ಕನ್ನಡದ ಪೋಸ್ಟರ್ ಬಾಯ್‌ನ ಪಯಣ
ಪುನೀತ್ ಬಿ ಎ ಅವರ ಪಯಣ ತೋರಿಸಿಕೊಡುವ ಪ್ರಮುಖ ಅಂಶವೆಂದರೆ ಕಲೆಗೆ, ಕಂಟೆಂಟ್‌ಗೆ ಮುಖ್ಯವಾಗಿ ಬೇಕಾಗಿರುವುದು ಶ್ರದ್ಧೆ, ಆಸಕ್ತಿ ಮತ್ತು ಭಕ್ತಿ ಹೊರತು ಬರೀ ಹಣವಲ್ಲ.
ಇಷ್ಟಪಟ್ಟ ಕನ್ನಡ ಚಲನ ಚಿತ್ರಗಳ ಮಿನಿಮಲ್ ಪೋಸ್ಟರ್‌ಗಳನ್ನು ಮಾಡಿ ಹಲವರ ಗಮನ ಸೆಳೆಯುತ್ತ ಶುರುವಾದ ಬೆಂಗಳೂರಿನ ಪುನೀತ್ ಬಿ ಎ ಎನ್ನುವವರ ಪಯಣ ಮುಂದೇ ಪ್ರಕಾಶ ರೈ, ರಮೇಶ್ ಅರವಿಂದರಂತಹ ಹಲವಾರು ಗಣ್ಯ ಕಲಾವಿದರು ಸ್ವಇಚ್ಛೆಯಿಂದ ಭಾಗವಹಿಸಿದ ‘ದಿ ಕಥೆ ಪ್ರಾಜೆಕ್ಟ್ʼ, ವಿ ಲೈಕ್ ಇಟ್, 14 ಡೇಯ್ಸ್ ಆಫ್ ಲವ್, ಅನಾಮಧ್ಯೇಯ ಅಂಕಲ್ ಯೋಜನೆಗಳಿಗೆ ಜೀವ ನೀಡಿತು. ಇವರ ಪಯಣ ತೋರಿಸಿಕೊಡುವ ಪ್ರಮುಖ ಅಂಶವೆಂದರೆ ಕಲೆಗೆ, ಕಂಟೆಂಟ್‌ಗೆ ಮುಖ್ಯವಾಗಿ ಬೇಕಾಗಿರುವುದು ಶ್ರದ್ಧೆ, ಆಸಕ್ತಿ ಮತ್ತು ಭಕ್ತಿ ಹೊರತು ಬರೀ ಹಣವಲ್ಲ. ಒಂದೊಳ್ಳೆ ಯೋಚನೆ ಸಾಕಾರಗೊಳ್ಳಲು ಇಡೀ ವಿಶ್ವವೇ ಸಾಥ್ ನೀಡುತ್ತದೆ ಎನ್ನುವುದು ಪುನೀತ್ ಅವರ ವಿಷಯದಲ್ಲಿ ನಿಜವಾಗಿದೆ. ಪುನೀತ್‌ರವರು 9 ರಿಂದ 5 ರ ವರೆಗಿನ ಕೆಲಸವನ್ನು ಮಾಡುತ್ತ, ತಮ್ಮ ಆಸಕ್ತಿಯ ಕ್ಷೇತ್ರದಲ್ಲೂ ಕೃಷಿ ಮಾಡುತ್ತಾ, ಎರಡನ್ನು ಚೆನ್ನಾಗಿ ನಿಭಾಯಿಸುತ್ತಿದ್ದಾರೆ. ಅವರ ಬಗ್ಗೆ ಮತ್ತು ಅವರ ಕೆಲಸದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳೋಣ.
ಬೆಂಗಳೂರಿನ ನಿವಾಸಿಯಾದ ಪುನೀತ್ ಅವರಿಗೆ ಬಾಲ್ಯದಿಂದಲೂ ಕ್ರಿಯಾಶೀಲ ವಿಷಯಗಳೆಡೆ ಇದ್ದ ಒಲವಿನಿಂದ, ಕಲೆಯೊಂದಿಗೆ ನಂಟು ಗಟ್ಟಿಯಾಗೆ ಬೆಳೆದಿತ್ತು. ಶಾಲೆಯಲ್ಲಿದ್ದಾಗಲೇ ನಾಟಕ, ಆರತಿಯವರ ಮಿಠಾಯಿ ಮನೆ ಚಲನಚಿತ್ರದಲ್ಲಿ ನಟಿಸಿದ್ದು, ದೂರದರ್ಶನದಲ್ಲಿ ನಿರೂಪಣೆ ಮುಂತಾದ ಅವಕಾಶ ಸಿಕ್ಕಿದ್ದು ಅವರಿಗೆ ಒಳ್ಳೇಯ ಅನುಭವವನ್ನೆ ನೀಡಿತ್ತು.
