ಸಿಂಪಾಡಿಪುರದಲ್ಲಿ "ಆಕಾರ"..! ಬೆಂಗಳೂರಿನಲ್ಲಿ "ಶ್ರುತಿ ಸಿಂಗಾರ"..!
ಟೀಮ್ ವೈ.ಎಸ್. ಕನ್ನಡ
ಈ ಊರಿನಲ್ಲಿರುವ ಯಾರಿಗೂ ಸಂಗೀತದ ಗಂಧಗಾಳಿಯೂ ಗೊತ್ತಿಲ್ಲ. ಆದರೆ ಈ ಊರಿನಲ್ಲಿ ತಯಾರಾಗುವ ವೀಣೆಗಳು ಹೆಸರಾಂತ ಸಂಗೀತ ಕಲಾವಿದರ ಕೈಯಲ್ಲಿವೆ. ಸಾಮಾನ್ಯವಾಗಿ ವೀಣೆಗಳು ಸಿದ್ಧಗೊಳ್ಳುವುದು ತಮಿಳುನಾಡಿನ ತಂಜಾವೂರಿನಲ್ಲಿ, ನಂತರ ವೀಣೆ ತಯಾರಿಕೆಯಲ್ಲಿ ಗಮನ ಸೆಳೆದಿರುವುದು ಬೆಂಗಳೂರು ಬಳಿಯ ಸಿಂಪಾಡಿಪುರ ಗ್ರಾಮ. ಕಳೆದ ಐವತ್ತು ವರ್ಷಗಳಿಂದ, ಈ ಊರಿನಲ್ಲಿ ವೀಣೆ ಮತ್ತು ತಂಬೂರಿಗಳನ್ನು ತಯಾರು ಮಾಡುತ್ತಿದ್ದಾರೆ.
50 ವರ್ಷಗಳ ಹಿಂದೆ ಸಿಂಪಾಡಿಪುರದ ಪೆನ್ನೋಬಳಯ್ಯ ಎಂಬ ವ್ಯಕ್ತಿ ಮೊದಲಿಗೆ ವೀಣೆ ತಯಾರಿಸುವುದು ಕಲಿತರು. ಪೆನ್ನೋಬಳಯ್ಯ ತಾನು ಕಲಿತ ಈ ವಿದ್ಯೆಯನ್ನು ಸಿಂಪಾಡಿಪುರ ಗ್ರಾಮದವರಿಗೂ ಕಲಿಸಿದರು ಎಂದು ಈಗಲೂ ವೀಣೆ ಮತ್ತು ತಂಬೂರಿ ತಯಾರಕರು ಸ್ಮರಿಸುತ್ತಾರೆ. ಕಳೆದ ಎರಡು ದಶಕಗಳ ಹಿಂದೆ ಸಿಂಪಾಡಿಪುರ ಗ್ರಾಮದ ಶೇಕಡಾ 80ರಷ್ಟು ಜನರು ವೀಣೆ ಮತ್ತು ತಂಬೂರಿ ತಯಾರಿಕೆಯಲ್ಲಿ ನಿರಂತರಾಗಿದ್ದರು. ಪ್ರಸ್ತುತ ಸುಮಾರು ಹತ್ತು ಕುಟುಂಬಗಳು ಮಾತ್ರ ವೀಣೆ ಮತ್ತು ತಂಬೂರಿ ತಯಾರಿ ಸಿದ್ಧಪಡಿಸುತ್ತವೆ. ಈ ಕುಟುಂಬಗಳಿಂದ ಬರುತ್ತಿರುವ ಹೊಸ ತಲೆಯಾರಿನ ಜನರು ಬೆಂಗಳೂರಿನ ಕಡೆಗೆ ವಿದ್ಯೆ ಮತ್ತು ಉದ್ಯೋಗಕ್ಕಾಗಿ ಹೋಗುತ್ತಿದ್ದಾರೆ.
" ತಂಜಾವೂರಿನ ವೀಣೆಗಳಿಗೆ ಹೆಚ್ಚು ಬೆಲೆಯಾಗಿವೆ. ಶಿವ ಮ್ಯೂಸಿಕಲ್ಸ್ನಿಂದ ಪಡೆದಿರುವ ಸಿಂಪಾಡಿಪುರದ ವೀಣೆ ಸಹ ಉತ್ತಮವಾಗಿದೆ. ಹಲಸಿನ ಮರದಿಂದ ತಯಾರಿಸಿದ ವೀಣೆಗಳು ಸೊಗಸಾಗಿರುತ್ತವೆ. ಇತ್ತೀಚಿಗೆ ಫೈಬರ್ನಿಂದ ವೀಣೆಗಳನ್ನು ತಯಾರು ಮಾಡುತ್ತಿದ್ದಾರೆ. ಅವು ಅಷ್ಟಾಗಿ ಚೆನ್ನಾಗಿರುವುದಿಲ್ಲ."
