ಹೊಟ್ಟೆ ಹುಣ್ಣಾಗಿಸುವಂತೆ ನಗಿಸುವ"ಕಲರ್​ಕಾಗೆ"

ಟೀಮ್​ ವೈ.ಎಸ್​.

ಹೊಟ್ಟೆ ಹುಣ್ಣಾಗಿಸುವಂತೆ ನಗಿಸುವ"ಕಲರ್​ಕಾಗೆ"

Saturday February 04, 2017,

2 min Read

ಸಾಧನೆಗೆ ಸಾವಿರದಾರಿ. ಮನಸಿದ್ದರೆ ಮಾರ್ಗ ಅನ್ನೋ ಮಾತು ಎಲ್ಲರಿಗೂ ಅನ್ವಯಿಸುತ್ತದೆ. ಆದ್ರೂಅದಕ್ಕೆ ಮನಸ್ಸು ಮಾಡಬೇಕಷ್ಟೆ. ಆ ರೀತಿ ಮನಸ್ಸು ಮಾಡಿ ಮಾರ್ಗ ಕಂಡುಕೊಂಡ ಹುಡುಗ ಸುನಿಲ್. ಸಾಮಾಜಿಕ ಜಾಲತಾಣಗಳಾದ ಫೇಸ್‍ಬುಕ್ ವಾಟ್ಸ್​​ಆ್ಯಪ್‍ಗಳಲ್ಲಿ ಕಲರ್‍ಕಾಗೆ ಹೆಸರಿನ ಸಾಕಷ್ಟು ಆಡಿಯೋಗಳನ್ನು ನೀವು ಕೇಳಿರಬಹುದು. ಗೊತ್ತಿರದ ಒಬ್ಬ ವ್ಯಕ್ತಿಗೆ ಕರೆಮಾಡಿ, ಅವರ ಮೆದುಳಿಗೆ ಕೈಹಾಕಿ, ಅವ್ರನ್ನ ಮೂರ್ಖರನ್ನಾಗಿಸಿ, ಹೊಟ್ಟೆ ಹುಣ್ಣಾಗೋ ಹಾಗೆ ನಗಿಸೋ ಆಡಿಯೋ ಅದು. ಬ್ಯುಸಿ ಬದುಕಿನ ನಡುವೆ ಮನಸ್ಫೂರ್ವಕವಾಗಿ ನಗೋದನ್ನು ಮರೆತಿರುವ ಜನರಿಗೆ ಟೆನ್ಷನ್ ಫ್ರೀ ಅನಿಸುವ ಹಾಗೆ ಮಾಡೋದು ಈ ಆಡಿಯೋ. ಸಾಮಾನ್ಯ ಜನರನ್ನ ಆ ದಿನದ ಸೆಲೆಬ್ರೆಟಿ ಅಂತ ಫೀಲ್ ಮಾಡಿಸುವುದರ ಜೊತೆಗೆ ಮೈಸೂರು ಮತ್ತು ಸುತ್ತಮುತ್ತಲ ಜನತೆಯನ್ನು ತನ್ನ ಅಭಿಮಾನಿಗಳನ್ನಾಗಿ ಮಾಡಿಕೊಂಡಿರೋ ಮಾತಿನ ಮಲ್ಲ ಈ ಸುನಿಲ್.

image


ಇಲ್ಲಿ ಹೇಳ್ತಿರೋದು ಮೈಸೂರಿನ ಅಲರಾಮ್ ಆಗಿ ಫೇಮಸ್‍ ಆಗಿರುವ "ಕಲರ್‍ಕಾಗೆ" ಸುನಿಲ್ ಅವರ ಬಗ್ಗೆ. ಮೈಸೂರಿನ 93.5 ರೆಡ್‍ ಎಫ್.ಎಂ. ಅಂದ್ರೆ ಮೊದಲು ಎಲ್ಲರ ಬಾಯಲ್ಲೂ ಬರೋದು "ಕಲರ್ ಕಾಗೆ" ಅನ್ನುವ ಪ್ರೋಗ್ರಾಂ ಹೆಸರು. ಪ್ರತಿದಿನ ಬೆಳಗ್ಗೆ ಮೈಸೂರಿನ ಜನ ತಿಂಡಿ ಬಿಟ್ರೂ ಈತನ ಪ್ರೋಗ್ರಾಂ ಮಿಸ್ ಮಾಡ್ಕೊಳೋದಿಲ್ಲ. ವಿಶೇಷ ಅಂದ್ರೆ, ನಮಸ್ಕಾರ ಮೈಸೂರು ಅನ್ನೋ ಈ ಪ್ರೋಗ್ರಾಂನ "ಕಲರ್ ಕಾಗೆ" ಕಾಲ್‍ಗಳನ್ನು ರೆಕಾರ್ಡ್ ಮಾಡ್ಕೊಂಡು ಮತ್ತೆ ಮತ್ತೆ ಕೇಳೋ ಅಭಿಮಾನಿಗಳಿದ್ದಾರೆ ಈ ಸುನಿಲ್‍ಗೆ.

