ನಾಯಿಗಳಿಗೊಂದು ಐಶಾರಾಮಿ ಹೋಟೆಲ್- ಮಳೆಯ ನಡುವೆಯೂ ನಡೆದಿದೆ ಕೆಲಸ
ವಿಶಾಂತ್
ಈಗೇನು ಬಿಡಿ ಸಣ್ಣ ಸಣ್ಣ ರೂಮ್ ಇರುವ ಹೋಟೆಲ್‍ಗಳಿಂದ ಹಿಡಿದು 5 ಸ್ಟಾರ್, 7 ಸ್ಟಾರ್ ಐಶಾರಾಮಿ ಹೋಟೆಲ್‍ಗಳೂ ಇವೆ. ಆದ್ರೆ ಸಮಸ್ಯೆ ಏನೆಂದ್ರೆ ಈ ಹೋಟೆಲ್‍ಗಳಿಗೆ ಮನುಷ್ಯರಿಗಷ್ಟೇ ಎಂಟ್ರಿ. ಮನುಷ್ಯರ ಬೆಸ್ಟ್ ಫ್ರೆಂಡ್ ನಾಯಿಗಳಿಗೆ ನೋ ಎಂಟ್ರಿ. ಇದನ್ನೇ ಸೀರಿಯಸ್‍ಆಗಿ ಪರಿಗಣಿಸಿದ ಚೆನ್ನೈನ ಹುಡುಗರ ಟೀಮ್ ಒಂದು ನಾಯಿಗಳಿಗಾಗಿಯೇ ಒಂದು ಹೋಟೆಲ್ ನಿರ್ಮಿಸಿದ್ದಾರೆ. ಜನರೂ ತಮ್ಮ ಮನೆಯ ಸದಸ್ಯನಂತೆ ಸಾಕಿದ ನಾಯಿಗಳನ್ನು ಈ ಹೋಟೆಲ್‍ಗೆ ಕರೆತಂದು ರಜೆಯ ದಿನಗಳನ್ನು ಮಜಾ ಮಾಡುತ್ತಿದ್ದಾರೆ.
ಇದು ಹೋಟೆಲ್ ಫಾರ್ ಡಾಗ್ಸ್
ಶ್ರವಣ್ ಕೃಶ್ಣನ್. ತಮಿಳುನಾಡು ಹಾಗೂ ದಕ್ಷಿಣ ವಲಯಗಳನ್ನು ಜೂನಿಯರ್ ವಿಭಾಗದಲ್ಲಿ ಪ್ರತಿನಿಧಿಸಿದ್ದಾರೆ. ಅಳಿವಿನಂಚಿನಲ್ಲಿರುವ ಅಪರೂಪದ ಸಮುದ್ರದ ಆಮೆಗಳ ಉಳಿವಿಗಾಗಿ ಕಳೆದ 8 ವರ್ಷಗಳಿಂದ ಶ್ರಮಿಸುತ್ತಿರುವ ವನ್ಯಜೀವಿ ಸಂರಕ್ಷಕ. ಇದೇ ಶ್ರವಣ್ ಕೃಷ್ಣನ್ ಹೋಟೆಲ್ ಫಾರ್ ಡಾಗ್ಸ್ನ ಸಂಸ್ಥಾಪಕ.
