ಸ್ವಾತಂತ್ರ್ಯದ ಜೊತೆಜೊತೆಗೇ ನಡೆದಿತ್ತು ಏಕೀಕರಣದ ಹೋರಾಟ

ಪ್ರೀತಮ್​ ಕೆಮ್ಮಾಯಿ

ಸ್ವಾತಂತ್ರ್ಯದ ಜೊತೆಜೊತೆಗೇ ನಡೆದಿತ್ತು ಏಕೀಕರಣದ ಹೋರಾಟ

Friday October 30, 2015,

6 min Read

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಬಳಿಕ, ಭಾಷಾವಾರು ಪ್ರಾಂತ್ಯಗಳ ರಚನೆಯಾಗಿ ರಾಜ್ಯಗಳನ್ನು ವಿಭಜಿಸಲಾಯಿತು. ಆದರೆ, ಏಕೀಕೃತ ಕರ್ನಾಟಕಕ್ಕಾಗಿನ ಹೋರಾಟ, ಸ್ವಾತಂತ್ರ್ಯ ಸಿಗುವ ಮೊದಲೇ ಶುರುವಾಗಿತ್ತು. ಇಡೀ ದೇಶವೇ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದರೆ, ಕನ್ನಡಿಗರ ಮನಸ್ಸುಗಳು ಸ್ವಾತಂತ್ರ್ಯದ ಜೊತೆಗೆ ತಮ್ಮ ಅಧಿಕಾರದ ಹಕ್ಕಿನ ಸ್ಥಾಪನೆಗೂ ಹೋರಾಡುತ್ತಿದ್ದರು.

ಈಗಿನ ಕರ್ನಾಟಕವು ಸ್ವಾತಂತ್ರ್ಯಪೂರ್ವದಲ್ಲಿ ಸುಮಾರು 20 ಆಡಳಿತಾತ್ಮಕ ಘಟಕಗಳಾಗಿ ಹಂಚಿ ಹೋಗಿತ್ತು. ಮೈಸೂರು ಸಂಸ್ಥಾನ, ಹೈದ್ರಾಬಾದ್​​ನ ನಿಜಾಮರು, ಬಾಂಬೆ ಪ್ರೆಸಿಡೆನ್ಸಿ, ಮದ್ರಾಸ್ ಪ್ರೆಸಿಡೆನ್ಸಿ ಮತ್ತು ಕೊಡಗು ಪ್ರಮುಖ ಆಡಳಿತ ವಿಭಾಗಗಳಾಗಿದ್ದವು. ಕನ್ನಡವನ್ನು ಅಧಿಕೃತ ಆಡಳಿತ ಭಾಷೆ ಮಾಡಿಕೊಂಡಿದ್ದ ಮೈಸೂರು ಸಂಸ್ಥಾನವನ್ನು ಹೊರತುಪಡಿಸಿಯೂ ಈಗಿನ ಕರ್ನಾಟಕದ 2/3 ಭಾಗ ಪ್ರದೇಶ ಪರರ ಆಳ್ವಿಕೆಗೆ ಒಳಪಟ್ಟಿತ್ತು.

image


ಕನ್ನಡಿಗರು ಬಹುಸಂಖ್ಯೆಯಲ್ಲಿದ್ದರೂ, ದೊಡ್ಡ ಭೂಪ್ರದೇಶದಲ್ಲಿ ವಾಸಿಸುತ್ತಿದ್ದರು, ಆಡಳಿತಾತ್ಮಕ ಹಕ್ಕು ಮಾತ್ರ ಬೇರೆಯವರದ್ದಾಗಿತ್ತು. ಹುಬ್ಬಳ್ಳಿ ಕರ್ನಾಟಕವನ್ನು ಬಾಂಬೆ ಪ್ರೆಸಿಡೆನ್ಸಿ ಆಳುತ್ತಿದ್ದು, ಮರಾಠಿಯಲ್ಲೇ ವ್ಯವಹರಿಸಬೇಕಿತ್ತು. ಹೈದ್ರಾಬಾದ್ ಕರ್ನಾಟಕದಲ್ಲಿ ನಿಜಾಮರು ಒತ್ತಾಯಪೂರ್ವಕವಾಗಿ ಉರ್ದುವನ್ನು ಹೇರುತ್ತಿದ್ದರು. ಕರಾವಳಿ ಕನ್ನಡಿಗರು ಮದ್ರಾಸ್ ಪ್ರೆಸಿಡೆನ್ಸಿ ಮೂಲಕ ತಮಿಳಿನ ತುಳಿತಕ್ಕೊಳಗಾದರು. ಹೀಗಾಗಿ, ಕನ್ನಡಿಗರಲ್ಲಿ ತಮ್ಮದೇ ಆಡಳಿತ ಹೊಂದುವ, ತಮ್ಮ ಭಾಷೆ ಉಳಿಸಿಕೊಳ್ಳುವ ಕೆಚ್ಚು ಕಿಚ್ಚಾಗಿ ಉರಿಯಲಾರಂಭಿಸಿತ್ತು.

