ಭಾರತದಲ್ಲಿ ಮಂಗಳಮುಖಿಯರ ಮೊದಲ ಮ್ಯೂಸಿಕ್ ಬ್ಯಾಂಡ್!
ವಿಶಾಂತ್
ಮಂಗಳಮುಖಿಯರು ಅಂದ್ರೆ ಮೂಗು ಮುರಿಯೋರೇ ಜಾಸ್ತಿ. ಟ್ರಾಫಿಕ್ ಸಿಗ್ನಲ್‍ಗಳಲ್ಲಿ ಹಣ ಬೇಡುತ್ತಾ, ಮದುವೆ - ನಾಮಕರಣ ಸಮಾರಂಭಗಳಿಗೆ ಬಂದು ದುಡ್ಡು ಕೇಳುತ್ತಾ, ಮಾಂಸದ ಅಡ್ಡೆಗಳಲ್ಲಿ ಕೆಲಸ ಮಾಡುತ್ತಾ ಸಮಾಜದ ಮೂಲೆಗೆ ತಳ್ಳಲ್ಪಟ್ಟಿದ್ದರು. ಮುಖ್ಯ ವಾಹಿನಿಗೆ ಬರಲು ಎಷ್ಟೇ ಪ್ರಯತ್ನ ಮಾಡಿದ್ರೂ, ಸಾಧ್ಯವಾಗಿರಲಿಲ್ಲ.
ಬಡತನ, ನಿರುದ್ಯೋಗ, ಸಮಾಜದ ಮೂದಲಿಕೆಗಳು, ಹಿಂಸೆ, ಯಾತನೆ, ಅದರ ನಡುವೆಯೇ ಜೀವನ. ಈ ಜೀವನ ಬೇಕಾ ಅನ್ನುವ ಪ್ರಶ್ನೆಯೊಂದಿಗೇ ದಿನ ತಳ್ಳುವ ಅನಿವಾರ್ಯತೆ ಮಂಗಳಮುಖಿಯರದು. ಆದ್ರೆ ಇಲ್ಲಿ ಕೆಲ ಮಂಗಳಮುಖಿಯರು ಅದೆಲ್ಲವನ್ನೂ ಹಿಮ್ಮೆಟ್ಟಿ ನಿಂತಿದ್ದಾರೆ. ತಮ್ಮದೇ ಒಂದು ಮ್ಯೂಸಿಕ್ ಬ್ಯಾಂಡ್ ಪ್ರಾರಂಭಿಸಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ.
ಇದು 6 ಪ್ಯಾಕ್ ಬ್ಯಾಂಡ್..!
6 ಪ್ಯಾಕ್ ಬ್ಯಾಂಡ್. 6 ಮಂದಿ ಮಂಗಳಮುಖಿಯರೇ ಸೇರಿ ಮಾಡಿರುವ ಮ್ಯೂಸಿಕ್ ಬ್ಯಾಂಡ್. ಇದು ಭಾರತದ ಮೊತ್ತ ಮೊದಲ ಮಂಗಳಮುಖಿಯರೇ ಸೇರಿ ಮಾಡಿರುವ ಮ್ಯೂಸಿಕ್ ಬ್ಯಾಂಡ್ ಎಂಬ ಖ್ಯಾತಿ ಪಡೆದಿದೆ. ಇತ್ತೀಚೆಗಷ್ಟೇ ಈ ಬ್ಯಾಂಡ್ ಲಾಂಚ್ ಆಯ್ತು. ಬಾಲಿವುಡ್‍ನ ಟಾಪ್ ಗಾಯಕ ಸೋನು ನಿಗಮ್ 6 ಪ್ಯಾಕ್ ಬ್ಯಾಂಡ್ ಲಾಂಚ್ ಮಾಡಿದ್ರು. ಗ್ರ್ಯಾಮಿ ಪ್ರಶಸ್ತಿ ವಿಜೇತ ಫ್ಯಾರೆಲ್ ವಿಲಿಯಮ್ಸ್ರ ಹ್ಯಾಪಿ ಸಾಂಗ್‍ನ ರೀಮೇಕ್ ಮಾಡಿ, ಹಿಂದಿ ಮತ್ತು ಇಂಗ್ಲೀಷ್ ಮಿಶ್ರಿತ ‘ಹಮ್ ಹೈ ಹ್ಯಾಪಿ’ ಎಂಬ ಒಂದು ಫನ್ನಿ ಸಾಂಗ್‍ಅನ್ನೂ ರಿಲೀಸ್ ಮಾಡಲಾಯ್ತು. ಈ ಮ್ಯೂಸಿಕ್ ಆಲ್ಬಮ್‍ನಲ್ಲಿ ಒಟ್ಟು 6 ಹಾಡುಗಳಿದ್ದು, ವಿಶೇಷ ಅಂದ್ರೆ ಸೋನು ನಿಗಮ್ ಕೂಡ ಅವುಗಳಲ್ಲಿ ಒಂದು ಸಾಂಗ್‍ಗೆ ಕಂಠದಾನ ಮಾಡಿದ್ದಾರೆ. ಯಶ್ ರಾಜ್ ಬ್ಯಾನರ್‍ನ ಅಡಿಯಲ್ಲಿ ಹಾಡುಗಳನ್ನು ನಿರ್ಮಿಸಲಾಗ್ತಿದೆ.
