ನನಗೆ ಗೊತ್ತಿಲ್ಲ ಎನ್ನಲು ಏಕೆ ಮುಜುಗರ..?

ಟೀಮ್​ ವೈ.ಎಸ್​. ಕನ್ನಡ

ನನಗೆ ಗೊತ್ತಿಲ್ಲ ಎನ್ನಲು ಏಕೆ ಮುಜುಗರ..?

Thursday April 07, 2016,

4 min Read

ಇತ್ತೀಚೆಗಷ್ಟೆ ನಾನು ಬೆಂಗಳೂರಿನ ಶಾಂಗ್ರಿ-ಲಾ ಹೋಟೆಲ್‍ನಲ್ಲಿ ನಡೆದ ಸಿಎಕ್ಸ್​​ಓಗಳ ಸೆಮಿಕಂಡಕ್ಟರ್ ಸಭೆಯಲ್ಲಿ ಪಾಲ್ಗೊಂಡಿದ್ದೆ. ನಾನು ಆಗಮಿಸುವ ಹೊತ್ತಿಗೆಲ್ಲ ಆ ಕೋಣೆ ಸಂಪೂರ್ಣ ಭರ್ತಿಯಾಗಿತ್ತು. ಅದೃಷ್ಟವಶಾತ್ ವೇದಿಕೆಯ ಸನಿಹದಲ್ಲೇ ಸಂಘಟಕರು ನನಗೊಂದು ಸೀಟ್ ಅರೇಂಜ್ ಮಾಡಿಕೊಟ್ರು. ತಡವಾಗಿ ಬಂದ್ರೆ ಕೊನೆಯ ಸಾಲಿನಲ್ಲಿ ಕುಳಿತುಕೊಳ್ಳಬೇಕಾದ ಅನಿವಾರ್ಯತೆ ಎದುರಾಗುವುದು ಸಹಜ. ಆಗಲೇ ಆರಂಭವಾಗಿದ್ದ ಚರ್ಚೆಯನ್ನು ಆಲಿಸಲು ನಾನು ಕುಳಿತುಕೊಂಡೆ. ಸೆಮಿಕಂಡಕ್ಟರ್ ಇಂಡಸ್ಟ್ರಿಯ ಹೊಸ ಟ್ರೆಂಡ್ ಹಾಗೂ ಸಮತೋಲನ ಕಾಯ್ದುಕೊಳ್ಳಲು ಭಾರತ ಏನು ಮಾಡುತ್ತಿದೆ ಎಂಬ ಬಗ್ಗೆ ಚರ್ಚೆ ನಡೆಯುತ್ತಿತ್ತು. ಐಐಟಿ ಪ್ರೊಫೆಸರ್, ಎನ್‍ಆರ್‍ಐ ಕೈಗಾರಿಕೋದ್ಯಮಿ, ಕಾರ್ಪೊರೇಟ್ ಹೂಡಿಕೆದಾರ ಹೀಗೆ ಈ ವಲಯದ ತಜ್ಞರಿಂದ ವ್ಯಕ್ತವಾಗುವ ಜ್ಞಾನವನ್ನೆಲ್ಲ ಹೀರಿಕೊಳ್ಳಲು ಸಜ್ಜಾದೆ.

image


ಬಳಿಕ ಅದು ಸಂಭವಿಸಿತ್ತು...

