ಅಂಗವೈಕಲ್ಯಕ್ಕೆ ಸೆಡ್ಡು ಹೊಡೆದು ಚೆಸ್ ಲೋಕದಲ್ಲಿ ಮಿಂಚುತ್ತಿರುವ ಕರ್ನಾಟಕದ ಸಮರ್ಥ ರಾವ್
ಹುಟ್ಟಿನಿಂದ ಬಂದ ಸೆರಬ್ರಲ್ ಫಾಲ್ಸಿನಿಂದ 75% ಅಂಗವೈಕಲ್ಯಕ್ಕೆ ಒಳಗಾಗಿದ್ದರೂ, ಛಲ ಬಿಡದೆ ಬದುಕನ್ನು ಎದುರಿಸಿ ಕಿರಿಯ ವಯಸ್ಸಿಗೆ ವಿಶ್ವ ಚೆಸ್ ಸಂಸ್ಥೆಯ ಕ್ಯಾಂಡಿಡೇಟ್ ಮಾಸ್ಟರ್ ಎಂಬ ಬಿರುದನ್ನು ತನ್ನದಾಗಿಸಿಕೊಂಡ ನಮ್ಮ ನಾಡಿನ ಹೆಮ್ಮೆ ಸಮರ್ಥ ರಾವ್.
"Some injuries heal more quickly if you keep moving" - ನೀವು ಮುಂದೆ ಹೋಗುತ್ತಿದ್ದರೆ ಕೆಲವು ಗಾಯಗಳು ಬೇಗನೆ ಗುಣವಾಗುತ್ತವೆ - ಎಂಬ ನಿಕ್ ಜೆಸಿಕ್ ಅವರ ಮಾತು ಅದೆಷ್ಟು ಅರ್ಥಪೂರ್ಣ. ಮನದಲ್ಲಿ ಅಚಲವಾದ ನಂಬಿಕೆ, ಧೃಢ ಆತ್ಮವಿಶ್ವಾಸ, ಸಾಧನೆಗೆ ಬೇಕಾದ ತಪಸ್ಸು ಬಹುಶಃ ಇವೇ ಸಾಕು ಅದೆಷ್ಟೋ ಕಷ್ಟಗಳನ್ನು ನೋವುಗಳನ್ನು ಮೀರಿ ಯಶಸ್ಸಿನ ಶಿಖರಕ್ಕೇರಲು.
ಇಂದು ನಾವು ಹೇಳಹೊರಟಿರುವುದು ತನ್ನ ದೈಹಿಕ ಅಡೆತಡೆಗಳೆಲ್ಲವನ್ನು ಮೀರಿ, ಬದುಕಿನ ಚದುರಂಗದಾಟವನ್ನು ಸುಲಭವಾಗಿ ಭೇದಿಸಿ ಎದುರಿಗೆ ಬಂದ ಎಲ್ಲಾ ಅಡೆತಡೆಗಳಿಗೆ ಚೆಕ್ ಮೇಟ್ ಕೊಟ್ಟು ಬಂಧಿಸಿ ಸೋಲಿಸಿ ಆತ್ಮವಿಶ್ವಾಸದ ನಗುವ ಬೀರಿದ, ತುಂಬು ಜೀವನೋತ್ಸಾಹಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟ, ಖ್ಯಾತ ಚೆಸ್ ಪಟು ಸಮರ್ಥ ಜಗದೀಶ್ ರಾವ್ ಅವರ ಬಗ್ಗೆ.
ಹೊನ್ನಾವರದ ವಿನುತ ಭಟ್ ಹಾಗು ಜಗದೀಶ್ ರಾವ್ ಅವರ ಮಗನಾದ ಸಮರ್ಥ ಜಗದೀಶ್ ರಾವ್ ಅವಧಿಗೂ ಮೊದಲೇ ಜನಿಸಿದ ಕಾರಣ (8 ತಿಂಗಳಿಗೆ) ಹುಟ್ಟಿನಿಂದಲೂ ಸೆರೆಬ್ರೆಲ್ ಪಾಲ್ಸಿಗೆ ತುತ್ತಾಗಿ ಶೇಕಡ 75 ರಷ್ಟು ಅಂಗವೈಕಲ್ಯರಾದರು. ಆದರೆ ಚೆಸ್ ವಿಷ್ಯಕ್ಕೆ ಬಂದರೆ ಸಮರ್ಥರಿಗೆ ಸರಿಸಾಟಿ ಯಾರು ಇಲ್ಲಾ. ಅಮೆರಿಕ, ರಷ್ಯಾ ಮೊದಲಾದ ದೇಶಗಳ ಚೆಸ್ ಪಂದ್ಯಗಳಲ್ಲಿ ಪಾಲ್ಗೊಂಡು ಚಾಂಪಿಯನ್ ಆಗಿ ಹೊರಹೊಮ್ಮಿದ ಸಮರ್ಥರಿಗೆ ವಿಶ್ವ ಚೆಸ್ ಸಂಸ್ಥೆ ಕ್ಯಾಂಡಿಡೇಟ್ ಮಾಸ್ಟರ್ ಬಿರುದು ನೀಡಿ ಗೌರವಿಸಿದೆ.
