ಮೆಜೆಸ್ಟಿಕ್‍ನಲ್ಲಿ ಭೂಮಿ ಕೆಳಗೊಂದು ಜಗತ್ತು
ಅಗಸ್ತ್ಯ
ಅದು ಭೂಮಿಯ ಗರ್ಭದಲ್ಲಿ ನಿರ್ಮಾಣವಾಗ್ತಿರೋ ಅದ್ಭುತ. ನೆಲದ ಮೇಲ್ಮೈನಿಂದ 83 ಅಡಿ ಆಳದಲ್ಲಿ ನಡೆಯುತ್ತಿರುವ ಕಾಮಗಾರಿ. ಒಂದೇ ಕೆಲಸಕ್ಕೆ 5 ಇಂಜಿನಿಯರಿಂಗ್ ವಿಭಾಗ ಒಟ್ಟಿಗೆ ಕೆಲಸ ಮಾಡಿ ಕಟ್ಟುತ್ತಿರುವ ನಿರ್ಮಾಣ ಕ್ಷೇತ್ರದ ಮೈಲಿಗಲ್ಲು. ಇಷ್ಟೇಲ್ಲಾ ಪೀಠಿಕೆ ಕೊಡುತ್ತಿರುವುದು ಕೇಂದ್ರ ಮತ್ತು ರಾಜ್ಯ ಸರ್ಕಾರ ಜಂಟಿಯಾಗಿ ಜಾರಿಗೆ ತರುತ್ತಿರುವ ನಮ್ಮ ಮೆಟ್ರೋ ಯೋಜನೆಯ ಇಂಟರ್‍ಚೇಂಜ್ ನಿಲ್ದಾಣದ ಬಗ್ಗೆ.
ಮೆಜಸ್ಟಿಕ್‍ನ 20 ಎಕರೆ ಪ್ರದೇಶದ ತಳಭಾಗದಲ್ಲಿ ನಿರ್ಮಾಣವಾಗುತ್ತಿರುವ ನಿಲ್ದಾಣ ಇದು. ಇದೊಂದೇ ನಿಲ್ದಾಣಕ್ಕೆ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‍ಸಿಎಲ್) ಖರ್ಚು ಮಾಡುತ್ತಿರುವುದು ಬರೋಬ್ಬರಿ 272 ಕೋಟಿ ರೂ. ವಿಶ್ವವೇ ಭಾರತೀಯ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ ಬಾಹುಬಲಿ ಚಿತ್ರದ ಬಜೆಟ್‍ಗಿಂತ ಹೆಚ್ಚು.
ಮೆಟ್ರೋ ಕಾಮಗಾರಿ ದಿನದಿಂದ ದಿನಕ್ಕೆ ವೇಗ ಪಡೆದುಕೊಳ್ಳುತ್ತಿದೆ. ಹಲವು ಗಡುವುಗಳನ್ನು ಮೀರಿಯಾದರೂ ಸಿಲಿಕಾನ್ ಸಿಟಿ ಜನರು ನಾಲ್ಕು ದಿಕ್ಕುಗಳಲ್ಲೂ ಮಟ್ರೋ ರೈಲು ಸಂಚಾರಿಸುವಂತೆ ಮಾಡಲು ಬಿಎಂಆರ್‍ಸಿಎಲ್ ಕೆಲಸ ಮಾಡುತ್ತಿದೆ. ಅದರಲ್ಲೂ ಯೋಜನೆಯ ಕೇಂದ್ರ ಬಿಂದುವೆಂದೇ ಕರೆಯಲ್ಪಡುವ ಮೆಜೆಸ್ಟಿಕ್ ನಿಲ್ದಾಣದ ಬಗ್ಗೆಯೂ ಜನರಲ್ಲಿರಲಿ ತಂತ್ರಜ್ಞರಲ್ಲೂ ಕುತೂಹಲ ಮೂಡಿಸಿದೆ. ಈ ಕುತೂಹಲಕ್ಕೆ ಕಾರಣವೆಂದರೆ ಒಂದು ನಿಲ್ದಾಣಕ್ಕೆ ಮಾಡಲಾಗುತ್ತಿರುವ ವೆಚ್ಚ. ಅದಕ್ಕಿಂತ ಹೆಚ್ಚಾಗಿ ನೆಲದ 83 ಅಡಿಗಳಷ್ಟು ಆಳದಲ್ಲಿ ಮಾಡಲಾಗಿರುವ ಕೆಲಸ ಎಷ್ಟು ಫಲಪ್ರದವಾಗಿದೆ ಎಂಬುದು.
5 ಇಂಜಿನಿಯರಿಂಗ್ ವಿಭಾಗ:
ಯಾವುದೇ ಸಿವಿಲ್ ಕೆಲಸ ಮಾಡಬೇಕೆಂದರೂ ಇಂಜಿನಿಯರಿಂಗ್ ವಿಭಾಗದವರು ಇರಲೇಬೇಕು. ಅದೇ ರೀತಿ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲೂ ಇಂಜಿನಿಯರ್ಸ್‍ಗಳು ಕೆಲಸ ಮಾಡುತ್ತಿದ್ದಾರೆ. ಅದು ಎಲ್ಲಾ 5 ವಿಭಾಗದ ಇಂಜಿನಿಯರ್ಸ್. ಸಿವಿಲ್, ಕಮ್ಯುನಿಕೇಷನ್, ಎಲೆಕ್ಟ್ರಿಕಲ್, ಮೆಕ್ಯಾನಿಕಲ್ ಹಾಗೂ ಪ್ರಾಜೆಕ್ಟ್ ಇಂಜಿನಿಯರಿಂಗ್ ವಿಭಾಗದ ನೆರವಿನಿಂದ ಬೃಹತ್ ನಿಲ್ದಾಣ ನಿರ್ಮಾಣ ಮಾಡಲಾಗುತ್ತಿದೆ. ಅವರೊಂದಿಗೆ ಕಳೆದ 2 ವರ್ಷಗಳಿಂದ 1,500 ಕಾರ್ಮಿಕರು, 10 ಗುತ್ತಿಗೆದಾರರು ಕೆಲಸ ಮಾಡುತ್ತಿದ್ದಾರೆ.
