ತಮ್ಮ ಕರ್ತವ್ಯದ ಜೊತೆಗೆ ಪಾಠವನ್ನು ಹೇಳುತ್ತಿದ್ದಾರೆ ಇಂದೋರ್‌ನ ಈ ಪೋಲಿಸ್ ಅಧಿಕಾರಿ

ಸ್ಟೇಷನ್ ಹೌಸ್ ಆಫೀಸರ್ ವಿನೋದ್ ದೀಕ್ಷಿತ್ ಅವರು ಸಾಂಕ್ರಾಮಿಕ ರೋಗದಿಂದ ಕಲಿಯಲು ಕಷ್ಟವಾದ 12 ವರ್ಷದ ರಾಜ್ ಎಂಬ ಯುವ ಪೊಲೀಸ್ ಆಕಾಂಕ್ಷಿಗೆ ಬೋಧನೆ ಮಾಡುತ್ತಿದ್ದು, ಪ್ರತಿದಿನ ಗಣಿತ ಮತ್ತು ಇಂಗ್ಲೀಷ್ ವಿಷಯಗಳನ್ನು ಎರಡು ಗಂಟೆಗಳ ಕಾಲ ಕಲಿಸುತ್ತಾರೆ.

ತಮ್ಮ ಕರ್ತವ್ಯದ ಜೊತೆಗೆ ಪಾಠವನ್ನು ಹೇಳುತ್ತಿದ್ದಾರೆ ಇಂದೋರ್‌ನ ಈ ಪೋಲಿಸ್ ಅಧಿಕಾರಿ

Wednesday July 29, 2020,

2 min Read

ಕೊರೊನಾ ವೈರಸ್ ಎಂಬ ಸಾಂಕ್ರಾಮಿಕ ರೋಗವು ಸಮಾಜದ ಮೇಲೆ ಸಾಮಾಜಿಕವಾಗಿಯೂ ಆರ್ಥಿಕವಾಗಿಯೂ ಪ್ರತಿಕೂಲ ಪರಿಣಾಮಗಳನ್ನು ಬೀರಿದೆ. ಈ ಸಮಯದಲ್ಲಿ ಸೌಲಭ್ಯವಂಚಿತ ಕುಟುಂಬದ ಮಕ್ಕಳು ತಮ್ಮ ಶಿಕ್ಷಣ ಪಡೆಯುವುದು ಕಷ್ಟಕರವಾಗಿದೆ‌.


ಅನೇಕ ಭಾರತೀಯ ವಿದ್ಯಾರ್ಥಿಗಳಿಗೆ ಆನ್ಲೈನ್ ಶಿಕ್ಷಣ ದೂರದ ಕನಸಾಗಿದ್ದು, ಪೋಲಿಸ್ ಆಗಬೇಕೆಂಬ ಮಹತ್ವಾಂಕ್ಷೆ ಹೊಂದಿರುವ ಇಂದೋರ್‌ನ 12 ವರ್ಷದ ರಾಜ್ ಅಂತವರಲ್ಲಿ ಒಬ್ಬ.


ಚಿತ್ರಕೃಪೆ: ಎಎನ್‌ಐ

ಇಂದೋರ್‌ನ ಉಪನಗರ ಪಲಾಸಿಯಾದ ಸ್ಟೇಷನ್ ಹೌಸ್ ಆಫೀಸರ್‌ ರಾಜ್‌ಗೆ ಬೋಧಕರಾಗಲು ನಿರ್ಧರಿಸಿ, ಆ ಹುಡುಗನಿಗೆ ತರಗತಿಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದರು. ವಿನೋದ್ ದೀಕ್ಷಿತ್ ಅವರು ಕಳೆದೆರಡು ತಿಂಗಳಿನಿಂದ ತಮ್ಮ ಕರ್ತವ್ಯದ ಅವಧಿ ಮುಗಿದ ನಂತರ ರಾಜ್‌ಗೆ ಎರಡು ಗಂಟೆಗಳ ಕಾಲ ಇಂಗ್ಲೀಷ್ ಮತ್ತು ಗಣಿತ ವಿಷಯಗಳನ್ನು ಕಲಿಸುತ್ತಾರೆ.


ಈ ವಿಶಿಷ್ಟವಾದ ಕ್ರಿಯೆಯ ಬಗ್ಗೆ ಎಎನ್‌ಐ, ಪಲಾಸಿಯಾದ ಎಸ್‌ಎಚ್‌ಒ ವಿನೋದ್ ದೀಕ್ಷಿತ್ ಎಂಬ ಅಧಿಕಾರಿ ತಮ್ಮ ಕರ್ತವ್ಯ‌ ಮುಗಿಸಿ ರಾಜ್ ಎಂಬ ಹುಡುಗನಿಗೆ ಬೋಧಿಸುತ್ತಾರೆ ಎಂದು ಟ್ವೀಟ್ ಮಾಡಿದೆ.