ಆಟ ಶುರುವಾದ ಬಗೆ
ಪುಟ್ಟ ಬಾಲಕ ಸಮರ್ಥಗೆ ಸೆರೆಬ್ರೆಲ್ ಪಾಲ್ಸಿ ಇರುವ ಕಾರಣ ಸರಿಯಾಗಿ ನಡೆದಾಡಲು ಕಷ್ಟವಾಗುತ್ತಿತ್ತು, ತನ್ನ ಸಹಪಾಠಿಗಳೆಲ್ಲ ಮೈದಾನಕ್ಕೆ ಆಟ ಆಡಲು ಲಗ್ಗೆಯಿಟ್ಟಾಗ, ಪುಟ್ಟ ಬಾಲಕ ತರಗತಿ ಕಿಟಕಿಯಿಂದ ಮೈದಾನವನ್ನೇ ದಿಟ್ಟಿಸುತ್ತಿದ್ದ. ಇದನ್ನ ಕಂಡ ಅವರ ತಾಯಿ ವಿನುತ ಭಟ್ ತನ್ನ ಮಗನಿಗೆ ಸಾಧ್ಯವಾಗುವಂತೆ ಒಳಾಂಗಣ ಆಟವನ್ನು ಕಲಿಸಲು ಆರಂಭಿಸಿದರು.
ಚೆಸ್ ಮತ್ತು ಕೇರಮ್ ಅಲ್ಲಿ ಸಮರ್ಥ ಆಯ್ದುಕೊಂಡಿದ್ದು ಚೆಸ್ ಅನ್ನು. ಮನೆಯೇ ಮೊದಲ ಪಾಠ ಶಾಲೆ ಜನನಿ ತಾನೇ ಮೊದಲ ಗುರುವು ಎಂಬುದು ಇವರ ಪಾಲಿಗಂತೂ ಅಕ್ಷರಶಃ ಸತ್ಯ.
ಮೊದ ಮೊದಲಿಗೆ ತನ್ನ ಸಹಪಾಠಿಗಳೊಂದಿಗೆ ಆಟ ಆಡಿ ಸೋತು ಗೆದ್ದು ಮನೆಯಲ್ಲಿ ಅಮ್ಮ - ಅಜ್ಜನಿಂದ ಚೆಸ್ ಅನ್ನು ಕಲಿತು ನಿಧಾನವಾಗಿ ಸಮರ್ಥ ಓರ್ವ ಭರವಸೆಯ ಚೆಸ್ ಪಟು ಆದರು. ಶಾಲೆಯಲ್ಲಿ ನಡೆಯುವ ಚೆಸ್ ಪಂದ್ಯಾಟ, ವಲಯಮಟ್ಟ, ತಾಲ್ಲೂಕು ಮಟ್ಟ ಹಾಗೆ ಜಿಲ್ಲಾ, ರಾಜ್ಯ ಮಟ್ಟದ ಚೆಸ್ ಪಂದ್ಯಾಟದಲ್ಲಿ ಭಾಗವಹಿಸಿ ಬಹುಮಾನ ಗಳಿಸಿದರು.
ಸಮರ್ಥರ ಚೆಸ್ ಆಸೆಗೆ ನೀರೆರೆದು ಪೋಷಿಸಿದವರು ಹಲವರಿದ್ದಾರೆ. ಮೊದಲಿಗೆ ಪ್ರಾರಂಭದಲ್ಲಿ ಹೊನ್ನಾವರದ ಎಸ್ ಡಿ ಎಮ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕರಾದ ವಿ ಆರ್ ಶಾಸ್ತ್ರಿಗಳು. ನಂತರದಲ್ಲಿ ಮಧುರೈ ನ ಜ್ಯೋತಿ ಪ್ರಕಾಸಮ್, ಮೈಸೂರಿನ ಅಜಿತ್ ಎಮ್ ಪಿ, ಶಿರಸಿಯ ಪ್ರಸಾದ್ ಹೆಗಡೆ, ವಿನಯ್ ಕುಮಾರ್ ಹಿರೇಮಠ್, ಸರ್ವರಾಜ್ ಪಾಟೀಲ್ ಜಾರ್ಖಂಡ್ ಮೊದಲಾದವರಿಂದ ತರಬೇತಿ ಪಡೆದಿದ್ದಾರೆ.
