ವೀಲ್ ಚೇರ್ ನಲ್ಲಿ ಕೂತೆ ಟಿಕ್ ಟಾಕ್ ರಾಕ್ ಸ್ಟಾರ್ ಆದ ಚಾಂದಿನಿ ನಾಯರ್
ಸ್ನಾಯುವಿನ ದೌರ್ಬಲ್ಯದಿಂದ ಬಳಲುತ್ತಿದ್ದ ಚಾಂದಿನಿ ನಾಯರ್, ಹಲವು ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೂ, ನಗುನಗುತ್ತಲೇ ಎಲ್ಲವನ್ನು ಎದುರಿಸಿ, ಟಿಕ್ ಟಾಕ್ ಮೂಲಕ ಎಲ್ಲರ ಮನೆ ಮಾತಾಗಿದ್ದಾರೆ.
ಮನಸ್ಸಿದ್ದರೆ ಮಾರ್ಗ ಎಂಬ ದೊಡ್ಡವರ ಮಾತು ಎಷ್ಟು ಸತ್ಯ ನೋಡಿ. ಬದುಕು ನಮ್ಮೆದುರು ಅದೆಂಥ ಕಠಿಣ ಸವಾಲುಗಳನ್ನು ಒಡ್ಡಿದರೂ, ನಗುನಗುತ್ತಲೇ ಎಲ್ಲವನ್ನು ಎದುರಿಸಿ, ಗೆಲುವಿನ ನಗೆಬೀರಿದವರು ಹಲವರಿದ್ದಾರೆ. ಇವರ ಬದುಕು ಎಲ್ಲರಿಗೂ ಸ್ಫೂರ್ತಿ. ಇದೇ ರೀತಿಯ ಸ್ಪೂರ್ತಿದಾಯಕ ಬದುಕನ್ನು ಬದುಕುತ್ತಿರುವವರು ಕೇರಳ ಮೂಲದ ಚಾಂದಿನಿ ನಾಯರ್.
ಭಾರತದಲ್ಲಿ ಅತೀ ಹೆಚ್ಚು ಜನರು ಡೌನ್ಲೋಡ್ ಮಾಡಿಕೊಳ್ಳುವ ಆಪ್ ಎಂದರೆ, ಟಿಕ್ ಟಾಕ್. ಹೆಚ್ಚಿನ ಯುವಜನಾಂಗ ಇದನ್ನು ಒಂದು ಗೀಳಾಗಿ ಅಂಟಿಸಿಕೊಂಡು ಪ್ರಾಣಕ್ಕೆ ಆಪತ್ತು ತಂದುಕೊಂಡಿರುವ ಸುದ್ದಿ ಜನಸಾಮಾನ್ಯರನ್ನು ಬೆಚ್ಚಿಬೀಳಿಸಿದ್ದು ಇದೆ. ಆದರೆ ಇವೆಲ್ಲದಕ್ಕೂ ಹೊರತಾಗಿ ತಾವೂ ವೀಲ್ ಚೇರ್ ಮೇಲಿದ್ದರೂ ಟಿಕ್ ಟಾಕ್ಅನ್ನು ಒಂದು ವೇದಿಕೆಯಾಗಿ ಬಳಸಿಕೊಂಡು ಆ ಮೂಲಕ ರಾಕ್ ಸ್ಟಾರ್ ಆಗಿ ಹೊರ ಹೊಮ್ಮಿದವರು ಚಾಂದಿನಿ ನಾಯರ್.
ಚಾಂದಿನಿ ಮೂಲತಃ ಕೇರಳದವರಾಗಿದ್ದು, ಹುಟ್ಟುವಾಗ ಲೇ ಅತೀ ವಿರಳವಾದ ಸ್ನಾಯುವಿನ ದೌರ್ಬಲ್ಯದಿಂದ ಬಳಲುತ್ತಿದ್ದ ಅವರಿಗೆ ಬಾಲ್ಯದಿಂದಲೇ ನಟನೆ ಮತ್ತು ಸಂಗೀತದಲ್ಲಿ ವಿಶೇಷವಾದ ಆಸಕ್ತಿ ಇತ್ತು.
