"ಕಬಾಲಿ’’ಗೆ ಮೆಗಾ ಬ್ರಾಂಡಿಂಗ್: ಅಧಿಕೃತ ಪಾಲುದಾರನಾದ ಏರ್ ಏಷ್ಯಾ : ಚಿತ್ರದ ಪ್ರಮೋಷನ್ಗೆ ಸಖತ್ ಪ್ಲಾನ್
ಟೀಮ್ ವೈ.ಎಸ್. ಕನ್ನಡ
ಅವರ ಕ್ಯಾಬಿನ್ನಲ್ಲಿ ಕುಳಿತು ಕಾಯುತ್ತಿದ್ದ ನನ್ನನ್ನು ಆಕರ್ಷಿಸಿದ್ದು ಟೇಬಲ್ ಮೇಲಿದ್ದ ಕಬಾಲಿ ಉರುಫ್ ರಜನೀಕಾಂತ್ರ ವೆರೈಟಿ ವೆರೈಟಿ ಪ್ರತಿಮೆಗಳು. ಬಗೆ ಬಗೆ ಧಿರಿಸಿನಲ್ಲಿ ರಜನಿ ಮಿಂಚುತ್ತಿದ್ರು. ಅವೆಲ್ಲವೂ ಸಿನಿಮಾ ಪ್ರಮೋಷನ್ನ ಒಂದು ಭಾಗ ಅಂತಾರೆ ಅಲ್ಲಿನ ಸಿಬ್ಬಂದಿ. ಅಷ್ಟೇ ಅಲ್ಲ ಸದ್ಯದಲ್ಲೇ ಅವೆಲ್ಲವೂ ಅಮೇಜಾನ್ನಲ್ಲಿ ಮಾರಾಟಕ್ಕೆ ಬರಲಿವೆ. ತಮ್ಮ ವೃತ್ತಿಯ ಬಗ್ಗೆ ಅವರಲ್ಲೆಷ್ಟು ಸೃಜನಾತ್ಮಕತೆ ಮತ್ತು ಆಸಕ್ತಿ ಇದೆ ಅನ್ನೋದು ಆಗಲೇ ನನಗೆ ಅರ್ಥವಾಗಿದ್ದು. ಬಾಕ್ಸ್ ಆಫೀಸ್ ಯಶಸ್ಸಿಗಾಗಿ ಅವರು ಮಾರ್ಕೆಟಿಂಗ್ ಹಾಗೂ ಬ್ರಾಂಡಿಂಗ್ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ತಾರೆ. ನಿರ್ದೇಶಕರಾಗಿ, ವಿತರಕರಾಗಿ ಸಿನಿ ದುನಿಯಾಕ್ಕೆ ಎಂಟ್ರಿ ಕೊಟ್ಟ ಅವರೀಗ ಖ್ಯಾತ ನಿರ್ಮಾಪಕರು. ಕಳೆದ 30 ವರ್ಷಗಳಿಂದ ಕಾಲಿವುಡ್ನಲ್ಲಿ ಹತ್ತಾರು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಅವರ ಬಹುತೇಕ ಚಿತ್ರಗಳೆಲ್ಲ ಸೂಪರ್ ಹಿಟ್. ಹೌದು ನಾನು ಹೇಳ್ತಿರೋದು ಸೂಪರ್ ಸ್ಟಾರ್ ರಜನಿಯ ಬಹುನಿರೀಕ್ಷಿತ ಚಿತ್ರ ಕಬಾಲಿ ನಿರ್ಮಾಪಕರ ಬಗ್ಗೆ. ಜುಲೈನಲ್ಲಿ ತೆರೆ ಮೇಲೆ ಅಬ್ಬರಿಸಲು ಸಜ್ಜಾಗಿರುವ ಕಬಾಲಿ ಈಗಾಗಲೇ ಎಲ್ಲಾ ಕಡೆ ಸದ್ದು ಮಾಡ್ತಾ ಇದೆ. ಕಬಾಲಿ ಟೀಸರ್ ರಿಲೀಸ್ ಆಗಿದ್ದು 20 ಮಿಲಿಯನ್ ಮಂದಿ ವೀಕ್ಷಿಸಿದ್ದಾರೆ. ಅಷ್ಟೇ ಅಲ್ಲ ಕಬಾಲಿ ಆಡಿಯೋ ಹಕ್ಕು ಥಿಂಕ್ ಮ್ಯೂಸಿಕ್ ಇಂಡಿಯಾಗೆ ಮಾರಾಟವಾಗಿದೆ. ಇದೇ ಖುಷಿಯಲ್ಲಿರುವ ಕಬಾಲಿ ನಿರ್ಮಾಪಕ ಕಲೈಪುಲಿತನು ಯುವರ್ ಸ್ಟೋರಿ ಜೊತೆ ತಮ್ಮ ಉದ್ಯಮ ರಹಸ್ಯಗಳನ್ನ ಬಿಚ್ಚಿಟ್ಟಿದ್ದಾರೆ.
