ಬಣ್ಣಗಳ ಅರಿವಿಲ್ಲದಿದ್ದರೂ ಪೈಂಟಿಂಗ್ ಮಾಡ್ತಾರೆ- ದೃಷ್ಟಿ ವಿಕಲ ಚೇತನರಾಗಿದ್ರೂ ಬದುಕಿನ ಆಸೆ ಬಿಟ್ಟಿಲ್ಲ..!
ಟೀಮ್ ವೈ.ಎಸ್. ಕನ್ನಡ
ಬೆಂಗಳೂರಿನ ಇಂದಿರಾನಗರದಲ್ಲಿ, ಜಗತ್ತು ಹೇಗಿದೆ ಅಂತಲೇ ಕಾಣದ ದೃಷ್ಟಿ ವಿಕಲ ಚೇತನ ಮಕ್ಕಳ ಶಾಲೆಯೊಂದಿದೆ. ಆದ್ರೆ, ಅಲ್ಲಿರೋ ಮಕ್ಕಳ್ಯಾರು ನಮಗೆ ಕಣ್ಣು ಕಾಣಿಸೋದಿಲ್ಲ ಅನ್ನೋ ಬೇಸರದಲ್ಲಿಲ್ಲ. ಯಾಕಂದ್ರೆ ಆ ಶಾಲೆ ದೃಷ್ಟಿ ವಿಕಲ ಚೇತನ ಮಕ್ಕಳಿಗೆ ಒಂಚೂರು ಕೊಂಕು ತಾಕದಂತೆ, ಅವ್ರು ಕುರುಡರು ಅನ್ನೋದನ್ನ ಮರೆಸಿ, ಸಾಕಿ ಸಲಹುತ್ತಿದೆ. 1998ರಲ್ಲಿ ಇಂದಿರಾನಗರದ ಮೂಲೆಯೊಂದರಲ್ಲಿ ಶ್ರೀ ರಕುಮ್ ಅನ್ನೋ ಹೆಸ್ರಲ್ಲಿ ಅಂಧ ಮಕ್ಕಳ ಶಾಲೆಯೊಂದು ತೆರೆಯುತ್ತೆ. ಮೊದಮೊದಲು 5-6 ಮಕ್ಕಳೊಂದಿಗೆ ಶುರುವಾದ ಈ ಸಂಸ್ಥೆ ಈಗ ಬೆಂಗಳೂರಿನ ಮೂರುಕಡೆ ನಿಸ್ವಾರ್ಥವಾಗಿ ತನ್ನ ಸೇವೆ ಸಲ್ಲಿಸುತ್ತಿದೆ. ಇಂದಿರಾನಗರ ಸೇರಿದಂತೆ, ದೇವನಹಳ್ಳಿ, ಅರ್ಕಾವತಿ ಲೇಔಟ್ಗಳ ದೃಷ್ಟಿ ವಿಕಲ ಚೇತನ ಮಕ್ಕಳ ಶಾಲೆಯಲ್ಲಿ ಒಟ್ಟಾರೆ ಈಗ 500ಕ್ಕೂ ಹೆಚ್ಚು ಮಕ್ಕಳು ಕಲಿಯುತ್ತಿದ್ದಾರೆ. ಈ ಶಾಲೆಯಲ್ಲಿ ದೃಷ್ಟಿ ವಿಕಲ ಚೇತನ ಮಕ್ಕಳ ವಿದ್ಯಾಭ್ಯಾಸಕ್ಕೆ ಬೇಕಾದ ಸಲಕರಣೆಗಳಷ್ಟೇ ಅಲ್ಲ, ಇವ್ರಿಗಾಗಿ ವಿಶೇಷ ಸವಲತ್ತುಗಳನ್ನೂ ಒದಗಿಸಲಾಗಿದೆ.
