ದೇಶದಾದ್ಯಂತ ಬಗೆಬಗೆಯಾದ ದಸರಾ ಆಚರಣೆ
ಉತ್ತರದಿಂದ ದಕ್ಷಿಣದ ತನಕ ಬಗೆಬೆಗಯಾದ ದಸರಾ ಆಚರಣೆಯು ಸಾಂಸ್ಕೃತಿಕವಾಗಿ ಶ್ರೀಮಂತವಾಗಿದೆ. ವಿವಿಧ ಆಚರಣೆಗಳ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ.
ನವರಾತ್ರಿ ಎಂತಲೂ ಕರೆಯುವ ದಸರಾ ಮಹೋತ್ಸವಕ್ಕೆ ದೇಶದೆಲ್ಲೆಡೆ ಪ್ರಾಂತೀಯ ಪ್ರಾಮುಖ್ಯತೆ ಇದೆ. ಉತ್ತರ ಭಾರತದಲ್ಲಿ ದಸರಾವನ್ನು ಶ್ರೀರಾಮ ರಾಕ್ಷಸ ಅರಸು ರಾವಣನನ್ನು ಸಂಹಾರ ಮಾಡಿದ ದಿನವನ್ನು ಅಧರ್ಮದ ವಿರುದ್ಧ ಧರ್ಮಜಯಗಳಿಸಿದ ಸಾಂಕೇತಿಕವಾಗಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಇನ್ನು ದಕ್ಷಿಣ ಭಾರತದ ಬಂಗಾಳದಲ್ಲಿ ಕಾಳಿ ಅಥವಾ ದುರ್ಗಿಯ ಪೂಜೆ, ತಮಿಳುನಾಡಲ್ಲಿ ಲಕ್ಷ್ಮಿ, ಸರಸ್ವತಿ ಮತ್ತು ಶಕ್ತಿಯರ ಪೂಜೆ ಹಾಗೂ ಕೊಡಗು, ಮಂಗಳೂರು ದಸರಾ ವಿಭಿನ್ನವಾಗಿದ್ದರೇ, ಮೈಸೂರಿನಲ್ಲಿ ಜಗದ್ವಿಖ್ಯಾತ ದಸರಾ ವಿಜಯದಶಮಿ ದಿನ ಜಂಬೂಸವಾರಿಯ ಮೂಲಕ ಕೊನೆಗೊಳ್ಳುತ್ತದೆ.
ವಿವಿಧತೆಯಲ್ಲಿ ಏಕತೆ ಸಾರುವ ದೇಶ ನಮ್ಮದು. ಭಾಷೆ, ಜನಾಂಗ, ಧರ್ಮ, ಆಚರಣೆಗಳು, ಸಂಪ್ರದಾಯ ರೂಢಿ-ಪದ್ಧತಿಗಳಲ್ಲಿ ವಿವಿಧತೆ ಇದ್ದರೂ ನಾವೆಲ್ಲರೂ ಭಾರತೀಯರೆಂಬ ಏಕತೆ ನಮ್ಮಲ್ಲಿದೆ. ಹೀಗೆ ದೇಶದ ಎಲ್ಲ ರಾಜ್ಯಗಳಲ್ಲಿಯೂ ಒಂದೊಂದು ವಿಭಿನ್ನ ಹಬ್ಬ ಆಚರಣೆಗಳು ಗತಕಾಲದ ಇತಿಹಾಸವನ್ನು ಸಾರುತ್ತವೆ.
ನವರಾತ್ರಿಯ ಒಂಭತ್ತು ದಿವಸಗಳ ಉಪವಾಸದ ನಂತರ ಬರುವ ಈ ದಸರಾ ಹಬ್ಬವನ್ನು ದೇಶದ ಪ್ರಮುಖ ಭಾಗಗಳಲ್ಲಿ ವಿವಿಧ ರೀತಿಯಲ್ಲಿ ಅತ್ಯಂತ ಭಕ್ತಿಪೂರ್ವಕವಾಗಿ ಆಚರಿಸಲಾಗುತ್ತದೆ. ಪುರಾಣಗಳಲ್ಲಿಯೂ ಈ ದಿನಕ್ಕೆ ಹೆಚ್ಚಿನ ಮಹತ್ವವಿದೆ. ಈ ದಿನ ಭಗವಂತ ರಾಮನು ಹತ್ತು ತಲೆಯ ರಾಕ್ಷಸ ರಾವಣನ ಅಟ್ಟಹಾಸಕ್ಕೆ ಅಂತ್ಯವಾಡಿದ ದಿನದ ವಿಜಯದ ಸಂಕೇತವಾಗಿ ವಿಜಯದಶಮಿಯೆಂದು ಆಚರಿಸಲಾಗುತ್ತದೆ. ಇನ್ನೂ ಕೆಲವು ಕಡೆ ತಾಯಿ ಚಾಮುಂಡೇಶ್ವರಿ ಮಹಿಷಾಸುರನನ್ನು ಕೊಂದ ವಿಜಯದ ದಿವಸವಾಗಿ ಆಚರಿಸಲಾಗುತ್ತದೆ.
