ಇ-ಕಾಮರ್ಸ್ ದೈತ್ಯರಾದ ಫ್ಲಿಪ್ಕಾರ್ಟ್-ಅಮೇಝಾನ್ ಮಧ್ಯೆ ಜಟಾಪಟಿ..!
ಟೀಮ್ ವೈ.ಎಸ್. ಕನ್ನಡ
ಎರಡು ಉದ್ಯಮ ದೈತ್ಯರ ಸಾರ್ವಜನಿಕ ಕಿತ್ತಾಟ ಕೈಗಾರಿಕಾ ವೀಕ್ಷಕರು, ಗ್ರಾಹಕರು ಹೀಗೆ ಎಲ್ಲರ ಪಾಲಿಗೂ ಒಂದೊಳ್ಳೆ ಮೋಜಿನ ವಿಷಯ. 1990ರ ದಶಕದಲ್ಲಿ ಹಾಗೂ 2000ನೇ ಇಸ್ವಿಯಲ್ಲಿ ಕೋಕಾ ಕೋಲಾ ಹಾಗೂ ಪೆಪ್ಸಿ ಬ್ರಾಂಡ್ಗಳ ಜಟಾಪಟಿ ಭಾರಿ ಮನರಂಜನೆಯನ್ನೇ ಉಣಬಡಿಸಿತ್ತು. ಈಗ ಇ-ಕಾಮರ್ಸ್ ದೈತ್ಯರಾದ ಫ್ಲಿಪ್ಕಾರ್ಟ್ ಹಾಗೂ ಅಮೇಝಾನ್ ಮಧ್ಯೆ ಸಮರ ಜೋರಾಗಿದೆ. 15 ಬಿಲಿಯನ್ ಡಾಲರ್ ಬೆಲೆಬಾಳುವ ಸಂಸ್ಥೆ ಫ್ಲಿಪ್ಕಾರ್ಟ್ ಪ್ರಕಟಣೆಯೊಂದನ್ನು ಹೊರಡಿಸಿತ್ತು. ವೆಬ್ ವಿಶ್ಲೇಷಣಾ ವೆಂಚರ್ ಸಿಮಿಲರ್ ವೆಬ್ನ ಅಂಕಿ ಅಂಶಗಳ ಪ್ರಕಾರ 2015ರ ಡಿಸೆಂಬರ್ನಲ್ಲಿ ನಡೆದ ಒಟ್ಟು ಮೊಬೈಲ್ ವಹಿವಾಟಿನಲ್ಲಿ ಶೇ.47ರಷ್ಟು ಫ್ಲಿಪ್ಕಾರ್ಟ್ ವೇದಿಕೆಯಲ್ಲಿ ನಡೆದಿದೆ ಅಂತಾ ಹೇಳಿಕೊಂಡಿದೆ. ಶೇ.16ರಷ್ಟು ಪಾಲು ಗಳಿಸಿರುವ ಮಿಂತ್ರಾ ಎರಡನೇ ಸ್ಥಾನದಲ್ಲಿರುವುದಾಗಿ ಅದೇ ವೆಬ್ಸೈಟ್ನ ಅಂಕಿ-ಅಂಶಗಳು ಸಾರಿ ಹೇಳುತ್ತಿವೆ. ಅಂದ್ರೆ ಫ್ಲಿಪ್ಕಾರ್ಟ್ ಮತ್ತು ಮಿಂತ್ರಾ ಜೊತೆಯಾಗಿ ಶೇ.63ರಷ್ಟು ವಹಿವಾಟು ನಡೆಸಿದಂತಾಯ್ತು. ಫ್ಲಿಪ್ಕಾರ್ಟ್ ಪ್ರತಿಸ್ಪರ್ಧಿ ಅಮೇಝಾನ್ ಶೇ.15.86 ವಹಿವಾಟಿನೊಂದಿಗೆ ಮೂರನೇ ಸ್ಥಾನದಲ್ಲಿದ್ರೆ, ಶೇ.13.84ರಷ್ಟು ವಹಿವಾಟು ನಡೆಸಿರುವ ಸ್ನಾಪ್ಡೀಲ್ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
