ಮರುಬಳಕೆ ಮಾಡಿದ ಪ್ಲಾಸ್ಟಿಕ್‌ನಿಂದ ತಯಾರಾದ ಮಂಗಳೂರಿನ ಪರಿಸರ ಸ್ನೇಹಿ ಮನೆ

ದಿ ಪ್ಲಾಸ್ಟಿಕ್‌ ಫಾರ್‌ ಚೆಂಜ್‌ ಇಂಡಿಯಾ ಫೌಂಡೇಶನ್‌ 1,500 ಕೆಜಿ ಪ್ಲಾಸ್ಟಿಕ್‌ ತ್ಯಾಜ್ಯವನ್ನು ಮರುಬಳಕೆ ಮಾಡಿ ಪರಿಸರ ಸ್ನೇಹಿ ಮನೆ ನಿರ್ಮಿಸಿದೆ.

ಮರುಬಳಕೆ ಮಾಡಿದ ಪ್ಲಾಸ್ಟಿಕ್‌ನಿಂದ ತಯಾರಾದ ಮಂಗಳೂರಿನ ಪರಿಸರ ಸ್ನೇಹಿ ಮನೆ

Tuesday November 17, 2020,

2 min Read

2011 ರ ಗಣತಿಯ ಪ್ರಕಾರ ಗಂಡಸರು, ಮಹಿಳೆಯರು, ಮಕ್ಕಳು, ವೃದ್ಧರು ಮತ್ತು ಅಂಗವಿಕಲರು ಸೇರಿದಂತೆ 1.77 ದಶಲಕ್ಷ ಜನರಿಗೆ ಮನೆಯಿಲ್ಲ.


ತ್ಯಾಜ್ಯ ಸಂಗ್ರಹಗಾರ್ತಿ ಕರ್ನಾಟಕದ ಕಮಲಾ ಅವರು ದಿ ಪ್ಲಾಸ್ಟಿಕ್‌ ಫಾರ್‌ ಚೆಂಜ್‌ ಇಂಡಿಯಾ ಫೌಂಡೇಶನ್‌ನೊಂದಿಗೆ ಸೇರಿ ಈ ಸಮಸ್ಯೆಗೆ ವಿಶಿಷ್ಟ ಪರಿಹಾರವನ್ನು ರೂಪಿಸಿದ್ದಾರೆ. ಈ ಫೌಂಡೇಶನ್‌ ರಾಜ್ಯದ ಕರಾವಳಿಯಲ್ಲಿರುವ ತ್ಯಾಜ್ಯ ಸಂಗ್ರಾಹಕರಿಗೆ ಸಹಾಯ ಮಾಡುತ್ತದೆ, ಮತ್ತು ಪಚನಾಡಿಯ ತ್ಯಾಜ್ಯ ಸಂಗ್ರಾಹಕರೊಬ್ಬರಿಗೆ ಸಂಪೂರ್ಣವಾಗಿ ಮರುಬಳಕೆ ಮಾಡಿದ ಪ್ಲಾಸ್ಟಿಕ್‌ನಿಂದ ಮನೆ ನಿರ್ಮಿಸಲು ಸಹಾಯ ಮಾಡಿದೆ.


“ಇದೊಂದು ನಾವೀನ್ಯ, ಸುಸ್ಥಿರ ಪರಿಸರದ ಯೋಜನೆಯಾಗಿದ್ದು, ಇಲ್ಲಿ ಮರುಬಳಕೆ ಮಾಡಲು ಕಷ್ಟವಾದ ಪ್ಲಾಸ್ಟಿಕ್‌ ತ್ಯಾಜ್ಯವನ್ನು ಅಗ್ಗದ ಮನೆ ನಿರ್ಮಿಸಲು ಬಳಸುವಂತಹ ಕಟ್ಟಡದ ಸಾಮಗ್ರಿಯಾಗಿ ಮಾರ್ಪಡಿಸಲಾಗುತ್ತದೆ. ಮರುಬಳಕೆ ಮಾಡಿದ ಪ್ಲಾಸ್ಟಿಕ್‌ನಿಂದ ನಿರ್ಮಿಸಿದ ಮಂಗಳೂರಿನ ಈ ಮನೆ ಕರ್ನಾಟಕದಲ್ಲೆ ಮೊದಲನೆಯದು. ಮನೆ ನಿರ್ಮಿಸುವ ಮೊದಲೆ ಕಟ್ಟದ ಸಾಮಗ್ರಿಯ ತಾಳಿಕೆ ಬಾಳಿಕೆಯನ್ನು ಪರೀಕ್ಷಿಸಲಾಗಿದೆ,” ಎಂದು ಫೌಂಡೇಶನ್‌ನ ಅಧಿಕಾರಿಯಾದ ಶಿಫ್ರಾಹ್‌ ಜಾಕೊಬ್ಸ್‌ ಡೆಕ್ಕನ್‌ ಹೆರಾಲ್ಡ್‌ ಪತ್ರಿಕೆಗೆ ತಿಳಿಸಿದರು.


