ಕನ್ನಡಕ್ಕೂ ಬಂತು ಕ್ಯಾಲಿಗ್ರಾಮ್ -‌ ಇದು ಪದಗಳಲ್ಲಿಯೇ ಮೋಡಿ ಮಾಡುವ ಕಲೆ

ಕ್ಯಾಲಿಗ್ರಾಮ್‌ನ ವಿಶೇಷತೆಯೆನೆಂದರೆ ಭಾಷೆಯ ಲಿಪಿ ಗೊತ್ತಿರದವರು ಕೂಡ ಇದನ್ನು ನೋಡಿದ ತಕ್ಷಣ ಅರ್ಥವನ್ನು ಸುಲಭವಾಗಿ ಗ್ರಹಿಸಬಹುದಾಗಿದೆ. ಕಪ್ಪು ಬಿಳುಪಿನ ವಿನ್ಯಾಸದಲ್ಲಿ ಮೂಡಿ ಬರುವ ಶಾಶ್ವತ್‌ ಅವರ ಕ್ಯಾಲಿಗ್ರಾಮ್‌ನ ಸರಳತೆಯೇ ಅದರ ವಿಶೇಷತೆಯಾಗಿದೆ.

ಕನ್ನಡಕ್ಕೂ ಬಂತು ಕ್ಯಾಲಿಗ್ರಾಮ್ -‌ ಇದು ಪದಗಳಲ್ಲಿಯೇ ಮೋಡಿ ಮಾಡುವ ಕಲೆ

Saturday September 19, 2020,

2 min Read

ಶಾಶ್ವತ್‌ ಹೆಗಡೆ ತ್ಯಾಗ್ಲಿಯವರ ಕ್ಯಾಲಿಗ್ರಾಮ್‌ ವಿನ್ಯಾಸಗಳು

ಒಂದು ಶಬ್ದದಲ್ಲಿಯೇ ಅದರ ಅರ್ಥವೂ ಕಣ್ಣಿಗೆ ಕಂಡರೆ ಅದೆಷ್ಟು ಚೆನ್ನಾಗಿರುತ್ತದೆ ಅಲ್ಲವೆ? ಅಥವಾ ಶಬ್ದವೆ ಅದರ ಅರ್ಥ ಬಿಂಬಿಸುವ ಹಾಗೆ ರೇಖೆಗಳ ಮೂಲಕ ಚಿತ್ರಿತವಾದರೆ ಅಥವಾ ಚಿತ್ರವೆ ಶಬ್ದವಾದರೆ ಅದು ಬಹಳ ಬೇಗ ಅನೇಕ ಜನರನ್ನು ತಲುಪಲು ಸಾಧ್ಯವಾಗುತ್ತದೆ. ಇಂತಹದೊಂದು ಕಲೆ ಇತ್ತೀಚೆಗೆ ಕನ್ನಡದಲ್ಲಿ ಪ್ರಸಿದ್ಧವಾಗುತ್ತಿದೆ. ಈ ಕಲೆಯೆ ಕ್ಯಾಲಿಗ್ರಾಮ್‌.


ಇಂಗ್ಲೀಷ್‌ನಲ್ಲಿ ಜನಪ್ರಿಯವಾಗಿರುವ ಕ್ಯಾಲಿಗ್ರಾಮ್‌ ಈಗ ಕನ್ನಡಕ್ಕೂ ಬಂದಿದೆ. ಕನ್ನಡ ಪದಗಳಲ್ಲಿ ಕ್ಯಾಲಿಗ್ರಾಮ್‌ನ್ನು ಸೃಷ್ಠಿಸಿ ಇತ್ತೀಚೆಗೆ ಸುದ್ದಿಯಲ್ಲಿರುವವರ ಶಾಶ್ವತ್ ಹೆಗಡೆ ತ್ಯಾಗ್ಲಿ. ಅವರ ಕ್ಯಾಲಿಗ್ರಾಮ್‌ ವಿನ್ಯಾಸಗಳನ್ನು ಒಮ್ಮೆ ನೋಡಿದರೆ ನಿಮಗೂ ಆಶ್ಚರ್ಯವೆನಿಸದೆ ಇರಲಾರದು. ಕ್ಯಾಲಿಗ್ರಾಮ್‌ನ ವಿಶೇಷತೆಯೆನೆಂದರೆ ಭಾಷೆಯ ಲಿಪಿ ಗೊತ್ತಿರದವರು ಕೂಡ ಇದನ್ನು ನೋಡಿದ ತಕ್ಷಣ ಚಿತ್ರದ ಮೂಲಕ ಸುಲಭವಾಗಿ ಗ್ರಹಿಸಬಹುದಾಗಿದೆ. ಕಪ್ಪು ಬಿಳುಪಿನ ವಿನ್ಯಾಸದಲ್ಲಿ ಮೂಡಿ ಬರುವ ಶಾಶ್ವತ್‌ ಅವರ ಕ್ಯಾಲಿಗ್ರಾಮ್‌ನ ಸರಳತೆಯೇ ಅದರ ವಿಶೇಷತೆಯಾಗಿದೆ.