-ವಿಮಲ ಸಂಪತ್, ವಿಧೂಷಿ
ಸಿಂಪಾಡಿಪುರ ಗ್ರಾಮದಲ್ಲಿ ವೀಣೆ ಮತ್ತು ತಂಬೂರಿ ತಯಾರಿಸುವವರಿಗೆ ಕರ್ನಾಟಕ ಸಂಗೀತ ಸೇರಿದಂತೆ ಯಾವುದೂ ರಾಗ, ತಾಳದ ಬಗ್ಗೆ ಜ್ಞಾನವಿಲ್ಲ. ಇದರಿಂದಾಗಿ ವೀಣೆ ಮತ್ತು ತಂಬೂರಿ ಬಹುತೇಕ ಸಿದ್ಧಗೊಂಡ ನಂತರ ಅವುಗಳಿಗೆ ತಂತಿ ಜೋಡಣೆಯಾಗುವುದು ಬೆಂಗಳೂರಿನಲ್ಲಿ. ತಂತಿ ಜೋಡಣೆ ಹೊರತು ಪಡಿಸಿರುವ ವೀಣೆ ಮತ್ತು ತಂಬೂರಿಗಳನ್ನು ಬೆಂಗಳೂರಿನ ಸಂಗೀತ ಪರಿಕರಗಳ ಮಾರಾಟ ಕೇಂದ್ರದಲ್ಲಿ ಮಾರಾಟ ಮಾಡುತ್ತಾರೆ. ವಾದ್ಯ ಪರಿಕರಗಳನ್ನು ಮಾರಾಟ ಮಾಡುವವರು, ತಜ್ಞರಿಂದ ಸಿಂಪಾಡಿಪುರದ ವೀಣೆ ಮತ್ತು ತಂಬೂರಿಗಳಿಗೆ ಶೃತಿಗೆ ಅನುಗುಣವಾಗಿ ತಂತಿ ಜೋಡಣೆ ಮಾಡಿಸುತ್ತಾರೆ. ಈ ಪ್ರಕ್ರಿಯೆಯನ್ನು ವೀಣೆಮೇಳ ಕಟ್ಟುವುದು ಎನ್ನುತ್ತಾರೆ. ವೀಣೆಮೇಳ ಕಟ್ಟಿದ ನಂತರ ಅವು ವೀಣೆ, ವಿದ್ವಾಂಸರು ಮತ್ತು ವಿದ್ಯಾರ್ಥಿಗಳ ಕೈ ಸೇರುತ್ತಿವೆ.
ವಿಶ್ವದ ದೊಡ್ಡ ವೀಣೆ
ಬೆಂಗಳೂರಿನ ಶಿವ ಮ್ಯೂಸಿಕಲ್ಸ್ ಅಂಗಡಿ ಮಾಲೀಕರಾದ ನಟರಾಜ್ ಅವರು ವಿಶ್ವದ ದೊಡ್ಡ ವೀಣೆಯನ್ನು ಸಿದ್ಧಪಡಿಸಿದ್ದಾರೆ. ವಿಶ್ವದ ದೊಡ್ಡ ವೀಣೆಯನ್ನು ತಯಾರಿಸಲು 10 ಮಂದಿ ಕಲಾವಿದರು 6 ತಿಂಗಳು ಕೆಲಸ ಮಾಡಿದ್ದರು. ಈ ತಯಾರಿಕೆಗೆ ಒಂದು ಲಕ್ಷ ರೂಪಾಯಿ ವೆಚ್ಚವಾಗಿತ್ತು. ಇದನ್ನು ಶೃಂಗೇರಿ ದೇವಾಲಯಕ್ಕೆ ನೀಡಲಾಗಿದೆ. ಈ ವೀಣೆಯ ತಯಾರಿಕೆಯಲ್ಲಿ ಸಿಂಪಾಡಿಪುರದ ಉಮೇಶ್ ಮತ್ತು ನರಸಿಂಹಯ್ಯ ಭಾಗವಹಿಸಿದ್ದರು.