ಎಎನ್‌ಐ‌ ಜೊತೆಗೆ ಮಾತನಾಡಿದ ವಿನೋದ್, "ನಾನು ಒಮ್ಮೆ ಗಸ್ತು ತಿರುಗುವಾಗ ಈ ಹುಡುಗನನ್ನು ಭೇಟಿಯಾದೆ, ಅವನು ಪೊಲೀಸ್‌ ಆಗಬೇಕೆಂದು ಕನಸು ಕಂಡಿದ್ದು ಆದರೆ ಟ್ಯೂಷನ್ ಗೆ ಹೋಗಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ. ಆದ್ದರಿಂದ ನಾನು ಅವನಿಗೆ ಇಂಗ್ಲೀಷ್ ಮತ್ತು ಗಣಿತವನ್ನು ಬೋಧಿಸಲು ಪ್ರಾರಂಭಿಸಿದೆ," ಎಂದರು.

ನಾಲ್ಕು ಗೋಡೆಯ ಮಧ್ಯೆ ತರಗತಿಯನ್ನು ನಡೆಸದಿರಲು ನಿರ್ಧರಿಸಿದ ವಿನೋದ್ ಅವರು, ತೆರೆದ ಬಯಲಿನಲ್ಲಿ ಅಂದರೆ ತಮ್ಮ ವಾಹನದ ಬ್ಯಾನೆಟ್, ಬೀದಿದೀಪದ ಕೆಳಗಡೆ, ರಸ್ತೆಬದಿಯಲ್ಲಿ ಅಥವಾ ಎಟಿಎಂ ಮುಂದೆ ತರಗತಿಗಳನ್ನು ತೆಗೆದುಕೊಳ್ಳುತ್ತಾರೆ.


"ಈ ಹುಡುಗನು ಕೆಳವರ್ಗದವನಾಗಿದ್ದು, ಟ್ಯೂಷನ್ ಗೆ ಹೋಗುವಷ್ಟು ಅವನಿಗೆ ಸೌಲಭ್ಯವಿಲ್ಲ. ಈತನ ತಂದೆ ಟಿಫಿನ್‌ ಸೆಂಟರ್‌ ಒಂದನ್ನು ನಡೆಸುತ್ತಿದ್ದು ಮತ್ತು ಅವರ ಅಜ್ಜ ಬೀದಿ ವ್ಯಾಪಾರಿಯಾಗಿದ್ದಾರೆ," ಎಂದು ವಿನೋದ್ ಹಿಂದೂಸ್ತಾನ್ ಟೈಮ್ಸ್‌ಗೆ ತಿಳಿಸಿದ್ದಾರೆ.


"ನಾವು ಕುಖ್ಯಾತ ಬ್ಯಾರಿ ಗ್ವಾಲ್ಟೋಲಿ ಪ್ರದೇಶದಲ್ಲಿ ಗಸ್ತಿನಲ್ಲಿದ್ದೇವು. ಆಗ 12 ವರ್ಷದ ಈ ಬಾಲಕ‌ ನನ್ನ ಬಳಿಗೆ ಬಂದು ತಾನು ಪೊಲೀಸ್ ಆಗಬೇಕೆಂದು ಬಯಸಿರುವುದಾಗಿ ಹೇಳಿ, ತನ್ನ "ಖಾಕಿ ಕನಸನ್ನು" ನನಸು ಮಾಡಲು ನಿಮ್ಮ ಸಹಾಯ ಬೇಕೆಂದು ನನ್ನ ಕೇಳಿದ," ಎಂದು ವಿನೋದ್ ಹೇಳುತ್ತಾರೆ.


ವೈರಸ್‌ ದಾಳಿ ಮತ್ತು ಲಾಕ್‌ಡೌನ್ ಕಾರಣದಿಂದಾಗಿ ಆರ್ಥಿಕ ಕುಸಿತದಿಂದಾಗಿ ಅವರ ಕುಟುಂಬ ತೀವ್ರವಾಗಿ ತತ್ತರಿಸಿದೆ. ಇದು ರಾಜ್‌ನ ಶಿಕ್ಷಣದ ಮೇಲೆ‌ ಪರಿಣಾಮ ಬೀರಿತು‌. ಅವರ ತಂದೆಯ ಟಿಫನ್‌ ಸೆಂಟರ್‌ನ್ನು ನಾಲ್ಕು ತಿಂಗಳಿನಿಂದ ಮುಚ್ಚಲಾಗಿದೆ. ಅವರು ದಿನನಿತ್ಯ ವೇತನದ ಕೆಲಸವನ್ನು ಆಶ್ರಯಿಸಿದ್ದಾರೆ.


ತಮ್ಮ ಶಿಕ್ಷಕನ ಕುರಿತು ಮಾತನಾಡುತ್ತಾ ರಾಜ್, "ನನಗೆ ಪೊಲೀಸ್ ಅಂಕಲ್‌ ಕಲಿಸುತ್ತಿರುವುದರ ಬಗ್ಗೆ ತುಂಬಾ ಸಂತೋಷವಿದೆ. ಪ್ರತಿದಿನ ಅವರಿಂದ ನಾನು ಟ್ಯೂಷನ್ ತೆಗೆದುಕೊಳ್ಳುತ್ತೇನೆ. ಜೊತೆಗೆ ಹೋಂ ವರ್ಕ್ ಮಾಡುತ್ತೇನೆ. ಪೋಲಿಸ್ ಆಗಬೇಕೆಂಬ ಆಸೆಯಿಂದ ನಾನು ಅಧ್ಯಯನವನ್ನು ಮಾಡುತ್ತಿದ್ದೇನೆ," ಎನ್ನುತ್ತಾರೆ.