ನ್ಯೂಯಾರ್ಕ್‌ನ ಜೀನ್‌ ಲೀ ಎಂಬ ಕಲಾವಿದನ ಕ್ಯಾಲಿಗ್ರಾಮ್‌ಗಳನ್ನು ನೋಡಿ ಪ್ರೇರಣೆ ಪಡೆದುಕೊಂಡ ಶ್ವಾಶ್ವತ್‌ ಪ್ರಾರಂಭದಲ್ಲಿ 4 ಕ್ಯಾಲಿಗ್ರಾಮ್‌ಗಳನ್ನು ರಚಿಸಿದರು. ಸಾಮಾಜಿಕ ತಾಣಗಳಲ್ಲಿ ಅವುಗಳನ್ನು ಹಂಚಿಕೊಂಡಾಗ ಅದಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಯಿತು. ಕರ್ನಾಟಕದ ಶಿಕ್ಷಣ ಮಂತ್ರಿ ಎಸ್‌ ಸುರೇಶ ಕುಮಾರ್‌ ಇವರ ಕ್ಯಾಲಿಗ್ರಾಮ್‌ಗಳನ್ನು ಮೆಚ್ಚಿ ತಮ್ಮ ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿರುವುದು ಆ ವಿನ್ಯಾಸಗಳಿಗಿರುವ ಶಕ್ತಿಯನ್ನು ತೋರಿಸುತ್ತದೆ. ಈವರೆಗೂ ಶ್ವಾಶ್ವತ್‌ 16 ಕ್ಯಾಲಿಗ್ರಾಮ್‌ಗಳನ್ನು ರಚಿಸಿದ್ದಾರೆ.

ಶಾಶ್ವತ್‌ ಹೆಗಡೆ ತ್ಯಾಗ್ಲಿ

ಮೂಲತಃ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ತ್ಯಾಗ್ಲಿ ಊರಿನವರಾದ ಶಾಶ್ವತ್‌ ಪ್ರಸ್ತುತ ಗ್ರಾಫಿಕ್‌ ವಿನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.


ಶಬ್ದದಲ್ಲಿರುವ ಗ್ರಾಫಿಕ್‌ ಎಲಿಮೆಂಟ್‌ಗಳನ್ನು ಬಳಸಿಕೊಂಡು ಆ ಶಬ್ದ ಏನನ್ನೂ ಸೂಚಿಸುತ್ತದೆ ಎನ್ನುವುದನ್ನು ಚಿತ್ರದ ರೂಪದಲ್ಲಿ ಅದೇ ಶಬ್ದದಲ್ಲಿ ಬಿಂಬಿಸುವ ಕಲೆಯೇ ಕ್ಯಾಲಿಗ್ರಾಮ್‌ ಎಂದೆನ್ನುತ್ತಾರೆ ಶಾಶ್ವತ್‌. ಇದು ಕನ್ನಡದ ಮಟ್ಟಿಗೆ ವಿನೂತನ ಪ್ರಯತ್ನವೆಂದೇ ಹೇಳಬಹುದು. ಅಕ್ಷರವನ್ನು ವಿನ್ಯಾಸ ಮಾಡುವ ಕ್ಯಾಲಿಗ್ರಾಮ್‌ ಸೃಜನಶೀಲತೆಯಿಂದ ಕೂಡಿರುವ ಒಂದು ಕಲೆಯಾಗಿದೆ. ಇಲ್ಲಿ ವಿಭಿನ್ನವಾಗಿ ಆಲೋಚಿಸಿ ಶಬ್ದವನ್ನು ಅಕ್ಷರದ ರೂಪದಲ್ಲಿ ತರಬೇಕು. ಇಲ್ಲಿ ಬಲವಂತದ ಹೇರಿಕೆಗೆ ಅವಕಾಶವಿಲ್ಲ. ಚಿತ್ರವು ಶಬ್ದದಲ್ಲಿ ಒಡಮೂಡಬೇಕಿರುವದರಿಂದ ಎಲ್ಲ ಪದಗಳಲ್ಲಿಯೂ ಕ್ಯಾಲಿಗ್ರಾಮ್‌ಅನ್ನು ರಚಿಸಲು ಸಾಧ್ಯವಿಲ್ಲ ಎನ್ನುತ್ತಾರೆ ಶಾಶ್ವತ್‌.


