ಅಪ್ಪನ ಹಾದಿಯಲ್ಲಿ ಮಗಳು...ಪರಿಶ್ರಮದಿಂದಲೇ ಯಶಸ್ಸಿನ ಹಾದಿ ತುಳಿದ ಪಲ್ಲವಿ ಪಟೌಡಿ
ಭಾರತಿ ಭಟ್
ಅದು ಮಧ್ಯಪ್ರದೇಶದ ಪುಟ್ಟ ಊರು. ವ್ಯಕ್ತಿಯೊಬ್ಬ ಚಿಕ್ಕ ಸೈಕಲ್ ಶಾಪ್ ಇಟ್ಟುಕೊಂಡಿದ್ದ. ಸೈಕಲ್ ಅಂಗಡಿಯಲ್ಲಿ ಶ್ರದ್ಧೆಯಿಂದ ಕೆಲಸ ಮಾಡ್ತಾ ಇದ್ದ ತಂದೆಯನ್ನು ತದೇಕಚಿತ್ತದಿಂದ ಮಗಳು ನೋಡುತ್ತ ಕುಳಿತಿದ್ಲು. ತಂದೆಯ ಪರಿಶ್ರಮವನ್ನು ನೋಡಿದ ಮಗಳ ಕಣ್ಣಲ್ಲೂ ದೃಢಸಂಕಲ್ಪವಿತ್ತು. ಬೆಳೆದು ದೊಡ್ಡವಳಾದ ಮೇಲೆ ಸ್ವಂತ ಕಾಲಲ್ಲಿ ನಿಲ್ಲಬೇಕೆಂಬ ಛಲ ಅವಳ ಮನಸ್ಸಿನಲ್ಲಿ ಆಗಲೇ ಮೂಡಿತ್ತು. ಸ್ವಯಂ ಪರಿಶ್ರಮದಿಂದ ಏನನ್ನಾದ್ರೂ ಸಾಧಿಸಬೇಕೆಂಬ ಹಂಬಲವಿತ್ತು. ಅಂದುಕೊಂಡಂತೆ ಅವಳ ಭವಿಷ್ಯವನ್ನು ಅವಳೇ ರೂಪಿಸಿಕೊಂಡಿದ್ದಾಳೆ. ಈಗ ಆಕೆ `ಯೆಲ್ಲೋ ಫ್ಯಾಷನ್ ಡಾಟ್ ಇನ್'ನ ಸಹ ಸಂಸ್ಥಾಪಕಿ.
ಹೌದು ನಾವ್ ಹೇಳ್ತಾ ಇರೋದು ಪಲ್ಲವಿ ಪಟೌಡಿ ಅವರ ಬಗ್ಗೆ. ಪಲ್ಲವಿ ಇಂದೋರ್‍ನಿಂದ 50 ಕಿಲೋ ಮೀಟರ್ ದೂರದಲ್ಲಿರುವ ಪುಟ್ಟ ಹಳ್ಳಿಯಲ್ಲಿ ಹುಟ್ಟಿ ಬೆಳೆದವರು. ಆದ್ರೆ ಅಲ್ಲಿ ಸರಿಯಾದ ಶಿಕ್ಷಣ ವ್ಯವಸ್ಥೆ ಇರಲಿಲ್ಲ. ಶಾಲೆಯಲ್ಲಿ ನೆಲದ ಮೇಲೆ ಕುಳಿತೇ ಓದುವಂತಹ ಪರಿಸ್ಥಿತಿ ಇತ್ತು. ಶಿಕ್ಷಣದ ವಿಚಾರದಲ್ಲಿ ಪಲ್ಲವಿಗೆ ಸಂಪೂರ್ಣ ಸ್ವಾತಂತ್ರ್ಯವಿತ್ತು. ಪೋಷಕರಿಂದ ಅಪಾರ ಪ್ರೋತ್ಸಾಹ ಹಾಗೂ ಬೆಂಬಲ ಸಿಕ್ಕಿತ್ತು. ಆ ಗ್ರಾಮದಲ್ಲಿ ಸರಿಯಾದ ಶಾಲೆಯೇ ಇಲ್ಲದೇ ಇದ್ದಿದ್ರಿಂದ ಪಲ್ಲವಿ ಮತ್ತವರ ಸಹೋದರಿಯ ಶಿಕ್ಷಣಕ್ಕಾಗಿ ಬೇರೆ ನಗರಕ್ಕೂ ಶಿಫ್ಟ್ ಆಗಿದ್ರು. ಇಂದೋರ್‍ನ ದೇವಿ ಅಹಲ್ಯಾ ವಿಶ್ವವಿದ್ಯಾನಿಲಯದ ಗುಜರಾತಿ ಕಾಲೇಜಿನಲ್ಲಿ ಪಲ್ಲವಿ ಅರ್ಥಶಾಸ್ತ್ರ ಎಂಎ ಮಾಡಿದ್ರು.