ಕನ್ನಡ ಮಿನಿಮಲ್ ಪೋಸ್ಟರ್‌ಗಳು
ಇಂಜಿನೀಯರಿಂಗ ದಿನಗಳಲ್ಲಿ ಫೇಸ್‌ಬುಕ್‌ನಲ್ಲೊಬ್ಬರು ಗೆಳೆಯರು ‘ಮಿನಿಮಲ್ ಪೋಸ್ಟರ್ ಹಾಲಿವುಡ್‌ನಲ್ಲಿದೆ, ಬಾಲಿವುಡ್ ನಲ್ಲಿದೆ ಕನ್ನಡದಲ್ಲಿಲ್ಲʼ ಎಂದು ಪೋಸ್ಟ್ ಮಾಡಿದ್ದೇ ಮಿನಿಮಲ್ ಪೋಸ್ಟರ್‌ಗಳನ್ನು ಕನ್ನಡದಲ್ಲೂ ಮಾಡುವಂತೆ ಪುನೀತ್‌ರವರನ್ನು ಪ್ರೇರೆಪಿಸಿತು. ನಾವು ಪ್ರಯತ್ನಿಸೋಣ ಎಂದುಕೊಂಡು ಶುರುವಾದ ಪೋಸ್ಟರ್ ವಿನ್ಯಾಸಗಳು ವಿದೇಶಿ ಕನ್ನಡಿಗರನ್ನು ಸೆಳೆದವು. ಒಂದು ಪೋಸ್ಟರ್ ಚಿತ್ರದ ಮುಖ್ಯ ಅಂಶವನ್ನು ಹೇಳುವಂತಿರುತ್ತಿತ್ತು. ಸಣ್ಣಗೆ ಪುನೀತ್ ಅವರ ಕೆಲಸಕ್ಕೆ ಫೇಸ್‌ಬುಕ್‌ನಲ್ಲಿ ಲೈಕ್ಸ್ ಕಮೆಂಟ್‌ಗಳು ಸಿಗಲಾರಂಭಿಸಿದವು. ಸೋಷಿಯಲ್ ಮೀಡಿಯಾವನ್ನು ಉತ್ತಮವಾಗಿ ಬಳಸಿಕೊಂಡು ತಮ್ಮ ಕೆಲಸವನ್ನು ಜನರಿಗೆ ತಲುಪಿಸಿದರು.
“ಲೈಕ್, ಕಮೆಂಟ್‌ಗಾಗಿ ಶುರುವಾಗಿದ್ದು, ಸಿರಿಯಸ್ಸಾಯ್ತು. ಪೂರ್ತಿ ಸಿನಿಮಾವನ್ನು ಒಂದೇ ಪೋಸ್ಟರ್‌ನಲ್ಲಿ ಹಿಡಿದಿಡಲು ಪ್ರಯತ್ನಸಿದೆ,” ಎನ್ನುತ್ತಾರೆ ಪುನೀತ್.
ಕನ್ನಡ ಚಿತ್ರರಂಗದ ಅದ್ಭುತ ಚಿತ್ರಗಳ ಪೋಸ್ಟರ್ ಬ್ಯಾಂಕ್ ದಾಖಲೆಯಂತಾದ ಮಿನಿಮಲ್ ಪೋಸ್ಟರ್‌ಗಳ ಸಂಖ್ಯೆ ನೋಡ ನೋಡುತ್ತಿದ್ದಂತೆ 800 ಆಗಿ, ಪುನೀತ್‌ರಿಗೆ ಪೋಸ್ಟರ್ ಬಾಯ್ ಎಂದೇ ಹೆಸರುಬಿತ್ತು. ಚಿತ್ರರಂಗದಿಂದಲೂ ಹಲವಾರು ಬೇಡಿಕೆಗಳು ಬಂದವು. ಪೋಸ್ಟರ್ ಬಾಯ್ ಆರ್ಟ್ ಸ್ಟುಡಿಯೋ ಎಂಬ ನವೋದ್ಯಮವನ್ನು ನೊಂದಾಯಿಸಿದರು.