ಸೆಮಿಕಂಡಕ್ಟರ್ ಕ್ಷೇತ್ರದಲ್ಲಿನ ನಾವೀನ್ಯತೆಯನ್ನು ಅರ್ಥಮಾಡಿಕೊಳ್ಳಲು ನಾನು ಗಮನಕೇಂದ್ರೀಕರಿಸಿದ್ದೆ. ಆದ್ರೆ ಎಲ್ಲ ವಿವರಗಳನ್ನು ಗ್ರಹಿಸಲು ಸಾಧ್ಯವಾಗಲಿಲ್ಲ, ಅವರೇನು ಮಾತನಾಡುತ್ತಿದ್ದಾರೆ ಎಂಬುದು ಅರ್ಥವಾಗಲಿಲ್ಲ, ಒಂದು ಕಿವಿಯಿಂದ ಕೇಳಿಸಿಕೊಂಡಿದ್ದು ಇನ್ನೊಂದು ಕಿವಿಯಿಂದ ಹೊರಹೋಗುತ್ತಿತ್ತು. ನನ್ನ ಸುತ್ತಮುತ್ತ ಇದ್ದವರೆಲ್ಲ ಚರ್ಚೆಯಲ್ಲಿ ಮುಳುಗಿ ಹೋಗಿದ್ದರು, ತಲೆ ಅಲ್ಲಾಡಿಸುತ್ತಿದ್ದರು, ಪ್ರಶ್ನೆಗಳನ್ನು ಕೇಳುತ್ತಿದ್ರು, ನಗುತ್ತಿದ್ರು. ಎಲ್ಲರನ್ನು ನೋಡುವ ಬದಲು ಚರ್ಚೆಯಲ್ಲಿ ಪಾಲ್ಗೊಂಡವರತ್ತ ದೃಷ್ಟಿ ಹರಿಸುವುದು ಉತ್ತಮ ಎಂದು ನನಗನಿಸಿತ್ತು. ಆ ಚಿಕ್ಕ ಕೋಣೆಯಲ್ಲಿ ನಾನು ವೇದಿಕೆಗೆ ಅತ್ಯಂತ ಸಮೀಪದಲ್ಲಿದ್ದೆ, ಹಾಗಾಗಿ ಚರ್ಚೆಯಾಗುತ್ತಿರುವ ವಿಷಯವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಲೇಬೇಕಿತ್ತು. ಪ್ಯಾನಲಿಸ್ಟ್​​ ಗಳೆಲ್ಲ ವಿಷಯ ಮಂಡಿಸಿದ ಬಳಿಕ ನನ್ನತ್ತ ನೋಡುತ್ತಿದ್ರು, ಅದರ ಮಹತ್ವ ನನಗೆ ಗೊತ್ತಿದೆ, ನಾನು ವೇದಿಕೆಯ ಮೇಲಿದ್ರೂ ಅದನ್ನೇ ಮಾಡುತ್ತೇನೆ. ನಾನು ಕೂಡ ತಲೆಯಲ್ಲಾಡಿಸಿ ಮುಗುಳ್ನಕ್ಕೆ. ಆಗ ಮೊದಲಿಗಿಂತಲೂ ನಾನೊಬ್ಬಳು ದೊಡ್ಡ ಈಡಿಯೆಟ್ ಅನಿಸಿತ್ತು. ಇನ್ನಷ್ಟು ಪ್ಯಾನಲಿಸ್ಟ್​​ಗಳು ನನ್ನತ್ತ ನೋಡಿದ್ರು, ನಾನು ಮತ್ತೆ ಮುಗುಳ್ನಕ್ಕೆ, ಆಗ ಮತ್ತೂ ದೊಡ್ಡ ಈಡಿಯಟ್ ಎನಿಸಿತ್ತು. ದೇವರೇ ನಾನು ಯಾಕೆ ಇದನ್ನೆಲ್ಲ ಅರ್ಥಮಾಡಿಕೊಳ್ಳುವಷ್ಟು ಬುದ್ಧಿವಂತೆಯಲ್ಲ, ಸ್ವಲ್ಪ ಕೂಡ ನನಗೆ ತಿಳಿಯುತ್ತಿಲ್ಲವಲ್ಲ! ಸೆಮಿಕಂಡಕ್ಟರ್ ಕ್ಷೇತ್ರದ ಬಗ್ಗೆ ತಿಳಿದುಕೊಳ್ಳಲು ನಾನು ಬರಲಿಲ್ಲವೇ? ನನ್ನೊಳಗಿನ ಈ ವಿಪ್ಲವ ಪ್ಯಾನಲಿಸ್ಟ್​​ಗಳಿಗೆ ಅರ್ಥವಾಗ್ತಿದೆಯಾ? ಆಶ್ಚರ್ಯಚಕಿತರಾಗಿ ಅವರ್ಯಾಕೆ ನನ್ನೆಡೆಗೆ ನೋಡುತ್ತಿದ್ದಾರೆ? ನನ್ನಂಥವರು ಇಂತಹ ಸೆಮಿನಾರ್‍ಗೆ ಏಕೆ ಬರಬೇಕು? ಇಂತಹ ಪ್ರಶ್ನೆಗಳೆಲ್ಲ ಭೂತಾಕಾರವಾಗಿ ನಿಂತವು. ನೀವೊಬ್ಬ ಚತುರ ವ್ಯಕ್ತಿಯಲ್ಲ ಎನಿಸಿದಾಗ ಇಂತಹ ಸಂಶಯಗ್ರಸ್ತ ಆಲೋಚನೆಗಳು ಬರುತ್ತವೆ.