ಮುಖ್ಯವಾಗಿ ಮೈಸೂರು ಸಂಸ್ಥಾನದಾಚೆ, ಆಡಳಿತದ ವಿರುದ್ಧ ಭಾರೀ ಪ್ರಮಾಣದ ಅಸಹನೆ ಕಟ್ಟೆಯೊಡೆದಿತ್ತು. ತಮ್ಮದೇ ನಾಡಿನಲ್ಲಿ ತಾವೇ ಪರಕೀಯರಾಗಿರುವುದನ್ನು ಸಹಿಸಲು ಸಾಧ್ಯವಾಗುತ್ತಿರಲಿಲ್ಲ. ಅನ್ಯ ಭಾಷಿಕರ ಹಾವಳಿ ಮಿತಿಮೀರಿ ಹೋಗಿತ್ತು. ಭಾಷಾ ದಬ್ಬಾಳಿಕೆ ವಿರುದ್ಧ ಹುಟ್ಟಿದ ಆಕ್ರೋಶ ಅಂತಿಮವಾಗಿ ಕರ್ನಾಟಕ ಏಕೀಕರಣ ಚಳವಳಿಯಾಗಿ ರೂಪುಪಡೆಯಿತು. ಕನ್ನಡ ಭಾಷಿಕ ಪ್ರದೇಶಗಳನ್ನು ಒಗ್ಗೂಡಿಸಿ ಪ್ರತ್ಯೇಕ ರಾಜ್ಯ ರೂಪಿಸಬೇಕು ಎಂಬ ಹಕ್ಕೊತ್ತಾಯ ಮೊಳಗಿತು. ನಂಬಿ ಆಗಿನ್ನೂ ಸ್ವಾತಂತ್ರ್ಯ ಹೋರಾಟ ಉಚ್ಛ್ರಾಯ ಸ್ಥಿತಿ ತಲುಪಿರಲಿಲ್ಲ.

ಏಕೀಕರಣ ಹೋರಾಟದಲ್ಲಿ ಉತ್ತರ ಕರ್ನಾಟಕದ ಪಾತ್ರ

ಕರ್ನಾಟಕದ ದಕ್ಷಿಣ ಭೂಭಾಗ ಬಹುತೇಕ ನಾಲ್ವಡಿ ಕೃಷ್ಣರಾಜ ಒಡೆಯರ್ ಅರಸೊತ್ತಿಗೆಯ ಮೈಸೂರು ಒಡೆಯರ್ ಸಂಸ್ಥಾನದ ಆಳ್ವಿಕೆಗೆ ಒಳಪಟ್ಟಿತ್ತು. ಇಲ್ಲಿ ಕನ್ನಡವೇ ಅಧಿಕೃತ ರಾಜಭಾಷೆಯಾಗಿತ್ತು. ಅಲ್ಲದೆ, ಆ ದಿನಗಳಲ್ಲಿ ಮೈಸೂರು ಭಾರತದಲ್ಲೇ ಅತ್ಯಂತ ಪ್ರಗತಿ ಹೊಂದಿದ ಸಂಸ್ಥಾನವಾಗಿತ್ತು. ಆದರೆ, ಉತ್ತರ ಕರ್ನಾಟಕವನ್ನು ಮುಂಬೈ ಪ್ರಾಂತ್ಯ ಸಂಪೂರ್ಣವಾಗಿ ನಿರ್ಲಕ್ಷಿಸಿತ್ತು. ಕರುನಾಡಿನ ಏಕೀಕರಣದ ಕೂಗು ಮೊದಲು ಕೇಳಿಬಂದಿದ್ದೇ ಮುಂಬೈ ಕರ್ನಾಟಕದಲ್ಲಿ, ಅರ್ಥಾತ್ ಈಗಿನ ಉತ್ತರ ಕರ್ನಾಟಕದಲ್ಲಿ.

ಕರ್ನಾಟಕ ವಿದ್ಯಾವರ್ಧಕ ಸಂಘ ಮತ್ತು ಇತರ ಸಂಸ್ಥೆಗಳು

1890ರಲ್ಲಿ ಕರ್ನಾಟಕದ ವಿದ್ಯಾವರ್ಧಕ ಸಂಘವನ್ನು ಸ್ಥಾಪಿಸಲಾಯಿತು. ಕನ್ನಡ ಭಾಷೆಯ ಪುನರುತ್ಥಾನಕ್ಕಾಗಿ ಆರ್. ದೇಶಪಾಂಡೆಯವರು ಈ ಸಂಘವನ್ನು ಸ್ಥಾಪಿಸಿದರು. ಇದೇ ಸಂಘದ ಛತ್ರಛಾಯೆಯಡಿ, ಹಲವು ನಾಯಕರು ಒಗ್ಗೂಡಿ ಹೋರಾಟ, ಪ್ರತಿಭಟನೆಗಳನ್ನು ಆರಂಭಿಸಿದರು. ವಿದ್ಯಾವರ್ಧಕ ಸಂಘದ ಯಶಸ್ಸು ಮತ್ತು ಕೀರ್ತಿಯಿಂದಾಗಿ, ಕರುನಾಡಿನಲ್ಲಿ ಮತ್ತಷ್ಟು ಸಂಘಗಳು ಹುಟ್ಟಿಕೊಂಡವು. 1915ರಲ್ಲಿ ಕನ್ನಡ ಸಾಹಿತ್ಯ ಪರಿಷತ್ ಹುಟ್ಟಿಕೊಂಡಿತು. ಮರುವರ್ಷ ಶಿವಮೊಗ್ಗದಲ್ಲಿ ಕರ್ನಾಟಕ ಸಂಘ ಹಾಗೂ 1955ರಲ್ಲಿ ಕಾಸರಗೋಡಿನಲ್ಲಿ ಕರ್ನಾಟಕ ಸಮಿತಿ ಆರಂಭವಾಯಿತು.