ಸಮರ್ಥರವರ ಈ ಯಶಸ್ಸಿನ ಹಿಂದೆ ಅವರ ಹೆತ್ತವರ ಅಪಾರವಾದ ತ್ಯಾಗ, ಪ್ರೀತಿ ಇದೆ. ಬ್ಯಾಂಕ್ ಉದ್ಯೋಗಿ ಆಗಿರುವ ತಂದೆ ಜಗದೀಶ್ ರಾವ್ ಅವರು ಮಗನ ಬೆಳವಣಿಗೆಗೆ ತೊಂದರೆ ಉಂಟಾಗಬಾರದೆಂದು ತಮ್ಮ ವೃತ್ತಿಯಲ್ಲಿ ಬಂದ ಭಡ್ತಿಯನ್ನು ತ್ಯಜಿಸಿದ್ದಾರೆ, ತಮ್ಮ ಉಳಿತಾಯದ ಹಣದಲ್ಲಿ ಪ್ರತಿಯೊಂದು ಸ್ಪರ್ಧೆಗಳಿಗೆ ಮಗನನ್ನು ಕರೆದುಕೊಂಡು ಹೋಗುತ್ತಾರೆ.
ಯುವರ್ ಸ್ಟೋರಿ ಕನ್ನಡದೊಂದಿಗೆ ಮಾತನಾಡುತ್ತಾ ಜಗದೀಶ್ ರಾವ್,
"ಮಕ್ಕಳಿಗೆ ಪೋಷಕರ ಒತ್ತಡ ಹೇರುವುದನ್ನು ಕಡಿಮೆಮಾಡಬೇಕು. ಅವರ ಕ್ರಿಯಾಶೀಲತೆಗೆ ಹೆಚ್ಚು ಪ್ರಾಶಸ್ತ್ಯ ಕೊಡಬೇಕು. ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಗಳಿಸುವುದಕ್ಕಿಂತಲೂ, ಮಕ್ಕಳು ಹೊಸ ಅನುಭವಗಳನ್ನು ಗಳಿಸಿಕೊಳ್ಳಿವುದು ಮುಖ್ಯ" ಎಂದರು.
ಶಾಲಾ ಕಾಲೇಜು ಮಟ್ಟದಲಿ ಚೆಸ್ ಚಾಂಪಿಯನ್ ಆಗಿ ಹೊರಹೊಮ್ಮಿರುವುದಲ್ಲದೆ ಸಮರ್ಥ್ ಸತತ ಮೂರು ಭಾರಿ ಅಮೆರಿಕದಲ್ಲಿ ನಡೆವ ವಿಶೇಷ ಚೇತನರ ಚೆಸ್ ಪಂದ್ಯಾಟದಲ್ಲಿ ಭಾರತವನ್ನು ಪ್ರತಿನಿಧಿಸಿ ಚಾಂಪಿಯನ್ ಆಗಿ ದೇಶದ ಕೀರ್ತಿಪತಾಕೆಯನ್ನು ಹಾರಿಸಿದ್ದಾರೆ.
ರಷ್ಯಾದ ಐಪಿಸಿಎನಲ್ಲಿ ನಡೆದ ಚೆಸ್ ಚಾಂಪಿಯನ್ ಶಿಪ್ ನಲ್ಲಿ ಕೂಡ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿದ್ದಾರೆ. ಇತ್ತೀಚಿಗೆ ಅಮೆರಿಕದ ನ್ಯೂ ಜೆರ್ಸಿಯಲ್ಲಿ ನಡೆದ ವಿಶ್ವಮಟ್ಟದ ಕಿರಿಯರ ವಿಶೇಷ ಚೇತನರ ಚಾಂಪಿಯನ್ ಶಿಪ್ ನಲ್ಲಿ ದ್ವೀತಿಯ ಸ್ಥಾನಗಳಿಸಿದ್ದಾರೆ.
