Brands
Discover
Events
Newsletter
More

Follow Us

twitterfacebookinstagramyoutube
ADVERTISEMENT
Advertise with us

ಕೊರೊನಾವೈರಸ್ ಬಿಕ್ಕಟ್ಟಿನ ಮಧ್ಯೆ ಬಡವರಿಗೆ ಸಹಾಯ ಮಾಡಲು ಪುಸ್ತಕ ಬರೆದು 1 ಲಕ್ಷ ರೂ. ಸಂಗ್ರಹಿಸಿದ 5 ವರ್ಷದ ಮಗು

5 ವರ್ಷದ ಹುಡುಗಿ ಅರಣ್ಯಾ ದತ್ತ ಬೇಡಿ ತನ್ನ ಸಚಿತ್ರ ಪುಸ್ತಕವನ್ನು ಮಾರಾಟ ಮಾಡಿ ಕೊರೊನಾವೈರಸ್‌ ಬಿಕ್ಕಟ್ಟಿನಿಂದ ಕಷ್ಟ ಅನುಭವಿಸುತ್ತಿರುವ ದೀನದಲಿತರಿಗಾಗಿ 1 ಲಕ್ಷ ರೂ ಸಂಗ್ರಹಿಸಿದ್ದಾಳೆ. ಈ ಕೆಲಸಕ್ಕಾಗಿ ಯುನಿಸೆಫ್‌ ಮತ್ತು ಅಕ್ಷಯ ಪಾತ್ರಾ ಫೌಂಡೇಶನ್‌ ನೊಂದಿಗೆ ಕೈಜೋಡಿಸಿದ್ದಾಳೆ.

ಕೊರೊನಾವೈರಸ್ ಬಿಕ್ಕಟ್ಟಿನ ಮಧ್ಯೆ ಬಡವರಿಗೆ ಸಹಾಯ ಮಾಡಲು ಪುಸ್ತಕ ಬರೆದು 1 ಲಕ್ಷ ರೂ. ಸಂಗ್ರಹಿಸಿದ 5 ವರ್ಷದ ಮಗು

Friday May 08, 2020 , 2 min Read

ಕೋವಿಡ್‌-19 ವಿಶ್ವದಾದ್ಯಂತ 2.5 ಲಕ್ಷಕ್ಕೂ ಅಧಿಕ ಸಾವುಗಳಿಗೆ ಮತ್ತು 38 ಲಕ್ಷ ಸೋಂಕು ಪ್ರಕರಣಗಳಿಗೆ ಕಾರಣವಾಗಿದೆ. ಸರ್ಕಾರ, ಸಂಶೋಧಕರು, ಆರೋಗ್ಯ ಕಾರ್ಯಕರ್ತರು ಮತ್ತು ಇತರರು ದನಿವರಿಯದೇ ಪಿಡುಗಿನ ವಿರುದ್ಧ ಹೋರಾಡುತ್ತಿದ್ದಾರೆ.


ದೇಶದ ಜನರ ಹಿತಾಸಕ್ತಿಯಿಂದ ಭಾರತದಲ್ಲಿ ಲಾಕ್‌ಡೌನ್‌ ಅನ್ನು ಅಧಿಕೃತವಾಗಿ 3 ನೇ ಬಾರಿಗೆ ಮೇ 18 ರ ವರೆಗೂ ವಿಸ್ತರಿಸಲಾಗಿದೆ ಮತ್ತು ಹಲವು ಪರಿಹಾರ ಕ್ರಮಗಳನ್ನು, ಸಾರಿಗೆ ವ್ಯವಸ್ಥೆಯನ್ನು ಮತ್ತು ಪ್ಯಾಕೆಜ್‌ಗಳನ್ನು ಘೋಷಿಸಲಾಗಿದೆ.


5 ವರ್ಷದ ಬಾಲೆ ಅರಣ್ಯಾ ದತ್ತ ಬೇಡಿ (ಚಿತ್ರಕೃಪೆ: ಎಎನ್‌ಐ ನ್ಯೂಸ್‌)


ಈ ಹೋರಾಟದಲ್ಲಿ ದೆಹಲಿಯ 5 ವರ್ಷದ ಅರಣ್ಯಾ ದತ್ತ ಬೇಡಿ ಸಹ ಒಬ್ಬಳು. ತನ್ನ ಪಿಗ್ಗಿ ಬ್ಯಾಂಕ್‌(ಕುಡಿಕೆ) ನಲ್ಲಿರುವ ಹಣವನ್ನು ದೇಣಿಗೆ ನೀಡಲು ಮುಂದಾಗಿದ್ದ ಮಗುವಿಗೆ ಅವಳ ಹತ್ತಿರ ತುಂಬಾ ಕಡಿಮೆ ಹಣ ಇದೆ ಎಂದು ತಿಳಿದಾಗ, ಕೊರೊನಾವೈರಸ್‌ ನಿಂದ ಪಾರಾಗಲು ಮಕ್ಕಳು ತೆಗೆದುಕೊಳ್ಳಬೇಕಾದ ಮುಂಜಾಗೃತಾ ಕ್ರಮಗಳನ್ನು ವಿವರಿಸುವ ಸಚಿತ್ರವಾದ ಪುಸ್ತಕವೊಂದನ್ನು ಬರೆದು ಮಾರಾಟ ಮಾಡಿ ಹಣ ಸಂಗ್ರಹಿಸುವ ಯೋಚನೆ ಬಂದಿದೆ.