ಉದ್ಯಮ ಕ್ಷೇತ್ರಕ್ಕೆ ಕಾಲಿಟ್ಟ ಪಲ್ಲವಿ...
ವಿವಾಹ ಬಂಧನಕ್ಕೊಳಗಾದ ಪಲ್ಲವಿ, ಇಬ್ಬರು ಮುದ್ದಾದ ಮಕ್ಕಳ ತಾಯಿಯೂ ಆದ್ರು. ಹಾಗಂತ ಉದ್ಯಮಿ ಆಗಬೇಕೆನ್ನುವ ತಮ್ಮ ಬಯಕೆಗೆ ತಿಲಾಂಜಲಿಯನ್ನೇನೂ ಇಟ್ಟಿರಲಿಲ್ಲ. ಸ್ವಂತವಾಗಿ ಏನನ್ನಾದ್ರೂ ಮಾಡಲೇಬೇಕೆಂದು ಗಟ್ಟಿ ಮನಸ್ಸು ಮಾಡಿದ ಪಲ್ಲವಿ ಅದಕ್ಕಾಗಿ ಸಿದ್ಧತೆ ಮಾಡಿಕೊಳ್ಳಲಾರಂಭಿಸಿದ್ರು. ಸಾಂಪ್ರದಾಯಿಕ ಉಡುಪುಗಳ ಆನ್‍ಲೈನ್ ಮಳಿಗೆ ತೆರೆಯಬೇಕೆಂಬುದು ಅವರ ಆಸೆಯಾಗಿತ್ತು. ಕೆಲಸ ಮಾಡುತ್ತಲೇ ಮಕ್ಕಳ ಕಡೆಗೂ ಗಮನ ಹರಿಸುವ ಸಲುವಾಗಿ ಪಲ್ಲವಿ ಮತ್ತವರ ಪತಿ ಮನೆ ಪಕ್ಕದಲ್ಲೇ ಒಂದು ಬಾಡಿಗೆ ಕೋಣೆಯನ್ನು ಹಿಡಿದ್ರು. ಬ್ಯಾಂಕ್‍ನಲ್ಲಿ ಕೂಡಿಟ್ಟಿದ್ದ ಹಣ, ಪಿಎಫ್, ಮ್ಯೂಚ್ಯುವಲ್ ಫಂಡ್‍ನಲ್ಲಿದ್ದ ಹಣ ಎಲ್ಲವನ್ನೂ ತೆಗೆದು ಫೋಟೋ ಶೂಟ್ ಮಾಡಿಸಿದ್ರು. ವ್ಯಾಪಾರಿಗಳಿಗೆ ಮುಂಗಡ ಕೊಡಲು ಕೂಡ ಹಣ ಹೊಂದಿಸಿಕೊಳ್ಳಬೇಕಿತ್ತು. ಅದೇ ಸಮಯಕ್ಕೆ ಪಲ್ಲವಿ ಅವರ ಪತಿ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ರಿಂದ ಅವರು ಕೆಲಸ ಮಾಡುವ ಸ್ಥಿತಿಯಲ್ಲಿರಲಿಲ್ಲ. ಹಾಗಾಗಿ ಇಬ್ಬರೂ ಜೊತೆಯಾಗಿ ಏನನ್ನಾದ್ರೂ ಮಾಡಬೇಕೆಂದು ನಿರ್ಧರಿಸಿದ್ರು. ಹಳದಿ ಬಣ್ಣ ಪಲ್ಲವಿ ಅವರಿಗಿಷ್ಟ. ಹಾಗಾಗಿ `ಯೆಲ್ಲೋಫ್ಯಾಷನ್ ಡಾಟ್ ಇನ್' ಹೆಸರಲ್ಲಿ ಸಿದ್ಧ ಸಾಂಪ್ರದಾಯಿಕ ಉಡುಪುಗಳ ಆನ್‍ಲೈನ್ ಮಳಿಗೆಯನ್ನು ಆರಂಭಿಸಿದ್ರು.