ಕೊಲ್ಕತ್ತಾ, ಪಶ್ಚಿಮಬಂಗಾಳ - ದುರ್ಗಾಪೂಜೆ
ಪಶ್ಚಿಮಬಂಗಾಳದಲ್ಲಿ ದಸರಾವನ್ನು ದುರ್ಗಾ ಮಾತೆಯನ್ನು ಪೂಜಿಸುವ ಮೂಲಕ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಎಲ್ಲಿ ನೋಡಿದರೂ ಆಕರ್ಷಕ ಬಣ್ಣದ ಪೆಂಡಾಲ್ ಗಳಲ್ಲಿ ವಿವಿಧ ಆಯುಧಗಳೊಂದಿಗೆ ಅಲಂಕೃತಗೊಂಡ ದುರ್ಗಾ ದೇವಿಯನ್ನು ಕೂರಿಸಿ ಪೂಜಿಸಲಾಗುತ್ತದೆ. ಗಣೇಶ ಚತುರ್ಥಿಯಂತೆ ಆಚರಿಸಲ್ಪುಡುವ ಈ ಹಬ್ಬದಲ್ಲಿ, ದೇವಿಯ ಸತತ 5 ದಿನಗಳ ವಿಜೃಂಭಣೆ ಆರಾಧನೆಯ ನಂತರ ಹತ್ತನೇ ದಿನ ದೇವಿಯನ್ನು ಬೃಹತ್ ಮೆರವಣಿಗೆಯಲ್ಲಿ ಸಾಗಿಸಿ ವಿಸರ್ಜನೆ ಮಾಡಲಾಗುತ್ತದೆ.
ಪೂಜೆಯ ಕೊನೆಯ ದಿನ ವಿವಾಹಿತ ಮಹಿಳೆಯರು ಸಾಂಪ್ರದಾಯಿಕವಾಗಿ ಕೆಂಪು, ಬಿಳಿ ಬಣ್ಣದ ಸೀರೆಯುಟ್ಟು ಸಿಂಧೂರ ಬಳಿಯುವುದು ಕಣ್ಮನ ಸೆಳೆಯುತ್ತವೆ.
ಗುಜರಾತ್ - ನವರಾತ್ರಿ- ದುರ್ಗಾಪೂಜೆ
ಗುಜರಾತಿನ ನವರಾತ್ರಿಯಲ್ಲಿ ಪುರುಷರು ಹಾಗೂ ಮಹಿಳೆಯರು ಸೇರಿ ಗರ್ಬಾ ನೃತ್ಯ ಮಾಡುವುದು ವಿಶೇಷ. 9 ದಿನಗಳ ಕಾಲವೂ ಬೆಳಗ್ಗೆ ಉಪವಾಸ ಮಾಡಿ ಸಂಜೆ ದೇವಿಯ ಪೂಜೆ ನಂತರ ಊಟ ಮಾಡುವುದು ವಾಡಿಕೆ.
ದೇವಿಗೆ ಆರತಿ ಬೆಳಗುವ ಸಮಯದಲ್ಲಿ ದೇವಿಯ ಮುಂದೆ ಗರ್ಬಾ ಎಂಬ ಸಾಂಪ್ರಾಯಿಕ ನೃತ್ಯಕ್ಕೆ ಬಣ್ಣ-ಬಣ್ಣದ ಕೋಲುಗಳನ್ನು ಹಿಡಿದುಕೊಂಡು ಹೆಜ್ಜೆಹಾಕುವುದು ಮುಖ್ಯ ಭಾಗ. ಇಲ್ಲಿ ಮಹಿಳೆಯರ ಲೆಹೆಂಗಾ ಚೂಲಿ ಹಾಗೂ ಪುರುಷರ ಕೆದಿಯಾ ಸಾಂಪ್ರದಾಯಿಕ ಉಡುಗೆ ತೊಡುಗೆ ಸಾಮಾನ್ಯವಾಗಿರುತ್ತದೆ.