2105ರ ನವೆಂಬರ್ನಲ್ಲಿ ಅಮೇಝಾನ್ ಕೂಡ ಪ್ರಕಟಣೆಯೊಂದನ್ನು ಹೊರಡಿಸಿತ್ತು. ಹಬ್ಬದ ಋತುವಿನಲ್ಲಿ ಅತೀ ಹೆಚ್ಚು ಗ್ರಾಹಕರು ವಿಸಿಟ್ ಮಾಡಿದ ವೆಬ್ಸೈಟ್ ತಮ್ಮದೆಂದು ಅಮೇಝಾನ್ ಹೇಳಿಕೊಂಡಿತ್ತು. ಕಾಮ್ಸ್ಕೋರ್ ಅಂಕಿ-ಅಂಶಗಳ ಪ್ರಕಾರ 200 ಮಿಲಿಯನ್ ಗ್ರಾಹಕರು ಅಮೇಝಾನ್ ಸೈಟ್ಗೆ ಭೇಟಿ ಕೊಟ್ಟಿದ್ದಾರೆ. ಈ ಸಂಬಂಧ ಅಮೇಝಾನ್ ಸಿಇಓ ಜೆಫ್ ಬೆಝೊಸ್ ಡಿಸೆಂಬರ್ನಲ್ಲಿ ಭಾರತದ ಮಿಲಿಯನ್ಗಟ್ಟಲೆ ಗ್ರಾಹಕರಿಗೆ ಅಭಿನಂದನೆಯ ಈ ಮೇಲ್ ಒಂದನ್ನು ಕಳುಹಿಸಿದ್ರು. ``ವೆಬ್ಸೈಟ್ ಆರಂಭವಾಗಿ ಎರಡೂವರೆ ವರ್ಷಗಳಲ್ಲಿ ಅಮೇಝಾನ್ ಡಾಟ್ ಇನ್ ಭಾರತದಲ್ಲಿ ಅತಿ ಹೆಚ್ಚು ಗ್ರಾಹಕರು ಭೇಟಿ ಕೊಟ್ಟ ಏಕೈಕ ಸೈಟ್ ಎನಿಸಿಕೊಂಡಿದೆ. ಗ್ರಾಹಕರ ಈ ಅದ್ಭುತ ಪ್ರತಿಕ್ರಿಯೆ ನಮ್ಮಲ್ಲಿ ಇನ್ನಷ್ಟು ಉತ್ಸಾಹ ತುಂಬಿದೆ'' ಅಂತಾ ಜೆಫ್ ಬೆಝೊಸ್ ಸಂತಸ ವ್ಯಕ್ತಪಡಿಸಿದ್ರು. ಗ್ರಾಹಕರಿಗೆ ಅಭಿನಂದನೆಯ ಇ- ಮೇಲ್ ಜೊತೆಗೆ 200 ರೂಪಾಯಿಯ ಗಿಫ್ಟ್ ವೋಚರ್ಗಳನ್ನು ಸಹ ಕಳುಹಿಸಲಾಗಿತ್ತು. ಅಮೇಝಾನ್ನ ಈ ಹೇಳಿಕೆಗೆ ಪ್ರತಿಯಾಗಿ ಫ್ಲಿಪ್ಕಾರ್ಟ್ ಪ್ರಕಟಣೆ ಹೊರಡಿಸಿದೆ.