ಯೂಟ್ಯೂಬ್‍ನಲ್ಲಿ ಹ್ಯಾಪಿ ಮಿಂಚು
6 ಪ್ಯಾಕ್ ಬ್ಯಾಂಡ್ ರಿಲೀಸ್ ಮಾಡಿರುವ ಮೊದಲ ಹಾಡು ಹಮ್ ಹೈ ಹ್ಯಾಪಿಗೆ ಯೂಟ್ಯೂಬ್‍ನಲ್ಲಿ ಅದ್ಭುತ ರೆಸ್ಪಾನ್ಸ್ ದೊರೆಯುತ್ತಿದೆ. ಹಾಡು ಲಾಂಚ್ ಆದ ಕೇವಲ ಒಂದೇ ದಿನದಲ್ಲಿ ಬರೊಬ್ಬರಿ 11 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಅವರಲ್ಲಿ ಸುಮಾರು 16 ಸಾವಿರ ಸಂಗೀತಪ್ರಿಯರು ಹಾಡನ್ನು ಲೈಕ್ ಮಾಡಿ 6 ಪ್ಯಾಕ್ ಬ್ಯಾಂಡ್ ಬೆನ್ನು ತಟ್ಟಿದ್ದಾರೆ. ಇದು ತಂಡದ ಮೊದಲ ಹಾಡಾಗಿದ್ದು, ಇದೇ ಜನವರಿ 26ರ ಗಣರಾಜ್ಯೋತ್ಸವದ ದಿನದಂದು ‘ಸಬ್ ರಬ್ ದೇ ಬಂದೇ’ ಎಂಬ ಎರಡನೇ ಹಾಡನ್ನು ರಿಲೀಸ್ ಮಾಡುವ ಪ್ಲ್ಯಾನ್ 6 ಪ್ಯಾಕ್ ಬ್ಯಾಂಡ್ ತಂಡದ್ದು. ಆ ಹಾಡಿಗೆ ಸೋನು ನಿಗಮ್ ಧ್ವನಿಗೂಡಿಸಿರೋದು ವಿಶೇಷ.
ಸೋನು ನಿಗಮ್ ಏನಂತಾರೆ..?
‘ಬಾಲ್ಯದಲ್ಲಿ ನನ್ನನ್ನು ಯಾವಾಗಲೂ ಒಂದು ಪ್ರಶ್ನೆ ಬಹುವಾಗಿ ಕಾಡುತ್ತಿತ್ತು. ಅಕಸ್ಮಾತ್ ನಾನೇನಾದ್ರೂ ಬೇರೆ ಗ್ರಹದಲ್ಲಿ ಅಲ್ಪಸಂಖ್ಯಾತನಾಗಿ ಹುಟ್ಟಿದ್ರೆ ಏನಾಗ್ತಿತ್ತು? ಬಹುಸಂಖ್ಯಾತರು ನನ್ನನ್ನು ಹೇಗೆ ನೋಡ್ತಿದ್ರು? ನನ್ನ ಕುಟುಂಬದ ಕಥೆ ಏನಾಗ್ತಿತ್ತು? ಅಂತ ಪದೇ ಪದೇ ಚಿಂತಿಸುತ್ತಿದ್ದೆ. ನನಗೆ ಮಂಗಳಮುಖಿಯರನ್ನು ನೋಡಿದಾಗಲೆಲ್ಲಾ ಬೇಸರವಾಗುತ್ತಿತ್ತು. ನಾವ್ಯಾಕೆ ಅವರನ್ನು ಈ ಸಮಾಜದಲ್ಲಿ ಗೌರವಾನ್ವಿತವಾಗಿ ನೋಡಿಕೊಳ್ತಿಲ್ಲ. ಒಂದು ಕೆಲಸ, ಉದ್ಯಮ ಅಥವಾ ಬದುಕಲು ಒಳ್ಳೆಯ ದಾರಿಗೆ ಅನುವು ಮಾಡಿಕೊಡ್ತಿಲ್ಲ. ಯಾವಾಗಲೂ ಅವರನ್ನು ಮದುವೆಗಳಲ್ಲಿ ಅಥವಾ ಬೀದಿಯಲ್ಲಿ ಮಾತ್ರ ನೋಡ್ತೀವಲ್ಲಾ ಅನ್ನೋ ಬೇಸರವಿತ್ತು’ ಅಂತ ತಮ್ಮ ನೋವನ್ನು ಹೊರಹಾಕಿದ್ರು ಸಿಂಗರ್ ಸೋನು ನಿಗಮ್.