ಬಾಲ್ಯದಿಂದ್ಲೂ ನಾನೊಬ್ಬ ಸೃಜನಾತ್ಮಕ ವ್ಯಕ್ತಿ ಎನ್ನುತ್ತಾರೆ ಅವರು. ಸಂಗೀತ, ಭಾಷಣ ಹೀಗೆ ಎಲ್ಲಾ ಸ್ಪರ್ಧೆಗಳಲ್ಲೂ ಮುಂದಿದ್ದ ಅವರು ಹತ್ತಾರು ಪ್ರಶಸ್ತಿಗಳನ್ನು ಬಾಚಿಕೊಂಡಿದ್ರು. ಕಲೆಯೆಡೆಗೆ ಅವರಿಗಿದ್ದ ಆಸಕ್ತಿ ಚಿತ್ರರಂಗಕ್ಕೆ ಎಂಟ್ರಿ ಕೊಡಲು ಪ್ರೇರಣೆಯಾಯ್ತು. ಚಿಕ್ಕ ವಯಸ್ಸಿನಲ್ಲೇ ವಿತರಕರಾಗಿ ಸಿನಿಮಾ ರಂಗ ಪ್ರವೇಶಿಸಿದ ತನು ಅವರನ್ನು ಯಶಸ್ಸು ಅರಸಿ ಬಂದಿದೆ.
"ನಾನು ಸಿನಿಮಾಗಳಿಗೆ ಹಾಡು ಬರೆಯುತ್ತಿದ್ದೆ, ಜನಪ್ರಿಯ ಚಿತ್ರಗಳಿಗೆ ಆಕರ್ಷಕ ಟೈಟಲ್ ಕೊಡುತ್ತಿದ್ದೆ, ಕೆಲ ಸಿನಿಮಾಗಳಿಗೆ ಸ್ಟೋರಿ ಲೈನ್, ಸ್ಕ್ರಿಪ್ಟ್, ಡೈಲಾಗ್ ಬರೆದಿದ್ದೇನೆ. 1978ರಲ್ಲಿ ಬಿಡುಗಡೆಯಾದ ಭೈರವಿ ಚಿತ್ರಕ್ಕೆ ನಾನು ವಿತರಕನಾಗಿದ್ದೆ. ಆ ಚಿತ್ರದ ನಾಯಕರಾಗಿದ್ದ ರಜನೀಕಾಂತ್ ಅವರ ಸ್ಟೈಲ್ ಹಾಗೂ ಚಾರ್ಮ್ ನನ್ನನ್ನು ಆಕರ್ಷಿಸಿತ್ತು. ರಜನಿ ಅವರಿಗೆ ಸೂಪರ್ ಸ್ಟಾರ್ ಅಂತಾ ಕರೆದು ಪೋಸ್ಟರ್ ಗಳನ್ನೆಲ್ಲ ನಗರದುದ್ದಕ್ಕೂ ಅಂಟಿಸಿದ್ದೆ.’’