ಕೊನೆಗೂ ಚರ್ಚೆ ಮುಗಿದಾಗ ನನಗೆ ಸಮಾಧಾನವಾಯ್ತು, ಅದರ ಬೆನ್ನಲ್ಲೇ ಸಮಾರೋಪವೂ ನಡೀತು. ಎಲ್ಲರೂ ನೆಟ್‍ವರ್ಕ್‍ಗೆ ಮರಳಿದ್ರು, ನಾನು ಕೂಡ. ಇಂತಹ ಕಾರ್ಯಕ್ರಮಗಳಲ್ಲಿ ವೈಭವಕ್ಕೆ ದೂರವಾಗಿ ಹರಟುವ ನನ್ನನ್ನು ನೋಡಬಹುದು. ಮುಂದೇನು ಮಾಡೋದು ಅನ್ನೋ ಆಲೋಚನೆಯಲ್ಲಿ ಮುಳುಗಿದ ನಾನು ಮೂಲೆಯಲ್ಲಿ ನಿಂತೆ. ನನಗೆ ಪರಿಚಯವಿದ್ದ ಇಬ್ಬರು ಬಂದು ಉದ್ಯಮಿಗಳನ್ನು ಪರಿಚಯ ಮಾಡಿಸುವುದಾಗಿ ಹೇಳಿದ್ರು. ಅಂತೂ ಸೆಮಿಕಂಡಕ್ಟರ್‍ಗಳು ಸಿಗದೇ ಇದ್ರೂ ಉದ್ಯಮಿಗಳೊಂದಿಗೆ ಮಾತನಾಡುವ ಅವಕಾಶ ನನಗೆ ಸಿಕ್ಕಿತ್ತು. ಅದಾದ ಮೇಲೆ ಇನ್ನಷ್ಟು ಉದ್ಯಮಿಗಳು ಮತ್ತು ಸೆಮಿಕಂಡಕ್ಟರ್‍ಗಳನ್ನು ಭೇಟಿಯಾದ ನನ್ನಲ್ಲಿ ಆತ್ಮವಿಶ್ವಾಸ ಮೂಡಿತ್ತು. ಉದ್ಯಮಿಗಳೆಲ್ಲ ತಮ್ಮ ಕಹಾನಿ ಹೇಳಿಕೊಳ್ಳಲು ಬಯಸಿದ್ದರು. ಅಷ್ಟೇ ಅಲ್ಲ ನನ್ನ ಬಗ್ಗೆ ತಿಳಿದುಕೊಳ್ಳಲು ಬಯಸಿದ್ರು. ಆದ್ರೆ ಎಲ್ಲರಿಗೂ ಬಿ2ಸಿ ಇ-ಕಾಮರ್ಸ್ ಕಥೆಗಳಲ್ಲಿ ಮಾತ್ರ ಏಕೆ ಆಸಕ್ತಿ? ಆ ಸಂಭಾಷಣೆಯನ್ನೆಲ್ಲ ಅಲ್ಲೇ ಬಿಟ್ಟು ಇನ್ನೊಂದು ಕಥೆಯಲ್ಲಿ ಉತ್ತರ ಹುಡುಕಿದ್ದೆ. ಮತ್ತೆ ಕೇಳುವ ಕೆಲಸ ಆರಂಭಿಸಿದೆ, ಎಲ್ಲರೂ ನನ್ನ ಸುತ್ತ ನೆರೆದರು. ಆಗ ನಾನು ಕೂಡ ಚೆನ್ನಾಗಿ ಕೇಳಿಸಿಕೊಳ್ಳಬಲ್ಲೆ ಎಂದೆನಿಸಿತ್ತು.