1856ರ ವೇಳೆಗೆ ಕನ್ನಡದ ಮೇಲಿನ ದಬ್ಬಾಳಿಕೆ ವಿರುದ್ಧ ಅಸಹನೆ ಮತ್ತು ಪ್ರತಿಭಟನೆಗಳು ಆರಂಭವಾಗಿದ್ದವು.ಆದರೆ, ಇದಕ್ಕೆ ಮಹತ್ವದ ತಿರುವು ಸಿಕ್ಕಿದ್ದು, ಚಳವಳಿಯ ರೂಪ ಪಡೆದಿದ್ದು ಆಲೂರು ವೆಂಕಟರಾವ್ ಅವರ ಪ್ರವೇಶದೊಂದಿಗೆ. ಅಲ್ಲಿಯವರೆಗೆ ಕನ್ನಡದ ಉಳಿವಿಗಾಗಿ ಹೋರಾಟ ನಡೆಯುತ್ತಿತ್ತು. 1903ರಲ್ಲಿ ವಿದ್ಯಾವರ್ಧಕ ಸಂಘದ ಸಭೆಯೊಂದರಲ್ಲಿ ಮಾತನಾಡಿದ ಆಲೂರು ಅವರು, ಕನ್ನಡ ಭಾಷಿಕ ಎಲ್ಲಾ ಪ್ರದೇಶಗಳನ್ನು ಮೈಸೂರು ಸಂಸ್ಥಾನದೊಂದಿಗೆ ಸೇರಿಸಬೇಕು ಎಂಬ ಬೇಡಿಕೆ ಮುಂದಿಟ್ಟರು. ಬಂಗಾಳದ ವಿಭಜನೆಯ ಸ್ಫೂರ್ತಿಪಡೆದ ಆಲೂರು ಅವರು, ಏಕೀಕರಣಕ್ಕಾಗಿ ಹೋರಾಟದ ನೇತೃತ್ವ ವಹಿಸಿದರು.

image


1907 ಮತ್ತು1908ರಲ್ಲಿ ಆಲೂರು ಅವರು ಅಖಿಲ ಕರ್ನಾಟಕ ಬರಹಗಾರರ ಸಮ್ಮೇಳನವನ್ನು ಧಾರವಾಡದಲ್ಲಿ ಆಯೋಜಿಸಿದರು. ದೇಶಪಾಂಡೆ ಮತ್ತು ವಿದ್ಯಾವರ್ಧಕ ಸಂಘದಿಂದ ಸ್ಫೂರ್ತಿಪಡೆದ ಆಲೂರು ಅವರು 1915ರಲ್ಲಿ ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸ್ಥಾಪಿಸುವಲ್ಲಿ ಮಹತ್ವದ ಪಾತ್ರವಹಿಸಿದರು. ಮೈಸೂರು ದೊರೆ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸಾಹಿತ್ಯ ಪರಿಷತ್ ನೇತೃತ್ವ ವಹಿಸುವುದರೊಂದಿಗೆ ಈ ಸಂಸ್ಥೆ ರಾಜಾಶ್ರಯವನ್ನಷ್ಟೇ ಅಲ್ಲ, ಗಟ್ಟಿ ತಳಹದಿಯನ್ನೂ ಪಡೆಯಿತು. ಕರ್ನಾಟಕದ ಬೇರೆ ಬೇರೆ ಸ್ಥಳಗಳಲ್ಲಿ ಪರಿಷತ್ ನೇತೃತ್ವದಲ್ಲಿ ಸಾಹಿತ್ಯ ಸಮ್ಮೇಳನ ನಡೆಸಲಾಯಿತು. ಕನ್ನಡ ಭಾಷಿಕ ಪ್ರದೇಶಗಳ ಸಾಹಿತಿಗಳು, ಬರಹಗಾರರು ಈ ಸಮ್ಮೇಳನದಲ್ಲಿ ಪಾಲ್ಗೊಳ್ಳುತ್ತಿದ್ದರು. ಹೋಂ ರೂಲ್ ಚಳವಳಿಯಿಂದ ಪ್ರಭಾವಿತರಾದ ಆಲೂರು ಅವರು, ಭಾರತೀಯ ರಾಷ್ಟ್ರೀಯ ಕಾಂಗ್ರೇಸ್​​ನ ಪ್ರಾಂತೀಯ ಘಟಕ – ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯನ್ನು ಸ್ಥಾಪಿಸಲು ಸಲಹೆ ನೀಡಿದರು.