ದೆಹಲಿ - ರಾಮಲೀಲ
ದೇಶದ ರಾಜಧಾನಿ, ಹೃದಯಭಾಗವಾದ ದೆಹಲಿಯಲ್ಲಿ ದಸರಾವನ್ನು ರಾವಣನನ್ನು ರಾಮ ವಧಿಸಿದ ಸಂಕೇತವಾಗಿ ರಾಮಲೀಲ ವೆಂಬ ಹೆಸರಿನಲ್ಲಿ ಆಚರಿಸಲಾಗುತ್ತದೆ. ಪೆಂಡಾಲುಗಳಲ್ಲಿ ದುರ್ಗೆಯನ್ನು ಪೂಜಿಸುವುದು ಸಾಮಾನ್ಯವಾಗಿದ್ದರೆ, ಅಲ್ಲಲ್ಲಿ ರಾಮಲೀಲ ಕಥಾಮೃತಗಳ ನಾಟಕಗಳ ಪ್ರದರ್ಶನ ನಡೆಯುತ್ತಿರುತ್ತದೆ. ನವ ದಿನಗಳ ಕಾಲ ಉಪವಾಸ ಮಾಡುವುದು ಸಂಪ್ರದಾಯ. ಅಲ್ಲದೇ ರಾವಣ, ಮೇಘನಾದ, ಕುಂಭಕರ್ಣರ ದೊಡ್ಡ ಪ್ರತಿಕೃತಿಗಳಿಗೆ ರಾಮ ಹಾಗೂ ಲಕ್ಷ್ಮಣ ವೇಷಧಾರಿಗಳು ತಮ್ಮ ಬಾಣದಲ್ಲಿ ಬೆಂಕಿ ಹೊತ್ತಿಸಿಕೊಂಡು ಪ್ರತಿಕೃತಿಗಳನ್ನು ಸುಟ್ಟುಹಾಕುತ್ತಾರೆ.
ಭಕ್ತರು ಹೋಳಿ ಆಡುವ ಮೂಲಕ ತಮ್ಮಲ್ಲಿನ ಇಷ್ಟಾರ್ಥಗಳನ್ನು ದೇವರಲ್ಲಿ ಪ್ರಾರ್ಥಿಸಿಕೊಳ್ಳುತ್ತಾರೆ. ಅಲ್ಲದೇ ಬಗೆ ಬಗೆಯ ತಿಂಡಿ ತಿನಿಸುಗಳನ್ನು ತಯಾರಿಸಿ ಮನೆಯಲ್ಲಿ ಹಾಗೂ ದೇವಾಲಯಗಳಲ್ಲಿ ದೇವರಿಗೆ ನೈವೇದ್ಯವಾಗಿ ಅರ್ಪಿಸುತ್ತಾರೆ.
ಪಂಜಾಬ - ಶಕ್ತಿ ದೇವಿಯ ಆರಾಧನೆ
ಪಂಜಾಬ್ ನಲ್ಲಿ ಶಕ್ತಿದೇವಿಯ ಆರಾಧನೆ ಮೂಲಕ ದಸರಾವನ್ನು ಆಚರಿಸಲಾಗುತ್ತದೆ. ನವರಾತ್ರಿಯ 7 ದಿನಗಳ ಕಾಲ ಹಗಲು ಉಪವಾಸ ಮಾಡುವುದು ಇಲ್ಲಿನ ವಾಡಿಕೆ. ಪ್ರತಿದಿನ ರಾತ್ರಿ ದೇವಿಯ ಭಜನೆ ನೆರವೇರಿಸುತ್ತಾರೆ. ಅಷ್ಟಮಿಯ ದಿವಸ ವ್ರತವನ್ನು ಕೈಬಿಟ್ಟು ಅಕ್ಕಪಕ್ಕದ ಒಂಭತ್ತು ಬಾಲಕಿಯರಿಗೆ ಪೂಜೆ ನೆರವೇರಿಸಿ ಉಡುಗೊರೆಗಳನ್ನು ನೀಡಿ ಗೌರವಿಸಲಾಗುತ್ತದೆ ಹಾಗೂ ಅವರುಗಳನ್ನು ದೇವಿಯ ರೂಪದಲ್ಲಿ ಪರಿಗಣಿಸುವುದು ವಿಶೇಷ. ಹತ್ತನೇ ದಿವಸ ರಾವಣನ ಪ್ರತಿಕೃತಿ ದಹಿಸುವುದು ಸಂಪ್ರದಾಯ.
ಲಕ್ಷಾಂತರ ಜನಸ್ತೋಮದ ನಡುವೆ ರಾವಣ, ಮೇಘನಾದ ರಂತಹ ಅಸುರರ ಪ್ರತಿಕೃತಿಗಳನ್ನು ದಹನ ಮಾಡಲಾಗುತ್ತದೆ.
ಹಿಮಾಚಲ ಪ್ರದೇಶ - ಕುಲ್ಲು
ಹಿಮಾಚಲಪ್ರದೇಶದ ಕುಲ್ಲು ಕಣಿವೆಯಲ್ಲಿ ದಸರಾವನ್ನು ವಿಜಯದಶಮಿಯಿಂದ ೭ ದಿನಗಳವರೆಗೆ ಧಲ್ಪುರ್ ಮೈದಾನದಲ್ಲಿ ಆಚರಿಸಲಾಗುತ್ತದೆ. ಮನಾಲಿಯ ದೇವತೆ ಹಿಡಿಂಬಾ ಸೇರಿದಂತೆ ಸುಮಾರು ಇನ್ನೂರಕ್ಕೂ ಸ್ಥಳೀಯ ದೇವತೆಗಳನ್ನು ರಘುನಾಥ ಸ್ವಾಮಿ ದೇವಾಲಯಕ್ಕೆ ತರಲಾಗುತ್ತದೆ. ಹಾಗೂ ಈ ಮೈದಾನದಲ್ಲಿ ಮೆರವಣಿಗೆ ನಡೆಯುತ್ತದೆ ಅದರ ವೀಕ್ಷಣೆಗಾಗಿ ಸಾವಿರಾರು ಮಂದಿ ಸೇರಿರುತ್ತಾರೆ. ಕೊನೆಯ ದಿವಸ ನದಿಯ ದಡದಲ್ಲಿ ಹುಲ್ಲಿನ ರಾಶಿಗೆ ಬೆಂಕಿ ಹಾಕುವುದರ ಮೂಲಕ ಈ ಆಚರಣೆ ಕೊನೆಗೊಳ್ಳುತ್ತದೆ.
