅಸ್ತಿತ್ವದಲ್ಲಿರದ ಕ್ಷೇತ್ರದ ಕಡೆಗೆ:

ಕೇಬಲ್ ಟಿವಿ ಉದ್ಯಮದಲ್ಲಿ ಉತ್ತಮ ಫಲಿತಾಂಶ ಹೊಂದಿದ್ದ ಕುನ್ವಾರ್ ಇನ್ವರ್ಟರ್ ತಯಾರಿಕಾ ಬಿಸಿನೆಸ್ ಪ್ರಾರಂಭಿಸಿದ್ದು ಆಕಸ್ಮಿಕವಾಗಿ.. ಮನೆಯಲ್ಲಿನ ನಕಲಿ ಇನ್ವರ್ಟರ್ ಕೈಕೊಟ್ಟಾಗ ಭಾರತದಲ್ಲಿ ಪವರ್ ಬ್ಯಾಕ್ಅಪ್ ಬಗ್ಗೆ ಯೋಚಿಸಿದ ಕುನ್ವಾರ್ ಈ ಇನ್ವರ್ಟರ್ ಉದ್ಯಮ ಆರಂಭಿಸಿದ್ರು..

ಭಾರತದಲ್ಲಿ ವಿದ್ಯುತ್ ಅಭಾವ ಆಗಾಗ ತಲೆನೋವಾಗಿ ಸಮಸ್ಯೆ ಸೃಷ್ಟಿಸುತ್ತಿತ್ತು.. ಅದೊಂದು ದಿನ ಹತಾಶನಾದ ನಾನು ಈ ಸಮಸ್ಯೆಗೊಂದು ಅಂತ್ಯ ಕಂಡುಹಿಡಿಯಲೇಬೇಕೆಂದು ತೀರ್ಮಾನಿಸಿಬಿಟ್ಟೆ.. ಮದ್ಯಮ ಗುಣಮಟ್ಟದ ಪಿಸಿಬಿ ಬೋರ್ಡ್ ಪರೀಕ್ಷಿಸುವಂತೆ ನನ್ನ ಸು-ಕಮ್ ರಿಸರ್ಚ್ ಹಾಗೂ ಅನಾಲಿಸಿಸ್ ತಂಡಕ್ಕೆ ಹೇಳಿದೆ.. ಬಳಿಕ ಶೀಘ್ರದಲ್ಲೇ ಕೆಲವು ಕಾಲ ಇನ್ವರ್ಟ್​ಗಳ ಗುಣಮಟ್ಟದ ಸಮೀಕ್ಷೆ ನಡೆಸಿದ ನನ್ನ ತಂಡ ಮಾರುಕಟ್ಟೆಯಲ್ಲಿದ್ದ ಕಳಪೆ ಗುಣಮಟ್ಟದ ಇನ್ವರ್ಟರ್ಗಳ ಬಗ್ಗೆ ಮಾಹಿತಿ ನೀಡಿತು.. ಆ ಇನ್ವರ್ಟರ್ಗಳ ತಯಾರಿಕೆಯ ಹಿಂದೆ ಯಾವ ಸೂಕ್ತ ತಂತ್ರಜ್ಞಾನಗಳೂ ಇರಲಿಲ್ಲ.. 90ರ ದಶಕದಲ್ಲಿ ಆದ ಈ ವಿದ್ಯಮಾನ ನನ್ನ ಸು-ಕಮ್ ಇನ್ವರ್ಟರ್ ಕಂಪೆನಿಯ ಸ್ಥಾಪನೆಗೆ ಪ್ರೇರಣೆಯಾಯ್ತು ಅಂತ ಹೇಳಿದ್ದಾರೆ ಕುನ್ವಾರ್..