ಕರ್ನಾಟಕ ಗತ ವೈಭವ

ಈ ಎಲ್ಲಾ ಚಳವಳಿಗಳ ಮಧ್ಯೆಯೇ ಆಲೂರು ಅವರು ಕರ್ನಾಟಕ ಗತ ವೈಭವ ಎಂಬ ಕನ್ನಡಿಗರ ಸಾಧನೆಗಳ ಕುರಿತ ಕೃತಿಯನ್ನೂ 1912ರಲ್ಲಿ ಪ್ರಕಟಿಸಿದರು. ಕರ್ನಾಟಕದ ಗತ ವೈಭವ ಎಂದರೆ ಕರ್ನಾಟಕದ ವೈಭಯುತ ಇತಿಹಾಸ ಎಂದರ್ಥ. ಈ ಕೃತಿಯಲ್ಲಿ ಕನ್ನಡಿಗ ಅರಸರಿಂದ ಆರಂಭಿಸಿ ವಿಜಯನಗರದ ಉಚ್ಛ್ರಾಯ ಸ್ಥಿತಿ, ವಿಜಯನಗರದ ಪತನ, ಮರಾಠಿಗರು, ನಿಜಾಮರ ಆಳ್ವಿಕೆ ಮತ್ತು ಬ್ರಿಟಿಷ್ ಆಧಿಪತ್ಯ ಎಲ್ಲದರ ಮಾಹಿತಿಯನ್ನೂ ನೀಡಲಾಗಿತ್ತು. ಈ ಕೃತಿ ಯುವಕರ ಮನಸ್ಸನ್ನೂ ನಾಟಿತು. ಏಕೀಕರಣದ ಹೋರಾಟ ಕಾವು ಪಡೆಯಿತು. ಕೇವಲ ಸಾಹಿತ್ಯಿಕ, ಚಿಂತಕರ ವಲಯಕ್ಕೆ ಸೀಮಿತವಾಗಿದ್ದ ಏಕೀಕರಣದ ಹೋರಾಟದಲ್ಲಿ ಜನಸಾಮಾನ್ಯರೂ ಧುಮುಕುವಂತಾಯಿತು. ಏಕೀಕೃತ ಕರ್ನಾಟಕಕ್ಕಾಗಿ ಹೋರಾಡಿದ ಆಲೂರು ಅವರನ್ನು ಈಗಲೂ ಕನ್ನಡ ಮನಸ್ಸುಗಳು ಕನ್ನಡ ಕುಲಪುರೋಹಿತ ಎಂದು ಆರಾಧಿಸುತ್ತಿವೆ.

ಕನ್ನಡ ಚಳವಳಿಯ ಬೆಳವಣಿಗೆ

ಆಲೂರು ಅವರ ಕರೆಯೊಂದಿಗೆ ಏಕೀಕೃತ ಕರ್ನಾಟಕಕ್ಕಾಗಿ ಹೋರಾಟ ಶುರುವಾಯಿತು. ಆಗತಾನೇ ಭಾರತದಲ್ಲಿ ಸ್ವಾತಂತ್ರ್ಯ ಹೋರಾಟವೂ ಕಾವು ಪಡೆದುಕೊಳ್ಳತೊಡಗಿತ್ತು. ಆ ಕಾಲದಲ್ಲಿ ಕನ್ನಡಿಗರ ಹೋರಾಟ ಸ್ವಾತಂತ್ರ್ಯ ಹೋರಾಟವನ್ನೂ ಮೀರಿಸುವಂತಹ ಕಾವು ಪಡೆದಿತ್ತು. ಪ್ರತ್ಯೇಕ ಕರ್ನಾಟಕದ ಸ್ಥಾಪನೆಗಾಗಿ ಜಾಥಾ, ಪ್ರತಿಭಟನೆಗಳು ಜೋರಾಗಲಾರಂಭಿಸಿದವು.

ಗುಡ್ಲೆಪ್ಪ ಹಳ್ಳಿಕೇರಿ, ಸಿದ್ದಪ್ಪ ಕಂಬಳಿ, ಆರ್ ಹೆಚ್ ದೇಶಪಾಂಡೆ, ರಂಗರಾವ್ ದಿವಾಕರ್, ಶ್ರೀನಿವಾಸ್​ರಾವ್ ಕೌಜಲಗಿ,, ಶ್ರೀನಿವಾಸ್ ರಾವ್ ಮಂಗಳ್ವಾಡೆ, ಕೆಂಗಲ್ ಹನುಮಂತಯ್ಯ, ಗೋರೂರು ರಾಮಸ್ವಾಮಿ ಅಯ್ಯಂಗಾರ್, ಎಸ್ ನಿಜಲಿಂಗಪ್ಪ, ಟಿ ಮರಿಯಪ್ಪ, ಸುಬ್ರಮಣ್ಯ, ಸಾಹುಕಾರ್ ಚೆನ್ನಯ್ಯ, ಬಿ.ವಿ ಕಕ್ಕಿಲ್ಲಾಯ, ಆ.ನ.ಕೃ ಹೀಗೆ ಹಲವರು ತಮ್ಮದೇ ರೀತಿಯಲ್ಲಿ ಕನ್ನಡ ಪರ ಹೋರಾಟಕ್ಕೆ ಧುಮುಕಿದರು.