ಪಂಜಾಬ್ ನ ವಿಶೇಷತೆಯೆಂದರೆ ದೇಶದ ಇತರೆ ರಾಜ್ಯಗಳಲ್ಲಿ ದಸರಾ ಆಚರಣೆ ಕೊನೆಗೊಳ್ಳುವ ದಿನ ಅಂದರೆ ವಿಜಯದಶಮಿಯಂದು ದಸರಾ ಪ್ರಾರಂಭವಾಗುವುದು.
ಆಂಧ್ರಪ್ರದೇಶ - ವಿಜಯದಶಮಿ
ಆಂಧ್ರಪ್ರದೇಶದ ವಿಜಯವಾಡದಲ್ಲಿ ವಿಜಯದಶಮಿ ಉತ್ಸವ ಬಹು ಆಕರ್ಷಣೀಯ. ಕನಕದುರ್ಗಾ ದೇವಾಲಯದಲ್ಲಿ ವಿಜೃಂಭಣೆಯಿಂದ ಭಕ್ತಿಪೂರ್ವಕ ಪೂಜೆಸಲ್ಲಿಸಲಾಗುತ್ತದೆ. ಸತತ ಹತ್ತು ದಿನಗಳ ಕಾಲ ದೇವಿಯನ್ನು ವಿವಿಧ ಅವತಾರಗಳಲ್ಲಿ ಅಲಂಕರಿಸಿ ಆರಾಧಿಸುವುದು ವಿಜಯದಶಮಿಯ ವಿಶೇಷತೆ.
ಎಲ್ಲರ ಮನೆಯಲ್ಲಿ ದೇವಿ ಮಹಿಷಾಸುರಮರ್ಧಿನಿಯನ್ನು ಆರಾಧಿಸುವುದು ವಾಡಿಕೆ. ಬೀದಿ ಬೀದಿಗಳಲ್ಲಿ ರಥದಲ್ಲಿ ವೆಂಕಟೇಶ್ವರ ಮೂರ್ತಿಯ ಜೊತಗೆ ಶ್ರೀದೇವಿ ಹಾಗೂ ಭೂದೇವಿಯ ಮೆರವಣಿಗೆ ವಿಶೇಷ.
ಭದ್ರಕಾಳಿ ನದಿಯ ಬಳಿಯಿರುವ ವಾರಂಗಲ್ ದೇವಾಲಯದಲ್ಲಿ ದಸರಾದಂದು ವಿಶೇಷ ಪೂಜೆ ನೆರವೇರುತ್ತದೆ. ಆಲಂಪುರ ಜೋಗುಲಾಂಬ ದೇವಾಲಯದಲ್ಲಿ ಶರಣ ನವರಾತ್ರಿ ಪೂಜೆ ನಡೆಯುತ್ತದೆ. ಕೊನೆಯ ದಿವಸ ಕೃಷ್ಣ ಹಾಗೂ ತುಂಗಭದ್ರಾ ನದಿಯಲ್ಲಿ ದೇವಿಯ ತಪ್ಪೋತ್ಸವ ನೆರವೇರುತ್ತದೆ. ಪ್ರತಿ ಮನೆ ಮನೆಯಲ್ಲಿಯೂ 'ಬೊಮ್ಮಾಲು ಕೊಳವು' ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಇತಿಹಾಸ ಸಾರುವ ಗೊಂಬೆಗಳನ್ನು ಜೋಡಿಸಿ ಪೂಜಿಸಲಾಗುತ್ತದೆ.
ತೆಲಂಗಾಣ - ಬಥುಕಮ್ಮ
ದೇವಸ್ಥಾನಗಳಿಗೆ ತೆರಳಿ ಪೂಜೆ ಮಾಡಿಸುವುದು ಮಾತ್ರವಲ್ಲದೇ, ಮನೆಯ ಮಹಿಳೆಯರು ವಿವಿಧ ಬಣ್ಣದ ಹೂವುಗಳಿಂದ ದೇವಾಲಯದ ಗೋಪುರ ರೂಪದಲ್ಲಿ ಅಲಂಕರಿಸಿ ಭೂತಾಯಿಯ ಪ್ರತಿರೂಪವಾಗಿ ಆರಾಧಿಸುವುದು ದಸರಾದಲ್ಲಿನ ವಿಶೇಷತೆ. ಇದನ್ನು ಬಥುಕಮ್ಮ ಹೂಗಳ ಹಬ್ಬವೆಂದು ಕರೆಯಲಾಗುತ್ತದೆ.