“ತಿನ್ನಲು ಆಹಾರವಿಲ್ಲದ ಹಲವು ಜನರನ್ನು ನಾನು ಬಾಲ್ಕನಿಯಿಂದ ನೋಡಿದ್ದೇನೆ, ಎಷ್ಟೋ ಜನರು ಊಟ ಮಾಡಲು ದೊಡ್ಡ ಸರತಿ ಸಾಲಿನಲ್ಲಿ ನಿಂತಿರುವುದನ್ನು ನೋಡಿದ್ದೇನೆ. ಪುಸ್ತಕವನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಿ, ಹಣ ಸಂಗ್ರಹಿಸಿ ಈ ಜನರಿಗೆ ಆಹಾರ ಸಿಗುವಂತೆ ಮಾಡುವುದಕ್ಕಾಗಿ ನಾನು ಈ ಪುಸ್ತಕವನ್ನು ಬರೆದೆ,” ಎನ್ನುತ್ತಾಳೆ ಅರಣ್ಯಾ, ವರದಿ ಎಎನ್‌ಐ ನ್ಯೂಸ್‌.


ಅರಣ್ಯಾ ಎರಡೂವರೆ ವರ್ಷದವಳಿದ್ದಾಗಿನಿಂದಲೂ ಚಿತ್ರ ಬಿಡಿಸುತ್ತಾಳೆ. ಅವಳ ಪುಸ್ತಕ ಹೊರಗಡೆ ಓಡಾಡಲು ಇಷ್ಟ ಪಡುವ ಟಿಯಾ ಎಂಬ ಹುಡುಗಿಯ ಸುತ್ತ ಸುತ್ತುತ್ತದೆ. ಆದರೆ ಕೊರೊನಾವೈಸ್‌ ಕಾಟದಿಂದ ಟಿಯಾ ಮನೆಯಲ್ಲೆ ಇರಬೇಕಾದ ಪರಿಸ್ಥಿತಿ ಎದುರಾಗಿರುತ್ತದೆ.


‘ಬಿ ಕಾಮ್‌ ವಿಥ್‌ ಕೊರೊನಾವೈರಸ್‌ʼ ಎಂಬ ಹೆಸರಿನ ಈ ಪುಸ್ತಕ ಲಾಕ್‌ಡೌನ್‌ ಸಮಯದಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗೃತಾ ಕ್ರಮಗಳು ಮತ್ತು ಮಕ್ಕಳು ಹೇಗೆ ತಮ್ಮ ಸಮಯವನ್ನು ಕಳೆಯಬೇಕೆಂಬುದರ ಮೇಲೆ ಬೆಳಕು ಚೆಲ್ಲುತ್ತದೆ.


ಅಷ್ಟೇ ಅಲ್ಲದೇ ಅದು “ಲಾಕ್‌ಡೌನ್‌ ಶಿಕ್ಷೆಯಲ್ಲ” ಎಂಬ ಸಂದೇಶವನ್ನು ಓದುಗರಿಗೆ ನೀಡುತ್ತದೆ.


ಕೆಲವು ವಾರಗಳಿಂದ ದಿನಗೂಲಿ ಕಾರ್ಮಿಕರಿಗೆ ನೈರ್ಮಲ್ಯ ಅಗತ್ಯ ವಸ್ತುಗಳನ್ನು ಮತ್ತು ಆಹಾರವನ್ನು ನೀಡುತ್ತಿರುವ ಯುನಿಸೆಫ್‌ ಮತ್ತು ಅಕ್ಷಯ ಪಾತ್ರಾ ಫೌಂಡೇಶನ್‌ ನೊಂದಿಗೆ ಅರಣ್ಯಾ ಕೈಜೋಡಿಸಿದ್ದಾಳೆ.


ಈ ಪುಸ್ತಕವು ವೆಬ್‌ಸೈಟ್‌ನಲ್ಲಿ ಉಚಿತವಾಗಿ ಡೌನ್‌ಲೋಡ್‌ ಮಾಡಿಕೊಳ್ಳಲು ಲಭ್ಯವಿದ್ದು, ಓದಿ ಇಷ್ಟಪಟ್ಟವರು ಧನಸಹಾಯ ಮಾಡಬಹುದು. ಇಲ್ಲಿಯವರೆಗೂ 1 ಲಕ್ಷ ರೂ ಸಂಗ್ರಹಿಸಲಾಗಿದ್ದು, ಅದರಲ್ಲಿ 52 ಸಾವಿರ ರೂ.ಯನ್ನು ಅಕ್ಷಯಾ ಪಾತ್ರಾ ಫೌಂಡೇಶನ್‌ ಗೆ ನೀಡಲಾಗಿದೆ. ಈ ಹಣದಿಂದ 2,000 ಊಟಗಳನ್ನು ಅಥವಾ 61 ರೇಷನ್‌ ಕಿಟ್‌ಗಳನ್ನು ಬಡವರಿಗೆ ನೀಡಲು ಫೌಂಡೇಶನ್‌ಗೆ ಸಹಾಯಮಾಡುತ್ತದೆ.


ದುರ್ಬಲ ಕಾರ್ಮಿಕರಿಗೆ ಸಹಾಯ ಮಾಡಲು ತಾನು ಏನೋ ಮಾಡಿದ್ದೇನೆ ಎಂಬ ಸಮಾಧಾನದ ಭಾವನೆ ಅರಣ್ಯಾಳಲ್ಲಿದೆ. ಶೀಘ್ರದಲ್ಲೇ ಹೆಚ್ಚಿನ ಪುಸ್ತಕಗಳನ್ನು ಬರೆಯಲು ಅವಳು ಯೋಜಿಸಿದ್ದಾಳೆ.