ನಂತರ ಸೆಲೆಬ್ರೆಟಿಂಗ್ ರಮೇಶ್ ಅರವಿಂದ ಎನ್ನುವ ಯೋಜನೆಯನ್ನು ಕೈಗೆತ್ತಿಕೊಂಡರು, ಇದು ನಟ ರಮೇಶ ಅರವಿಂದರವರು ನೂರು ಚಿತ್ರಗಳನ್ನು ಪೂರ್ತಿಗೋಳಿಸಿದ್ದನ್ನು ಅವರ ಮುಖ್ಯ ಚಿತ್ರಗಳ ಮಿನಿಮಲ್ ಪೋಸ್ಟರ್‌ಗಳಿಂದ ಸಂಭ್ರಮಿಸುವ ಒಂದು ಪ್ರಯತ್ನವಾಗಿತ್ತು, ಮತ್ತು ಇದು ಕನ್ನಡದಲ್ಲಿ ಮೊದಲಾಗಿತ್ತು.
ಇಂಜಿನೀಯರಿಂಗ್ ಮುಗಿದ ತಕ್ಷಣ ಎಲ್ಲರಂತೆ ಪುನೀತ್ ಕೂಡಾ ಕೆಲಸಕ್ಕೆ ಸೇರಿದರು. “ನಿಮ್ಮ ಆಸಕ್ತಿಯನ್ನು ಪೋಷಿಸಬೇಕೆಂದರೆ ಕೈಯಲ್ಲಿರುವ ಕೆಲಸವನ್ನು ಬಿಡಬೇಕಾಗುತ್ತೆ, ಆದರೆ ನನ್ನ ವಿಷಯದಲ್ಲಿ ಇದೆಲ್ಲಾ ಉಲ್ಟಾ ಆಯಿತು. ಕೆಲಸಕ್ಕೆ ಸೇರಿದ ಮೇಲೆ ನನ್ನ ಆಸಕ್ತಿಯ ಕ್ಷೇತ್ರದಲ್ಲು ನಾನು ಹೊಸ ಹೊಸ ಪ್ರಯೋಗಗಳನ್ನು ಮಾಡಿದೆ,” ಎನ್ನುತ್ತಾರೆ ಪುನೀತ್.
ಕಥೆ ಪ್ರಾಜೆಕ್ಟ್
ಸೋಷಿಯಲ್ ಮೀಡಿಯಾ ಬೇರೆಯದೆ ರೂಪ ಪಡೆದುಕೊಳ್ಳುತ್ತಿತ್ತು ಮತ್ತು ನಮ್ಮ ಮಾತುಕತೆಗಳು ಬರೀ ಕೆಲಸಕ್ಕೆ ಸೀಮಿತವಾಗುತ್ತಿವೆ ಎಂದೇನಿಸಿದಾಗ ಪುನೀತ್ ಅವರಿಗೆ ಕಥೆ ಪ್ರಾಜೆಕ್ಟ್ ನ ಪರಿಕಲ್ಪನೆ ಹೊಳೆಯಿತು. ಅದೊಂದು ಸಾಮಾಜಿಕ ವೇದಿಕೆ, ಅಲ್ಲಿ ಯಾರೂ ಬೇಕಾದರೂ 5-10 ನಿಮಿಷದ ಕಥೆ ಹೇಳಬಹುದಿತ್ತು. ಇಲ್ಲಿರುವ ಕಥೆಗಳೆಲ್ಲವೂ ಎಲ್ಲೂ ದಾಖಲಾಗದ, ಹೇಳದೆ ಉಳಿದಿರುವ ವೈಯಕ್ತಿಕ ಕಥೆಗಳು.
‘ದಿ ಕಥೆ ಪ್ರಾಜೆಕ್ಟ್ʼನ ಮೊದಲ ಕಂತಿನಲ್ಲಿ ಪ್ರಕಾಶ್ ರಾಜ್ ಕಾಣಿಸಿಕೊಂಡರು ಮತ್ತು ಕೊನೆಯ ಕಂತಿನಲ್ಲಿ (30) ರಮೇಶ ಅರವಿಂದ ಇದ್ದರು. 30 ದಿನಗಳ ಈ ಕಾರ್ಯಕ್ರಮದಲ್ಲಿ 30 ವಿವಿಧ ಕ್ಷೇತ್ರದ ಗಣ್ಯರು ಭಾಗವಹಿಸಿದರು. ಈ ವಿಡಿಯೋಗಳು ಒಟ್ಟಾರೆಯಾಗಿ 1.3 ಮಿಲಿಯನ್ ವೀಕ್ಷಣೆಗಳನ್ನು ಪಡೆಯುವಲ್ಲಿ ಯಶಸ್ವಿಯಾಯಿತು.
