ಸುಲಭ ಸಂಗ್ರಹಣೆ, ಸಾಗಾಟ ಮತ್ತು ಶೇ70ರಷ್ಟು ಪರಿಣಾಮಕಾರಿ ಈ ಕೋವಿಡ್-19 ಲಸಿಕೆ
ಎರಡು ವಿಭಿನ್ನ ಡೋಸ್ ನೀಡಿ ಪರೀಕ್ಷಿಸಿದ ಅಸ್ಟ್ರಾಜೆನೆಕಾ ಕೋವಿಶೀಲ್ಡ್‌ನ ಸರಾಸರಿ ಪರಿಣಾಮ 70 ಪ್ರತಿಶತ ಎಂದಿದೆ.
ಅಸ್ಟ್ರಾಜೆನೆಕಾದ ಕೋವಿಡ್-19 ಲಸಿಕೆ ಸರಾಸರಿ 70 ಪ್ರತಿಶತ ಪರಿಣಾಮಕಾರಿಯಾಗಿದೆ ಎಂಬ ಘೋಷನೆಯ ಬಗ್ಗೆ ಸೇರಂನ ಸಿಇಓ ಅದರ್ ಪೂನ್‌ವಾಲಾ ಸೋಮವಾರ ಹರ್ಷ ವ್ಯಕ್ತಪಡಿಸಿದ್ದಾರೆ.
ಅಸ್ಟ್ರಾಜೆನೆಕಾ ಹೇಳುವ ಪ್ರಕಾರ ಅರ್ಧ ಡೋಸ್ ನೀಡಿ ಒಂದು ತಿಂಗಳು ಬಿಟ್ಟು ಪೂರ್ತಿ ಡೋಸ್ ನೀಡಿದಾಗ ಲಸಿಕೆ 90 ಪ್ರತಿಶತ ಪರಿಣಾಮಕಾರಿಯಾಗಿತ್ತು ಮತ್ತು ಇನ್ನೊಂದು ವಿಧದಲ್ಲಿ ಒಂದು ತಿಂಗಳ ಅಂತರದಲ್ಲಿ ಎರಡು ಪೂರ್ಣ ಡೋಸ್ ನೀಡಿದಾಗ ಲಸಿಕೆಯ ಪರಿಣಾಮ 62 ಪ್ರತಿಶತವಾಗಿತ್ತು.
ಎರಡು ಡೋಸ್‌ಗಳ ಸರಾಸರಿ ಪರಿಣಾಮ 70 ಪ್ರತಿಶತವಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.
ಟ್ವೀಟ್ ಒಂದರಲ್ಲಿ ಪೂನ್‌ವಾಲಾ, “ಅಗ್ಗದ, ಸುಲಭವಾಗಿ ಸಾಗಿಸಬಹುದಾದ ಮತ್ತು ಶೀಘ್ರದಲ್ಲೆ ಲಭ್ಯವಾಗಲಿರುವ ಕೋವಿಶೀಲ್ಡ್ ಒಂದು ರೀತಿಯ ಡೋಸ್‌ನಲ್ಲಿ 90% ಮತ್ತು ಇನ್ನೊಂದರಲ್ಲಿ 62% ಪರಿಣಾಮಕಾರಿಯಾಗಿರುವ ಸುದ್ದಿಯನ್ನು ಕೇಳಲು ಖುಷಿಯಾಗುತ್ತದೆ,” ಎಂದಿದ್ದಾರೆ.
ಸೇರಂ ಪ್ರಸ್ತುತ ಆಕ್ಸ್‌ಫರ್ಡ್ ಯುನಿವರ್ಸಿಟಿ-ಅಸ್ಟ್ರಾಜೆನೆಕಾದ ಕೋವಿಡ್-19 ಲಸಿಕೆಯ ಕ್ಲಿನಿಕಲ್ ಟ್ರೈಯಲ್ ಅನ್ನು ಭಾರತದಲ್ಲಿ ನಡೆಸುತ್ತಿದೆ.
3 ಬಿಲಿಯನ್ ಡೋಸ್‌ಗಳನ್ನು 2021ರಲ್ಲಿ ತಯಾರಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಅಸ್ಟ್ರಾಜೆನೆಕಾ ಹೇಳಿದೆ.
“ಈ ಲಸಿಕೆಯನ್ನು ಸುಲಭವಾಗಿ ಸಂಗ್ರಹಿಸಿಡಬಹುದು, ಸಾಗಿಸಬಹುದು ಮತ್ತು ಸಾಮಾನ್ಯ ಶೀಥಲೀಕರಣ ಸ್ಥಿತಿಯಲ್ಲಿಯೆ ಕನಿಷ್ಠ ಆರು ತಿಂಗಳವರೆಗೆ ಇಡಬಹುದು,” ಎಂದು ಅದು ತಿಳಿಸಿದೆ.
ಇದರ ನಡುವೆ ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷ ಆನಂದ್ ಮಹೀಂದ್ರಾ, “ಡೋಸೆಜ್ ಪರಿಣಾಮಕಾರಿಯಾಗಿದ್ದಷ್ಟು ಆರ್ಥಿಕವಾಗಿ ಒಳ್ಳೆಯದು. ಸುಲಭ ಸಂಗ್ರಹಣೆ ಮತ್ತು ಸಾಗಾಟ ಈ ಲಸಿಕೆಯನ್ನು ಭಾರತಕ್ಕೆ ಹೆಚ್ಚು ಸೂಕ್ತವಾಗಿಸುತ್ತದೆ. ಇದು ತುಂಬಾ ಒಳ್ಳೆ ಸುದ್ದಿ. ಅದರ್‌ಪೂನ್‌ವಾಲಾ ಬೇಗ ಇದನ್ನು ಹೊರತನ್ನಿ,” ಎಂದು ಟ್ವೀಟ್ ಮಾಡಿದ್ದಾರೆ.
ಇನ್ನೊಂದು ಬೆಳೆವಣಿಗೆಯಲ್ಲಿ ಜಾಗತಿಕ ಔಷಧ ತಯಾರಕರಾದ ಪಿಫೈಜರ್ ಮತ್ತು ಬಯೋಎನ್‌ಟೆಕ್ ತಮ್ಮ ಕೋವಿಡ್-19 ಲಸಿಕೆ 65 ವರ್ಷದ ಮೇಲಿನ ಹಿರಿಯರನ್ನು ಒಳಗೊಂಡಂತೆ 95 ಪ್ರತಿಶತ ಪರಿಣಾಮಕಾರಿಯಾಗಿದೆ ಎಂದು ಹೇಳಿದ್ದಾರೆ.
(ವಿಶೇಷ ಸೂಚನೆ: ಪಿಟಿಐ ಲೇಖನಕ್ಕೆ ಅವಷ್ಯಕವಾದ ವಿವರಗಳನ್ನು ಸೇರಿಸಲಾಗಿದೆ)