ಕ್ಯಾಲಿಗ್ರಾಮ್‌ನಲ್ಲಿ ಅಕ್ಷರವು ಸ್ಪಷ್ಟವಾಗಿರಬೇಕು ಹಾಗೆಯೇ ಅದರ ಚಿತ್ರವೂ ಸ್ಪಷ್ಟವಾಗಿ ಕಾಣಬೇಕು ಹಾಗೂ ಇಲ್ಲಿ ಯಾವುದೇ ಆಕೃತಿಯನ್ನು ತಂದು ಹೇರಲು ಸಾಧ್ಯವಿಲ್ಲದಿರುವದರಿಂದ ಸೃಜಶಿಲತೆಗೆ ಇದೊಂದು ಸವಾಲೇ ಸರಿ. ಈ ಕಾರಣದಿಂದಾಗಿ ಕ್ಯಾಲಿಗ್ರಾಮ್‌ ಶಾಶ್ವತ್‌ರವರನ್ನು ಬಹುವಾಗಿ ಸೆಳೆದಿದೆ.


ಕ್ಯಾಲಿಗ್ರಾಮ್‌ ಹೇಗೆ ಹುಟ್ಟಿತೆಂಬ ಇತಿಹಾಸವನ್ನು ಇಣುಕಿದಾಗ 1918ರಲ್ಲಿ ಮೊದಲ ಬಾರಿಗೆ ಫ್ರೆಂಚ್‌ ಕವಿಯಾದ ಗುಯಿಲೋಮ್‌ ತನ್ನ ಕವಿತೆಗಳನ್ನು ಚಿತ್ರಗಳ ರೂಪದಲ್ಲಿ ಬರೆಯುತ್ತಿದ್ದ ಎಂಬ ಮಾಹಿತಿ ಸಿಗುತ್ತದೆ. ಈ ಕ್ಯಾಲಿಗ್ರಾಮ್‌ ಕಾಲಾನುಕ್ರಮದಲ್ಲಿ ಹಲವಾರು ಮಾರ್ಪಾಡುಗಳನ್ನು ಪಡೆದುಕೊಂಡು ಪ್ರಸ್ತುತದ ರೂಪವನ್ನು ಪಡೆದುಕೊಂಡಿದೆ.


ಕ್ಯಾಲಿಗ್ರಾಮ್‌ನೊಂದಿಗೆ ಉತ್ತರ ಕನ್ನಡದದ ಪ್ರವಾಸಿ ತಾಣಗಳ ವೆಕ್ಟರ್‌ ಚಿತ್ರಗಳನ್ನು ರೂಪಿಸಿರುವ ಶಾಶ್ವತ್‌ರವರು ಇವುಗಳ ಮೂಲಕ ಸ್ಥಳೀಯ ಪ್ರವಾಸಿ ತಾಣಗಳ ವೈಭವವನ್ನು ಎಲ್ಲರಿಗೂ ತಲುಪಿಸಬೇಕೆಂಬುದು ಇವರ ಆಶಯವಾಗಿದೆ.


ಇವರ ಕ್ಯಾಲಿಗ್ರಾಮ್‌ ಚಿತ್ರಗಳನ್ನು ನೋಡಿ ಇತರರು ಸ್ಪೂರ್ತಿಗೊಂಡು ಕನ್ನಡದಲ್ಲಿ ಮತ್ತಷ್ಟು ಪ್ರಯತ್ನಗಳನ್ನು ಮಾಡುತ್ತಿರುವುದು ಶಾಶ್ವತ್‌ರವರಿಗೆ ಖುಷಿಯನ್ನುಂಟು ಮಾಡಿದೆ.


ವೈದ್ಯಕೀಯ, ಇಂಜಿನೀಯರಿಂಗ್‌ ನಂತಹ ವೃತ್ತಪರ ಕೋರ್ಸ್‌ಗಳನ್ನೆ ತಂದೆ ತಾಯಿಗಳು ಮಾಡಿಸುತ್ತಾರೆ. ಆದರೆ ಈಗ ಕಾಲ ಬದಲಾಗಿದೆ. ಪ್ರತಿಭೆಯಿದ್ದರೆ ಯಾವ ಸರ್ಟಿಫಿಕೇಟಿನ ಅಗತ್ಯವಿಲ್ಲ ಎಂದೆನ್ನುತ್ತಾರೆ ಶಾಶ್ವತ್‌.

Share on
close