ಪೆನ್ಸಿಲ್ ಸಿಪ್ಪೆ ಹಾಗೂ ಜೇಡಿ ಮಣ್ಣಿನಿಂದ ಪೆನ್ ತಯಾರಿಸಿ ಪ್ರಶಸ್ತಿ ಪಡೆದ ಬೆಂಗಳೂರಿನ 9ರ ಬಾಲಕ
ಬೆಂಗಳೂರಿನ ಒಂಬತ್ತು ವರ್ಷದ ಶರನವ್ಯ ಎಸ್ ಶ್ರೀಶ್ ಪ್ಲಾಸ್ಟಿಕ್ ಮುಕ್ತ ಜೀವನ ಮತ್ತು ತ್ಯಾಜ್ಯ ಮರುಬಳಕೆಯನ್ನು ಉತ್ತೇಜಿಸಲು ಪರಿಸರ ಸ್ನೇಹಿ ಪೆನ್ ತಯಾರಿಸಿದ್ದಾನೆ.
ಸಾಮಾನ್ಯವಾಗಿ ಎಲ್ಲರು ಪ್ಲಾಸ್ಟಿಕ್ ಪೆನ್‌ಗಳನ್ನು ಬಳಸುತ್ತಾರೆ. ಎಷ್ಟೇ ಪ್ಲಾಸ್ಟಿಕ್ ವಸ್ತುಗಳನ್ನು ಬಳಸುವುದನ್ನು ತಡೆಯಬೇಕು ಎಂದರು ಆಗದೆ, ಪ್ಲಾಸ್ಟಿಕ್ ವಸ್ತುಗಳ ಬಳಕೆ ಜನರ ಜೀವನದಲ್ಲಿ ಗೊತ್ತಿಲ್ಲದಂತೆ ಬೆರೆತುಹೋಗಿದೆ. ಅದನ್ನು ತಡೆಯಲು ಇಲ್ಲೊಬ್ಬ ಪೋರ ಪೆನ್ಸಿಲ್ ಕೆತ್ತಿದಾಗ ಬರುವ ಸಿಪ್ಪೆ ಹಾಗೂ ಜೇಡಿ ಮಣ್ಣನ್ನು ಬಳಸಿ ಪೆನ್ ತಯಾರಿಸಿದ್ದಾನೆ.
ಪ್ಲಾಸ್ಟಿಕ್ ಮುಕ್ತ ಜೀವನ ಮತ್ತು ತ್ಯಾಜ್ಯ ಮರುಬಳಕೆಯನ್ನು ಉತ್ತೇಜಿಸಲು ಈ ಪೆನ್ನು ತಯಾರಿಸಿದ್ದು ಇದರ ಹೊರಗಿನ ಭಾಗವನ್ನು ಜೇಡಿಮಣ್ಣು ಮತ್ತು ಪೆನ್ಸಿಲ್ ಸಿಪ್ಪೆಗಳಿಂದ ಮಾಡಲಾಗಿದೆ. ನವದೆಹಲಿಯಲ್ಲಿ ನಡೆದ ಮಕ್ಕಳ ಹವಾಮಾನ ಸಮ್ಮೇಳನದಲ್ಲಿ ಟಿಆರ್‌ಐಒ ವರ್ಲ್ಡ್ ಶಾಲೆಯ 4 ನೇ ತರಗತಿ ವಿದ್ಯಾರ್ಥಿ ಶರನವ್ಯ ತನ್ನ ಆವಿಷ್ಕಾರವನ್ನು ಮಂಡಿಸಿದ್ದ. ಇದಕ್ಕಾಗಿ ಶರನವ್ಯನಿಗೆ ಆವಿಷ್ಕಾರ ಮ್ಯಾರಥಾನ್ ಪ್ರಶಸ್ತಿ ಲಭಿಸಿದೆ.
ಎಡೆಕ್ಸ್ ಲೈವ್ ನೊಂದಿಗೆ ಶರನವ್ಯ ಅವರ ತಂದೆ ಶಾಂತನು ಮಾತನಾಡುತ್ತಾ,
"ಜೇಡಿಮಣ್ಣು, ಅಂಟು ಮತ್ತು ಲೋಳೆ ಬಳಸಿ ಕ್ಲೇವುಡ್ ಎಂದು ಕರೆಯುವ ಮೂಲಮಾದರಿಯನ್ನು ತಯಾರಿಸಿದನು. ಪೆನ್ಸಿಲ್ ಸಿಪ್ಪೆಗಳನ್ನು ಮರುಬಳಕೆ ಮಾಡುವ ಮೂಲಕ ಮತ್ತು ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವ ಮೂಲಕ ಈ ಯೋಜನೆಯು ಪರಿಸರದ ಸುಧಾರಣೆಗೆ ಸಹಕಾರಿಯಾಗಲಿದೆ," ಎಂದರು.