ALSO READ
ಡಾಲ್ಮಿಯಾ ಸಿಮೆಂಟ್, ತಮಿಳುನಾಡಿನಲ್ಲಿ ಆಯೋಜಿಸಿದ ದಿವ್ಯಾಂಗರ ವೈಯಕ್ತಿಕ ಚೆಸ್ ಚಾಂಪಿಯನ್ ಶಿಪ್ ನಲ್ಲಿ ಚೆಸ್ ದಿಗ್ಗಜ ವಿಶ್ವನಾಥನ ಆನಂದ್ ಅವರಿಂದ ಪ್ರಶಸ್ತಿ ಸ್ವೀಕರಿಸಿದ್ದಾರೆ. ಸಿಂಗಪುರ ಮೂಲದ ದಿ. ಡೇನಿಸ್ ಕೋವ್ ಸ್ಮರನಾರ್ಥ ಕೊಡಮಾಡುವ ಸುಮಾರು 51,000 ರೂ ಮೌಲ್ಯದ ವಿದ್ಯಾರ್ಥಿ ವೇತನಕ್ಕೂ ಭಾಜನರಾಗಿದ್ದಾರೆ.
"ಸಮರ್ಥ ಸುಮಾರು 80 ವಿವಿಧ ಟೂರ್ನಮೆಂಟ್ ಗಳಲ್ಲಿ ಬಾಗವಹಿಸಿದ್ದಾನೆ, ಸುಮಾರು 50 ವೇದಿಕೆಗಳಲ್ಲಿ ಸನ್ಮಾನ ಸ್ವೀಕರಿಸಿದ್ದಾನೆ, ನಮ್ಮ ಮನೆಯು ಅವನ ಕಪ್, ಮೇಡಲ್, ಪ್ರಶಸ್ತಿ ಪತ್ರಗಳಿಂದ ತುಂಬಿರುವುದನ್ನು ಕಂಡಾಗ ಅತೀವ ಹೆಮ್ಮೆಯಾಗುತ್ತದೆ" ಎಂದು ತಂದೆ ಜಗದೀಶ್ ರಾವ್ ತಮ್ಮ ಮನದಾಳದ ಮಾತನ್ನು ಹಂಚಿಕೊಂಡರು.
ಕರ್ನಾಟಕದಲ್ಲಿ 2015 ರಲ್ಲಿ ಚಿತ್ರದುರ್ಗದಲ್ಲಿ ನಡೆದ ರಾಪಿಡ್ ಚೆಸ್ ನಲ್ಲಿ ಭಾಗವಹಿಸಿ ಚಾಂಪಿಯನ್ ಆಗಿ ಚಿನ್ನದ ಪದಕ ಮತ್ತು 2018-19 ರಲ್ಲಿ ಗುಲ್ಬರ್ಗಾದಲ್ಲಿ ನಡೆದ ಟೂರ್ನಮೆಂಟ್ ನಲ್ಲಿ ಇತರ ಸಾಮಾನ್ಯ ಆಟಗಾರರೊಂದಿಗೆ ಆಡಿ ಗೆಲುವಿನ ನಗೆ ಬೀರಿದ್ದಾರೆ.
ಬಹುಮುಖ ಪ್ರತಿಭೆ
ಸಮರ್ಥರದ್ದು ಬಹುಮುಖ ಪ್ರತಿಭೆ, ತಾವೇ ಕವಿತೆ ರಚಿಸುತ್ತಾರೆ, ಮೊಬೈಲ್ ಹಾಗೂ ಟಿವಿಯಲ್ಲಿ ಕ್ರಿಕೆಟ್, ಚೆಸ್ ಮೊದಲಾದ ಪಂದ್ಯಗಳನ್ನು ವೀಕ್ಷಿಸುತ್ತಾರೆ, ಶಾಲೆಯ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸುತ್ತಾರೆ. ಪ್ರಸ್ತುತ ಪಿಯುಸಿ ಅಲ್ಲಿ ಶೇಕಡ 84.83 ಅಂಕಗಳಿಸಿ ಹೊನ್ನಾವರದ ಎಸ್ ಡಿ ಎಮ್ ಕಾಲೇಜಿನಲ್ಲಿ ಬಿಕಾಂ ಪದವಿ ವ್ಯಾಸಂಗ ಮಾಡುತ್ತಿದ್ದಾರೆ.
ಓರ್ವ ಅಂಥರಾಷ್ಟ್ರೀಯ ಚೆಸ್ ಪಟು ಆಗಬೇಕೆಂದು ಆಸೆ ಹೊತ್ತಿರುವ ಸಮರ್ಥ್ ರಾವ್ ಅವರ ಎಲ್ಲಾ ಕನಸುಗಳು ಕೈಗೊಳ್ಳಲಿ, ನಮ್ಮ ದೇಶದ ಹಿರಿಮೆಯನ್ನು ಆಗಸದೆತ್ತರಕ್ಕೆ ಕೊಂಡೊಯ್ಯಲಿ ಎಂದು ಆಶಿಸೋಣ.
ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್ ಹಾಗೂ ಟ್ವಿಟರ್ ನಲ್ಲಿ ಫಾಲೊ ಮಾಡಿ.