ಈ ಇನ್ವರ್ಟರ್ ತಯಾರಿಕಾ ತಂತ್ರಜ್ಞಾನ ಅರಿತುಕೊಳ್ಳಲು ಕುನ್ವಾರ್ ಕೆನಡಾಗೆ ತೆರಳಿದ್ದರು.. ಪ್ರಾಥಮಿಕ ಪ್ರಯೋಗಗಳ ನಂತರ ಅವರು 1998ರಲ್ಲಿ ಸು-ಕಮ್ ಪವರ್ ಸಿಸ್ಟಂ ಅನ್ನು ಲಾಂಚ್ ಮಾಡಿದ್ರು.. ಆ ಸಂದರ್ಭದಲ್ಲಿ ಕುನ್ವಾರ್ರ ಕೇಬಲ್ ಟಿವಿ ಬಿಸಿನೆಸ್ ಅತ್ಯುತ್ತಮ ಹಂತದಲ್ಲಿತ್ತು.. ಆದರೆ 2 ವರ್ಷಗಳ ನಂತರ ಇನ್ವರ್ಟರ್ ಉದ್ದಿಮೆಯನ್ನು ಬೂಸ್ಟ್ ಮಾಡಲು ತಮ್ಮ ಕೇಬಲ್ ಟಿವಿ ವಹಿವಾಟನ್ನು ಸಂಪೂರ್ಣವಾಗಿ ನಿಲ್ಲಿಸಿದರು.. ಅವರ ಕೇಬಲ್ ಟಿವಿ ಉದ್ಯಮದಲ್ಲಿದ್ದ ಎಲ್ಲಾ ಮಾನವ ಸಂಪನ್ಮೂಲಗಳ ಟೀಮ್ಗಳನ್ನು ಇನ್ವರ್ಟರ್ ಹಾಗೂ ಯುಪಿಎಸ್ ತಯಾರಿಕಾ ಘಟಕಕ್ಕೆ ವಿನಿಯೋಗಿಸಿದರು.. ಮೊದಲು ನೇರವಾಗಿ ಗ್ರಾಹಕರಿಗೆ ಇನ್ವರ್ಟರ್ ಮಾರಾಟ ಮಾಡುತ್ತಿದ್ದ ಈ ಸಂಸ್ಥೆ ನಿಧಾನವಾಗಿ ಡೀಲರ್ ಹಾಗೂ ಸಬ್ ಡೀಲರ್ಗಳ ಮೂಲಕ ಮಾರಾಟ ಶುರುಮಾಡಿತು.

ಕುನ್ವಾರ್ ಹೇಳುವಂತೆ ಅವರ ಸು-ಕುಮ್ ಇನ್ವರ್ಟರ್ ಮಾಕೆಟಿಂಗ್ ಮಾಡಿ ಗ್ರಾಹಕ ಜನರನ್ನು ಉತ್ಪನ್ನದತ್ತ ಆಕ ರ್ಷಿಸುವುದು ಅಷ್ಟು ಸುಲಭದ ವಿಚಾರವೇನು ಆಗಿರಲಿಲ್ಲ. ಬಹಳಷ್ಟು ಜನರಿಗೆ ಇನ್ವರ್ಟರ್ ಟೆಕ್ನಾಲಜಿಯ ಒಳಾರ್ಥವೇ ಗೊತ್ತಿರಲಿಲ್ಲ.. ಬಹುಪಾಲು ಜನರು ಮಾರುಕಟ್ಟೆಯಲ್ಲಿ ಸಿಗುವ ಯಾವುದಾದರೊಂದು ಕಳಪೆ ಇನ್ವರ್ಟರ್ ಖರೀದಿಸಿ ತೊಂದರೆಗೆ ಸಿಲುಕುತ್ತಿದ್ದರು.. ಆದರೆ ಸು-ಕಮ್ ಇನ್ವರ್ಟರ್ ಪ್ರಾಯೋಗಿಕ ಉಪಯೋಗದ ಯಶಸ್ಸಿನಿಂದ ಕ್ರಮೇಣ ಇನ್ವರ್ಟರ್ ಬಿಸಿನೆಸ್ ಪ್ರಗತಿಗೊಳ್ಳತೊಡಗಿತು.. ಕೆಲವು ಗ್ರಾಹಕರು ವಿತರಕರಾಗಿ ಸು-ಕಮ್ ಬ್ರಾಂಡಿನ ಪ್ರಮೋಷನ್​​ಗೆ ಮುಂದಾದ್ರು..