ಶರನವ್ಯ ಅವನ ತರಗತಿಯಲ್ಲಿ ಅನೇಕ ಪ್ಲಾಸ್ಟಿಕ್ ಪೆನ್ಸಿಲ್ ಶಾರ್ಪನರ್ಗಳನ್ನು ಬಳಸಲಾಗುತ್ತಿದೆ ಎಂದು ಗಮನಿಸಿದಾಗ ಇಂತಹದೊಂದು ವಿಶಿಷ್ಟ ಪೆನ್ ತಯಾರಿಸುವ ಆಲೋಚನೆ ಬಂದಿದೆ. ನಂತರ ಶಾಲೆಯಲ್ಲಿಯ ಪೆನ್ಸಿಲ್ ತ್ಯಾಜ್ಯವನ್ನು ಸಂಗ್ರಹಿಸಿ ಅದನ್ನು ಗೊಬ್ಬರವಾಗಿಸಿ ಜೇಡಿಮಣ್ಣು ಹಾಗೂ ಅಂಟಿನಿಂದ ಪೆನ್ ತಯಾರಿಸಲಾಯಿತು.
“ನಾನು ಪೆನ್ಸಿಲ್ ಸಿಪ್ಪೆಗಳ ಸಂಗ್ರಹ ಪೆಟ್ಟಿಗೆಯನ್ನು ತಯಾರಿಸಿ ಅದನ್ನು ನನ್ನ ಶಾಲೆಯ 1 ನೇ ತರಗತಿಯಲ್ಲಿ ಸ್ಥಾಪಿಸಿದೆ. ಅಂತರನಿರ್ಮಿತ ಸ್ಟೀಲ್ ಪೆನ್ಸಿಲ್ ಶಾರ್ಪನರ್ಗಳನ್ನು ಹೊಂದಿರುವ ಈ ಪೆಟ್ಟಿಗೆಗಳನ್ನು ನಾವು ಸ್ಥಾಪಿಸಿದರೆ, ನಾವು ಪ್ಲಾಸ್ಟಿಕ್ ಕಟ್ಟರ್‌ಗಳ ಬಳಕೆಯನ್ನು ಕಡಿಮೆ ಮಾಡಬಹುದು ಮತ್ತು ಪೆನ್ಸಿಲ್ ಸಿಪ್ಪೆಗಳನ್ನು ಸಂಗ್ರಹಿಸಬಹುದು,” ಎಂದು ಶರನವ್ಯ ಹೇಳುತ್ತಾನೆ, ವರದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್.
"ಅವನು ವಿಭಿನ್ನ ಆಲೋಚನೆಗಳೊಂದಿಗೆ ನಮ್ಮ ಬಳಿಗೆ ಬರುತ್ತಾನೆ. ನಾವು ಅವನಿಗೆ ಸಾಧ್ಯವಾದಷ್ಟು ಸಹಾಯ ಮಾಡಲು ಪ್ರಯತ್ನಿಸುತ್ತೇವೆ. ಕೆಲವೊಮ್ಮೆ ಅವನು ಮಾತನಾಡುವ ವಿಷಯಗಳ ಬಗ್ಗೆ ನನಗೆ ಹೆಚ್ಚು ತಿಳಿದಿರುವುದಿಲ್ಲ ಆದರೆ ಅವನು ಹೊಸ ವಿಷಯಗಳನ್ನು ರಚಿಸುವುದನ್ನು ನೋಡಲು ನಾನು ಇಷ್ಟಪಡುತ್ತೇನೆ,” ಎಂದು ನಿರ್ವಹಣಾ ವೃತ್ತಿಪರರಾಗಿರುವ ಶರನವ್ಯ ಅವರ ತಂದೆ ಶಾಂತನು ಹೇಳುತ್ತಾರೆ.
ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೇಸ್‌ಬುಕ್ ಹಾಗೂ ಟ್ವಿಟರ್ ನಲ್ಲಿ ಫಾಲೊ ಮಾಡಿ.