ಮಹಾಲಯ ಅಮಾವಾಸ್ಯೆ ಆರಂಭದಿಂದ ದುರ್ಗಾಷ್ಟಮಿಯ ಒಂಭತ್ತು ದಿವಸಗಳವರೆಗೆ ಈ ಆಚರಣೆ ನೆರವೇರುತ್ತದೆ.
ಮಹಿಳೆಯಿಂದ ಅಲಂಕೃತಗೊಂಡ ಹೂವಿನ ಗೋಪುರ - ತೆಲಂಗಾಣದ ವಿಜಯದಶಮಿ ಸಮಯದಲ್ಲಿ ನವ ವಿವಾಹಿತ ವಧು-ವರನಿಗೆ ಬಂಧುಗಳು ಆಮಂತ್ರಣ ನೀಡಿ ಉಡುಗೊರೆಗಳನ್ನು ನೀಡುತ್ತಾರೆ. ಒಂಭತ್ತನೇ ದಿವಸ ವಿದ್ಯಾರ್ಥಿಗಳು ತಮ್ಮ ಪುಸ್ತಕ, ಪೆನ್ನು ಪೆನ್ಸಿಲ್ ಗಳನ್ನು ಪೂಜಿಸುತ್ತಾರೆ ಹಾಗೂ ಪುಟ್ಟ ಹೆಣ್ಣುಮಕ್ಕಳನ್ನು ಮನೆಗೆ ಕರೆದು ಪಾದಪೂಜೆ ಮಾಡಿ ಉಡುಗೊರೆ ನೀಡಿ ದೇವಿಯ ಪ್ರತಿರೂಪವೆಂದು ಆರಾಧಿಸಲಾಗುತ್ತದೆ.
ಉತ್ತರಪ್ರದೇಶ - ಗಂಗಾ ದಸರಾ
ಉತ್ತರಪ್ರದೇಶದ ವಾರಣಾಸಿ ಭಕ್ತರು ಹಾಗೂ ಸಂತರುಗಳ ಕೇಂದ್ರೀಯ ಸ್ಥಳ. ಇಲ್ಲಿ ನವರಾತ್ರಿಯಲ್ಲಿ ಭಕ್ತರ ಸಂಖ್ಯೆ ಹೆಚ್ಚು. ರಾಮ, ಸೀತಾ ಹಾಗೂ ಲಕ್ಷ್ಮಣರ ವನವಾಸದ ಕಥೆ ಸಾರುವ ಮೆರವಣಿಗೆ ಸಾಗುವುದು ವಿಶೇಷ. ಈ ಹಬ್ಬವು ನಗರದ ರಾಮಲೀಲ ಮೈದಾನದಲ್ಲಿ ನೆರವೇರುತ್ತದೆ.
ದಸರಾದ ವಿಶೇಷವಾಗಿ ಗಂಗಾ ನದಿಯನ್ನು ವಿಜೃಂಭಣೆಯಿಂದ ಪೂಜಿಸಲಾಗುತ್ತದೆ. ಶಿವನ ಶಿರದ ಮೇಲೆ ಜಾಗ ಪಡೆದ ಗಂಗಾಮಾತೆಯನ್ನು ಭಕ್ತಿಪೂರ್ವಕವಾಗಿ ಪೂಜಿಸಲಾಗುತ್ತದೆ. ಗಂಗಾ ನದಿಯು ಹರಿಯುವ ಪ್ರದೇಶಗಳಾದ ವಾರಣಾಸಿ, ಉತ್ತರ ಖಂಡ, ಪಶ್ಚಿಮ ಬಂಗಾಳದಲ್ಲಿ ಗಂಗಾವತಾರಂ ಎಂಬ ಹೆಸರಿನಲ್ಲಿ ನವರಾತ್ರಿಯನ್ನು ಆಚರಿಸಲಾಗುತ್ತದೆ.
ಮಹಾರಾಷ್ಟ್ರ - ವಿಜಯದಶಮಿ
ಮಹಾರಾಷ್ಟ್ರದಲ್ಲಿ ದಸರಾವನ್ನು ಬಹಳ ವಿಭಿನ್ನವಾಗಿ ಆಚರಿಸಲಾಗುತ್ತದೆ. ಮಣ್ಣಿನ ಪಾತ್ರೆಗಳಲ್ಲಿ ವಿವಿಧ ಬಗೆಯ ಧಾನ್ಯಗಳನ್ನು ಬಿತ್ತಿ ಅದರ ಮೇಲೆಜೋಳದ ತೆನೆಯನ್ನು ನೆಟ್ಟು, ಧಾನ್ಯಗಳು ಮೊಳಕೆಯೊಡೆದು ಚಿಗುರುವ ತನಕ ಪೂಜಿಸಲಾಗುತ್ತದೆ. ಇಲ್ಲಿ ಯಾವುದೇ ಶುಭ ಕಾರ್ಯಗಳನ್ನು ನವರಾತ್ರಿಯಲ್ಲಿ ಆರಂಭಿಸಿದರೆ ಶುಭಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ.