ಇನ್ನೋವೇಶನ್ ಹಾಗೂ ಗ್ರಾಹಕರ ಮನವೊಲಿಕೆ:

ನಿರಂತರವಾಗಿ ಹೊಸ ಹೊಸ ಪ್ರಯೋಗಗಳನ್ನು ಮಾಡುವ ಮೂಲಕ ಇನ್ವರ್ಟರ್ ಟೆಕ್ನಾಲಜಿ ಅಭಿವೃದ್ಧಿಪಡಿಸಿದ್ದರಿಂದಲೇ ಮಾರುಕಟ್ಟೆಯಲ್ಲಿ ಈವರೆಗೆ ಉತ್ತಮ ಗುಣಮಟ್ಟ ಕಾಪಾಡಿಕೊಳ್ಳಲು ಸಾಧ್ಯವಾಗಿದೆ ಅಂತ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ ಕುನ್ವಾರ್..

ಅವರ ಇನ್ನೋವೇಶನ್​​ಗೆ ಉತ್ತಮ ಉದಾಹರಣೆಯೆಂದರೆ ಮನೆಗಳಲ್ಲಿ ಮೊದಮೊದಲು ಜನರೇಟರ್ ಮಾತ್ರವನ್ನು ಉಪಯೋಗಿಸಲಾಗುತ್ತಿತ್ತು.. ಬಳಿಕ ಜನರೇಟರ್​ನಿಂದ ಏರ್​ಕಂಡೀಷನರ್ ರನ್ ಮಾಡುವ ತಂತ್ರಜ್ಞಾನ ಅಭಿವೃದ್ಧಿಪಡಿಸಲಾಯ್ತು.. ಈಗ ಕೈಗಾರಿಕಾ ಅಗತ್ಯತೆಗಳಿಗೆ ಬೇಕಾಗಿರುವಂತೆ ಜನರೇಟರ್ ಹಾಗೂ ಪವರ್ ಬ್ಯಾಕ್ಅಪ್ ಸಹ ನಿರ್ಮಾಣವಾಗಿದೆ..

2000ರಲ್ಲಿ ಸು-ಕಮ್ ವಿಶ್ವದಲ್ಲೇ ಮೊದಲ ಪ್ಲಾಸ್ಟಿಕ್ ಬಾಡಿಯಿಂದ ನಿರ್ಮಾಣವಾದ ಇನ್ವರ್ಟರ್ ನಿರ್ಮಿಸಿ ಹೊಸದೊಂದು ಮೈಲಿಗಲ್ಲು ಸ್ಥಾಪಿಸಿತು.. ಇನ್ವರ್ಟರ್ ಒಂದರಿಂದ ಮಗುವೊಂದಕ್ಕೆ ಕರೆಂಟ್ ಶಾಕ್ ಹೊಡೆದಿತ್ತು ಆ ಘಟನೆಯೇ ಕುನ್ವಾರ್​ಗೆ ಎಲೆಕ್ಟ್ರಿಕಲ್ ಕನ್ವರ್ಟರ್​​ಗೆ ಪ್ಲಾಸ್ಟಿಕ್ ಕವಚ ಹೊದೆಸುವ ಐಡಿಯಾ ನೀಡಿತು.. ಇದರಿಂದ ಮಾರುಕಟ್ಟೆಯಲ್ಲಿ ಪ್ಲಾಸ್ಟಿಕ್ ಹೊರಕವಚದ ಇನ್ವರ್ಟರ್​​ಗಳು ಜನರ ಕೊಳ್ಳುವ ಆಸಕ್ತಿ ಹೆಚ್ಚಿಸಿತು..