" ಸಿಂಪಾಡಿಪುರದಲ್ಲಿ ಸಿದ್ಧಗೊಳ್ಳುವ ಬಹುತೇಕ ವೀಣೆಗಳನ್ನು ಜನರು ನಮ್ಮ ಮಾರಾಟ ಕೇಂದ್ರಕ್ಕೆ ನೀಡುತ್ತಾರೆ. ಅವುಗಳಿಗೆ ಶೃತಿ ತಂತಿಗಳನ್ನು ನಮ್ಮ ತಂಡದ ನಟರಾಜ್ ಮತ್ತು ನಾನು ಕಟ್ಟುತ್ತೇವೆ. "
- ವಿನೋದ್, ಶಿವಮ್ಯೂಸಿಕಲ್ಸ್
ಎಲೆಕ್ಟ್ರಾನಿಕ್ ಶೃತಿ ಪಟ್ಟಿಗೆ ಬಂದ ನಂತರ ತಂಬೂರಿಗಳಿಗೆ ಹಿನ್ನೆಡೆಯಾಗಿದೆ ಎನ್ನಬಹುದು. ಕರ್ನಾಟಕ ಸಂಗೀತ ಕಚೇರಿಯಲ್ಲಿ ತಂಬೂರಿಗೆ ಮುಖ್ಯ ಸ್ಥಾನವಿತ್ತು. ಹಾಡುಗಾರಿಕೆ ವಿದ್ವಾಂಸರ ಹಿಂಬದಿಯಲ್ಲಿ ತಂಬೂರಿ ಹಿಡಿದು, ಶೃತಿ ನುಡಿಸುವುದು ಸಾಮಾನ್ಯವಾಗಿತ್ತು. ಆದರೆ ಹಾಡುಗಾರಿಕೆಯ ವಿದ್ವಾಂಸರು ಇಂದು ಎಲೆಕ್ಟ್ರಾನಿಕ್ ಶೃತಿ ಪಟ್ಟಿಗೆ ಬಳಸುತ್ತಿರುವುದು ತಂಬೂರಿಗೆ ಅಲ್ಲಿ ಸ್ಥಾನ ಸಿಗುತ್ತಿಲ್ಲ. ಮೃದಂಗ, ಪಿಟೀಲು, ಘಟಂ ಮೊದಲಾದ ವಾದ್ಯಗಳಿಗೆ ದೊರೆಯುತ್ತಿರುವ ಮನ್ನಣೆ ತಂಬೂರಿಗೆ ಇಲ್ಲವಾಗಿದೆ. ಇದು ತಂಬೂರಿ ತಯಾರಿಕೆಯ ಮೇಲೆ ಪರಿಣಾಮ ಬೀರುತ್ತಿದೆ ಎನ್ನುತ್ತಾರೆ ಮಾರಾಟಗಾರರು.
" ಪ್ರಸಿದ್ಧ ವೀಣೆ ವಿದ್ವಾಂಸರು ಮತ್ತು ವಿಧೂಷಿಯರು ಹೆಚ್ಚು ಇಷ್ಟು ಪಡುವುದು ತಂಜಾವೂರಿನ ವೀಣೆಗಳನ್ನು. ಸಿಂಪಾಡಿಪುರದ ವೀಣೆಗಳನ್ನು ಕಲಿಯುವವರು ಹೆಚ್ಚು ಉಪಯೋಗಿಸುತ್ತಾರೆ. ಸಿಂಪಾಡಿಪುರದಲ್ಲಿ ಸಿದ್ಧಗೊಂಡಿರುವ ವೀಣೆಗಳನ್ನು ಬೆಂಗಳೂರಿನ ಶಿವ ಮ್ಯೂಜಿಕಲ್ಸ್ನಿಂದ ಪ್ರಸಿದ್ಧ ವೀಣಾ ವಿದ್ವಾಂಸರು ಮತ್ತು ವಿಧೂಷಿಯರು ಖರೀದಿ ಮಾಡಿದ್ದಾರೆ."
- ನಟರಾಜ್, ಶಿವ ಮ್ಯೂಸಿಕಲ್ಸ್ ಮಾಲೀಕ
ಮರದಿಂದ ಫೈಬರ್ನತ್ತ..!