ಕೇಕ್ ಮೇಲೆ ನಡೆದಂತಲ್ಲ ಉದ್ಯಮದ ಆರಂಭ..!
ಉದ್ಯಮದ ಆರಂಭದ ದಿನಗಳು ಹೂವಿನ ಹಾಸಿಗೆಯಲ್ಲ, ಮುಳ್ಳಿನ ಮೇಲಿನ ನಡಿಗೆಯಿದ್ದಂತೆ. ಯಲ್ಲೋ ಫ್ಯಾಷನ್‍ಗೆ ಮೊದಲ ಮೂರು ತಿಂಗಳಲ್ಲಿ 25-30 ಸೀರೆಗಳಿಗಷ್ಟೇ ಆರ್ಡರ್ ಬಂದಿತ್ತು. ನೂರಾರು ಸಿದ್ಧ ಸೀರೆಗಳಿದ್ರೂ ಅದನ್ನು ಕೊಳ್ಳುವವರಿರಲಿಲ್ಲ. ಹಾಗಾಗಿ ಪಲ್ಲವಿ ವೆಬ್‍ಸೈಟನ್ನು ಮತ್ತೊಮ್ಮೆ ನವೀಕರಣಗೊಳಿಸಿದ್ರು. ಗ್ರಾಹಕರನ್ನು ತಲುಪಲು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡ್ರು. ರಿಯಾಯಿತಿ ಮೂಲಕ ಗ್ರಾಹಕರನ್ನು ಆಕರ್ಷಿಸಲು ಮುಂದಾದ್ರು. ಅವರ ಕಚೇರಿಯ ಅಕ್ಕಪಕ್ಕದ ಮನೆಯವರೆಲ್ಲ ಬಂದು ಸೀರೆಗಳನ್ನು ಕೊಂಡುಕೊಳ್ಳಲು ಆರಂಭಿಸಿದ್ರು. ಹೀಗೆ ಯಲ್ಲೋಫ್ಯಾಷನ್ ಯಶಸ್ಸಿನ ಹಾದಿ ಹಿಡಿದಿತ್ತು. ಸದ್ಯ `ಯಲ್ಲೋಫ್ಯಾಷನ್' ಸೌಂದರ್ಯ ಜಗತ್ತಿನಲ್ಲಿ ಬ್ರ್ಯಾಂಡ್ ಸೃಷ್ಟಿಸಿದೆ. ಡಾಕ್ಟರ್‍ಗಳು, ಪ್ರೊಫೆಸರ್‍ಗಳು, ಗೃಹಿಣಿಯರು ಹೀಗೆ ಎಲ್ಲರಿಗೂ ತಮ್ಮ ಬ್ರ್ಯಾಂಡ್‍ನ ಸೀರೆಗಳನ್ನು ಪರಿಚಯಿಸಲು ಪಲ್ಲವಿ ಮುಂದಾಗಿದ್ದಾರೆ. ಮಹಿಳೆಯರ ಟೇಸ್ಟ್‍ಗೆ ತಕ್ಕಂತಹ ಡಿಸೈನರ್ ಬ್ಲೌಸ್‍ಗಳನ್ನೂ ಮಾರುಕಟ್ಟೆಗೆ ಪರಿಚಯಿಸಿದ್ದಾರೆ. ಹಾಲಿ ಟ್ರೆಂಡ್ ಹಾಗೂ ಫ್ಯಾಷನ್‍ಗೆ ತಕ್ಕಂತಹ ಸೀರೆಗಳನ್ನು ಆಯ್ಕೆ ಮಾಡುವುದರಿಂದ ಹಿಡಿದು ಪ್ರತಿಯೊಂದು ಕೆಲಸದ ಉಸ್ತುವಾರಿಯನ್ನೂ ಪಲ್ಲವಿ ನೋಡಿಕೊಳ್ತಿದ್ದಾರೆ.