ಪ್ರತಿಯೊಬ್ಬರು ಸಿಹಿ ಹಂಚಿ ವಿಜಯದಶಮಿಯನ್ನು ಆಚರಿಸುತ್ತಾರೆ. ಅಲ್ಲದೇ ಬನ್ನಿ ಮರದ ಎಲೆಗಳನ್ನು ಕೊಟ್ಟು-ತೆಗೆದುಕೊಳ್ಳುವ ಪದ್ಧತಿ ಇರುವುದರಿಂದ ಒಬ್ಬರನ್ನೊಬ್ಬರು ಬಾಳು ಬಂಗಾರವಾಗಲಿ ಎಂದು ಹಾರೈಸುತ್ತಾರೆ. ಮಹಾರಾಷ್ಟ್ರದ ದಸರಾದಲ್ಲಿ ಚೆಂಡು ಹೂ ಮುಖ್ಯ ವಸ್ತು. ಮನೆ ಹಾಗೂ ಮುಖ್ಯ ಸ್ಥಳಗಳನ್ನು ಅಲಂಕರಿಸಲು ಈ ಹೂವು ಬಹಳ ಅವಶ್ಯಕ. ಅದರಲ್ಲಿಯೂ ಕೇಸರಿ ಬಣ್ಣದ ಚೆಂಡುಹೂವಿಗೆ ದಸರಾದಲ್ಲಿ ಭಾರಿ ಬೇಡಿಕೆಯಿದೆ.
ಕರ್ನಾಟಕ - ನಾಡಹಬ್ಬ ದಸರಾ
ಕರ್ನಾಟಕದಲ್ಲಿ ನಾಡಹಬ್ಬವನ್ನಾಗಿ ಆಚರಿಸುವ ದಸರಾ ಎಂದರೇ ಮೈಸೂರು ನೆನಪಾಗುತ್ತದೆ. ಅಲ್ಲದೇ ರಾಜ್ಯದ ಮಡಿಕೇರಿ, ಮಂಗಳೂರು ಕೂಡ ದಸರಾ ಹಬ್ಬವನ್ನು ತಮ್ಮದೇ ಆಚರಣೆಗಳ ಮೂಲಕ ಆಚರಿಸುತ್ತಾರೆ.
ಪ್ರಾಂತೀಯ ನಂಬಿಕೆ, ರೂಢಿ-ಸಂಪ್ರದಾಯಗಳ ಮೂಲಕ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.
ಮಂಗಳೂರು
ಮಂಗಳೂರಿನಲ್ಲಿ ನವರಾತ್ರಿಯಂದು ಬೀದಿ ಬೀದಿಗಳನ್ನು ದೀಪಾಲಂಕರದಿಂದ ಅಲಂಕರಿಸಲಾಗಿರುತ್ತದೆ. ಅಲ್ಲದೇ ಇಲ್ಲಿನ ಪ್ರಸಿದ್ಧ ನೃತ್ಯಕಲೆಗಳಾದ ಹುಲಿ ಕುಣಿತ, ಕರಡಿ ಕುಣಿತ ಹಾಗೂ ಸಿಂಹ ನೃತ್ಯ ಕಲೆಗಳ ಪ್ರದರ್ಶನವು ಆಚರಣೆಯ ಪ್ರಮುಖ ಭಾಗವಾಗಿರುತ್ತದೆ.
ಹುಲಿವೇಷ ಕುಣಿತದಲ್ಲಿ ಹುಡುಗರ ಗುಂಪು ಹುಲಿಯ ವೇಷ ತೊಟ್ಟು ಡೊಲ್ಲಿನ ತಾಳಕ್ಕೆ ಹೆಜ್ಜೆ ಹಾಕುತ್ತಾ ಬೀದಿ ಬೀದಿಗಳನ್ನು ಸುತ್ತುಹಾಕುತ್ತಾರೆ. ಹುಲಿಯು ಶಾರದ ಮಾತೆಯ ವಾಹನವಾಗಿರುವುದರಿಂದ ದೇವಿಯ ಸೂಚನೆಗಾಗಿ ಈ ವೇಷ ಹಾಕುತ್ತಾರೆ. ಈ ನವ ದಿನಗಳ ಆಚರಣೆಯಲ್ಲಿ ಅಲಂಕರಿಸಲ್ಪಟ್ಟ ಶಾರದ ದೇವಿಯ ವಿಗ್ರಹ, ಮಹಾಗಣಪತಿ ಮತ್ತು ನವದುರ್ಗಗಳನ್ನು ಪೂಜಿಸಲಾಗುತ್ತದೆ.