‘ಒಮ್ಮೆ ಟ್ರಿಪ್ ಹೋಗಲು ಮನೆಯವರೆಲ್ಲರೂ ಪ್ಲಾನ್ ಮಾಡಿದೆವು. ಆದ್ರೆ ನಮ್ಮ ಮನೆಯಲ್ಲಿದ್ದ ಗ್ರೇಟ್ ಡ್ಯಾನ್ ನಾಯಿ ‘ಬಡಿ’ಯನ್ನು ನಾವು ಕರೆದುಕೊಂಡು ಹೋಗಲು ಅಸಾಧ್ಯವಾಗಿತ್ತು. ಹೀಗಾಗಿಯೇ ನಾವು ಟ್ರಿಪ್‍ನಿಂದ ವಾಪಸ್ ಬರುವವರೆಗೂ ಬಡಿಯನ್ನು ನೋಡಿಕೊಳ್ಳಲು ನಾಯಿಮನೆ ಹುಡುಕತೊಡಗಿದೆವು. ಹಲವಾರು ನಾಯಿಮನೆಗಳಿಗೆ ಹೋಗಿ ನೋಡಿದೆವು. ಆದ್ರೆ ಎಲ್ಲವೂ ಶುಚಿತ್ವವಿಲ್ಲದೇ, ಸೌಲಭ್ಯಗಳಿಲ್ಲದೇ ಅವ್ಯವಸ್ಥೆಯ ಆಗರವಾಗಿತ್ತು. ಅಂತಹ ಜಾಗದಲ್ಲಿ ನಮ್ಮ ಪ್ರೀತಿಯ ಬಡಿಯನ್ನು ಬಿಡಲು ಮನಸ್ಸಾಗಲಿಲ್ಲ. ಹೀಗಾಗಿಯೇ ಫ್ಯಾಮಿಲಿ ಟ್ರಿಪ್‍ಅನ್ನೇ ಕ್ಯಾನ್ಸಲ್ ಮಾಡಿದೆವು. ಆಗಲೇ ನಮಗೆ ನಮ್ಮಂತೆ ತೊಂದರೆಗೊಳಗಾದವರಿಗೆ ಯಾಕೆ ನಾವೇ ಒಂದು ನಾಯಿಮನೆ ಶುರು ಮಾಡಬಾರದು ಅನ್ನೋ ಆಲೋಚನೆ ಬಂತು.’
ಹೀಗೆ ಹೋಟೆಲ್ ಫಾರ್ ಡಾಗ್ಸ್ ಪ್ರಾರಂಭವಾಯ್ತು ಅಂತಾರೆ ಶ್ರವಣ್ ಕೃಷ್ಣನ್. ಈ ಕೆಲಸದಲ್ಲಿ ಶ್ರವಣ್ ಗೆಳೆಯ ಆದೀಶ್ವರ್ ಕೂಡ ಅವರ ಕೈಜೋಡಿಸಿದ್ರು. ಈ ಮೂಲಕ ಕೆಲವೇ ದಿನಗಳಲ್ಲಿ ಚೆನ್ನೈನ ಈಸ್ಟ್ ಕೋಸ್ಟ್ ರೋಡ್‍ನ ಸನ್‍ರೈಸ್ ಅವೆನ್ಯೂನಲ್ಲಿ ಹೋಟೆಲ್ ಫಾರ್ ಡಾಗ್ಸ್ ಪ್ರಾರಂಭವಾಗಿಯೇಬಿಡ್ತು.
ಹೋಟೆಲ್‍ನಲ್ಲಿರುವ ಸೌಲಭ್ಯಗಳು
5 ಸ್ಟಾರ್ ಹೋಟೆಲ್ ಪರಿಕಲ್ಪನೆಯಲ್ಲೇ ಹೋಟೆಲ್ ಫಾರ್ ಡಾಗ್ಸ್ ಅನ್ನು ನಿರ್ಮಿಸಲಾಗಿದೆ. 3 ಬೆಡ್‍ರೂಮ್‍ಗಳನ್ನೇ 14 ನಾಯಿಮನೆಗಳನ್ನಾಗಿ ಬದಲಿಸಲಾಗಿದೆ. ಅವುಗಳಲ್ಲಿ ಎರಡು ಡಿಲಕ್ಸ್ ನಾಯಿಮನೆಗಳೂ ಇರೋದು ವಿಶೇಷ. ಹಾಗೇ ನಾಯಿಗಳು ಇಲ್ಲಿ ಲೈಫ್‍ಟೈಮ್ ಮೆಂಬರ್‍ಶಿಪ್‍ಅನ್ನೂ ಪಡೆಯಬಹುದು. ಕೇವಲ 12 ಸಾವಿರ ರೂಪಾಯಿಗೆ ತಮ್ಮ ನಾಯಿಗೆ ಮೆಂಬರ್‍ಶಿಪ್ ಸೌಲಭ್ಯ ಪಡೆಯಬಹುದು. ಹೀಗೆ ಸದಸ್ಯತ್ವ ಪಡೆದ ನಾಯಿಗಳಿಗೆ ಇಲ್ಲಿ ಹಲವು ಬಗೆಯ ವಿಶೇಷ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಪ್ರತಿ ವರ್ಷ 20 ದಿನಗಳ ಕಾಲ ವಸತಿ ಸಹಿತ ಸೌಲಭ್ಯ ನೀಡಲಾಗುತ್ತೆ. ನಾಯಿಗಳಿಗೆಂದೇ ಇಲ್ಲಿ 10 ಸಾವಿರ ಚದರ ಅಡಿಯ ವಿಸ್ತಾರದಲ್ಲಿ ಮೈದಾನವಿದೆ. ಸುಸ್ತಾಗುವವರೆಗೂ ಇಲ್ಲಿ ಆಟವಾಡಬಹುದು. ಸುಸ್ತಾದ ಬಳಿಕ ಸ್ನಾನ ಮಾಡಲೆಂದೇ ನಾಯಿಗಳಿಗಾಗಿ ವಿಶೇಷ ಸ್ವಿಮ್ಮಿಂಗ್ ಪೂಲ್‍ಅನ್ನೂ ನಿರ್ಮಿಸಲಾಗಿದೆ. ಪಿಕಪ್ ಮತ್ತು ಡ್ರಾಪ್ ಸೌಲಭ್ಯ, 5 ಬಾರಿ ಕಾಂಪ್ಲಿಮೆಂಟರಿ ಸ್ನಾನ, ಪ್ರತಿ ತಿಂಗಳು ನಾಯಿಗಳಿಗಾಗಿಯೇ ವಿಶೇಷ ಸಭೆ, ಹೋಟೆಲ್ ಆವರಣಾದ್ಯಂತ ಸಿಸಿಟಿವಿ ಕಣ್ಗಾವಲು, ತರಬೇತಿ ಪಡೆದ ಸಿಬ್ಬಂದಿಯಿಂದ ನಾಯಿಗಳ ಪೋಷಣೆ, ದಿನದ 24 ಗಂಟೆಗಳ ಕಾಲವೂ ವೈದ್ಯರ ಸೌಲಭ್ಯವಿದೆ. ಇನ್ನು ಬೇರೆ ರಾಜ್ಯಕ್ಕೋ ಅಥವಾ ವಿದೇಶಕ್ಕೋ ಹೋದ ಮಾಲೀಕರು ತಮ್ಮ ನಾಯಿಯೊಂದಿಗೆ ಮಾತನಾಡಲೆಂದೇ ಸ್ಕೈಪ್ ಸೌಲಭ್ಯವನ್ನೂ ಕಲ್ಪಿಸಲಾಗಿದೆ.
ಬೆಲೆಯೂ ಕಡಿಮೆಯೇ!
20 ಕೆಜಿ ಒಳಗಿನ ನಾಯಿಗಳಿಗೆ ಪ್ರತಿದಿನ 500 ರೂಪಾಯಿ ಬೋರ್ಡಿಂಗ್
20 ರಿಂದ 40 ಕೆಜಿ ನಾಯಿಗಳಿಗೆ 600 ರೂಪಾಯಿ
40 ಕೆಜಿಗಿಂತ ಹೆಚ್ಚು ತೂಕದ ನಾಯಿಗಳಿಗೆ 700 ರೂಪಾಯಿ
ಹೀಗೆ ಮನೆಯಿಂದ, ಮನೆಯವರಿಂದ ದೂರವಾದ್ರೂ ನಾಯಿಗಳು ಮನೆಯಲ್ಲಿದ್ದಷ್ಟೇ ಖುಷಿಯಾಗಿ, ಅಂಥದ್ಧೇ ವಾತಾವರಣದಲ್ಲಿ ಇರುವ ಅವಕಾಶವನ್ನು ಶ್ರವಣ್ ಕೃಷ್ಣನ್ ನೀಡಿದ್ದಾರೆ. ನಾಯಿಗಳ ಈ ಫೈವ್ ಸ್ಟಾರ್ ಹೋಟೆಲ್ ಪರಿಕಲ್ಪನೆಗೆ ಜನರಿಂದ ಅದ್ಭುತ ರೆಸ್ಪಾನ್ಸ್ ದೊರೆಯುತ್ತಿದೆ. ವೀಕೆಂಡ್ ಬಂದ್ರೆ ಸಾಕು ಜನರಂತೂ ತಮ್ಮ ನಾಯಿಗಳನ್ನು ಈ ಹೋಟೆಲ್ ಫಾರ್ ಡಾಗ್ಸ್‍ಗೆ ಕರೆತಂದು ತಾವೂ ರಜೆಯ ಮಜಾ ಅನುಭವಿಸುತ್ತಾರೆ. ಜನರಿಂದ ಮಾತ್ರವಲ್ಲ, ಹಲವು ಸಂಘ ಸಂಸ್ಥೆಗಳಿಂದಲೂ ಹೋಟೆಲ್ ಫಾರ್ ಡಾಗ್ಸ್‍ಗೆ ಒಳ್ಳೆ ಪ್ರತಿಕ್ರಿಯೆ ದೊರೆತಿದೆ. ಟಾಟಾ ಕಂಪನಿಯವರಿಂದ ಅತ್ಯುತ್ತಮ ಸ್ಟೂಡೆಂಟ್ ಸ್ಟಾರ್ಟಪ್ ಗೌರವ ಸಂದಿರೋದೇ ಅದಕ್ಕೆ ಸಾಕ್ಷಿ.