ಇದೆ ರೀತಿಯ ಇನ್ನೂ 20 ಮನೆಗಳನ್ನು 20 ಟನ್‌ ಪ್ಲಾಸ್ಟಿಕ್‌ ಬಳಸಿ ನಿರ್ಮಿಸಲು ಯೋಜಿಸಿದ್ದೇವೆ. ಇದನ್ನು ಶೌಚಾಲಯ ಕಟ್ಟಲು ಬಳಸಬಹುದು ಎಂದರು.

‌ಮರುಬಳಕೆ ಮಾಡಿದ ಪ್ಲಾಸ್ಟಿಕ್‌ನಿಂದ ತಯಾರಾದ ಕರ್ನಾಟಕದ ಮೊದಲ ಮನೆ (ಚಿತ್ರಕೃಪೆ: ಡೆಕ್ಕನ್‌ ಹೆರಾಲ್ಡ್)


4.5 ಲಕ್ಷ ರೂ.ಗಳಲ್ಲಿ ನಿರ್ಮಿಸಿದ ಈ ಮನೆಯ ವಿಸ್ತೀರ್ಣ 350 ಚದರ ಮೀಟರ್‌ ಆಗಿದ್ದು, ಹೈದರಾಬಾದ್‌ ಮೂಲದ ಬಾಂಬೂ ಪ್ರಾಜೆಕ್ಟ್ಸ್‌ನ ಸಹಯೋಗದಲ್ಲಿ ನಿರ್ಮಿಸಲಾಗಿದೆ.


“ಸಮಾಜದ ದುರ್ಬಲ ವರ್ಗದವರಿಗಾಗಿ ಸರ್ಕಾರದ ನೆರವಿನೊಂದಿಗೆ ಇಂತಹ ಮತ್ತಷ್ಟು ಮನೆಗಳನ್ನು ನಿರ್ಮಿಸಲು ನಾವು ಬಯಸಿದ್ದೇವೆ. ಒಂದೆ ಬಾರಿಗೆ ಹೆಚ್ಚು ಮನೆಗಳನ್ನು ನಿರ್ಮಿಸಿದರೆ ಕೇವಲ 3.5 ಲಕ್ಷ ರೂ. ಖರ್ಚಾಗುತ್ತದೆ,” ಎಂದು ಯೋಜನೆಯ ಸಂಯೋಜಕರಾದ ಜಯಂತಿ ನ್ಯೂಸ್‌ ಕರ್ನಾಟಕಕ್ಕೆ ತಿಳಿಸಿದರು.


“ಕಡಿಮೆ ಸಾಂದ್ರತೆಯ ಪ್ಲಾಸ್ಟಿಕ್ (ಎಲ್‌ಡಿಪಿ) ಬಹು-ಪದರುಗಳ ಪ್ಲಾಸ್ಟಿಕ್ (ಎಂಎಲ್‌ಪಿ) ಮತ್ತು ಇತರ ಪ್ಲಾಸ್ಟಿಕ್‌ಗಳಾದ ಟೆಟ್ರಾ ಪ್ಯಾಕ್‌ಗಳು ಮತ್ತು ಗುಟ್ಕಾ ಪ್ಯಾಕೆಟ್‌ಗಳನ್ನು ಒಳಗೊಂಡಿರುವ ಸುಮಾರು 1,500 ಕಿಲೋಗ್ರಾಂಗಳಷ್ಟು ಪ್ಲಾಸ್ಟಿಕ್ಅನ್ನು ನಿರ್ಮಾಣದಲ್ಲಿ ಬಳಸಲಾಯಿತು. ಅಂತಹ 60 ಕ್ಕೂ ಹೆಚ್ಚಿನ ಪ್ಲಾಸ್ಟಿಕ್‌ ಫಲಕಗಳನ್ನು ನಿರ್ಮಾಣದಲ್ಲಿ ಬಳಸಿದ್ದೇವೆ,” ಎಂದರು.


ಈ ಕಟ್ಟಡ ನಿರ್ಮಾಣದ ಹೊರತಾಗಿ ದಿ ಪ್ಲಾಸ್ಟಿಕ್‌ ಫಾರ್‌ ಚೆಂಜ್‌ ಇಂಡಿಯಾ ಫೌಂಡೇಶನ್‌ ಮಂಗಳೂರಿನ ಪಚನಾಡಿ ಮತ್ತು ಕುರಿಕಟ್ಟಾದ ಸ್ಥಳೀಯ ಸಮುದಾಯಗಳೊಂದಿಗೆ ಕೆಲಸ ಮಾಡುತ್ತದೆ. ಈ ಪ್ರದೇಶದ 20 ವಿದ್ಯಾರ್ಥಿಗಳಿಗಾಗಿ ಆನ್‌ಲೈನ್‌ ತರಗತಿಯನ್ನು ಅದು ಅಯೋಜಿಸುತ್ತಿದೆ.