ಕೈಗಾರಿಕೆಗಳ ಅಭಿವೃದ್ಧಿಗೆ ನೂತನ ಕೈಗಾರಿಕಾ ನೀತಿ ಸಹಕಾರ
ಅಗಸ್ತ್ಯ
‘ಇನ್ವೆಸ್ಟ್ ಕರ್ನಾಟಕ’ ಆರಂಭಕ್ಕೂ ಮುನ್ನವೇ ಕರ್ನಾಟಕ ನೂತನ ಕೈಗಾರಿಕಾ ನೀತಿ 2014-2019ನ್ನು ರೂಪಿಸುವ ಮೂಲಕ ಕೈಗಾರಿಕೆಗಳ ಬೆಳವಣಿಗೆಗೆ ಸರ್ಕಾರ ನಾಂದಿ ಹಾಡಿತ್ತು. ನೂತನ ನೀತಿಯಿಂದ ವಾರ್ಷಿಕ ಶೇಕಡ 12ರಷ್ಟು ಕೈಗಾರಿಕಾ ಬೆಳವಣಿಗೆ, 5 ಲಕ್ಷ ಕೋಟಿ ಬಂಡವಾಳ ಆಕರ್ಷಣೆ ಹಾಗೂ ಅಂದಾಜು 15 ಲಕ್ಷ ಜನರಿಗೆ ಉದ್ಯೋಗಾವಕಾಶ ಕಲ್ಪಿಸುವ ಗುರಿ ಹೊಂದಲಾಗಿದೆ. ಅದರೊಂದಿಗೆ ರಾಜ್ಯದ ಜಿಡಿಪಿಯಲ್ಲಿ ಶೇ. 20ರಷ್ಟು ಹೆಚ್ಚಳವಾಗುವ ನಿರೀಕ್ಷೆಯನ್ನು ಹೊಂದಲಾಗಿದೆ.
ನೂತನ ನೀತಿ ಜಾರಿಯಿಂದ ಪ್ರತಿ ವರ್ಷ 5 ರಿಂದ 8 ಸಾವಿರ ಎಕರೆ ವಿಸ್ತೀರ್ಣದ ಕನಿಷ್ಠ ಐದು ಕೈಗಾರಿಕಾ ವಲಯಗಳನ್ನು ಸ್ಥಾಪಿಸುವ ಉದ್ದೇಶವನ್ನೂ ಹೊಂದಲಾಗಿದೆ. ಸಾರ್ವಜನಿಕ ಸಹಭಾಗಿತ್ವದಲ್ಲಿ ಕೈಗಾರಿಕಾ ವಲಯ ಸ್ವತಂತ್ರವಾಗಿ ಸ್ಥಾಪಿಸಲು ಪ್ರೋತ್ಸಾಹ ನೀಡಲಾಗುತ್ತಿರುವುದು ನೂತನ ನೀತಿಯ ಮತ್ತೊಂದು ವಿಶೇಷತೆಯಾಗಿದೆ. ಕೈಗಾರಿಕೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಪ್ರಮುಖ ಇಲಾಖೆಗಳ ಸಂಯೋಜಿತ ಅರ್ಜಿಯನ್ನು ಆನ್‍ಲೈನ್ ಮೂಲಕ ಸಲ್ಲಿಸುವಂತೆ ಮಾಡಲಾಗುತ್ತಿದೆ. ಇವೆಲ್ಲವೂ ಕೈಗಾರಿಕಾ ಬೆಳವಣಿಗೆಗೆ ಸೂಕ್ತವಾಗಲಿದೆ.
ವಲಯಗಳಾಗಿ ವಿಂಗಡಣೆ
ಬೆಂಗಳೂರು ಹೊರತುಪಡಿಸಿ ರಾಜ್ಯದ ಇತರೆ ಪ್ರದೇಶಗಳಲ್ಲಿ ಕೈಗಾರಿಕೆಗಳ ಬೆಳವಣಿಗೆ ಮಾಡುವ ಉದ್ದೇಶದಿಂದಾಗಿ ಕರ್ನಾಟಕದ ಎಲ್ಲ ತಾಲೂಕುಗಳನ್ನು 6 ವಲಯಗಳನ್ನಾಗಿ ವಿಂಗಡಿಸಲಾಗಿದೆ. ಹೈದರಾಬಾದ್ ಕರ್ನಾಟಕದಲ್ಲಿ ಎರಡು, ಹೈದರಾಬಾದ್ ಕರ್ನಾಟಕೇತರ ಭಾಗದಲ್ಲಿ 4 ಕೈಗಾರಿಕಾ ವಲಯಗಳನ್ನು ವಿಂಗಡಿಸಲಾಗಿದೆ. ಅದರಂತೆ ಹೈದರಾಬಾದ್ ಕರ್ನಾಟಕಯೇತರ ಭಾಗದಲ್ಲಿನ
ಅತ್ಯಂತ ಹಿಂದುಳಿದ 23 ತಾಲೂಕುಗಳು ವಲಯ 1ರಲ್ಲಿ, ಅತೀ ಹಿಂದುಳಿದ 51 ತಾಲೂಕುಗಳು ವಲಯ 2ರಲ್ಲಿ, ಹಿಂದುಳಿದ 62 ತಾಲೂಕುಗಳು ವಲಯ 3 ಹಾಗೂ ಅಭಿವೃದ್ಧಿ ಹೊಂದಿದ 9 ತಾಲೂಕುಗಳು ವಲಯ 4ರಲ್ಲಿ ಗುರುತಿಸಲಾಗಿದೆ. ಇನ್ನು ಹೈದರಾಬಾದ್ ಕರ್ನಾಟಕ ಭಾಗದಲ್ಲಿನ ಅತ್ಯಂತ ಹಿಂದುಳಿದ 20 ತಾಲೂಕುಗಳು ವಲಯ 1ರಲ್ಲಿ ಹಾಗೂ ಅತೀ ಹಿಂದುಳಿದ 11 ತಾಲೂಕುಗಳು ವಲಯ 2ರಲ್ಲಿ ಬರುವಂತೆ ಮಾಡಲಾಗಿದೆ.
ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆಗಳಿಗೂ ಪ್ರೋತ್ಸಾಹ
ಅತಿ ಸಣ್ಣ ಮತ್ತು ಸಣ್ಣ ಕೈಗಾರಿಕೆಗಳ ಅಭಿವೃದ್ಧಿಗೂ ನೂತನ ನಿಯಮ ಅನುಕೂಲಕರವಾಗಿದೆ. ಕೈಗಾರಿಕಾ ಪ್ರದೇಶಗಳಲ್ಲಿ ಶೇಕಡ 20 ಭಾಗ ಜಮೀನನ್ನು ಎಂಎಸ್‍ಎಂಇಗಳಿಗೆ ಕಾಯ್ದಿರಿಸಲಾಗುತ್ತದೆ. ಹಿಂದಿನ ಕೈಗಾರಿಕಾ ನೀತಿಗೆ ಹೋಲಿಸಿದರೆ ಹೊಸ ಕೈಗಾರಿಕಾ ನೀತಿಯಲ್ಲಿ ಪೆÇ್ರೀತ್ಸಾಹ ಹಾಗೂ ರಿಯಾಯಿತಿಗಳನ್ನು ದುಪ್ಪಟುಗೊಳಿಸಲಾಗಿದೆ. ಆಮೂಲಕ ಮಧ್ಯಮ, ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆಗಳಲ್ಲಿನ ಹೂಡಿಕೆ ಪ್ರಮಾಣವನ್ನು ಶೇ.50ರಿಂದ ಶೇ. 100ರವರೆಗೆ ಹೆಚ್ಚಿಸುವ ಉದ್ದೇಶವನ್ನು ಹೊಂದಲಾಗಿದೆ.
ಇತರೆ ಉದ್ಯಮಿಗಳಿಗೂ ಉತ್ತೇಜನ
ಅದೇ ರೀತಿ ಪರಿಶಿಷ್ಟ ಜಾತಿ/ಪಂಗಡ, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತ ಸಮುದಾಯದವರಿಗೂ ಕೈಗಾರಿಕೆ ಸ್ಥಾಪಿಸಲು ಉತ್ತೇಜನ ನೀಡಲಾಗಿದೆ. ಮಹಿಳೆಯರಿಗೆ ಕೈಗಾರಿಕಾ ಪ್ರದೇಶ ಮೀಸಲು
ನೂತನ ಕೈಗಾರಿಕಾ ನೀತಿಯಲ್ಲಿ ತಿಳಿಸಲಾಗಿದೆ. ಅದರಂತೆ ಹಾರೋಹಳ್ಳಿ ಮತ್ತು ಹುಬ್ಬಳ್ಳಿಯ ಕೈಗಾರಿಕಾ ಪ್ರದೇಶದಲ್ಲಿ ಮಹಿಳಾ ಉದ್ದಿಮೆಗಳಿಗೆ ಭೂಮಿ ನೀಡುವ ಪ್ರಸ್ತಾವನೆಯೂ ಇದೆ. ಅನಿವಾಸಿ ಕನ್ನಡಿಗರಿಗೆ ಉತ್ತೇಜನ ನೀಡುವ ಉದ್ದೇಶದಿಂದಾಗಿ ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡಲು ಮುಂದೆ ಬಂದರೆ 7ರಿಂದ 14 ವರ್ಷದವರೆಗೆ ಅವರಿಗೆ ಮೌಲ್ಯವರ್ಧಿತ ತೆರಿಗೆ ಮತ್ತು ಕೇಂದ್ರ ಮಾರಾಟ ತೆರಿಗೆ ಮೊತ್ತವನ್ನು ಬಡ್ಡಿರಹಿತ ಸಾಲವಾಗಿ ಪರಿವರ್ತಿಸಲಾಗುತ್ತದೆ. ಕೈಗಾರಿಕಾ ವಲಯಗಳಿಗೆ ಜಮೀನು ಕಳೆದುಕೊಂಡವರಿಗೆ ಪರಿಹಾರ ನೀಡುವುದರೊಂದಿಗೆ ಭೂಮಿ ನೀಡುವ ಕುಟುಂಬದ ಒಬ್ಬರಿಗೆ ಉದ್ಯೋಗ ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ.