ಕಾರ್ಯಕ್ರಮಕ್ಕೆ ಮರಳಿದ ನಾನು ಮಹಿಳಾ ದಿನದಂದು ನಡೆದ ಘಟನೆಗಳನ್ನೆಲ್ಲ ಮೆಲುಕು ಹಾಕಿದೆ. ಈ ವರ್ಷ ದೆಹಲಿಯಲ್ಲಿ ನಾವು ಮಹಿಳಾ ದಿನದ ಕಾನ್ಫರೆನ್ಸ್ ಆಯೋಜಿಸಿದ್ದೆವು. ಚುರುಕಾದ, ಅತ್ಯುತ್ತಮ ಮಹಿಳಾ ಉದ್ಯಮಿಗಳು, ಮಹತ್ವಾಕಾಂಕ್ಷಿ ಉದ್ಯಮಿಗಳು ವ್ಯಾಪಾರದ ಸೂಕ್ಷ್ಮಗಳನ್ನು ತಿಳಿದುಕೊಳ್ಳಲು ಬಂದಿದ್ರು. ತಜ್ಞರೆಲ್ಲ ವೇದಿಕೆ ಏರಿ ಫಂಡಿಂಗ್, ವ್ಯಾಲ್ಯುವೇಶನ್, ಸ್ಟ್ರಕ್ಚರಿಂಗ್ ಮತ್ತು ಆರ್ಥಿಕ ಮಾದರಿ ಬಗ್ಗೆ ಮಾತನಾಡಿದ್ರು. ಆದ್ರೆ ಇದು ಅವರ ಪಾಲಿಗೆ ಅಸಹಜ ಸ್ಥಳ ಎನಿಸಿರಬಹುದು. ಆದ್ರೂ ಪ್ರತಿಯೊಬ್ಬರೂ ಕಾರ್ಯಕ್ರಮದಲ್ಲಿ ಸಕ್ರಿಯರಾಗಿದ್ರು, ಕೆಲವರು ಪ್ರಶ್ನೆ ಕೇಳಲು ಉತ್ಸುಕರಾಗಿದ್ರು. ನಾನು ಪೈನಾನ್ಸ್ ಎಕ್ಸ್​​ ಪರ್ಟ್ ಅಲ್ಲ, ಆದ್ರೂ ಅದನ್ನು ಸಮರ್ಥವಾಗಿ ನಿಭಾಯಿಸಲು ಸಾಧ್ಯವೇ? ನಾನು ಟೆಕ್ ಬ್ಯುಸಿನೆಸ್ ಮುನ್ನಡೆಸಲು ಸಾಧ್ಯವೇ? ವ್ಯಾಲ್ಯುಯೇಶನ್, ಫಂಡ್ ಹೆಚ್ಚಳ ಪ್ರಕ್ರಿಯೆ ನನಗೆ ಗೊತ್ತಿಲ್ಲ, ಆದ್ರೂ ಸರಿಯಾದ ಸಮಯದಲ್ಲಿ ಫಂಡ್ ಹೆಚ್ಚಳ, ವ್ಯಾಲ್ಯುಯೇಶನ್ ಸಾಧ್ಯವೇ?

ಇದನ್ನು ಓದಿ: ಸುಗಮ ಸಂಚಾರಕ್ಕೆ ಮಹಿಳಾ ಟ್ರಾಫಿಕ್ ಫೋರಮ್

ಇದಕ್ಕೆಲ್ಲ ನನ್ನ ಉತ್ತರ: ನಾನು ಫಂಡಿಂಗ್ ಬಗ್ಗೆ ಬರೆಯುತ್ತಿದ್ದೆ, ಫಂಡ್ ಹೆಚ್ಚಳದ ಕಹಾನಿಗಳನ್ನು ಕೇಳುತ್ತಿದ್ದೆ, ಕಳೆದ ಅಗಸ್ಟ್​​ನಲ್ಲಿ ಮೊದಲ ಸುತ್ತಿನ ಬಂಡವಾಳ ಸಂಗ್ರಹಿಸುವ ಮುನ್ನ ಫಂಡ್ ಹೆಚ್ಚಳದ ಬಗ್ಗೆ ಸರಿಯಾಗಿ ತಿಳಿದಿರಲಿಲ್ಲ. ಕಥೆಗಳ ಜಗತ್ತಿನಲ್ಲಿ ನಾನು ಬದುಕುತ್ತಿದ್ದೇನೆ. ಪ್ರತಿಯೊಂದು ವಿಚಾರದ ಮೇಲೂ ಬೌದ್ಧಿಕ ಸಿದ್ಧಾಂತಗಳನ್ನು ನಾನು ಮಂಡಿಸಬಲ್ಲೆ. ಟರ್ಮ್ ಶೀಟ್, ವಿಧಿಗಳು ಹೀಗೆ ಎಲ್ಲವನ್ನೂ ನಾನು ವಾಸ್ತವದಲ್ಲೇ ಕಲಿತಿದ್ದೇನೆ. ನಿಮಗೆ ಅನುಭವವಾದಾಗ ನೀವೂ ಕಲಿಯುತ್ತೀರಾ, ಅದನ್ನು ಕಲಿಯದೆ ಬೇರೆ ಆಯ್ಕೆಯೇ ನಿಮಗಿಲ್ಲ. ಲೆಕ್ಕಿಗರು, ವಕೀಲರ ಅಗತ್ಯ ನಿಮಗೇಕಿದೆ ಅನ್ನೋದನ್ನು ನೀವು ಅರ್ಥಮಾಡಿಕೊಳ್ಳಬೇಕು. ಈ ಒಪ್ಪಂದದಲ್ಲಿ ನನಗೇನು ಬೇಕು? ಮೂಲಭೂತ ಮಟ್ಟದಲ್ಲಿ ನನಗೇನು ಇಷ್ಟವಿಲ್ಲ? ಅನ್ನೋದನ್ನು ಅರ್ಥಮಾಡಿಕೊಳ್ಳಬೇಕು. ಉಳಿದಿದ್ದನ್ನೆಲ್ಲ ವಕೀಲರಿಗೆ ಬಿಟ್ಟುಬಿಡಿ.