- ಕಲೈಪುಲಿತನು, ನಿರ್ಮಾಪಕ
"ಯಾವುದೇ ಸಿನಿಮಾದಲ್ಲಿ ನಾನು ಸಕ್ರಿಯನಾದ್ರೂ ಪ್ರಮೋಷನ್ ಗಾಗಿ ಹೊಸ ಹೊಸ ಕಸರತ್ತು ಮಾಡಲಾರಂಭಿಸುತ್ತೇನೆ. ಜನರನ್ನು ಆ ಸಿನಿಮಾದ ಕಡೆಗೆ ಆಕರ್ಷಿಸುವಂತಹುದ್ದನ್ನೇನಾದರೂ ಮಾಡುತ್ತೇನೆ. ಜಾಹೀರಾತು ಹಾಗೂ ಮಾರ್ಕೆಟಿಂಗ್ ಗೆ ನಾನು ಹೆಚ್ಚಿನ ಮಹತ್ವ ನೀಡುತ್ತೇನೆ. ಸೃಜನಾತ್ಮಕತೆ ಅನ್ನೋದು ನನ್ನಲ್ಲಿ ಅಡಗಿದೆ, ಬಜೆಟ್ನೊಳಗೆ ಅದ್ಭುತ ಪರಿಣಾಮ ಆಗುವಂತಹ ಪ್ರಮೋಷನ್ ತಂತ್ರಗಳನ್ನು ರೂಪಿಸುತ್ತೇನೆ’’ ಎನ್ನುವ ಅವರು ತಮ್ಮ ಹೊಸ ಹೊಸ ಪ್ರಯತ್ನಗಳ ಬಗ್ಗೆ ವಿವರಿಸಿದ್ದಾರೆ.
30 ವರ್ಷಗಳಲ್ಲಿ ತಾವು ಎದುರಿಸಿದ ಸವಾಲುಗಳ ಬಗ್ಗೆ ವಿವರಿಸುವ ತನು"ಒಮ್ಮೆಲೆ ಹಲವು ಚಿತ್ರಗಳು ಬಿಡುಗಡೆಯಾಗುತ್ತವೆ, ಅದೇ ನಮಗೆ ದೊಡ್ಡ ಸವಾಲು. ನಮ್ಮ ಸಿನಿಮಾ ಪ್ರೇಕ್ಷಕರ ಮನಸ್ಸನ್ನು ಗೆಲ್ಲಬೇಕೆಂದರೆ ಹೊಸದೇನಾದರೂ ಮಾಡಲೇಬೇಕು. ಸಿನಿಮಾದ ಭಾಗವಾದವರೆಲ್ಲ ನಷ್ಟ ಅನುಭವಿಸಬಾರದು ಅನ್ನೋದೇ ನನ್ನ ಉದ್ದೇಶ, ಹಾಗಾಗಿ ಲಾಭ ಗಳಿಸುವ ಉದ್ದೇಶದಿಂದ ಜಾಹೀರಾತಿನಲ್ಲಿ ಹೊಸ ಕ್ರಾಂತಿಯನ್ನೇ ಮಾಡುತ್ತೇನೆ’’ ಎನ್ನುತ್ತಾರೆ.
ಇದನ್ನು ಓದಿ: ಯುವ ನಟರಿಗೆ ಹಾಟ್ ಫೇವರಿಟ್ ಆದ ಫಿಟ್ನೆಸ್ ಗುರು ಸೀನು ಮಾಸ್ಟರ್
ವಿತರಕರಾಗಿ ಎಂಟ್ರಿಕೊಟ್ಟ ತನು ಅದ್ಭುತ ನಿರ್ಮಾಪಕನಾಗಿ ಬೆಳೆದಿದ್ದೇ ಒಂದು ಅದ್ಭುತ ಕಹಾನಿ. ಈ ಉದ್ಯಮ ಪ್ರವೇಶಿಸುವ ಮುನ್ನ ಅದರ ಬಗ್ಗೆ ವಿವರವಾಗಿ ತಿಳಿದುಕೊಂಡಿರಲೇಬೇಕು ಎನ್ನುತ್ತಾರೆ ಅವರು. ಇದೇ ಅವರಿಗೆ ಹೆಚ್ಹೆಚ್ಚು ಸಿನಿಮಾಗಳನ್ನು ಮಾಡಲು ಪ್ರೇರಣೆಯಾಯ್ತು.