ಚೆನ್ನೈ, ಮಳೆ ಮತ್ತು ನಾಯಿ!
ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಚೆನ್ನೈ ನಗರ ನೀರಿನಿಂದ ಆವೃತವಾಗಿದೆ. ಆದ್ರೆ ಈ ಮಳೆಯ ನಡುವೆಯೂ ಹೋಟೆಲ್ ಫಾರ್ ಡಾಗ್ಸ್ ಕಾರ್ಯನಿರ್ವಹಿಸುತ್ತಿದೆ. ಮಳೆಯಿಂದಾಗಿ ಮನೆಗೆ ನೀರು ನುಗ್ಗಿದ ಪರಿಣಾಮ ಸಾಕಷ್ಟು ಸಂಖ್ಯೆಯಲ್ಲಿ ಜನ ಸಹಾಯ ಬೇಡಿ ಹೋಟೆಲ್ ಫಾರ್ ಡಾಗ್ಸ್‍ಗೆ ಕರೆ ಮಾಡುತ್ತಿದ್ದರು. ಕಾರಣ ಜನರೇನೋ ತಮ್ಮ ಪರಿಚಿತರ ಮನೆಗೆ ಅಥವಾ ಸಂಬಂಧಿಕರ ಮನೆಗೆ ಹೋಗಬಹುದು. ಆದ್ರೆ ನಾಯಿಗಳು? ಹೀಗಾಗಿಯೇ ತಕ್ಷಣ ಎಚ್ಚೆತ್ತುಕೊಂಡ ಶ್ರವಣ್ ಕೃಷ್ಣನ್ ಮತ್ತು ಟೀಮ್ ಕಾರ್ಯಪ್ರವೃತ್ತರಾಗಿದ್ದಾರೆ. ಅದಾಗಲೇ ಚೆನ್ನೈನ ಹೋಟೆಲ್ ಫಾರ್ ಡಾಗ್ಸ್ ನಾಯಿಮನೆ ಹೌಸ್‍ಫುಲ್ ಆಗಿದ್ದು, ಉಳಿದ ನಾಯಿಗಳನ್ನು ಬೆಂಗಳೂರಿನ ಇನ್ನೊಂದು ಕೇಂದ್ರಕ್ಕೆ ಕರೆತರಲಾಗುತ್ತಿದೆ. ಈಗಾಗಲೇ ಒಂದು ತಂಡ ಚೆನ್ನೈನಿಂದ ನಾಯಿಗಳನ್ನು ಬೆಂಗಳೂರಿಗೆ ಕರೆತಂದಿದೆ. ಚೆನ್ನೈನಲ್ಲಿ ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಬಂದ ಬಳಿಕ ಮತ್ತೆ ಬೆಂಗಳೂರಿನಿಂದ ನಾಯಿಗಳನ್ನು ಚೆನ್ನೈಗೆ ಕರೆತರುವ ಐಡಿಯಾ ಹೋಟೆಲ್ ಫಾರ್ ಡಾಗ್ಸ್ನದು.