ಬಹುಮುಖ ಪ್ರತಿಭೆ ಪಲ್ಲವಿ...
ಆರಂಭದಲ್ಲಿ ಯಲ್ಲೋಫ್ಯಾಷನ್‍ನಲ್ಲಿ ಸಿಬ್ಬಂದಿ ಇರಲಿಲ್ಲ. ಹಾಗಾಗಿ ಬಹು ಕಾರ್ಯಗಳನ್ನು ಪಲ್ಲವಿ ಮಾಡ್ತಾ ಇದ್ರು. ಪಲ್ಲವಿ ಅವರೇ ಗ್ರಾಹಕರ ಫೋನ್ ಕಾಲ್‍ಗಳನ್ನು ಕೂಡ ಅಟೆಂಡ್ ಮಾಡ್ತಾ ಇದ್ರು. ಮಕ್ಕಳ ಓದು, ಮನೆಯಲ್ಲಿ ಅಡುಗೆ ಇದರ ಜೊತೆ ಜೊತೆಗೆ ವೆಂಡರ್‍ಗಳ ಜೊತೆ ಸಭೆ ಕೂಡ ನಡೆಸ್ತಾ ಇದ್ರು. ವಿಶೇಷ ಅಂದ್ರೆ ಮುಂಬೈನಲ್ಲಿ ಗ್ರಾಹಕರ ಮನೆ ಬಾಗಿಲಿಗೆ ಯಲ್ಲೋಫ್ಯಾಷನ್‍ನ ಸಿಬ್ಬಂದಿಯೇ ಖುದ್ದಾಗಿ ಹೋಗಿ ಸೀರೆಗಳನ್ನು ವಿತರಿಸ್ತಾರೆ. ಇದು ಗ್ರಾಹಕರ ಜೊತೆಗೆ ಸಂಸ್ಥೆಯ ಸಂಬಂಧವನ್ನು ಬೆಸೆಯುತ್ತೆ ಎನ್ನುತ್ತಾರೆ ಪಲ್ಲವಿ. ಹೀಗೆ ಫ್ಯಾಷನ್ ಲೋಕದಲ್ಲಿ ಪಲ್ಲವಿ ಅವರ ಉದ್ಯಮ ಅಂಬೆಗಾಲಿಡುತ್ತಲೇ ಹೊಸದೊಂದು ಹವಾ ಸೃಷ್ಟಿಸಿದೆ. ಫ್ಯಾಷನ್ ಪ್ರಿಯರಿಗಂತೂ ಯಲ್ಲೋಫ್ಯಾಷನ್ ಹಾಟ್ ಫೇವರಿಟ್. ಆತ್ಮವಿಶ್ವಾಸ ಮತ್ತು ಪರಿಶ್ರಮ ಇದ್ರೆ ಯಾವುದೂ ಅಸಾಧ್ಯವಲ್ಲ ಅನ್ನೋದನ್ನು ಪಲ್ಲವಿ ಪಟೌಡಿ ಸಾಧಿಸಿ ತೋರಿಸಿದ್ದಾರೆ.