ನಿಮ್ಮ ಯಶಸ್ಸಿನ ಗುಟ್ಟೇನು ಅನ್ನೋದು ನನ್ನ ಪ್ರಶ್ನೆ. "ನಾನು ಬೆಳಗ್ಗೆ 6 ಗಂಟೆಗೆ ಏಳುತ್ತೇನೆ. ದಿನದ ಕೆಲಸವನ್ನು ಪ್ರಾರಂಭಿಸ್ತೇನೆ. ಕೆಲಸದಲ್ಲಿ ಸಂಪೂರ್ಣವಾಗಿ ತೊಡಗಿಕೊಳ್ಳುವುದೇ ನನ್ನ ಶಕ್ತಿ. ವಿಶೇಷ ಅಂದ್ರೆ ಬೆಳಗ್ಗೆ 6ರಿಂದ ರಾತ್ರಿ ವರೆಗೂ ನಾನು ಕೆಲಸ ಮಾಡುತ್ತೇನೆ’’ ಎನ್ನುತ್ತಾರೆ ಅವರು.
ಬ್ರಾಂಡಿಂಗ್ ಬಗ್ಗೆ ಅವರು ಹೆಚ್ಚಿನ ಗಮನ ಹರಿಸ್ತಾರೆ. ರಾಜೀವ್ ಮೆನನ್ ನಿರ್ದೇಶನದ ಕಂಡುಕೊಂಡೈನ್ ಕಂಡುಕೊಂಡೇನ್ ಚಿತ್ರದಲ್ಲಿ ಐಶ್ವರ್ಯಾ ರೈ ಸೇರಿದಂತೆ ಸ್ಟಾರ್ ಗಳು ನಟಿಸಿದ್ದರು. ಈ ಸಿನಿಮಾದ ಪ್ರಮೋಷನ್ ಗಾಗಿ ಫೇರ್ & ಲವ್ಲಿ ಜೊತೆ ಟೈಅಪ್ ಮಾಡಿಕೊಂಡಿದ್ದ ತನು ಜಾಹೀರಾತಿನಲ್ಲೂ ಅದನ್ನು ಬಳಸಿಕೊಂಡಿದ್ದರು.
ಬಳಿಕ ನಮ್ಮ ಸಂಭಾಷಣೆ ನಡೆದಿದ್ದು ಬಹುನಿರೀಕ್ಷಿತ ಚಿತ್ರ ಕಬಾಲಿ ಬಗ್ಗೆ. ಮೆಗಾ ಚಿತ್ರವೊಂದರ ನಿರ್ಮಾಣದಲ್ಲಿನ ಅನುಭವಗಳನ್ನು ತನು ಹಂಚಿಕೊಂಡ್ರು. ತನು ಹಾಗೂ ರಜನೀಕಾಂತ್ ಅವರದ್ದು 35 ವರ್ಷಗಳ ಹಳೆಯ ಸ್ನೇಹ. ನಾನಾ ಕಾರಣಗಳಿಂದ ರಜನಿ ಸಿನಿಮಾ ನಿರ್ಮಾಣ ಮಾಡುವ ಸದವಕಾಶ ಅವರಿಗೆ ಇದುವರೆಗೂ ಒದಗಿ ಬಂದಿರಲಿಲ್ಲ. ತಲೈವಾ ಜೊತೆ ಗೆಳೆತನ ಮುಂದುವರಿಸಿದ್ದ ತನು ಈ ದಿನಕ್ಕಾಗಿ ಸಹನೆಯಿಂದ ಕಾದಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಕರೆ ಮಾಡಿದ್ದ ರಜನಿ ತನು ಅವರ ಪ್ರೊಡಕ್ಷನ್ ನಲ್ಲಿ ಸಿನಿಮಾ ಮಾಡುವ ಆಸಕ್ತಿ ತೋರಿದ್ದರು. ಅದರ ಫಲವೇ ಕಬಾಲಿ. ಬಿಡುಗಡೆಗೂ ಮುನ್ನವೇ ಕಬಾಲಿ ಪ್ರೇಕ್ಷಕರ ಮನಗೆದ್ದಿಗೆ, 200 ಕೋಟಿ ರೂಪಾಯಿ ಸಂಪಾದಿಸಿದೆ.
``ಸಿನಿಮಾದ ಬ್ರಾಂಡಿಂಗ್ ನಮ್ಮ ಮಾರ್ಕೆಟಿಂಗ್ ತಂತ್ರಗಳನ್ನು ಅವಲಂಭಿಸಿದೆ. ಅದರಲ್ಲೂ ಸೂಪರ್ ಸ್ಟಾರ್ ಸಿನಿಮಾ ಅಂದ್ಮೇಲೆ ಇದೆಲ್ಲಾ ಬಹಳ ಸುಲಭ’’ ಅನ್ನೋದು ತನು ಅವರ ಅನುಭವದ ಮಾತು.
ಇದೇ ಮೊದಲ ಬಾರಿಗೆ ಏರ್ ಏಷ್ಯಾ ಕಬಾಲಿ ಚಿತ್ರದ ಅಧಿಕೃತ ಪಾಲುದಾರನಾಗಿದೆ. ಫ್ಲೈ ಲೈಕ್ ಎ ಸೂಪರ್ ಸ್ಟಾರ್ ಎಂಬ ಟ್ಯಾಗ್ಲೈನ್ನೊಂದಿಗೆ ಸ್ಥಳೀಯ ಪ್ರಯಾಣ ದರವನ್ನು ಕೇವಲ 786 ರೂಪಾಯಿಗೆ ನಿಗದಿಪಡಿಸಿದೆ. ಭಾರತೀಯ ಚಿತ್ರರಂಗಕ್ಕೆ ರಜನೀಕಾಂತ್ ನೀಡಿದ ಕೊಡುಗೆಯನ್ನು ಪರಿಗಣಿಸಿ ಅವರ ಚಿತ್ರ ಹಾಗೂ ಅಭಿಮಾನಿಗಳಿಗಾಗಿ ವಿಶೇಷ ಕೊಡುಗೆ ನೀಡಿದೆ. ಏರ್ ಏಷ್ಯಾ ಇಂಡಿಯಾ ತನ್ನ ಹೊಸ ವಿಮಾನವನ್ನು ಸಹ ಕಬಾಲಿ ಸಿನಿಮಾಕ್ಕಾಗಿ ಮೀಸಲಾಗಿರಿಸಿದೆ. ವಿಮಾನದ ಮೇಲೆ ರಜನೀಕಾಂತ್ ಅವರ ಕಬಾಲಿ ಅವತಾರಗಳನ್ನು ಚಿತ್ರಿಸಲಾಗಿದೆ. ಏರ್ ಏಷ್ಯಾದ ಈ ವಿಮಾನಗಳು ಬೆಂಗಳೂರು, ದೆಹಲಿ, ಪುಣೆ, ಚಂಡೀಘಡ, ಗೋವಾ, ಇಂಫಾಲ್, ಕೊಚ್ಚಿ, ಗುವಾಹಟಿ, ವೈಜಾಗ್ ಮತ್ತು ಜೈಪುರ ನಡುವೆ ಹಾರಾಡಲಿವೆ. ಅಷ್ಟೇ ಅಲ್ಲ ರಜನೀಕಾಂತ್ ಅಭಿಮಾನಿಗಳು ಕಬಾಲಿ ಬಿಡುಗಡೆಯಾದ ದಿನವೇ ಚಿತ್ರ ವೀಕ್ಷಿಸಲು ಏರ್ ಏಷ್ಯಾ ವಿಮಾನಗಳಲ್ಲಿ ಬೆಂಗಳೂರು ಹಾಗೂ ಚೆನ್ನೈಗೆ ಪ್ರಯಾಣಿಸಬಹುದು. ಹೆಚ್ಚಿನ ವಿವರ ಹಾಗೂ ಬುಕ್ಕಿಂಗ್ ಗಾಗಿ ಅಭಿಮಾನಿಗಳು +918041158492/8493ಗೆ ಕರೆ ಮಾಡಿ.ಇದುವರೆಗೆ ಯಾರೂ ಮಾಡದಂತಹ ಹೊಸ ಬಗೆಯ ಪ್ರಮೋಷನ್ ಇದು ಎನ್ನುತ್ತಾರೆ ನಿರ್ಮಾಪಕರು.
