ಪಿಪಿಇ ತ್ಯಾಜ್ಯ ಬಟ್ಟೆಯಿಂದ ಬೆಡ್ರೊಲ್ ತಯಾರಿಕೆ
ಹೆಚ್ಚುತ್ತಿರುವ ಬೆಡ್ಗಳ ಬೇಡಿಕೆಯನ್ನು ಪೂರೈಸಲು ಏರ್ನಾಕುಲಂ ಮೂಲದ ಲಕ್ಷ್ಮೀ ಮೆನನ್ ಕೈಗೆಟಕುವ ಬೆಲೆಯ ‘ಶಯ್ಯಾʼ ಎಂಬ ಬೆಡ್ ರೊಲ್ಗಳನ್ನು ತಯಾರಿಸುತ್ತಿದ್ದಾರೆ.
ಭಾರತದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ದಿನೇ ದಿನೇ ಏರಿದಂತೆ ದೇಶದ ಆಸ್ಪತ್ರೆಗಳಲ್ಲಿ ಹಾಸಿಗೆ, ಆಕ್ಸಿಜನ್ ಸಿಲಿಂಡರ್ ಮತ್ತು ವೆಂಟಿಲೇಟರ್ಗಳ ಕೊರತೆ ಹೆಚ್ಚಾಗತೊಡಗಿದೆ. ಆಸ್ಪತ್ರೆಗಳಲ್ಲಿ ಬೆಡ್ಗಳ ಕೊರತೆಯಿಂದ ಹಲವು ಸಾವುಗಳು ಸಂಭವಿಸಿರುವುದು ಕಣ್ಣಮುಂದಿರುವ ಸತ್ಯ.
ಇಂತಹ ಅಹಿತಕರ ಘಟನೆಗಳು ಮುಂದೆ ಜರುಗದಂತೆ ತಡೆದು ಬೆಡ್ಗಳ ಬೇಡಿಕೆಯನ್ನು ಪೂರೈಸಲು ಏರ್ನಾಕುಲಂ ಮೂಲದ ಲಕ್ಷ್ಮೀ ಮೆನನ್ ಕೈಗೆಟಕುವ ಬೆಲೆಯ ‘ಶಯ್ಯಾʼ ಎಂಬ ಬೆಡ್ ರೊಲ್ಗಳನ್ನು ತಯಾರಿಸುತ್ತಿದ್ದಾರೆ.
ಸುಸ್ಥಿರ ಜೀವನೋಪಾಯ ಪರಿಹಾರಗಳ ಮೇಲೆ ಕೇಂದ್ರಿತವಾಗಿರುವ ಸಂಸ್ಥೆಯ ಸಂಸ್ಥಾಪಕಿ ಲಕ್ಷ್ಮಿ ಅವರು ತ್ಯಾಜ್ಯ ನಿರ್ವಹಣೆಯನ್ನು ಮುಖ್ಯವಾಗಿ ಗಮನದಲ್ಲಿರಿಸಿಕೊಂಡು ಈ ಕೆಲಸವನ್ನು ಪ್ರಾರಂಭಿಸಿದ್ದಾರೆ.
“ಪಿಪಿಇ ಕಿಟ್ಗಳನ್ನು ತಯಾರಿಸುವಾಗ ಸೃಷ್ಠಿಯಾಗುವ ತ್ಯಾಜ್ಯವನ್ನು ನಿರ್ವಹಿಸಲು ಕಷ್ಟಪಡುತ್ತಿದ್ದಾರೆಂದು ಸ್ನೇಹಿತರಿಂದ ಕೇಳಿ ತಿಳಿದಿದ್ದೇನೆ. ಅದೇ ಸಮಯದಲ್ಲಿ ಏರ್ನಾಕುಲಂನ ಅಂಬಲ್ಲುರ್ ಪಂಚಾಯಿತಿ ನಾವು ಎಫ್ಎಲ್ಟಿಸಿಗಳಿಗೆ ಕೆಲವು ಬೆಡ್ಗಳನ್ನು ಸರಬರಾಜು ಮಾಡುವಂತೆ ಕೋರಿತು. ಆ ಸಮಯದಲ್ಲಿ ಬೇರೆ ಬಟ್ಟೆ ಬಳಸಿ ಬೆಡ್ ಮಾಡಬೇಕೆಂಬ ಯೋಚನೆಯಲ್ಲಿ ನಾನಿದ್ದೆ, ಆಗ ನನಗೆ ಪಿಪಿಇ ತ್ಯಾಜ್ಯದಿಂದ ಬೆಡ್ ರೊಲ್ ತಯಾರಿಸಬಹುದಲ್ಲವೆಂದು ಅನಿಸಿತು. ಅದು ಈಗ ಸಾಕಾರವಾಗಿದೆ,” ಎಂದು ಲಕ್ಷ್ಮೀ ಮೆನನ್ ದಿ ನ್ಯೂಸ್ ಮಿನಿಟ್ ಗೆ ಹೇಳಿದರು. ಪಂಚಾಯತಿಯ ಕೋವಿಡ್ ಆರೈಕೆ ಕೇಂದ್ರ ಲಕ್ಷ್ಮೀ ಅವರಿಂದ 5 ಬೆಡ್ಗಳನ್ನು ಪಡೆದಿದೆ.