ಕುನ್ವಾರ್​ ಸಚ್​​ದೇವ್​​

ಕುನ್ವಾರ್​ ಸಚ್​​ದೇವ್​​


ಇನ್ವರ್ಟರ್​​ನಲ್ಲಿ ಅತಿ ಹೆಚ್ಚು ಟೆಂಪರೇಚರ್ ತಡೆದುಕೊಳ್ಳುವ ಸಾಮರ್ಥ್ಯವಿರುವ ಪ್ಲಾಸ್ಟಿಕ್ ತಯಾರಿಸಿಕೊಡುವಂತೆ ಕುನ್ವಾರ್ ಜಿಇ ಪ್ಲಾಸ್ಟಿಕ್ ಸಂಸ್ಥೆಯ ಮನವೊಲಿಸಿದರು.. ಆ ಬಳಿಕ ತಯಾರಾದ ಪ್ಲಾಸ್ಟಿಕ್ ಕವಚದ ಇನ್ವರ್ಟರ್​ಗಳು ಈ ದಶಕದ ಇನ್ನೋವೇಷನ್ ಅನ್ನುವ ಕೀರ್ತಿಗೆ ಪಾತ್ರವಾಯ್ತು.. 2 ವರ್ಷಗಳ ನಂತರ ಅದೇ ತಂಡ ಭಾರತದ ಮೊದಲ ಸೈನ್ ವೇವ್ ಇನ್ವರ್ಟರ್ ಸಿದ್ಧಪಡಿಸಿತು.. ಇದು ಫ್ಯಾನ್​ನಿಂದ ಬರುತ್ತಿದ್ದ ಶಬ್ಧ ಹಾಗೂ ಬೆಳಕನ್ನು ನಿಯಂತ್ರಿಸಿ ಮತ್ತೊಂದು ಹೊಸ ಮಾಡೆಲ್ ಇನ್ವರ್ಟರ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತು.. ಈ ಮೂಲಕ ಸು-ಕಮ್ ಇನ್ವರ್ಟರ್ ಮಾರುಕಟ್ಟೆಯ ಲೀಡರ್ ಅನ್ನಿಸಿಕೊಂಡಿತು.. ಕುನ್ವಾರ್ ಹೇಳುವಂತೆ ಇನ್ನೋವೇಷನ್ ಹಾಗೂ ಹೊಸ ಹೊಸ ಆಲೋಚನೆಗಳೇ ಸು-ಕಮ್ ಕಂಪೆನಿಯ ಪವರ್ ಬ್ಯಾಕ್ಅಪ್​​ನ ಯುಪಿಎಸ್..

ಜನತೆ ಹಾಗೂ ಹೂಡಿಕೆ- 90ರ ದಶಕದ ಕಂಪೆನಿ ಆರಂಭದಿಂದ ಎದುರಿಸಿದ ಸವಾಲುಗಳು:

ಸು-ಕಮ್ ಸ್ಥಾಪನೆಯ ಸಂದರ್ಭದಲ್ಲಿ ಹಾಗೂ ಇನ್ವರ್ಟರ್ ತಯಾರಿಕೆಯ ಪ್ರತೀ ಹಂತದಲ್ಲೂ ಕುನ್ವಾರ್ ಎದುರಿಸಿದ ಅತಿ ದೊಡ್ಡ ಸವಾಲು ಅತ್ಯುತ್ತಮ ತಂತ್ರಜ್ಞಾನಿಗಳನ್ನು ಹುಡುಕಿ ನೇಮಿಸಿಕೊಳ್ಳುವುದು.. ಆಗ ಇನ್ವರ್ಟರ್ ತಂತ್ರಜ್ಞಾನದ ಆಳ ಅಗಲ ತಿಳಿದಿರುವ ವೃತ್ತಿಪರ ಪ್ರವೀಣರನ್ನೇ ನೇಮಿಸಿಕೊಂಡು ಕೆಲಸ ನಿರ್ವಹಿಸಬೇಕಿತ್ತು.. ಆದರೆ ಅಂತಹ ಎಕ್ಸ್​​ಪರ್ಟ್​ಗಳು ದೊಡ್ಡ ದೊಡ್ಡ ಕಂಪೆನಿಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.. ಹಾಗಾಗಿ ಮೊದಲು ಸು-ಕಮ್ ಸಂಸ್ಥೆ ಕೇವಲ ಐವರು ಸಮರ್ಥ ವರ್ಕ್ಫೋರ್ಸ್​ ಹೊಂದಿತ್ತು.. ಅದರಲ್ಲಿ ಒಬ್ಬ ಪಾರ್ಟ್ ಟೈಂ ಫ್ಲಂಬರ್ ಸಹ ಇದ್ದರು.. ಕುನ್ವಾರ್​ಗೆ ಎದುರಾದ ಮುಂದಿನ ಸವಾಲು ಮಾನವ ಸಂಪನ್ಮೂಲಗಳಿಗೆ ಟೆಕ್ನಾಲಜಿಯ ತರಬೇತಿ ನೀಡಿ ನಿರ್ವಹಣೆ ಮಾಡುವುದು.. ಹಿಂದೆ ಕೆಲಸ ಮಾಡುತ್ತಿದ್ದ ಕಂಪೆನಿಯಲ್ಲಿ ವಿವಿಧ ಮೈಂಡ್ಸೆಟ್ ಜನರೊಂದಿಗೆ ಕೆಲಸ ಮಾಡಿದ್ದ ಅನುಭವ ಹೊಂದಿದ್ದ ಕುನ್ವಾರ್​ಗೆ ಸು-ಕಮ್​ನಲ್ಲಿ ಕೆಲಸಗಾರರ ನಿರ್ವಹಣೆ ಅಷ್ಟು ಸಮಸ್ಯೆಯಾಗಲಿಲ್ಲ..