ನನಗೆ ಇನ್ನೇನಾದ್ರೂ ತಿಳಿದುಕೊಳ್ಳುವ ಅಗತ್ಯವಿದೆಯಾ? ಖಂಡಿತವಾಗಿಯೂ ಇಲ್ಲ. ನೇಮಕ ಮಾಡಿಕೊಂಡಿರುವ ತಜ್ಞರ ಮೇಲೆ ಅವಲಂಬಿತವಾಗಬೇಕೆ? ಹೌದು. ಇದು ತಿಳಿದಿರದ ಮತ್ತು ಅರಿವಿರದ ಪ್ರಶ್ನೆಗಳೆಡೆಗೆ ನನ್ನನ್ನು ದೂಡುತ್ತದೆ. ಎಲ್ಲವನ್ನೂ ತಿಳಿದಿರುವ, ತಜ್ಞರನ್ನೊಳಗೊಂದ ಜಗತ್ತು ಇದು, ಯಶಸ್ವಿ ಉದ್ಯಮಿ ಅಥವಾ ವೃತ್ತಿಪರರಾಗಲು ಎಲ್ಲವನ್ನೂ ತಿಳಿದುಕೊಂಡಿರಬೇಕೆಂದು ನನಗನಿಸುವುದಿಲ್ಲ. ಗೊತ್ತಿರುವುದು, ಅಥವಾ ಗೊತ್ತಿಲ್ಲದೇ ಇರುವುದು ದೊಡ್ಡ ವರವೇನಲ್ಲ. ನಾವು ಎಲ್ಲವನ್ನೂ ತಿಳಿದುಕೊಂಡು ಪ್ರತಿ ಪ್ರಶ್ನೆಗೆ ಉತ್ತರಿಸಲು ಹೋದಾಗಲೇ ಮುಗ್ಗರಿಸುವ ಸಾಧ್ಯತೆ ಹೆಚ್ಚು. ನನಗೆ ಗೊತ್ತಿಲ್ಲ, ನೀವ್ಯಾಕೆ ನನಗೆ ವಿವರಿಸುತ್ತಿದ್ದೀರಾ? ಎಂದು ಕೇಳಲು ಎಲ್ಲರಿಗೂ ಸ್ವಾತಂತ್ರ್ಯವಿದೆ.

ನೀವು ಮಾಡಬಹುದಾದ ಸುಲಭ ಕೆಲಸ ಇದು. ಯಾಕಂದ್ರೆ ಎಲ್ಲವನ್ನೂ ತಿಳಿದುಕೊಂಡಿರುವವರು ನಮ್ಮ ಸುತ್ತ ಇದ್ದಾರೆ, ಅವರ ಮಧ್ಯೆ ನಾವು ವಿಭಿನ್ನ ಎನಿಸಿಕೊಳ್ಳುತ್ತೇವೆ. ಸ್ಟಾರ್ಟ್‍ಅಪ್‍ಗಳಲ್ಲಿ ತಜ್ಞರನ್ನು ನೇಮಕ ಮಾಡಿಕೊಳ್ಳಿ, ಅವರಿಗೆ ಕೆಲಸ ಮಾಡಲು ಅವಕಾಶ ಕೊಡಿ. ಈ ವರ್ಷ ನನ್ನ ಕಂಪನಿಯಲ್ಲಿ ನಾನು ಅದೇ ರೀತಿ ಮಾಡುತ್ತಿದ್ದೇನೆ. ಅತ್ಯುತ್ತಮ ಟೀಮ್ ಲೀಡರ್‍ಗಳನ್ನು ನೇಮಕ ಮಾಡಿಕೊಂಡಿದ್ದೇನೆ, ಕೊಂಚ ರಿಲ್ಯಾಕ್ಸ್ ಆಗುತ್ತೇನೆ. ಇದನ್ನು ಓದಿದ ಬಹುತೇಕರಿಗೆ ನನ್ನ ಬಗ್ಗೆ ಗೊತ್ತಿರಬಹುದು, ಅವರು ಕೂಡ ಈ ಸೂತ್ರವನ್ನು ಅಳವಡಿಸಿಕೊಳ್ಳಬಹುದು.