6 ಫುಟ್ಬಾಲ್ ಕ್ರೀಡಾಂಗಣದಷ್ಟು ವಿಶಾಲ:
ನಮ್ಮ ಮೆಟ್ರೋ ಸುರಂಗ ಮಾರ್ಗ ಭೂಮಿಯ ಮೇಲ್ಮೈನಿಂದ 60 ಅಡಿಗಳ ಕೆಳಗೆ ನಿರ್ಮಾಣ ಮಾಡಲಾಗುತ್ತಿದೆ. ಆದರೆ, ಈ ನೆಲದಡಿಯ ನಿಲ್ದಾಣ ಅದಕ್ಕಿಂತಲೂ ಆಳದಲಿದೆ. ಉತ್ತರ-ದಕ್ಷಿಣ ಕಾರಿಡಾರ್ ನಿಲ್ದಾಣ 83 ಅಡಿ ಆಳದಲ್ಲಿದ್ದರೆ, ಪೂರ್ವ-ಪಶ್ಚಿಮ ಕಾರಿಡಾರ್‍ನ ನಿಲ್ದಾಣ ಅದಕ್ಕಿಂತ ಮೇಲೆ ಅಂದರೆ 53 ಅಡಿ ಆಳದಲ್ಲಿ ನಿರ್ಮಾಣವಾಗುತ್ತಿದೆ. ಇಡೀ ನಿಲ್ದಾಣದ ವಿಸ್ತೀರ್ಣ 6 ಫುಟ್‍ಬಾಲ್ ಕ್ರೀಡಾಂಗಣದಷ್ಟು ವಿಶಾಲವಾಗಿದೆ.
1 ಲಕ್ಷಘನ ಮೀಟರ್ ಸಿಮೆಂಟ್ ಬಳಕೆ:
ಮಾಮೂಲಿಯಾಗಿ ಒಂದು ಮನೆ ನಿರ್ಮಾಣಕ್ಕೆ ಅಂದಾಜು 100 ಘನ ಮೀಟರ್‍ನಷ್ಟು ಸಿಮೆಂಟ್ ಬಳಸಲಾಗುತ್ತದೆ. ಆದರೆ, ಮೆಜೆಸ್ಟಿಕ್ ನಿಲ್ದಾಣಕ್ಕೆ 1 ಲಕ್ಷ ಘನ ಮೀಟರ್‍ನಷ್ಟು ಸಿಮೆಂಟ್ ಬಳಸಲಾಗುತ್ತಿದೆ. ಅಂದರೆ 1 ಸಾವಿರ ಮನೆ ನಿರ್ಮಾಣ ಮಾಡುವಷ್ಟು ಸಿಮೆಂಟನ್ನು ಒಂದೇ ನಿಲ್ದಾಣಕ್ಕೆ ಬಳಸಲಾಗುತ್ತಿದೆ. ಮೆಜಸ್ಟಿಕ್ ನಿಲ್ದಾಣ ಕಾಮಗಾರಿ ಪೂರ್ಣಗೊಂಡು ಪ್ರಯಾಣಿಕರು ಬಂದು ಹೋಗುವಂತಾದರೆ, ಒಮ್ಮೆಲೆ 20 ಸಾವಿರ ಪ್ರಯಾಣಿಕರು ನಿಲ್ದಾಣದಲ್ಲಿರುವಂತಹ ವ್ಯವಸ್ಥೆ ಮಾಡಲಾಗುತ್ತಿದೆ. ಆಕಸ್ಮಾತ್ ನಿಲ್ದಾಣದೊಳಗೆ ಏನಾದರೂ ಅಗ್ನಿ ಅವಘಡ ಸಂಭವಿಸಿದರೆ ಹೊಗೆಯಿಂದ ಪ್ರಯಾಣಿಕರಿಗೆ ಏನೂ ತೊಂದರೆಯಾಗದಿರಲಿ ಎಂದು ಹಲವು ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಅದರಲ್ಲಿ ಪ್ರಮುಖವಾಗಿ ನಿಲ್ದಾಣದ ಮೇಲ್ಭಾಗದಿಂದ ಗಾಳಿ ಒಳಬರಲು ಮತ್ತು ಹೊರ ಹೋಗಲು ದೊಡ್ಡ ಮಟ್ಟದ ಫ್ಯಾನ್ ಅಳವಡಿಸಲಾಗುತ್ತಿದೆ. ಅದರಿಂದ ಏನೇ ತೊಂದರೆಯಾದರೂ ಗಾಳಿಯ ಕೊರತೆ ಉಂಟಾಗುವುದಿಲ್ಲ. ಇಂಟರ್‍ಚೇಂಜ್ ನಿಲ್ದಾಣವನ್ನು ಪದೇ ಪದೇ ಬದಲಿಸಲು ಸಾಧ್ಯವಿಲ್ಲದ ಕಾರಣ, 50 ವರ್ಷದವರೆಗೆ ನಿಲ್ದಾಣದಲ್ಲಿ ಯಾವುದೇ ಸಮಸ್ಯೆ ಉಂಟಾಗದಂತಿರುವಂತೆ ಮಾಡಲಾಗುತ್ತದೆ.