ನಾಗ್ಪುರ ಸಮ್ಮೇಳನ

ಈ ಹಿರಿಯರ ಬದ್ಧತೆಯ ಫಲವಾಗಿ, ಹೋರಾಟಕ್ಕೆ ರಾಜಕೀಯ ಬೆಂಬಲವೂ ದೊರೆಯಲಾರಂಭಿಸಿತು. 1920ರಲ್ಲಿ ಕರ್ನಾಟಕ ರಾಜ್ಯ ರಾಜಕೀಯ ಸಮ್ಮೇಳನ ಧಾರವಾಡದಲ್ಲಿ ನಡೆಯಿತು. ವಿ.ಪಿ. ಮಾಧವ ರಾವ್ ಅಧ್ಯಕ್ಷತೆಯಲ್ಲಿ ನಡೆದ ಈ ಸಮ್ಮೇಳನದಲ್ಲಿ ಎಲ್ಲಾ ಕನ್ನಡ ಭಾಷಿಕ ಪ್ರದೇಶಗಳ ಏಕೀಕರಣಕ್ಕೆ ಅವಿರೋಧ ನಿರ್ಣಯವನ್ನು ಅಂಗೀಕರಿಸಲಾಯಿತು. ಇದೇ ಸಮ್ಮೇಳನವು, ನಾಗ್ಪುರ ಕಾಂಗ್ರೆಸ್ ಅಧಿವೇಶನದಲ್ಲಿ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಹಕ್ಕೊತ್ತಾಯ ಮಂಡಿಸಬೇಕು ಎಂದು ಕರೆ ನೀಡಿತು. ಅದೇ ವರ್ಷ ನಡೆದ ನಾಗ್ಪುರ ಕಾಂಗ್ರೆಸ್ ಅಧಿವೇಶನದಲ್ಲಿ ಸುಮಾರು 800 ಮಂದಿ ಕನ್ನಡಿಗರ ನಿಯೋಗವು ಪಾಲ್ಗೊಂಡಿತ್ತು. ಆಲೂರು ಅವರ ಸಲಹೆಯಂತೆ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ರಚಿಸಲು ನಿರ್ಧರಿಸಿತು. ಕಾಂಗ್ರೆಸ್​​ನ ಈ ತೀರ್ಮಾನದಿಂದಾಗಿ ಎಸ್ ನಿಜಲಿಂಗಪ್ಪ, ಕೆಂಗಲ್ ಹನುಮಂತಯ್ಯನಂತಹ ರಾಜಕೀಯ ಮುಖಂಡರೂ ಕನ್ನಡ ಚಳವಳಿಯ ನೇತೃತ್ವ ವಹಿಸುವಂತಾಯಿತು. ಇದೇ ಬಲದ ಮೇಲೆ ಅವರು ಮುಂದೆ ಮುಖ್ಯಮಂತ್ರಿಗಳೂ ಆದರು.

1924ರ ಬೆಳಗಾವಿ ಅಧಿವೇಶನ

1924ರಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಆಶ್ರಯದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್​​ನ ಐತಿಹಾಸಿಕ ಬೆಳಗಾವಿ ಅಧಿವೇಶನ ಸಂಘಟಿಸಲಾಗಿತ್ತು. ಮಹಾತ್ಮ ಗಾಂಧೀಜಿಯವರು ಈ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದರು. ಇದೇ ಸ್ಥಳದಲ್ಲಿ ಚೊಚ್ಚಲ ಕರ್ನಾಟಕ ಏಕೀಕರಣ ಸಮ್ಮೇಳನವನ್ನೂ ಆಯೋಜಿಸಲಾಗಿತ್ತು. ಸಿದ್ದಪ್ಪ ಕಂಬಳಿಯವರು ಇದರ ಅಧ್ಯಕ್ಷತೆ ವಹಿಸಿದ್ದರು.