ಎಡೆಕ್ಸ್ ಲೈವ್ ಜೊತೆಗೆ ಮಾತನಾಡುತ್ತಾ, ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕಿದ ಚಾಂದಿನಿ,
“ನಾನು ಚಿಕ್ಕವಳಾಗಿದ್ದಾಗ, ಟಿವಿಯಲ್ಲಿ ಜಾಹೀರಾತುಗಳನ್ನು ಮ್ಯೂಟ್ ಮಾಡುತ್ತಿದ್ದೆ ಮತ್ತು ಅವರ ಧ್ವನಿಯನ್ನು ನಿಖರವಾಗಿ ಅನುಕರಿಸುತ್ತಿದ್ದೆ. ಅದು ನನ್ನಲ್ಲಿರುವ ನಟನೆಯ ಪ್ರಾರಂಭ ಎಂದು ಭಾವಿಸುತ್ತೇನೆ, ಆದರೆ ಮುಂದಿನ ದಿನಗಳಲ್ಲಿ ಅಂತಹ ಅಪ್ಲಿಕೇಶನ್‌ಗಳು ಬರಲಿವೆ ಎಂದು ನಾನು ಭಾವಿಸಿರಲಿಲ್ಲ," ಎಂದರು.
ಚಾಂದಿನಿ ತಮ್ಮ ಶಾಲದಿಂಗಳಿಂದಲೂ ಉತ್ತಮವಾದ ಗಾಯಕಿ ಆಗಿದ್ದು, ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದರು. ಆದರೆ ಸದಾ ಕಠಿಣ ಶಸ್ತ್ರ ಚಿಕಿತ್ಸೆಗೆ ಒಳಗಾಗಬೇಕಾದ ಕಾರಣ ಚಾಂದಿನಿ ತಮ್ಮ ಶಾಲದಿನಗಳಲ್ಲಿ ಕಷ್ಟದ ಸಮಯವನ್ನು ಎದುರಿಸುವಂತಾಯಿತು.
ಅದೇನೇ ಕಷ್ಟಗಳು ಎದುರಾದರೂ ಚಾಂದಿನಿ ತಮ್ಮೊಳಗಿನ ಪ್ರತಿಭೆಯನ್ನು ಜೀವಂತವಾಗಿರಸಲು ಪ್ರತಿಯೊಂದು ಅವಕಾಶವನ್ನು ಬಳಸಿಕೊಳ್ಳಲು ನಿರ್ಧರಿಸಿದರು. ತಮ್ಮ ಬಾಲ್ಯದಲ್ಲಿ ಜಾಹೀರಾತನ್ನು ಮ್ಯೂಟ್ ಮಾಡಿ ನಟರನ್ನು ಅನುಕರಿಸುತ್ತಿದ್ದರೋ ಅಂತೆಯೇ ಈಗ ನಮಗೆಲ್ಲರಿಗೂ ಚಿರಪರಿಚಿತ ಅಪ್ಲಿಕೇಶನ್ ಟಿಕ್ ಟಾಕ್ ಮತ್ತು ಡಬ್ಸ್‌ಮ್ಯಾಶ್ ಗಳನ್ನು ವೇದಿಕೆಯಾಗಿಸಿಕೊಂಡರು.