ಇಲ್ಲಿ ಬಣ್ಣಗಳ ಅರಿವಿಲ್ಲದ ಮಕ್ಕಳು ಪೇಂಟಿಂಗ್ ಕೂಡ ಮಾಡ್ತಾರೆ. ಸ್ವರಕ್ಷಣೆಗಾಗಿ ಕರಾಟೆಯಂತಹ ವಿದ್ಯೆಯನ್ನು ಹೇಳಿಕೊಡಲಾಗುತ್ತೆ. ದೃಷ್ಟಿ ವಿಕಲ ಚೇತನರು ಸುಲಭವಾಗಿ ಬಳಸಬಹುದಾದಂತ ಸುಸಜ್ಜಿತ ಕಂಪ್ಯೂಟರ್ ಲ್ಯಾಬ್ನ್ನೂ ಸಹ ವ್ಯವಸ್ಥೆ ಮಾಡಲಾಗಿದೆ. ಅಷ್ಟೇ ಅಲ್ಲ, ಯೋಗ, ಭರತನಾಟ್ಯ, ಮನಸ್ಸಿಗೆ ಮುದ ನೀಡೋ ಸಂಗೀತ, ಹಾರ್ಮೋನಿಯಂ, ಕೀಬೋರ್ಡ್ ವಾದನವನ್ನ ಕೂಡ ಮಕ್ಕಳು ಕಲಿಯುತ್ತಿದ್ದಾರೆ. ಅಂದ್ಹಾಗೆ ಈ ಶಾಲೆ ಇರೋದು ಬಡಮಕ್ಕಳಿಗಾಗಿ. ಹಳ್ಳಿಗಳಿಂದ ಬರೋ, ದೃಷ್ಟಿ ವಿಕಲಚೇತನರಾಗಿ ಶಿಕ್ಷಣದಿಂದ ವಂಚಿತರಾಗಿರೋ ಮಕ್ಕಳು ಇಲ್ಲಿ ನಿಶ್ಚಿಂತೆಯಿಂದ ವಿದ್ಯಾವಂತರಾಗ್ತಿದ್ದಾರೆ. ಎರಡೂವರೆ ವರ್ಷದ ಮಕ್ಕಳಿಂದ ಹಿಡಿದು 26 ವರ್ಷದವರೆಗಿನ ವಯಸ್ಕರು ಈ ಸಂಸ್ಥೆಯ ಋಣಿಗಳಾಗಿದ್ದಾರೆ. ಊಟ, ವಸ್ತ್ರ, ವಸತಿಯೊಂದಿಗೆ ಅಲ್ಲಿನ ಎಲ್ಲಾ ಬಡ ಮಕ್ಕಳು ವಯಸ್ಕರನ್ನು ಪ್ರೀತಿಯಿಂದ ನೋಡಿಕೊಳ್ತಿದ್ದಾರೆ ರಕುಮ್ಜೀ.
ಬಡಮಕ್ಕಳಿಗೆ ಇಷ್ಟೆಲ್ಲಾ ಸಹಾಯ ಮಾಡ್ತಿರೋ ಈ ರಕುಮ್ಜೀ ಯಾರು..? ಅನ್ನೋ ಕುತೂಹಲ ನಿಮಗೆ ಕಾಡ್ತಿರಬಹುದು. ಬಿಳಿ ವಸ್ತ್ರ ಧರಿಸಿ, ಉದ್ದದಾಡಿ ಬಿಟ್ಟು ಸನ್ಯಾಸಿಯಂತೆ ಕಾಣೋ ಇವ್ರೇ ರಕುಮ್ಜೀ. ಇವ್ರು ಈ ಮುಂಚೆ ಇಂಥ ಶಾಲೆಯ ಕಲ್ಪನೆಯನ್ನೇ ಮಾಡಿಕೊಂಡವರಲ್ಲ. ಚಿಕ್ಕಂದಿನಿಂದಲೂ ಕರಾಟೆಯಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡ ರಕುಮ್ಜೀ ನಾನಾ ದೇಶಗಳಿಗೆ ಸುತ್ತಿ, ತಮ್ಮಕರಾಟೆಯನ್ನು ಪ್ರದರ್ಶಿಸಿ ಸೈ ಎನಿಸಿಕೊಂಡವರು. ದೇಶದ ಹಿರಿಮೆ ಹೆಚ್ಚಿಸಿದವರು. ಅಭಿಮಾನಿಗಳ ಒತ್ತಾಯದ ಮೇರೆಗೆ ದೇಶದ ಸಾಕಷ್ಟು ಕಡೆ ಕರಾಟೆ ಪ್ರದರ್ಶನ ನೀಡಿ ಹೆಸರು ಮಾಡಿದ್ದಾರೆ. ತಮ್ಮೆಲ್ಲಾ ಸಾಧನೆಯ ನಂತ್ರ ಅಂಧ ಮಕ್ಕಳ ಅದೃಷ್ಟ ಎಂಬಂತೆ ಆಚಾರ್ಯ ರಕುಮ್ಜೀ ಶಾಲೆಯೊಂದನ್ನು ತೆರೆಯಲುಯೋಚನೆ ಮಾಡಿದರು. ಜೀವನದಲ್ಲಿ ಅಂದುಕೊಂಡಿದ್ದನ್ನ ಸಾಧಿಸಿದ್ದಾಯ್ತು, ಇನ್ನುಮುಂದೆ ಸಮಾಜಸೇವೆಯಲ್ಲಿ ತಮ್ಮನ್ನ ತಾವು ತೊಡಗಿಸಿಕೊಳ್ಬೇಕು ಅಂತಯೋಚಿಸ್ತಾರೆ. ಯೋಚನೆಯಂತೆ 1998ರಲ್ಲಿ ಶ್ರೀ ರಕುಮ್ಜೀ ದೃಷ್ಟಿ ವಿಕಲ ಚೇತನ ಮಕ್ಕಳ ಶಾಲೆಯನ್ನೂ ಆರಂಭಿಸ್ತಾರೆ. ಈಗ ಆ ಶಾಲೆಯ ಪ್ರಯೋಜನ ಪಡೆಯುತ್ತಿರೋರು ನೂರಾರು ಮಕ್ಕಳು.