ಆದ್ರೆ ‘6 ಪ್ಯಾಕ್ ಬ್ಯಾಂಡ್’ನ ಪ್ರತಿಭೆ ಹಾಗೂ ಏನಾದ್ರೂ ಸಾಧಿಸಲೇಬೇಕು ಎಂಬ ಹುಮ್ಮಸ್ಸನ್ನು ಕಂಡು ಅವರೂ ಸಂತಸಗೊಂಡಿದ್ದಾರೆ. ಹೀಗಾಗಿಯೇ ಈ ಬ್ಯಾಂಡ್‍ನೊಂದಿಗೆ ತಾವೂ ಕೈಜೋಡಿಸಿದ್ದಾರೆ. ‘ಬ್ಯಾಂಡ್‍ನೊಂದಿಗೆ ಹಾಡನ್ನು ಹಾಡಿದ್ದು ನನಗೂ ಒಂದೊಳ್ಳೆ ಅನುಭವ. ಅವರಿಗಾಗಿ ಏನಾದ್ರೂ ಮಾಡಬೇಕು ಅನ್ನೋ ತುಡಿತ ಮೊದಲಿಂದಲೂ ಇತ್ತು. ಅದನ್ನು ಈ ಮೂಲಕ ಮಾಡಿದ್ದೇನೆ. ಅವರಲ್ಲಿ ಪಾಸಿಟಿವ್ ವೈಬ್ಸ್ ಇದೆ. ಅದು ತುಂಬಾ ಒಳ್ಳೆಯ ಬೆಳವಣಿಗೆ. ನನಗೆ ಅವರ ಮುಗ್ಧತೆ ಮತ್ತು ಮಕ್ಕಳಂತಾ ಶಕ್ತಿಯನ್ನು ನೋಡಿ ನಾನೂ ತುಂಬಾ ಖುಷಿಪಟ್ಟೆ’ ಅಂತ ಬ್ಯಾಂಡ್‍ನೊಂದಿಗಿನ ತಮ್ಮ ಅನುಭವ ಹಂಚಿಕೊಳ್ತಾರೆ ಸೋನು.
ಈ ಹಾಡುಗಳಿಗೆಲ್ಲಾ ಶಮೀರ್ ಟಂಡನ್ ಮ್ಯೂಸಿಕ್ ಹೆಣೆದಿದ್ದಾರೆ. ವಿಶೇಷ ಅಂದ್ರೆ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಈ ಆಲ್ಬಮ್‍ಗೆ ನರೇಷನ್ ವಾಯ್ಸ್ ಓವರ್ ಕೊಟ್ಟಿದ್ದಾರೆ.
6 ಪ್ಯಾಕ್ ಬ್ಯಾಂಡ್ ಸದಸ್ಯರು
ಆಶಾ ಜಗ್‍ತಪ್, ಭವಿಕಾ ಪಾಟೀಲ್, ಚಾಂದಿನಿ ಸುವರ್ಣಕರ್, ಫಿದಾ ಖಾನ್, ಕೋಮಲ್ ಜಗ್‍ತಪ್ ಹಾಗೂ ರವೀನಾ ಜಗ್‍ತಪ್ 6 ಪ್ಯಾಕ್ ಬ್ಯಾಂಡ್ ತಂಡದಲ್ಲಿರುವ ಆರು ಮಂದಿ ಸದಸ್ಯರು.
ಅದೇನೇ ಇರಲಿ ಏನಾದ್ರೂ ಸಾಧಿಸಬೇಕು ಅಂತ ಹೊರಟಿರುವ ಈ ಆರೂ ಮಂದಿ ಮಂಗಳಮುಖಿಯರಿಗೆ ಶುಭವಾಗಲಿ.