image


ಅರಳು ಹುರಿದ ಹಾಗೆ ಮಾತನಾಡುವ ಈ ಆರ್‍.ಜೆ .ಸುನಿಲ್, ಆರ್‍.ಜೆ. ಆಗಿ ಫೇಮಸ್ ಆಗೋಕು ಮೊದಲು ನಡೆದು ಬಂದ ಹಾದಿಯೇನು ಸುಖದ ಸುಪ್ಪತ್ತಿಗೆ ಆಗಿರಲಿಲ್ಲ. ಚಿಕ್ಕದಿಂದನಿಂದ ಅಪ್ಪಅಮ್ಮನ ಜೊತೆ ಮುದ್ದಾಗಿ ಬೆಳೆದಿದ್ದ ಸುನಿಲ್ 10ನೇ ತರಗತಿ ಮುಗೀಯುತ್ತಿದ್ದ ಹಾಗೆ ಇಷ್ಟವಿಲ್ಲದಿದ್ದರೂ ಐಟಿಐ ಕಾಲೇಜಿಗೆ ಸೇರಿ ಎಲೆಕ್ಟ್ರಾನಿಕ್ಸ್​​ ಓದಬೇಕಾಯ್ತು. ಓದುವಾಗಲೇಎಲೆಕ್ಟ್ರಿಕ್‍ ಕಂಟ್ರಾಕ್ಟರ್ ಹುದ್ದೆ ಹೊಂದಿದ್ದ ತಂದೆ ಅಕಾಲಿಕ ಮರಣಕ್ಕೆ ತುತ್ತಾದ್ರು. ತಂದೆಯ ಕೆಲಸವನ್ನಾದ್ರು ಧಕ್ಕಿಸಿಕೊಳ್ಳೋ ಉದ್ದೇಶದಿಂದ ಹೇಗೋ ಐಟಿಐ ಮುಗಿಸಿದ್ರು. ಆದ್ರೆ, ಹುದ್ದೆಯಿಂದ ವಂಚಿತರಾಗಿ1800 ರೂಪಾಯಿಯ ಕೆಲಸವೊಂದಕ್ಕೆ ಸೇರಿದ್ರು, ಇದ್ರ ಮಧ್ಯೆ ಕ್ರಿಕೆಟ್ ಬಗ್ಗೆ ಒಲವು ತೋರಿದರಾದ್ರು ಅದಕ್ಕೆ ತಕ್ಕ ಬೆಂಬಲ ದೊರೆಯಲಿಲ್ಲ. ಹೀಗೆ ಒಮ್ಮೆ ಗಣೇಶ ಹಬ್ಬದಲ್ಲಿ ಏರ್ಪಡಿಸಿದ್ದ ಆರ್ಕೆಸ್ಟ್ರಾ ವೊಂದರಲ್ಲಿ ಸ್ನೇಹಿತರ ಬಲವಂತಕ್ಕೆ ಸ್ಟೇಜ್ ಹತ್ತಿದ್ದ ಸುನಿಲ್, ತಮ್ಮೊಳಗೆ ಅಡಗಿದ್ದ ಮಿಮಿಕ್ರಿ ಅನ್ನೋ ಕಲೆಯನ್ನು ಎಲ್ಲರ ಮುಂದಿಟ್ರು. ಆರ್ಕೆಸ್ಟ್ರಾದ ಓನರ್‍ ಇವ್ರನ್ನು ಗುರುತಿಸಿ, ತಮ್ಮಲ್ಲೇ ಕೆಲಸ ಕೊಡೋದಾಗಿ ಜೊತೆಗೆ ಕರೆದೊಯ್ತಾರೆ. ಆದ್ರೆ, ಸುನಿಲ್ ಅಂದುಕೊಂಡ ಕೆಲಸ ಅವರದ್ದಾಗಿರಲಿಲ್ಲ. ಪಿಯಾನೋ ನುಡಿಸೋ ಕೆಲಸ ಕೊಟ್ಟು, ದಿನಕ್ಕೆ 50 ರೂಪಾಯಿಯ ಸಂಬಳ ಕೊಡುತ್ತಾ, ಒಂದೂವರೆ ವರ್ಷ ಕಾಲ ತಳ್ಳಿಯೇಬಿಡ್ತಾರೆ. ಅಷ್ಟೂದಿನ ಸುಮ್ಮನಿದ್ದ ಸುನಿಲ್, ತಮ್ಮ ಪ್ರತಿಭೆಗೆ ತಕ್ಕ ಕೆಲಸ ಕೊಡುವಂತೆ ಕೇಳ್ತಾರೆ. ನಂತ್ರ ಸಿಕ್ಕ ಒಂದು ಅವಕಾಶದಿಂದ ತಮ್ಮನ್ನ ಗುರುತಿಸಿಕೊಂಡು, ತಬಲ ನಾಣಿ ಅವರ ತಂಡ ಸೇರಿಕೊಳ್ತಾರೆ. ಅಲ್ಲಿಂದ ಸ್ನೇಹಿತರ ಮಾತಿನಂತೆ ಎಫ್‍ಎಂ ಕೆಲಸಕ್ಕೆ ಅರ್ಜಿ ಹಾಕಿದ್ರು. 7000 ಸಾವಿರ ಜನರಲ್ಲಿ ಇವ್ರು ಒಬ್ಬರೇ ಗುರುತಿಸಲ್ಪಟ್ಟು ಆರ್‍ಜೆ ಎನಿಸಿಕೊಳ್ತಾರೆ. ಕಾಲಕ್ರಮೇಣ, ತಮ್ಮ ಪ್ರೋಗ್ರಾಂನಿಂದ ಜನ್ರ ಮನಸ್ಸಿಗೆ ಹತ್ತಿರವಾಗ್ತಾ ಹೋದ್ರು. 