ಈಗ ಸು-ಕಮ್ ಸಂಸ್ಥೆ ಉತ್ತಮ ಮ್ಯಾನ್ ಪವರ್ ಹಾಗೂ ಅತ್ಯುತ್ತಮ ಎಕ್ಸ್​​ಪರ್ಟ್​ ಕೆಲಸಗಾರರನ್ನು ಹೊಂದಿದ್ದು ಸು-ಕಮ್ ಸಾಧನೆ ತೃಪ್ತಿ ತಂದಿದೆ ಅಂತ ಖುಷಿಯಿಂದ ಹೇಳಿಕೊಳ್ಳುವ ಕುನ್ವಾರ್, ಸು-ಕಮ್ ಸಾಧನೆಯಿಂದ ಪ್ರೇರಿತರಾಗಿ ಅಮೇರಿಕಾ ಹಾಗೂ ಇಂಗ್ಲೆಂಡ್ನ ವಿದೇಶಿ ಕಂಪನಿಯಲ್ಲಿ ದೊಡ್ಡ ಹುದ್ದೆಯಲ್ಲಿ ಕೆಲಸ ಮಾಡುತ್ತಿರುವವರು ತಮ್ಮ ಕೆಲಸ ತೊರೆದು ಸು-ಕಮ್ ಕಡೆಗೆ ಮುಖ ಮಾಡಿದ್ದಾರೆ ಅಂದಿದ್ದಾರೆ.. ಜೊತೆಗೆ ಭಾರತದಲ್ಲೂ ಸರ್ಕಾರಿ ಕೆಲಸದಲ್ಲಿರುವ ವೃತ್ತಿಪರ ಎಂಜಿನಿಯರ್ಗಳು ಸು-ಕಮ್ ಸೇರುವ ಕಡೆಗೆ ಒಲವು ಹೊಂದಿದ್ದಾರೆ ಅಂತ ಗರ್ವದಿಂದ ಹೇಳಿಕೊಂಡಿದ್ದಾರೆ..

90ರ ದಶಕದಲ್ಲಿ ಕುನ್ವಾರ್ಗೆ ಬಿಸಿನೆಸ್ ಆರಂಭಿಸಲು ಬೇಕಿದ್ದ ಮೂಲಧನ ಹೂಡಿಕೆಗೆ ಅಡ ಇಡಲು ಯಾವುದೇ ವೈಯಕ್ತಿಕ ಆಸ್ತಿಯಾಗಲಿ, ಶ್ರೀಮಂತ ಪೋಷಕರ ಮಾರ್ಗದರ್ಶನವಾಗಲಿ ಇರಲಿಲ್ಲ.. ಆದರೆ ಕೇವಲ ಏನಾದರೂ ಸಾಧಿಸಬೇಕೆಂಬ ಹಂಬಲ ಮಾತ್ರದಿಂದ ಕುನ್ವಾರ್ ತಮ್ಮ ಸ್ವಂತ ಬಲದಿಂದ ಹಾಗೂ ಸ್ನೇಹಿತರಿಂದ ಹಣ ಪಡೆದು ಹೂಡಿಕೆ ಮಾಡಿ ಇಂದು ಆಗಸದೆತ್ತರಕ್ಕೆ ಸು-ಕಮ್ ಸಂಸ್ಥೆಯನ್ನು ಬೆಳೆಸಿದ್ದಾರೆ.. 2006ರಲ್ಲಿ ರಿಲಾಯನ್ಸ್ ಪವರ್ ಫಂಡ್ ಸಹ ಸು-ಕಮ್ ವೆಂಚರ್ಗೆ ಹೂಡಿಕೆ ಮಾಡುವ ಮೂಲಕ ಕುನ್ವಾರ್ರ ಶ್ರಮಕ್ಕೆ ಮೌಲ್ಯ ಒದಗಿಸಿದೆ..