ಬೃಹತ್ ಉದ್ದಿಮೆಗಳ ವಿಂಗಡಣೆ
ನೂತನ ಕೈಗಾರಿಕಾ ನೀತಿಯಲ್ಲಿ ಹೆಚ್ಚಿನ ಬಂಡವಾಳ ಹೂಡಿಕೆಯ ಕೈಗಾರಿಕೆಗಳನ್ನು ವಿಂಗಡಿಸಲಾಗಿದೆ. 10 ಕೋಟಿಯಿಂದ 250 ಕೋಟಿ ರೂಪಾಯಿವರೆಗೆ ಹೂಡಿಕೆ ಮಾಡುವ ಉದ್ದಿಮೆಗಳನ್ನು ಬೃಹತ್, 250 ಕೋಟಿಯಿಂದ 500 ಕೋಟಿ ರೂ.ಹೂಡಿಕೆ ಮಾಡುವ ಉದ್ದಿಮೆಗಳನ್ನು ಮೆಗಾ, 500 ಕೋಟಿಯಿಂದ 1 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡಿದರೆ ಅಲ್ಟ್ರಾ ಮೆಗಾ ಉದ್ದಿಮೆಗಳೆಂದು, 1 ಸಾವಿರ ಕೋಟಿ ರೂ.ಗೂ ಅಧಿಕ ಹೂಡಿಕೆ ಮಾಡಿದರೆ ಸೂಪರ್ ಮೆಗಾ ಉದ್ದಿಮೆಗಳೆಂದು ವಿಂಗಡಿಸಲಾಗಿದೆ
ಇನ್ನಿತರ ಪ್ರೋತ್ಸಾಹಗಳು
ಇವುಗಳೊಂದಿಗೆ ಹೊಸ ನೀತಿಯಲ್ಲಿ ಇನ್ನಿತರ ಪ್ರೋತ್ಸಾಹಕಾರಿ ಅಂಶಗಳಿವೆ. ಅದರಂತೆ ಎಲ್ಲ ಕೈಗಾರಿಕೆಗಳ ಟ್ರೇಡ್ ಲೈಸನ್ಸ್‍ನ್ನು ರದ್ದುಗೊಳಿಸುವುದು, ಪೀಣ್ಯ, ಮೈಸೂರು, ಬೊಮ್ಮಸಂದ್ರ, ಬೆಳಗಾವಿ, ಹುಬ್ಬಳ್ಳಿಯಲ್ಲಿ ಇರುವ ಕೈಗಾರಿಕಾ ವಲಯಗಳನ್ನು ಕೈಗಾರಿಕಾ ಟೌನ್‍ಶಿಪ್ ಎಂದು ಘೋಷಿಸುವ ಅಂಶಗಳು ಅದರಲ್ಲಿವೆ.
ಕೈಗಾರಿಕಾ ಕಾರಿಡಾರ್
ಅದೇ ರೀತಿ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ದೃಷ್ಟಿಯಿಂದ ಬೆಂಗಳೂರು-ಮಂಡ್ಯ-ಮೈಸೂರು-ಚಾಮರಾಜನಗರ, ಚಿತ್ರದುರ್ಗ-ಬಳ್ಳಾರಿ-ಕಲಬುರಗಿ-ಬೀದರ್, ಧಾರವಾಡ-ಕೊಪ್ಪಳ-ರಾಯಚೂರು, ಬೆಂಗಳೂರು-ಹಾಸನ-ಮಂಗಳೂರು, ಚಿತ್ರದುರ್ಗ-ಹಾವೇರಿ-ಕಾರವಾರ, ತುಮಕೂರು-ಶಿವಮೊಗ್ಗ-ಹೊನ್ನಾವರ, ರಾಯಚೂರು-ಬಾಗಲಕೋಟೆ-ಬೆಳಗಾವಿ ವ್ಯಾಪ್ತಿಯಲ್ಲಿ ಹೊಸ ಕೈಗಾರಿಕಾ ಕಾರಿಡಾರ್‍ಗಳ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ. ಈ ಎಲ್ಲಾ ಅಂಶಗಳು ನೂತನ ಕೈಗಾರಿಕಾ ನೀತಿಯಲ್ಲಿದ್ದು, ಕೈಗಾರಿಕೆಗಳ ಬೆಳವಣಿಗೆಗೆ ಪೂರಕವಾಗಿವೆ.