ಆ ಸಂದರ್ಭದಲ್ಲಿ ಫ್ಲಿಪ್ಕಾರ್ಟ್ ಅಮೇಝಾನ್ನ ಹೇಳಿಕೆಗೆ ಪ್ರತಿಕ್ರಿಯಿಸಿರಲಿಲ್ಲ. ಕಾಮ್ಸ್ಕೋರ್ ಅಂಕಿ ಅಂಶಗಳು ಮೊಬೈಲ್ ಟ್ರಾಫಿಕ್ ಅನ್ನು ಪ್ರತಿನಿಧಿಸುವುದಿಲ್ಲ ಎಂದು ಫ್ಲಿಪ್ಕಾರ್ಟ್ ಅಧಿಕಾರಿಗಳು ಸ್ಪಷ್ಟಪಡಿಸಿದ್ರು. 2015ರ ಆರಂಭದಲ್ಲಿ ಫ್ಲಿಪ್ಕಾರ್ಟ್ ಮೊಬೈಲ್ಗಳ ಬಗ್ಗೆ ಹೆಚ್ಚು ಗಮನಹರಿಸಿತ್ತು. ಆ್ಯಪ್ ಮೂಲಕ ಮತ್ತಷ್ಟು ಗ್ರಾಹಕರನ್ನು ಸೆಳೆದಿತ್ತು. ವೀಶೇಷ ಅಂದ್ರೆ ಫ್ಲಿಪ್ಕಾರ್ಟ್ಗೆ ಶೇ.75ರಷ್ಟು ವಹಿವಾಟು ಮೊಬೈಲ್ನಿಂದ್ಲೇ ಆಗುತ್ತಿದೆ.
ಆ್ಯಪ್ ಇನ್ಸ್ಟಾಲ್ನಲ್ಲೂ ಮುಂಚೂಣಿಯಲ್ಲಿರುವುದಾಗಿ ಫ್ಲಿಪ್ಕಾರ್ಟ್ ಹೇಳಿಕೊಂಡಿದೆ. ಭಾರತದಲ್ಲಿರುವ ಒಟ್ಟು ಆ್ಯಂಡ್ರಾಯ್ಡ್ ಸ್ಮಾರ್ಟ್ಫೋನ್ ಬಳಕೆದಾರರ ಪೈಕಿ ಶೇ.37ರಷ್ಟು ಮಂದಿ ಫ್ಲಿಪ್ಕಾರ್ಟ್ ಆ್ಯಪ್ ಇನ್ಸ್ಟಾಲ್ ಮಾಡಿಕೊಂಡಿದ್ದಾರೆ. ಫ್ಲಿಪ್ಕಾರ್ಟ್ನ ಫ್ಯಾಷನ್ ಅಂಗಸಂಸ್ಥೆ ಮಿಂತ್ರಾ ಶೇ.10ರಷ್ಟು ಇನ್ಸ್ಟಾಲ್ ಬೇಸ್ ಅನ್ನು ಹೊಂದಿದೆ. ಫ್ಲಿಪ್ಕಾರ್ಟ್ ಹೇಳಿಕೆಯ ಪ್ರಕಾರ ಅಮೇಝಾನ್ ಹಾಗೂ ಸ್ನಾಪ್ಡೀಲ್ ಆ್ಯಪ್ಗಳನ್ನು ತಲಾ ಶೇ.18ರಷ್ಟು ಮಂದಿ ಇನ್ಸ್ಟಾಲ್ ಮಾಡಿಕೊಂಡಿದ್ದಾರೆ.
ಅತೀ ಹೆಚ್ಚು ಗ್ರಾಹಕರು ಭೇಟಿಕೊಟ್ಟ ಏಕೈಕ ವೆಬ್ಸೈಟ್ ಎಂಬ ಅಮೇಝಾನ್ ಹೆಗ್ಗಳಿಕೆಗೆ ಈ ಮೂಲಕ ಫ್ಲಿಪ್ಕಾರ್ಟ್ ಟಾಂಗ್ ಕೊಟ್ಟಿದೆ. ``ಭಾರತದ ಇ-ಟೇಲ್ ಮಾರುಕಟ್ಟೆಯಲ್ಲಿ ಅಗಾಧವಾದ ಮೊಬೈಲ್ ಪ್ರಾಧಾನ್ಯತೆಯಿದೆ. ಶೇ.70ರಷ್ಟು ವಹಿವಾಟು ಮೊಬೈಲ್ ಡಿವೈಸ್ನಿಂದ್ಲೇ ಆಗುತ್ತಿದೆ. ಒಟ್ಟು ವಹಿವಾಟಿನಲ್ಲಿ ಡೆಸ್ಕ್ಟಾಪ್ಗಳ ಕೊಡುಗೆ ಶೇ.30ರಷ್ಟು ಮಾತ್ರ. ಡೆಸ್ಕ್ಟಾಪ್ಗಳ ಪಾಲು ದಿನೇ ದಿನೇ ಇಳಿಕೆಯಾಗುತ್ತಿದೆ'' ಅಂತಾ ಫ್ಲಿಪ್ಕಾರ್ಟ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಯುವರ್ಸ್ಟೋರಿ ಮಾಹಿತಿ
ಎಕ್ಸ್ಕ್ಲೂಸಿವ್ ಬ್ರಾಂಡ್ಗಳು ಮತ್ತು ಆಕರ್ಷಕ ರಿಯಾಯಿತಿ ಮೂಲಕ ಫ್ಲಿಪ್ಕಾರ್ಟ್, ಸ್ನಾಪ್ಡೀಲ್ ಮತ್ತು ಅಮೇಝಾನ್ ಪರಸ್ಪರ ಪೈಪೋಟಿಗಿಳಿದಿವೆ. ಹಬ್ಬದ ಸಮಯದಲ್ಲಂತೂ ಪ್ರಮುಖ ದಿನಪತ್ರಿಕೆಗಳಲ್ಲಿ ಈ ಮೂರು ವೆಬ್ಸೈಟ್ಗಳ ಜಾಹೀರಾತಿನದ್ದೇ ಕಾರುಬಾರು. ಈ ಮೊದಲು ಫ್ಲಿಪ್ಕಾರ್ಟ್ 1 ಬಿಲಿಯನ್ ಡಾಲರ್ ಬಂಡವಾಳ ಪಡೆದಿರುವುದಾಗಿ ಘೋಷಿಸಿಕೊಂಡಿತ್ತು, ಇದರ ಬೆನ್ನಲ್ಲೇ ಅಮೇಝಾನ್ ಕೂಡ ಭಾರತದಲ್ಲಿನ ಕಾರ್ಯಾಚರಣೆಗಾಗಿ 2 ಬಿಲಿಯನ್ ಡಾಲರ್ ಹೂಡಿಕೆ ಮಾಡುತ್ತಿರುವುದಾಗಿ ಪ್ರಕಟಿಸಿತ್ತು. ಈಗ ಬಳಕೆದಾರರ ಸಂಖ್ಯೆ ಮೇಲೆ ಜಟಾಪಟಿ ಶುರುವಾಗಿದೆ. ವಿಪರ್ಯಾಸ ಅಂದ್ರೆ ಅಂಕಿ-ಅಂಶಗಳನ್ನು ಪ್ರಕಟಿಸಿರುವ ಕಾಮ್ಸ್ಕೋರ್ ಮತ್ತು ಸಿಮಿಲರ್ ವೆಬ್ ಮಧ್ಯೆ ಕೂಡ ವಿವಾದ ತಾರಕಕ್ಕೇರಿತ್ತು. ಹಾಗಾಗಿ ಅವರು ಪ್ರಕಟಿಸಿರುವ ಅಂಕಿ-ಅಂಶಗಳ ಖಚಿತತೆ ಬಗೆಗೆ ಅನುಮಾನವಿದೆ. ನಾವು ಅಂಕಿ ಅಂಶಗಳ ವಿಶ್ವಾಸಾರ್ಹತೆಯನ್ನು ಪಕ್ಕಕ್ಕಿಟ್ರೆ, ಯಾರು ಇ ಕಾಮರ್ಸ್ ದೈತ್ಯರು ಎಂಬುದನ್ನು ಬಳಕೆದಾರರ ಸಂಖ್ಯೆಯಿಂದ ನಿರ್ಧರಿಸುವುದು ಅಸಾಧ್ಯ. ನಿಜವಾದ ಮಾರಾಟ ಮತ್ತು ಲಾಭದ ಮೇಲೆ ಎಲ್ಲರ ಗಮನವೂ ಕೇಂದ್ರೀಕೃತವಾಗಲಿದೆ.
ಲೇಖಕರು : ರಾಧಿಕಾ ಪಿ. ನಾಯರ್
ಅನುವಾದಕರು: ಭಾರತಿ ಭಟ್