ALSO READ
ಈ ಬೆಡ್ರೊಲ್ಗಳನ್ನು ವೈಯಕ್ತಿಕ ಸುರಕ್ಷತಾ ಸೂಟ್ಗಳನ್ನು(ಪಿಪಿಇ) ತಯಾರಿಸುವಾಗ ಉಳಿದ ವಸ್ತುಗಳಿಂದ ತಯಾರಿಸಲಾಗಿದೆ. ಕೊರೊನಾವೈರಸ್ ಭಾರತದಲ್ಲಿ ಹೆಚ್ಚುತ್ತಿದ್ದಂತೆ ದೇಶದ ವಿವಿಧ ಭಾಗಗಳಲ್ಲಿ ದರ್ಜಿಗಳು ಮತ್ತು ಜವಳಿ ತಯಾರಕರು ಆರೋಗ್ಯ ಕಾರ್ಯಕರ್ತರು ಮತ್ತು ಜನರ ಸುರಕ್ಷತೆಗಾಗಿ ಉಪಯೋಗಿಸುವ ಪಿಪಿಇ ಉಡುಪುಗಳನ್ನು ಹೊಲೆಯುತ್ತಿದ್ದಾರೆ.
“ಹಗಲು ರಾತ್ರಿ ಕೆಲಸ ಮಾಡಿ ಈ ಸೂಟ್ಗಳನ್ನು ತಯಾರಿಸುತ್ತಾರೆ, ಅವು ಪೂರ್ಣ ಪ್ರಮಾಣದಲ್ಲಿ ತಯಾರಾದಾಗ ಅದರಿಂದ ಸೃಷ್ಠಿಯಾಗುವ ತ್ಯಾಜ್ಯದ ಪ್ರಮಾಣವು ಗಣನೀಯವಾಗಿದೆ. ವಾಟರ್ಪ್ರೂಫ್ ಆಗಿರುವ ಈ ವಸ್ತು ಚೂರು ಪ್ಲಾಸ್ಟಿಕ್ ಅಂಶವನ್ನು ಹೊಂದಿರುತ್ತದೆ, ಹಾಗಾಗಿ ಅದನ್ನು ವಿಲೇವಾರಿ ಮಾಡುವುದು ಕಷ್ಟ. ಅವುಗಳನ್ನು ವಿಲೇವಾರಿ ಮಾಡಲು ಅಥವಾ ಮರುಬಳಕೆ ಮಾಡಲು ವೃತ್ತಿಪರ ಸಂಸ್ಥೆಗಳೆ ಬೇಕು. ಸಣ್ಣ ದರ್ಜಿಗಳಿಗೆ ಇದು ಸುಲಭವಾಗಿ ಸಾಧ್ಯವಿಲ್ಲ. ಅವರು ದಿನದಿನಕ್ಕೆ ಹೆಚ್ಚಿಗೆ ಶೇಖರಣೆಯಾಗುವ ಈ ತ್ಯಾಜ್ಯವನ್ನು ಸುಡಲು ಆರಂಭಿಸುತ್ತಾರೆ. ಇದನ್ನು ನೋಡಿಕೊಂಡಿರಲು ನನ್ನಿಂದಾಗಲಿಲ್ಲ, ಹಾಗಾಗಿ ಏನಾದರೂ ಮಾಡಬೇಕೆಂದು ನಾನು ಯೋಚಿಸಿದೆ,” ಎಂದು ಲಕ್ಷ್ಮೀ ದಿ ಬೆಟರ್ ಇಂಡಿಯಾಗೆ ಹೇಳಿದರು.
ಲಕ್ಷ್ಮೀಯವರ ಪ್ರಕಾರ ಶಯ್ಯಾ ಬೆಡ್ಗಳು ವಾಟರ್ಪ್ರೂಫ್ ಆಗಿರುವುದರಿಂದ ಅವುಗಳನ್ನು ಸ್ವಚ್ಛಗೊಳಿಸುವುದು ಸುಲಭ. 6 ಟನ್ ಬಟ್ಟೆಯ ತ್ಯಾಜ್ಯದಿಂದ 2,400 ಶಯ್ಯಾ ಬೆಡ್ಗಳನ್ನು ತಯಾರಿಸಬಹುದು, ಇಷ್ಟು ಬೆಡ್ಗಳನ್ನು ಖರೀದಿಸಿದಲು 12 ಲಕ್ಷ ರೂ.ಗಳು ಬೇಕಾಗುತ್ತವೆ ಎನ್ನುತ್ತಾರವರು.
ಪ್ರಸ್ತುತ ಕೋವಿಡ್-19 ಆರೈಕೆ ಕೇಂದ್ರಗಳಲ್ಲಿ ಈ ಬೆಡ್ಗಳನ್ನು ಬಳಸಲಾಗುತ್ತಿದ್ದು, ಮನೆಯಿಲ್ಲದ ಜನರಿಗೂ ಇವುಗಳನ್ನು ವಿತರಿಸಲಾಗಿತ್ತಿದೆ. ಈ ಮೂಲಕ ಲಕ್ಷ್ಮೀಯವರು 10 ಜನ ಹೆಣ್ಣುಮಕ್ಕಳಿಗೆ ಉದ್ಯೋಗ ಒದಗಿಸಿದಂತಾಗಿದೆ. ಅವರು ಪ್ರತಿದಿನ 300 ರೂ. ಗಳಿಸುವಂತಾಗಿದ್ದು, ಒಂದು ಬೆಡ್ನ ಬೆಲೆಯು ಅಷ್ಟೆ ಆಗಿದೆ.