“‘ದಿ ಕಥೆ ಪ್ಜೆಕ್ಟ್ʼನಿಂದ ನಾನು ಕಲಿತಿದ್ದೇನೆಂದರೆ, ಎಲ್ಲದಕ್ಕೂ ಹಣ ಬೇಕೆಂದೆ ಇಲ್ಲ. ೩೦ ಜನರು ಕಥೆ ಪ್ರಾಜೆಕ್ಟ್‌ನ ಇಷ್ಟಪಟ್ಟು ತಾವೇ ರೇಕಾರ್ಡ್ ಮಾಡಿ ವಿಡಿಯೋ ಕಳಿಸಿದರು” ಎನ್ನುತ್ತಾರೆ ಪುನೀತ್.
ಐಡಿರೀಯಾ
‘ದಿ ಕಥೆ ಪ್ರಾಜೆಕ್ಟ್’ಗೆ ಸಿಕ್ಕ ಉತ್ತಮ ಪ್ರತಿಕ್ರಿಯೆಯಿಂದ ಪುನೀತ್ ‘ಐಡಿರೀಯಾ’ ಎಂಬ ಡಿಜಿಟಲ್ ಮೀಡಿಯಾ ಬ್ರ್ಯಾಂಡ್ ಒಂದನ್ನು ಆರಂಭಿಸಿದರು. ಐಡಿರೀಯಾ ಎಂದರೆ ಐಡಿಯಾ ಎಂದರ್ಥ, ಕರ್ನಾಟಕದ ಹಲವು ಗ್ರಾಮೀಣ ಭಾಗದಲ್ಲಿ ಜನ ಹೀಗೆನ್ನುತ್ತಾರೆ.
ಐಡಿರೀಯಾದಿಂದ ಡೆಸ್ಟಿನೇಷನ್, ಒಂದು ವರ್ಷದಲ್ಲಾದ ಹಲವಾರು ಕ್ಷೇತ್ರಗಳ ವಿಷ್ಲೇಶಣೆಯಾದ ವಿಲೈಕ್‌ಇಟ್, ಪ್ರೇಮಿಗಳು ಮುಕ್ತವಾಗಿ ಮಾತನಾಡುವಂತಹ 14 ಡೇಯ್ಸ್ ಆಫ್ ಲವ್, ಸಿನಿಮಾವನ್ನು ಬೊಂಬೆಯಾಟದಿಂದ ಜಾಹಿರಾತುಗೊಳಿಸುವ ಪಪ್ಪೆಟ್ ಸಿರೀಸ್ ನಂತಹ ಹಲವಾರು ವಿಭಿನ್ನ ಕಾರ್ಯಕ್ರಮಗಳು ಸಹಯೋಗದಲ್ಲಿ ಮತ್ತು ಸ್ವಂತವಾಗಿ ಹೊರಬಂದಿವೆ.
ಮುಂದೆ ಸ್ನ್ಯಾಪ್‌ಚಾಟ್‌ನ ಪೊಲೀಸ್ ಫಿಲ್ಟರ್ ಬಳಸಿ ಮಾಡಿದ ಸೇಲ್ಫಿ ವಿಡಿಯೋ ಸಿರೀಸ್‌ಗಳು ಮೆಚ್ಚುಗೆ ಗಳಿಸಿದವು. ಕಚಗುಳಿಯಿಡುತ್ತಲೆ ಸಮಾಜದ ಲೇವಡಿ ಮಾಡುತ್ತಾ, ಹೊಸ ವಿಷಯಗಳನ್ನು ಆ ವಿಡಿಯೋಗಳಲ್ಲಿ ಹೇಳಲಾಗುತ್ತಿತ್ತು. ಈ ಪಾತ್ರಕ್ಕೆ ಸಿಕ್ಕ ಮೆಚ್ಚುಗೆಯಿಂದ ಕಲರ್ಸ್ ಕನ್ನಡ ವಾಹಿನಿಯ ಧಾರಾವಾಹಿಯ ಜಾಹೀರಾತಿಗಾಗಿ ಬಳಸಿಕೊಂಡಿದ್ದು ಗಮನಾರ್ಹ. ಈ ವಿಡಿಯೋಗಳು 21 ವಾರಗಳಷ್ಟು ಹೊರಬಂದವು. ದುಡ್ಡಿಲ್ಲದೆ ಪ್ರೇಕ್ಷಕರನ್ನು ಹಿಡಿದಿಡುವ ವಿಷಯ(ಕಂಟೆಂಟ್) ವನ್ನು ಹೇಗೆ ಹುಟ್ಟುಹಾಕಬಹುದೆಂದು ಈ ವಿಡಿಯೋಗಳ ಮೇಲೆ ಫೋರಮ್‌ಗಳಲ್ಲಿ ಕೇಸ್ ಸ್ಟಡಿಗಳನ್ನು ಪ್ರಸ್ತುತಪಡಿಸಿದ್ದಾರೆ ಪುನೀತ್.