image


ವೇಕಪ್‍ಕಾಲ್‍ ಅಂತ ರೇಡಿಯೋದಲ್ಲಿ ಇದ್ದ ಒಂದು ಕಾನ್ಸೆಪ್ಟ್​ನ್ನು ಡೆವಲಪ್ ಮಾಡಿ "ಕಲರ್‍ಕಾಗೆ"ಅನ್ನೋ ಹೊಸ ಕಾನ್ಸೆಪ್ಟ್​​ನ್ನು ಹುಟ್ಟು ಹಾಕಿದೋರು ಈ ಸುನಿಲ್. ರೇಡಿಯೋ ಬಗ್ಗೆ ಎಬಿಸಿಡಿ ತಿಳಿಯದ, ಕಂಪ್ಯೂಟರ್ ಬಗ್ಗೆಯೋ ಏನೂ ತಿಳಿಯದ ಹುಡುಗ ಈಗ ಮೈಸೂರಿನ ಫೇಮಸ್‍ ಆರ್‍ಜೆ. ಜಾನಪದ ನೃತ್ಯಗಳೂ ಕೂಡ ಇವ್ರಿಗೆ ಕರಗತ. ಅಷ್ಟೇಅಲ್ಲ, ಖಾಸಗಿ ವಾಹಿನಿಯಲ್ಲಿ, ವಾರಕ್ಕೊಮ್ಮೆ ಹಾಸ್ಯ ಕಾರ್ಯಕ್ರಮವನ್ನು ನಡೆಸಿಕೊಡ್ತಿದ್ದಾರೆ. ಈ ಮೂಲಕ ಧ್ವನಿಯಿಂದ ಫೇಮಸ್‍ ಆದ ಹುಡುಗ ವಾಹಿನಿಯೊಂದರ ಮೂಲಕ ಮುಖದರ್ಶನವನ್ನೂ ಮಾಡ್ತಿದ್ದಾರೆ . ತಮ್ಮ ಪಟಪಟ ಮಾತಿನಿಂದಲೇ ಸಾಕಷ್ಟು ಹೃದಯಗಳನ್ನು ಸೆಳೆದಿರೋ ಸುನಿಲ್‍ಗೆ ತಾವೊಬ್ಬ ಗ್ರೇಟ್‍ ಎಂಟರ್‍ಟೈನರ್‍ ಆಗ್ಬೇಕು, ಎಲ್ಲರ ನಗುವಿಗೆ ತಾವು ಕಾರಣ ಆಗಬೇಕು ಅನ್ನುವ ಆಸೆ. ಅವರ ಮುಂದಿನ ಪ್ರಾಜೆಕ್ಟ್​ಗಳಿಗೆ ಆಲ್ ದಿ ಬೆಸ್ಟ್. 

ಇದನ್ನು ಓದಿ:

1. ಸಿಂಪಾಡಿಪುರದಲ್ಲಿ "ಆಕಾರ"..! ಬೆಂಗಳೂರಿನಲ್ಲಿ "ಶ್ರುತಿ ಸಿಂಗಾರ"..!

2. ಬಿಹಾರದ "ವಿದ್ಯುತ್ ಭವನ"ದಲ್ಲಿದೆ ವಿಭಿನ್ನ ಕೆಫೆ- ತ್ಯಾಜ್ಯಗಳಿಂದಲೇ ತಯಾರಾಗಿದೆ ಕುರ್ಚಿ, ಟೇಬಲ್..!

3. ಕೆಲಸದ ಟೆನ್ಷನ್​ ಬಿಟ್ಟು ಬಿಡಿ- ಒಂದು ದಿನ ಕೃಷಿಕರಾಗಿ ಎಂಜಾಯ್​ ಮಾಡಿ..!