ಚಾಂದಿನಿ ತಮ್ಮ ವಿದ್ಯಾರ್ಥಿ ಜೀವನದಲ್ಲಿ ಹಲವಾರು ಡಬ್ಸ್‌ಮ್ಯಾಶ್ ಮಾಡಿದ್ದರೂ ಅವರಿಗೆ ಹೆಸರು ತಂದುಕೊಟ್ಟಿದ್ದು ಅವರ ಮೂರೂವರೆ ನಿಮಿಷದ ಡಬ್ಸ್‌ಮ್ಯಾಶ್ ವಿಡಿಯೋದಲ್ಲಿ ಅವರು ನಟ ದಿಲೀಪ್ ಅವರ ಧ್ವನಿಯನ್ನು ‘ಚೌರ್ಬುಜನ್’ ಎಂಬ ಅವರ ಹಳೆಯ ಸ್ಟೇಜ್ ಶೋಗಳಲ್ಲಿ ಒಂದರಿಂದ ಆಯ್ದು ಡಬ್ ಮಾಡಿದ್ದರು, ಇದು ಎರಡು ದಿನಗಳಲ್ಲಿ 15 ಲಕ್ಷ ವೀಕ್ಷಣೆಗಳನ್ನು ಗಳಿಸುವುದರ ಮೂಲಕ ಅವರನ್ನು ರಾಕ್ ಸ್ಟಾರ್ ಪಟ್ಟಕ್ಕೇರಿಸಿತು. ಕರ್ನಾಟಕ ಸಂಗೀತ ದಲ್ಲಿ ಪರಿಣಿತಿಪಡೆದ ಚಾಂದಿನಿ ಅವರ ಟಿಕ್ ಟಾಕ್ ವಿಡಿಯೋ ಒಂದು 5.8 ಲಕ್ಷ ಮಂದಿಯ ಮೆಚ್ಚುಗೆಗೆ ಪಾತ್ರವಾಗಿದೆ, ವರದಿ ಮನೋರಮಾ ಒನ್ಲೈನ್.
ಸಾಧನೆಗೆ ಬೇಕಾಗಿರುವುದು ಧೃಢಮನಸ್ಸು ಮತ್ತು ಆತ್ಮವಿಶ್ವಾಸ. ಇವೆರಡರ ಹೊರತಾಗಿ ಬೇರೆನು ಅಲ್ಲ. ಸಹಾನುಭೂತಿಯನ್ನು ಅಪೇಕ್ಷಿಸದ ಚಾಂದಿನಿ, ತಮ್ಮ ಬದುಕನ್ನು ಯಶಸ್ವಿಯಾಗಿ ರೂಪಿಸಿಕೊಂಡಿದ್ದಾರೆ.
ಬೆಂಗಳೂರಿನ ಆಕ್ಸ್‌ಫರ್ಡ್ ಕಾಲೇಜ್ ಆಫ್ ಫಾರ್ಮಸಿಯಲ್ಲಿ ಬಿ ಫಾರ್ಮ್ ಪದವಿಯನ್ನು ಪೂರೈಸಿ, ರಾಂಕ್ ವಿಜೇತರಾಗಿ ಹೊರಹೊಮ್ಮಿದ ಚಾಂದಿನಿ, ಹಲವಾರು ವೇದಿಕೆಯಲ್ಲಿ ಪ್ರದರ್ಶನ ನೀಡಿದ್ದಾರೆ, ವಿವಿಧ ಸಂಗೀತ ಸ್ಫರ್ಧೆಯಲ್ಲಿ ತೀರ್ಪುಗಾರರಾಗಿ, ಭಾಗವಹಿಸಿದ್ದಾರೆ.
ಚಾಂದಿನಿ ಅವರ ಈ ಬದುಕು ನಮಗೆಲ್ಲರಿಗೂ ಸ್ಪೂರ್ತಿಯಗಲಿ, ಇರುವ ಬದುಕನ್ನು ಪ್ರೀತಿಸಿ, ಸಂತಸದಿಂದ ಬದುಕುವ ಜೀವನೋತ್ಸಾಹ ಎಲ್ಲರಲ್ಲೂ ಜೀವಂತವಾಗಿರಲಿ ಎಂದು ಆಶಿಸೋಣ.
ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೇಸ್‌ಬುಕ್ ಹಾಗೂ ಟ್ವಿಟರ್ ನಲ್ಲಿ ಫಾಲೊ ಮಾಡಿ.