ತಜ್ಞರ ಬಗ್ಗೆ ಮಾತನಾಡುವುದಾದ್ರೆ, ನಾನು ಸಿಎನ್‍ಬಿಸಿಯಲ್ಲಿ ಕೆಲಸ ಮಾಡುತ್ತಿದ್ದಾಗ ನನ್ನ ಬಾಸ್ ಸಖತ್ ಇಂಟ್ರೆಸ್ಟಿಂಗ್ ವ್ಯಕ್ತಿಯಾಗಿದ್ರು. ಮೀಟಿಂಗ್‍ಗೆ ಹೋಗುವ ಮುನ್ನ ಅವರು ಎಲ್ಲ ದಾಖಲೆಗಳನ್ನು ಸಂಗ್ರಹಿಸುತ್ತಿದ್ದರು. ನೀವೇನು ಮಾಡುತ್ತಿದ್ದೀರಾ ಎಂಬುದನ್ನು ವಿವರಿಸಿ ಎನ್ನುತ್ತಿದ್ರು. ಕಂಪನಿ ಕಾರ್ಯನಿರ್ವಹಣೆ ಬಗ್ಗೆ ಸ್ಪಷ್ಟ ಮಾದರಿ ಸಿಗುವವರೆಗೂ ಪ್ರಶ್ನೆಗಳನ್ನು ಕೇಳುತ್ತಲೇ ಇರುತ್ತಿದ್ದರು. ಅವರ ಪ್ರಶ್ನೆಗಳು ಮೂಕ ಎಂದು ನನಗೆ ಆಗಾಗ ಅನಿಸಿದ್ದಿದೆ. ನಾನವರಿಗೆ ಕಳುಹಿಸಿಕೊಟ್ಟ ಬ್ಯಾಕ್‍ಗ್ರೌಂಡ್ ಮಟೀರಿಯಲ್ ಬಗ್ಗೆ ನನಗೇ ನಂಬಿಕೆ ಇರಲಿಲ್ಲ. ಅವರ್ಯಾಕೆ ವಿದ್ಯಾರ್ಥಿಗಳಂತೆ ಪ್ರಶ್ನೆ ಮೇಲೆ ಪ್ರಶ್ನೆ ಕೇಳ್ತಾರೆ? ಅವರಿಗೆ ಎಲ್ಲವೂ ಗೊತ್ತಿದೆ ಎಂದಾದ್ರೆ ಅದನ್ನು ಮಕ್ಕಳಿಗೆ ವಿವರಿಸಬಹುದಿತ್ತು ಎನಿಸಿದ್ದಿದೆ. ಆದ್ರೆ ಅವರು ಮುಂದಿಟ್ಟ ಇಡೀ ಮುನ್ನೊಲವಿನ ಮನೋರೂಢಿಯನ್ನು ಶೀಘ್ರವೇ ಅರ್ಥಮಾಡಿಕೊಂಡೆ. ಅತ್ಯಂತ ಸರಳವಾಗಿ ಕಂಪನಿ ಏನು ಮಾಡಿದೆ ಅನ್ನೋದನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ ಸಭೆಯಲ್ಲಿ ಮುಂದಿಟ್ಟ ಅತ್ಯಂತ ಮೌಲ್ಯಯುತ ವಿಷಯವಾಗಿತ್ತು. ತೆರೆದ ಮನಸ್ಸಿನಿಂದ ಉದ್ಯಮ ಮುನ್ನಡೆಸುತ್ತಿರುವ ತಜ್ಞರಿಂದ ಅವರು ಇದನ್ನು ಕಲಿತಿದ್ದಾರೆ. ಎಂಡಿ ಅನ್ನೋ ಟ್ಯಾಗ್ ಇಟ್ಟುಕೊಂಡು ಅವರು ಸಭೆಗೆ ಹೋಗುತ್ತಿರಲಿಲ್ಲ, ಎಲ್ಲವನ್ನೂ ಸರಿಯಾಗಿ ತಿಳಿದುಕೊಳ್ಳುವ ಕುತೂಹಲದಿಂದ ಹೋಗುತ್ತಿದ್ದರು.