" ಬ್ಯುಸಿನೆಸ್ ಈಗಷ್ಟೇ ಆರಂಭವಾಗಿದೆ. ಅಮೆರಿಕದಲ್ಲಿ ನಾವು 8.5 ಕೋಟಿ, ಹಾಗೂ ಆಸ್ಟ್ರೇಲಿಯಾದಲ್ಲಿ 1.65 ಕೋಟಿಗೆ ಹಕ್ಕುಗಳನ್ನು ಮಾರಾಟ ಮಾಡಿದ್ದೇವೆ. ಕಬಾಲಿ ಚಿತ್ರಕ್ಕೆ ನನ್ನ ಬಾಕ್ಸ್ ಆಫೀಸ್ ಟಾರ್ಗೆಟ್ 500 ಕೋಟಿ. ಯಾಕಂದ್ರೆ ಸಿನಿಮಾದಲ್ಲಿ ಸೂಪರ್ ಸ್ಟಾರ್ ಇದ್ದಾರೆ. ಈಗಾಗ್ಲೇ ಎಲ್ಲರ ನಿರೀಕ್ಷೆಗಳನ್ನು ಮೀರಿ ಕಬಾಲಿ ಸದ್ದು ಮಾಡಿದೆ. ನಾವು ಗುರಿ ತಲುಪುವುದರಲ್ಲಿ ಅನುಮಾನವೇ ಇಲ್ಲ’’
-ಕಲೈಪುಲಿತನು, ನಿರ್ಮಾಕಪಕ
ಚಿತ್ರೋದ್ಯಮಕ್ಕೆ ಎಂಟ್ರಿ ಕೊಡುತ್ತಿರುವ ಯುವಕರಿಗೆ ಕಿವಿಮಾತು ಹೇಳುತ್ತ ಅವರು ಮಾತು ಮುಗಿಸಿದ್ರು.
"ಯಾವುದೇ ಉದ್ಯಮ ಪ್ರವೇಶಿಸುವ ಮುನ್ನ ಅದರ ಲಕ್ಷಣಗಳನ್ನು ಚೆನ್ನಾಗಿ ಅರ್ಥಮಾಡಿಕೊಂಡಿರಬೇಕು. ಸಲಹೆಗಾರರ ನಿರ್ದೇಶನದಂತೆ ನಡೆಯಬೇಕು. ಕೇವಲ ಹಣವೊಂದೇ ಯಾವ ಉದ್ಯಮವನ್ನೂ ಯಶಸ್ಸಿನತ್ತ ಕೊಂಡೊಯ್ಯಲು ಸಾಧ್ಯವಿಲ್ಲ. ಅನುಭವ ಹಾಗೂ ಸಮರ್ಪಣಾ ಭಾವ ನಷ್ಟವನ್ನು ಹೊಡೆದೋಡಿಸಬಲ್ಲದು.’’
1. 2 ಲಕ್ಷ ಯೂಸರ್ಸ್ ಮತ್ತು 45 ಲಕ್ಷ ಮಂತ್ಲಿ ಟ್ರಾಫಿಕ್..!
2. ಹಸಿವಾಗಿದ್ಯಾ, ಕ್ಲಿಕ್ ಮಾಡಿ..ಫುಡ್ಪಂಡಾ ಹೊಟ್ಟೆ ತುಂಬಿಸುತ್ತೆ..!
3. ಕಿರಿಕಿರಿ ಮುಕ್ತವಾಗಲಿದೆ ಬೆಂಗಳೂರು ಟ್ರಾಫಿಕ್- ಇದು ನಮ್ಮ ಮೆಟ್ರೋದ ಮ್ಯಾಜಿಕ್