ಮಂಗಳೂರು ದಸರಾದ ಪ್ರಾಥಮಿಕ ಸ್ಥಳ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನವಾದರೂ ಮಂಗಲಾದೇವಿ, ಶ್ರೀ ವೆಂಕಟರಮಣ ದೇವಾಲಯ ಮುಂತಾದ ದೇವಾಲಯಗಳಲ್ಲಿ ಈ ದಸರಾವನ್ನು ಆಯೋಜಿಸಲ್ಪಟ್ಟಿರುತ್ತದೆ.
ಮಡಿಕೇರಿ ದಸರಾ
ರಾಜ್ಯದ ಮಡಿಕೇರಿಯಲ್ಲಿ ನಡೆಯುವ ದಸರಾ ಉತ್ಸವಕ್ಕೆ ಇನ್ನೂರು ವರ್ಷಗಳ ಇತಿಹಾಸವಿದೆ. ಈ ಸಂಭ್ರಮದ ಪ್ರಮುಖ ಆಕರ್ಷಣೆ ಎಂದರೆ ದಶಮಂಟಪ. ದೇವತೆಗಳು ಅಸುರರನ್ನು ಸಂಹರಿಸುತ್ತಿರುವ ಕಲಾಕೃತಿಗಳನ್ನು ಇರಿಸಲಾಗುತ್ತದೆ.ಅವುಗಳನ್ನು ದಸರೆಯ ದಿವಸ ಮೆರವಣಿಗೆ ಮಾಡಲಾಗುತ್ತದೆ.
ಮಡಿಕೇರಿ ದಸರಾವು ಮಹಾಲಯ ಅಮವಾಸ್ಯೆಯ ಮರುದಿನದಿಂದ ಆರಂಭವಾಗುತ್ತದೆ ಹಾಗೂ ಕರಗ ಮಹೋತ್ಸವ ಇಲ್ಲಿನ ಪ್ರಮುಖ ಆಕರ್ಷಣೆ. ಕರಗಗಳು ಬೀದಿ ಬೀದಿಯಲ್ಲಿ ಮೆರವಣಿಗೆಗೊಂಡು ಒಂಭತ್ತು ದಿನಗಳ ಕಾಲ ಪೂಜೆ ಪಡೆಯುತ್ತವೆ.
ಮೈಸೂರು ದಸರಾ - ಜಂಬೂಸವಾರಿ
ಮೈಸೂರು ದಸರಾ ಎಷ್ಟೊಂದು ಸುಂದರಾ..!! ಎಂಬ ಹಾಡಿನಂತೆ ಇಡೀ ವಿಶ್ವವನ್ನೇ ತನ್ನತ್ತ ಸೆಳೆಯುವ ಮೈಸೂರಿನ ದಸರಾ ಮಹೋತ್ಸವಕ್ಕೆ ಬರೋಬ್ಬರಿ ೪೦೦ ವರ್ಷಗಳ ಇತಿಹಾಸವಿದೆ. ವಿಜಯನಗರ ಅರಸರುಗಳ ಕಾಲದಲ್ಲಿ ಆರಂಭವಾದ ದಸರಾ ಮಹೋತ್ಸವವನ್ನು ಇಂದು ನಾಡಹಬ್ಬವನ್ನಾಗಿ ಸರ್ಕಾರ ಆಚರಿಸುತ್ತಾ ಬಂದಿದೆ. ಮೈಸೂರು ದಸರಾದ ಪ್ರಮುಖ ಆಕರ್ಷಣೆ ಜಂಬೂಸವಾರಿ ಇದನ್ನು ವೀಕ್ಷಿಸಲು ರಾಜ್ಯ, ಹೊರ ರಾಜ್ಯ, ದೇಶ - ವಿದೇಶಗಳಿಂದ ಲಕ್ಷಾಂತರ ಜನರು ಆಗಮಿಸುತ್ತಾರೆ.