ವಿಶೇಷ ಅಂದ್ರೆ ರಕುಮ್ಜೀ ಆರಂಭಿಸಿರೋ ಈ ಶಾಲೆ ದೇಶದಲ್ಲಿ ಮೊದಲ ಹವಾನಿಯಂತ್ರಿತ ದೃಷ್ಟಿ ವಿಕಲ ಚೇತನ ಮಕ್ಕಳ ಶಾಲೆ ಅನ್ನೋ ಪ್ರಶಂಸೆಗೂ ಪಾತ್ರವಾಗಿದೆ. ದೇಶದಲ್ಲೇ ಮೊದಲ ಬಾರಿಗೆ ದೃಷ್ಟಿ ವಿಕಲ ಚೇತನರ ವಧು-ವರ ವೇದಿಕೆಯನ್ನು ಸ್ವಯಂವರ ಡಾಟ್ ಕಾಂ. ಹೆಸರಲ್ಲಿ(swayamvara.com) ಸ್ಥಾಪಿಸಿದ ಕೀರ್ತಿ ಇವರದ್ದು. ಸಾಕಷ್ಟು ಅನುಕೂಲಗಳಿಂದ ಕೂಡಿರೋ ಈ ಶಾಲೆಯ ಆವರಣದಲ್ಲಿ ಗೋಶಾಲೆ ಕೂಡ ಇದೆ. 50ಕ್ಕೂ ಹೆಚ್ಚು ಹಸುಗಳು ರಕುಮ್ಜೀ ಬಳಿ ಆಶ್ರಯ ಪಡೆದುಕೊಂಡಿವೆ. ಆಗಾಗ ಬಡವರಿಗೆ ಗೋದಾನದ ಹೆಸರಲ್ಲಿ ಹಸುಗಳನ್ನು ದಾನ ಮಾಡಿ ಆರ್ಥಿಕವಾಗಿ ನೆರವಾಗ್ತಾರೆ. ವಿದ್ಯುತ್ ಬಳಕೆಯನ್ನು ಕಡಿತಗೊಳಿಸೋದಕ್ಕಾಗಿ ಸಾಕಷ್ಟು ಸೋಲಾರ್ ಬಳಸಿ ಮಾದರಿಕೂಡ ಆಗಿ ಈ ರಕುಮ್ಜೀ ಸಂಸ್ಥೆ. ಈ ಸಂಸ್ಥೆಯ ಒಳ್ಳೇ ಕಾರ್ಯಗಳನ್ನು ಮೆಚ್ಚಿ ಆಗಾಗ ದಾನಿಗಳು ದೇಣಿಗೆ ನೀಡಿ ಅಂಧ ಮಕ್ಕಳ ಬಾಳಿಗೆ ನೆರವಾಗ್ತಾರೆ. ಯಾರ ಮೇಲೂ ಅವಲಂಭಿತವಾಗದ ರಕುಮ್ಜೀ, ತಮ್ಮೆಲ್ಲಾ ಆಸೆಗಳನ್ನು ಬಿಟ್ಟು ದೃಷ್ಟಿ ವಿಕಲ ಚೇತನ ಮಕ್ಕಳ ಸ್ವಾವಲಂಬಿ ಬದುಕಿಗೆ ಬೆಂಗಾವಲಾಗಿ ನಿಂತಿದ್ದಾರೆ.
1. ಪ್ರತಿನಿತ್ಯ 1000 ಬಡವರ ಹೊಟ್ಟೆ ತುಂಬಿಸುವ ಅನ್ನದಾತ..
2. ಬೇಡವಾದ ಔಷಧಗಳನ್ನು ಸಂಗ್ರಹಿಸುತ್ತಾರೆ - ದೆಹಲಿಯಲ್ಲೊಬ್ಬ “ಮೆಡಿಸಿನ್ ಬಾಬಾ”
3. ಒತ್ತಡವಿಲ್ಲದ ಕೆಲಸ- ಕೈ ತುಂಬಾ ಸಂಬಳ- ನೆಮ್ಮದಿಯಾಗಿ ಸಮಯ ಕಳೆಯುವ ಬಗ್ಗೆ ಯೋಚನೆ ಮಾಡಿ