ಉದಯವಾಗಲಿ ಚೆಲುವ ಕನ್ನಡ ನಾಡು…

ಯಾವ ಗೀತೆ ಕೇಳಿದರೆ ಕನ್ನಡಿಗರ ಕಿವಿ ನಿಮಿರುವುದೋ, ಯಾವ ಗೀತೆ ಕೇಳಿದರೆ ಕನ್ನಡಿಗರ ಎದೆ ಕುಣಿಯುವುದೋ ಆ ತಂಪಾದ ಕ್ರಾಂತಿ ಗೀತೆ ಮೊಳಗಿದ್ದು ಇದೇ ವೇದಿಕೆಯಲ್ಲಿ. ಹುಯಿಲಗೊಳ ನಾರಾಯಣ ರಾವ್ ಅವರು ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಗೀತೆಯನ್ನು ಹಾಡುವ ಮೂಲಕ, ಕನ್ನಡಿಗರ ಪಾಲಿಗೆ ಹೃದಯಗೀತೆಯೊಂದನ್ನು ನೀಡಿದರು. ಕನ್ನಡಿಗರ ಶಕ್ತಿ ಸಾಮರ್ಥ್ಯ ಕಂಡ ಗಾಂಧೀಜಿ ನೇತೃತ್ವದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಏಕೀಕೃತ ಕರ್ನಾಟಕಕ್ಕೆ ಬೆಂಬಲ ಘೋಷಿಸಿತು. ಅಲ್ಲದೆ, ಕರ್ನಾಟಕ ಏಕೀಕರಣ ಸಭಾವನ್ನೂ ಸ್ಥಾಪಿಸಿತು. ಬಳಿಕ ಈ ಸಮಿತಿಗೆ ಕರ್ನಾಟಕ ಏಕೀಕರಣ ಸಂಘ ಎಂದು ಮರುನಾಮಕರಣ ಮಾಡಲಾಯಿತು.

1928ರಲ್ಲಿ ಗುದ್ಲೆಪ್ಪ ಹಳ್ಳಿಕೇರಿಯವರ ಪರಿಶ್ರಮದ ಫಲವಾಗಿ ನೆಹರು ಸಮಿತಿಯು ಕನ್ನಡ ಭಾಷಿಕ ಪ್ರದೇಶಗಳನ್ನು ಒಗ್ಗೂಡಿಸಿ ಏಕೀಕೃತ ಪ್ರಾಂತ್ಯ ರಚಿಸಲು ಶಿಫಾರಸ್ಸು ಮಾಡಿತು. ಏಕೀಕರಣಕ್ಕೆ ಸದೃಢವಾದ ಪ್ರಾಥಮಿಕ ಅಗತ್ಯತೆ ಇದೆ ಎಂದು ಸಮಿತಿಯು ವರದಿ ನೀಡಿತ್ತು. ಅಷ್ಟೇ ಅಲ್ಲ, ಕರ್ನಾಟಕವು ಆರ್ಥಿಕವಾಗಿಯೂ ಸದೃಢ ಪ್ರಾಂತ್ಯವಾಗಿ ಹೊರಹೊಮ್ಮಬಹುದು ಎಂದೂ ಸಮಿತಿ ಹೇಳಿತ್ತು. ಕನ್ನಡಿಗರ ಹೋರಾಟಕ್ಕೆ ಕುವೆಂಪು, ಬೇಂದ್ರೆ, ಗೋಕಾಕ್, ಬೆಡಗೇರಿ ಕೃಷ್ಣಶರ್ಮ, ಎಂ ಗೋವಿಂದ ಪೈ, ಶಿವರಾಮ ಕಾರಂತ, ಕೈಯ್ಯಾರರು ತಮ್ಮ ಸಾಹಿತ್ಯದ ಮೂಲಕ ಕೈ ಜೋಡಿಸಿದರು. ಬಲ ತುಂಬಿದರು. ಕನ್ನಡ ದಿನಪತ್ರಿಕೆಗಳೂ ಚಳವಳಿಗೆ ಬೆಂಬಲವಾಗಿ ಬರಹಗಳನ್ನು ಪ್ರಕಟಿಸಿದವು. ಬೆಂಗಳೂರು, ಶಿವಮೊಗ್ಗ, ರಾಯಚೂರುಗಳಲ್ಲಿ ಕಾಲೇಜು ವಿದ್ಯಾರ್ಥಿಗಳು, ಯುವಕ ಸಂಘಟನೆಗಳೂ ಹೋರಾಟಕ್ಕೆ ಧುಮುಕಿದವು.

1937ರಲ್ಲಿ ಚುನಾವಣೆಗಳು ನಡೆದವು. ಪ್ರತ್ಯೇಕ ಕರ್ನಾಟಕ ಮತ್ತು ಆಂಧ್ರಪ್ರದೇಶ ರಚನೆಗೆ ಬೆಂಬಲಿಸುವುದಾಗಿ ಕಾಂಗ್ರೆಸ್ ಹೇಳಿತು. ಆದರೆ, ಇದಕ್ಕೆ ಬ್ರಿಟಿಷರು ಮತ್ತು ಕೆಲವು ಸಂಸ್ಥಾನಗಳು ವಿರೋಧ ವ್ಯಕ್ತಪಡಿಸಿದವು. ಬ್ರಿಟಿಷರು ಈ ವಿಚಾರವನ್ನು ಹೇಗೆ ನಿಭಾಯಿಸುವುದು ಎಂಬ ಗೊಂದಲಕ್ಕೆ ಸಿಲುಕಿದರು. ಇದಾದ ಬಳಿಕ ಮೈಸೂರು ಮಹಾರಾಜರು, ಬಾಂಬೆ ಮತ್ತು ಹೈದ್ರಾಬಾದ್ ಕರ್ನಾಟಕದ ಪ್ರದೇಶಗಳಲ್ಲಿ ಪ್ರವಾಸ ಕೈಗೊಂಡರು.