ಯೋಚನೆ ಮಾಡಿ, ಎಷ್ಟು ಬಾರಿ ನಾವು ಸಮಾಲೋಚನೆ ನಡೆಸಿರಬಹುದು. ವಾಸ್ತವವಾಗಿ, ಸರಳವಾಗಿ, ನಿಜವಾಗಿ ಒಬ್ಬ ವ್ಯಕ್ತಿ, ಕಂಪನಿ, ಬ್ಯುಸಿನೆಸ್ ಬಗ್ಗೆ ತಿಳಿದುಕೊಳ್ಳಲು ಏನೇನು ಮಾಡಿದ್ದೇವೆ? ಪ್ರತಿದಿನ ಮಾಧ್ಯಮದಲ್ಲೇ ಇರಬಹುದು, ತಜ್ಞರು, ಹೂಡಿಕೆದಾರರು ಅಥವಾ ಸಹೋದ್ಯೋಗಿಗಳು ನಿಮ್ಮ ಬಗ್ಗೆ ಊಹೆ ಮಾಡಬಹುದು. ಪ್ರತಿದಿನ ಜನ ನಿಮ್ಮ ಬಗ್ಗೆ ತಿಳಿದುಕೊಳ್ಳಲು ಬಯಸಿದ್ರೆ ಒಂದು ಹಂತದಲ್ಲಿ ಇದು ಹಾಸ್ಯಾಸ್ಪದ ಹಾಗೂ ತಮಾಷೆ ಎನಿಸಿಕೊಳ್ಳುತ್ತೆ. ಪರಸ್ಪರ ಒಂದು ಉಪಕಾರ ಮಾಡಿಕೊಳ್ಳೋಣ, ಏನೋ ಗೊತ್ತಿಲ್ಲದೆ ಎಲ್ಲ ಉತ್ತರ ಅರಿಯದೆ, ಇನ್ನೊಬ್ಬರಿಗೆ ವಿವರಿಸುವ ಅವಕಾಶ ಕೊಡದೇ ತೀರ್ಮಾನಕ್ಕೆ ಬರದೆ ಹೆಮ್ಮೆಯಿಂದ ಸ್ವಾಗತಿಸೋಣ. ಇದು ವಿಮೋಚನೆ, ಮಾಂತ್ರಿಕತೆ ಇಲ್ಲಿದೆ. ಇದನ್ನು ನೀವು ಅಭ್ಯಾಸ ಮಾಡಿಕೊಂಡ್ರೆ ಅದ್ಭುತ ಸಂಬಂಧಗಳನ್ನು ಬೆಸೆಯಬಲ್ಲಿರಿ, ಅದ್ಭುತ ಒಪ್ಪಂದಗಳನ್ನು ಗೆಲ್ಲಬಲ್ಲಿರಿ, ಎಲ್ಲೆಡೆಯಿಂದ ನಿಮಗೆ ಉತ್ತಮ ಬೆಂಬಲವೂ ಸಿಗಲಿದೆ.

ಸೋಲಿನಲ್ಲೇ ಕೆಲವೊಮ್ಮೆ ಗೆಲುವು ನಿಮ್ಮದಾಗುತ್ತದೆ ಅನ್ನೋ ಮಾತಿದೆ. ಅದೇ ರೀತಿ ಏನೂ ಗೊತ್ತಿಲ್ಲದೇ ಇದ್ದಾಗ ಎಲ್ಲವನ್ನೂ ತಿಳಿದುಕೊಳ್ಳುವ ಅವಕಾಶ ನಿಮ್ಮದಾಗುತ್ತದೆ.

ಲೇಖಕರು: ಶ್ರದ್ಧಾ ಶರ್ಮಾ

ಅನುವಾದಕರು: ಭಾರತಿ ಭಟ್ 

ಇದನ್ನು ಓದಿ:

1.ಡೆಡ್ಲಿ ಡೇಂಜರಸ್​ ಗೇಮ್​ನ ಪಂಟ, ಬೆಂಗಳೂರಿನ ಯುವ ಸಂತ..!

2. ಇದು ಬರಿ ಜಾಹೀರಾತು ಅಲ್ಲ ಗುರು...ಬೇರೆ ಏನೋ ಇದೆ..!

3. ಸಿನಿಮಾದಲ್ಲಿ ಮಹಿಳಾ, ಸಾಮಾಜಿಕ ಕಳಕಳಿ : ಭಾರತದ ಚಿತ್ರೋದ್ಯಮಿಗಳಿಗೊಂದು ಸಲಾಂ..