ಇಲ್ಲಿಯವರೆಗಿನ ಪಯಣ:

ಕುನ್ವಾರ್ ಹೇಳಿಕೊಳ್ಳುವಂತೆ ಸು-ಕಮ್ ಸಂಸ್ಥೆಯ ಇಲ್ಲಿಯವರೆಗಿನ ಪಯಣವನ್ನು ಕೇವಲ ಎರಡು ಪದಗಳಲ್ಲಿ ವರ್ಣಿಸುವುದಾದರೆ ಗ್ರೇಟ್ ಹಾಗೂ ಇನ್​ಕ್ರೆಡಿಬಲ್​​.. ಸು-ಕಮ್ ಸ್ಥಾಪಿಸುವ ಮೂಲಕ ಸಮರ್ಥ ನಿರ್ವಹಣೆ ಕಲಿಯುವ ಅವಕಾಶ ಒದಗಿಬಂದಿತು.. ಜೊತೆಗೆ ಈಗ 90 ರಾಷ್ಟ್ರಗಳಲ್ಲಿ ಸೇವೆ ಒದಗಿಸುತ್ತಿರುವ ಸು-ಕಮ್​​ನಂತಹ ದೊಡ್ಡ ಸಂಸ್ಥೆಯನ್ನು ಪ್ರಾರಂಭಿಸುವ ಹಿಂದೆ ಸಾಕಷ್ಟು ಪರಿಶ್ರಮ ಹಾಗೂ ಸಂಕಷ್ಟಗಳಿರುತ್ತವೆ.. ಅವೆಲ್ಲವುಗಳಿಂದಲೂ ಒಂದೊಂದು ಪಾಠ ಕಲಿತಿದ್ದಾಗಿ ಕುನ್ವಾರ್ ಹೇಳಿಕೊಂಡಿದ್ದಾರೆ.. ತಾವು ಪ್ರಯಾಣದಲ್ಲಿ ಎದುರಿಸಿದ ಸವಾಲುಗಳೇ ತಮ್ಮ ಯಶಕ್ಕೆ ದೊರೆತ ಅತ್ಯುತ್ತಮ ಪ್ರಶಸ್ತಿ ಅಂತ ಹೇಳಿದ್ದಾರೆ ಕುನ್ವಾರ್..

ಇನ್ನು ಭಾರತದಲ್ಲಿ ಸೋಲಾರ್ ಪವರ್ ಎನರ್ಜಿಯ ಕ್ರಾಂತಿ ಸಾಧಿಸಬೇಕು ಅನ್ನುವ ಉದ್ದೇಶ ಹೊಂದಿರುವ ಕುನ್ವಾರ್ ಸೋಲಾರ್ ಪವರ್ ಯುನಿಟ್ ಸ್ಥಾಪನೆಯ ಚಿಂತನೆ ನಡೆಸಿದ್ದಾರೆ.. ಭಾರತದಲ್ಲಿ ಸೋಲಾರ್ ಎನರ್ಜಿ ಸೆಕ್ಟರ್​​ಗೆ ಬಹುಬೇಡಿಕೆ ಬರಲಿದ್ದು ಈ ನಿಟ್ಟಿನಲ್ಲಿ ತಮ್ಮ ಬಿಸಿನೆಸ್ ವಿಸ್ತರಿಸಬೇಕು ಅನ್ನುವುದು ಕುನ್ವಾರ್​​ ಗುರಿಯಾಗಿದೆ.. ಈಗಾಗಲೆ ಹೈದರಾಬಾದ್ ಮೂಲದ ಸಂಸ್ಥೆಯೊಂದಕ್ಕೆ ಸೋಲಾರ್ ಎಲ್ಇಡಿ ಲೈಟ್ ಉತ್ಪನ್ನದ ತಯಾರಿಕೆಗೆ ಕುನ್ವಾರ ಹಣವನ್ನೂ ಹೂಡಿಕೆ ಮಾಡಿದ್ದಾರೆ..… ಮುಂಬರುವ ದಿನಗಳಲ್ಲಿ ಭಾರತದ ಇನ್ವರ್ಟರ್ ಮ್ಯಾನ್ ಕುನ್ವಾರ್ ಸೋಲಾರ್ ಪವರ್ ಮ್ಯಾನ್ ಆದರೂ ಆಶ್ಚರ್ಯ ಏನಿಲ್ಲ.

 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on
Report an issue
Authors

Related Tags