ವೀಣೆ ಮತ್ತು ತಂಬೂರಿಯನ್ನು ಹಲಸಿನ ಮರದಿಂದ ತಯಾರಿಸಲಾಗುತ್ತಿತ್ತು. ಆದರೆ ಪ್ರಸ್ತುತ ಹೆಚ್ಚಿನ ವೀಣೆ ಮತ್ತು ತಂಬೂರಿಗಳು ಸಿದ್ಧಗೊಳ್ಳುತ್ತಿರುವುದು ಫೈಬರ್ನಿಂದ. ಹಲವು ವರ್ಷಗಳ ಕಾಲ ಹದಗೊಂಡು ಬೆಳೆದಿರುವ ಹಲಸಿನ ಮರದ ಕಾಂಡಗಳನ್ನು ಬಳಸಿ ಮೊದಲು ವೀಣೆ ಮತ್ತು ತಂಬೂರಿಗಳು ಸಿದ್ಧಪಡಿಲಾಗುತ್ತಿತ್ತು. ಹಲಸಿನ ಮರದಿಂದ ಸಿದ್ಧ ಮಾಡುತ್ತಿದ್ದ ಸಮಯದಲ್ಲಿ ಹೆಚ್ಚಿನ ದಿನಗಳು ಬೇಕಾಗಿದ್ದವು. ಹಲಸಿನ ಮರದಿಂದ ವೀಣೆ ತಯಾರಿಸಲು ಒಂದು ವಾರ ಬೇಕಾಗುತ್ತದೆ. ಈಗ ಫೈಬರ್ ಬಳಸುವುದರಿಂದ ಕಡಿಮೆ ದಿನಗಳು ಸಾಕು. ಮೂರು ದಿನದಲ್ಲಿ ಒಂದು ಫೈಬರ್ ವೀಣೆ ತಯಾರಿಸಬಹುದು. ಮರದಿಂದ ತಯಾರಿಸಿದ ವೀಣೆಯನ್ನು 5 ರಿಂದ 7 ಸಾವಿರ ರೂಪಾಯಿಗಳಿಗೆ ಮತ್ತು ಫೈಬರ್ ವೀಣೆಯನ್ನು 3 ರಿಂದ 4 ಸಾವಿರ ರೂಪಾಗಳಿಗೆ ಮಾರಾಟ ಮಾಡಲಾಗುತ್ತದೆ. ಹಲಸಿನ ಮರದ ಕಾಂಡವನ್ನು ಬೇಕಾದ ಆಕಾರಕ್ಕೆ ಕತ್ತರಿಸಿ ಮತ್ತು ಕೊರೆದು ಹಗುರವಾದ ಕೊಡವನ್ನು ತಯಾರಿಸುತ್ತಾರೆ. ಇದಕ್ಕೆ ದಂಡಿಯನ್ನು ಜೋಡಿಸುತ್ತಾರೆ. ಮತ್ತೊಂದು ತುದಿಗೆ ಪುಟ್ಟ ಬಿಂದಿಗೆಯಂತಹ ಬುರುಡೆ ಜೋಡಿಸಿರುತ್ತಾರೆ.
" ತಯಾಕರ ಅನುಭವ ಮತ್ತು ಕೌಶಲ್ಯವನ್ನು ಆಧರಿಸಿ ಇಂತಿಷ್ಟು ದಿನಗಳಲ್ಲಿ ವೀಣೆಗಳು ಸಿದ್ಧಗೊಳ್ಳುತ್ತವೆ"
- ಸಿಂಪಾಡಿಪುರ ಗ್ರಾಮದ ಉಮೇಶ್, ವೀಣೆ ತಯಾರಕ
ವರ್ಷಕ್ಕೆ 250 ವೀಣೆಗಳು
ಸಿಂಪಾಡಿಪುರದಲ್ಲಿ ಪ್ರಸ್ತುತ ಹತ್ತು ಕುಟುಂಬಗಳು ವೀಣೆ ಮತ್ತು ತಂಬೂರಿ ತಯಾರಿಕೆಯಲ್ಲಿ ನಿರತವಾಗಿವೆ. ಒಂದು ವರ್ಷದಲ್ಲಿ ಸಿಂಪಾಡಿಪುರದಿಂದ ಸುಮಾರು 250 ವೀಣೆಗಳು ಬೆಂಗಳೂರಿನ ನಾನಾ ವೀಣೆ ಮಾರಾಟ ಅಂಗಡಿಗಳಿಗೆ ಸೇರುತ್ತವೆ. ಸಿಂಪಾಡಿಪುರದ ವೀಣೆಯೂ ಉತ್ತಮವಾಗಿದೆ. ಆದ್ರೆ ಬೆಲೆಗಳು ದುಬಾರಿ ಆಗಿರುವುದರಿಂದ ವೀಣೆ ನಿಧನಾವಾಗಿ ಮಾಯವಾಗುತ್ತಿದೆ. ಸಿಂಪಾಡಿಪುರದ ಜನರ ಕಾಯಕವೂ ಕಡಿಮೆ ಆಗುತ್ತಿದೆ.
1. ಕನ್ನಡ ಬೆಳಸಲು ಆರಂಭವಾಯ್ತು "ಡಿಂಡಿಮ"
2. ಅಡುಗೆ ಬರಲ್ಲ ಅನ್ನುವ ಟೆನ್ಷನ್ ಬಿಟ್ಟುಬಿಡಿ- ಆ್ಯಪ್ ಡೌನ್ಲೋಡಿ ಮಾಡಿ ಅಡುಗೆ ಕಲಿಯಿರಿ..!
3. ಕೆಲಸದ ಟೆನ್ಷನ್ ಬಿಟ್ಟು ಬಿಡಿ- ಒಂದು ದಿನ ಕೃಷಿಕರಾಗಿ ಎಂಜಾಯ್ ಮಾಡಿ..!