1946ರ ಸಮ್ಮೇಳನ

ಬಾಂಬೆಯಲ್ಲಿ 1946ರ ಜನವರಿ 10ರಂದು ಏಕೀಕರಣ ಚಳವಳಿಯ ಸಮ್ಮೇಳನ ನಡೆಯಿತು. ಸರ್ದಾರ್ ಪಟೇಲ್ ಅವರು ಈ ಸಮ್ಮೇಳವನ್ನು ಉದ್ಘಾಟಿಸಿದರು. ಸ್ವತಂತ್ರ ಭಾರತದ ಹೊಸ ಸರಕಾರಕ್ಕೆ ಭಾಷಿಕ ಪ್ರಾಂತ್ಯಗಳ ರಚನೆಯೇ ಮೊದಲ ಆದ್ಯತೆ ಎಂದು ಘೋಷಿಸಿದರು. ಅದೇ ವರ್ಷ ದಾವಣಗೆರೆಯಲ್ಲಿ ಅಖಿಲ ಕರ್ನಾಟಕ ಸಮ್ಮೇಳನ ಆಯೋಜಿಸಲಾಯಿತು.

1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತು. ಬ್ರಿಟಿಷರು ತಮ್ಮ ನಾಡಿಗೆ ತೆರಳಿದರು. ಆದರೆ, ಭಾರತ ಸರಕಾರ, ಕನ್ನಡಿಗರ ಆಶಯವನ್ನು ನಿರ್ಲಕ್ಷಿಸಲು ಆರಂಭಿಸಿತು. ಸ್ವಾತಂತ್ರ್ಯಾನಂತರ ಕನ್ನಡ ಭಾಷಿಕ ಪ್ರದೇಶಗಳನ್ನು ಬಾಂಬೆ, ಮದ್ರಾಸ್, ಕೊಡಗು, ಮೈಸೂರು ಮತ್ತು ಹೈದ್ರಾಬಾದ್ ಪ್ರಾಂತ್ಯಗಳನ್ನಾಗಿ ವಿಂಗಡಿಸಲಾಗಿತ್ತು. ಕಾಸರಗೋಡಿನಲ್ಲಿ ಸಭೆ ಸೇರಿದ ಅಖಿಲ ಕರ್ನಾಟಕ ಏಕೀಕರಣ ಪರಿಷತ್, ಕನ್ನಡಿಗರಿಗಾಗಿ ಪ್ರತ್ಯೇಕ ರಾಜ್ಯದ ಬೇಡಿಕೆ ಮುಂದಿಟ್ಟಿತು.

ಸ್ವಾತಂತ್ರ್ಯಾನಂತರವೂ ಹೈದ್ರಾಬಾದ್​​ನ ನಿಜಾಮರು ಭಾರತ ಒಕ್ಕೂಟ ಸೇರಲು ನಿರಾಕರಿಸಿದರು. ಕೊನೆಗೆ ಬಲಪ್ರಯೋಗಿಸಿ ಹೈದ್ರಾಬಾದನ್ನು ಭಾರತ ಒಕ್ಕೂಟಕ್ಕೆ ಸೇರಿಸಲಾಯಿತು. ಆಗ ಬೀದರ್, ಗುಲ್ಬರ್ಗಾ ಮತ್ತು ರಾಯಚೂರು ಜಿಲ್ಲೆಗಳು ನಿಜಾಮರ ಆಳ್ವಿಕೆಯಿಂದ ಮುಕ್ತಿ ಪಡೆದವು. 1948ರ ಸೆಪ್ಟಂಬರ್ 17ರಂದು ವಿಮೋಚನೆ ದೊರೆತ ಹಿನ್ನೆಲೆಯಲ್ಲಿ, ಈ ದಿನವನ್ನು ಪ್ರತಿವರ್ಷ ಹೈದ್ರಾಬಾದ್ ಕರ್ನಾಟಕ ವಿಮೋಚನಾ ದಿನವನ್ನಾಗಿ ಆಚರಿಸಲಾಗುತ್ತಿದೆ.