ಮೈಸೂರಿನ ದಸರಾ ರಾಜಪ್ರಭುತ್ವದ ಸಂಕೇತವೂ ಹೌದು, ತಾಯಿ ಚಾಮುಂಡೇಶ್ವರಿ ಮಹಿಷಾಸುರನೆಂಬ ಅಸುರನನ್ನು ವಧಿಸಿದ ವಿಜಯೋತ್ಸವನ್ನಾಗಿ ನವರಾತ್ರಿಗಳ ಆಚರಣೆಯ ಹತ್ತನೇ ದಿನವನ್ನು ವಿಜಯದಶಮಿಯನ್ನಾಗಿ ಆಚರಿಸಲಾಗುತ್ತದೆ. ಅಂದಿನ ದಿನ ೭೫೦ ಕೆ.ಜಿ ತೂಕದ ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾಗಿ ತಾಯಿ ಚಾಮುಂಡೇಶ್ವರಿಯೊಂದಿಗೆ ಆನೆ ಸಾಲುಗಳ ಮೆರವಣಿಗೆ, ವಿವಿಧ ಕಲಾ ತಂಡಗಳು, ಸ್ಥಬ್ಧ ಚಿತ್ರಗಳು, ವಾದ್ಯವೃಂದಗಳು, ಪೋಲಿಸ್ ಹಾಗೂ ಸೈನಿಕ ದಳಗಳೊಂದಿಗೆ ನಗರದ ರಾಜ ಬೀದಿಯಲ್ಲಿ ಹಾದುಹೋಗುತ್ತದೆ. ಚಾಮುಂಡೇಶ್ವರಿಯು ಮೈಸೂರು ಮಹಾರಾಜರ ಕುಲದೈವವಾಗಿದ್ದು ಆ ತಾಯಿಯ ಮೂರ್ತಿ ಮೆರವಣಿಗೆಯ ಪ್ರಧಾನವಾಗಿರುತ್ತದೆ.
ಪುರಾಣದ ಪ್ರಕಾರ ಜಗನ್ಮಾತೆ ರಾಕ್ಷಸರನ್ನು ಸಂಹಾರ ಮಾಡಲು ಒಂದೊಂದು ಅವತಾರವೆತ್ತಿ ರಾಕ್ಷಸರನ್ನು ಸಂಹರಿಸಿ ಲೋಕವನ್ನು ಕಾಪಾಡುತ್ತಾಳೆ. ನವರಾತ್ರಿಯ ಒಂದೊಂದು ದಿನವೂ ಬಹಳ ವಿಶೇಷವಾಗಿರುತ್ತದೆ. 9 ದಿನಗಳ ಕಾಲ ಆದಿ ಶಕ್ತಿಯನ್ನು ನವ ವಿಧದಲ್ಲಿ (ದುರ್ಗಾ, ಲಕ್ಷ್ಮಿ, ಮಹಿಷಾಸುರ ಮರ್ಧಿನಿ, ಚಾಮುಂಡೇಶ್ವರಿ, ಧುಮ್ರಾಹ, ಧನಲಕ್ಷ್ಮಿ, ಸರಸ್ವತಿ, ದುರ್ಗಾಷ್ಟಮಿ, ಆಯುಧಪೂಜೆ) ಪೂಜಿಸಲಾಗುತ್ತದೆ. ಹತ್ತನೇಯ ದಿನ ಬನ್ನಿವೃಕ್ಷಕ್ಕೆ ಪೂಜೆಯನ್ನು ಸಲ್ಲಿಸಿ, ಶಮಿ (ಬನ್ನಿ)ಯನ್ನು ವಿನಿಯೋಗ ಮಾಡುವುದು ಪದ್ಧತಿ.
ಈ ಸಂದರ್ಭದಲ್ಲಿ ಮನೆಮನೆಗಳಲ್ಲಿ ಗೊಂಬೆ ಕೂರಿಸಿ ಪೂಜಿಸುವುದು ವಿಶೇಷವಾಗಿದ್ದರೆ, ಜಗದ್ವಿಖ್ಯಾತ ಅರಮನೆ ಲಕ್ಷಾಂತರ ಬಲ್ಬ್ ಗಳಿಂದ ಅಲಂಕಾರಗೊಂಡು ಕಂಗೊಳಿಸಿದರೆ, ನಗರದ ತುಂಬಾ ರಸ್ತೆ, ಮರ, ಕಟ್ಟಡಗಳು ದೀಪಾಲಂಕಾರಗಳಿಂದ ರಾರಾಜಿಸುತ್ತಿರುತ್ತವೆ. ಅಲ್ಲದೇ ಫಲಪುಷ್ಪ ಪ್ರದರ್ಶನ, ವಸ್ತುಪ್ರದರ್ಶನ ಗಳು ಯೋಗ ದಸರಾ, ಆಹಾರ ಮೇಳ, ಮಹಿಳಾದಸರಾ, ಹಸಿರು ಸಂತೆ, ಚಿತ್ರಸಂತೆ, ಕ್ರೀಡಾಸ್ಪರ್ಧೆ, ಪಂಜಿನ ಕವಾಯತು, ಕವಿ ಗೋಷ್ಟಿ, ರೈತ ದಸರಾ, ಕುಸ್ತಿ ಸ್ಪರ್ಧೆಗಳು ಜರುಗುತ್ತವೆ.
ಹೀಗೆ ಸಾಂಪ್ರದಾಯಿಕ ಪದ್ಧತಿಗಳನುಸಾರ ದಸರಾ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳುವ ಜನತೆ ಜಾತಿ, ಭೇದಭಾವವಿಲ್ಲದೇ ಒಟ್ಟಿಗೆ ಸೇರುವುದು ಭಾರತದಲ್ಲಿ ಮಾತ್ರ.