ಅದೇ ವರ್ಷ, ಕೇಂದ್ರ ಸರ್ಕಾರವು ಧರ್ ಸಮಿತಿಯನ್ನು ರಚಿಸಲಾಯಿತು. ಕರ್ನಾಟಕ ಸೇರಿದಂತೆ ಏಕೀಕರಣಕ್ಕಾಗಿ ಹೋರಾಡುತ್ತಿರುವ ಇತರ ಪ್ರದೇಶಗಳ ಬಗೆಗೂ ವರದಿ ನೀಡುವಂತೆ ಸೂಚಿಸಲಾಗಿತ್ತು. ಆದರೆ, ಈ ಸಮಿತಿಯು ಪುನರ್​​ರಚನೆಯನ್ನು ತಳ್ಳಿಹಾಕಿತು. ಜನಾಕ್ರೋಶ ಹೆಚ್ಚಾದ ಹಿನ್ನೆಲೆಯಲ್ಲಿ ಸರ್ಕಾರ ಜೆವಿಪಿ ಸಮಿತಿ ರಚಿಸಿತು. ಜವಾಹರಲಾಲ್ ನೆಹರು, ವಲ್ಲಭಾಯ್ ಪಟೇಲ್, ಡಾ ಪಟ್ಟಾಭಿ ಸೀತಾರಾಮಯ್ಯ ಈ ಸಮಿತಿ ಸದಸ್ಯರಾಗಿದ್ದರು. ಈ ಸಮಿತಿಯು ಭಾಷೆ ಆಧಾರದಲ್ಲಿ ಆಂಧ್ರಪ್ರದೇಶ ರಚನೆಗೆ ಅಸ್ತು ಎಂದಿತು. ಕರ್ನಾಟಕವನ್ನು ಈ ಬಾರಿಯೂ ನಿರ್ಲಕ್ಷಿಸಲಾಗಿತ್ತು.

image


ಕಾಂಗ್ರೆಸ್ ಮಾಡಿದ ಮೋಸಕ್ಕೆ ಪ್ರತಿಯಾಗಿ ಕರ್ನಾಟಕ ಏಕೀಕರಣ ಪಕ್ಷ ಸ್ಥಾಪಿಸಿ 1951ರ ಚುನಾವಣೆಯಲ್ಲಿ ಕನ್ನಡ ಹೋರಾಟಗಾರರು ಸ್ಪರ್ಧಿಸಿದರು. 1953ರ ಹೈದ್ರಾಬಾದ್ ಕಾಂಗ್ರೆಸ್ ಅಧಿವೇಶನದಲ್ಲಿ ಆಂಧ್ರ ರಚನೆಗೆ ನಿರ್ಣಯ ಅಂಗೀಕರಿಸಿ, ಕರ್ನಾಕಟದ ಹೆಸರು ಕೈ ಬಿಡಲಾಯಿತು. ಇದನ್ನು ವಿರೋಧಿಸಿ ಬಾಂಬೆ ವಿಧಾನಸಭೆಯ ಸದಸ್ಯ ಎ ಜೆ ದೊಡ್ಮೇಠಿಯವರು ರಾಜೀನಾಮೆ ನೀಡಿ ಉಪವಾಸ ಸತ್ಯಾಗ್ರಹ ಆರಂಭಿಸಿದರು. ಹುಬ್ಬಳ್ಳಿ ಭಾಗದಲ್ಲಿ ಜನ ದಂಗೆ ಎದ್ದರು. ನೂರಾರು ಜನರು ಜೈಲು ಪಾಲಾದರು. ಹುಬ್ಬಳ್ಳಿ-ಧಾರವಾಡ ಮರುಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತು ಹೋಯಿತು. ಇದರಿಂದ ಎಚ್ಚೆತ್ತ ಪ್ರಧಾನಿ ನೆಹರು ಅವರು, ರಾಜ್ಯ ಪುನರ್ರಚನಾ ಆಯೋಗ ರಚಿಸಿದರು. ಇದರ ನೇತೃತ್ವವನ್ನು ನ್ಯಾ. ಫಜಲ್ ಅಲಿಯವರು ವಹಿಸಿದ್ದರು. ಸಾಕಷ್ಟು ಒತ್ತಡಗಳ ಬಳಿಕ ಈ ಸಮಿತಿಯು ಭಾಷೆ ಆಧಾರದಲ್ಲಿ ರಾಜ್ಯಗಳ ಪುನರಚನೆಗೆ ಶಿಫಾರಸ್ಸು ಮಾಡಿತು. ಇದನ್ನು ಸಂಸತ್ ಕೂಡಾ ಅಂಗೀಕರಿಸಿತು. ಅಂತೂ ಇಂತೂ ಕರ್ನಾಟಕ ಒಗ್ಗೂಡಿತು. ಆದರೆ, ಕಾಸರಗೋಡು ಮಾತ್ರ ಕೈ ಬಿಟ್ಟುಹೋಯಿತು. ಕೇರಳದ ಕಿರೀಟದಲ್ಲಿರುವ ಕಾಸರಗೋಡನ್ನು ಕರ್ನಾಟಕಕ್ಕೆ ಸೇರಿಸಲು ಇಂದಿಗೂ ಹೋರಾಟ ನಡೆಯುತ್ತಲೇ ಇದೆ.

1973ರ ನವೆಂಬರ್ 1 ರಂದು ಮುಖ್ಯಮಂತ್ರಿ ದೇವರಾಜ್ ಅರಸ್ ಅವರು ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣ ಮಾಡಿದರು. ಆ ದಿನವನ್ನೇ ನಾವೆಲ್ಲಾ ಕರ್ನಾಟಕ ರಾಜ್ಯೋತ್ಸವ ಎಂದು ಆಚರಿಸುತ್ತಿದ್ದೇವೆ.

    Share on
    close