ಆನ್ಲೈನ್ ಅಸ್ತಿತ್ವಕ್ಕೆ ನೆರವು...ಉದ್ಯಮಗಳ ಯಶಸ್ಸಿಗೆ ಮೆಟ್ಟಿಲಾದ ನೀಡ್-ವೆಬ್ಸೈಟ್ಸ್
ಭಾರತಿ ಭಟ್
ಕೋಲ್ಕತ್ತಾ ಮೂಲದ ಉದ್ಯಮಿ ಇಂದ್ರಶಿಶ್ ಚಟರ್ಜಿ ಅವರಿಗೆ ಸ್ವ ಪ್ರಯತ್ನದಿಂದ ಏನನ್ನಾದ್ರೂ ಮಾಡಲೇಬೇಕೆಂಬ ಛಲವಿತ್ತು. ಇದಕ್ಕಾಗಿ ಕೈಯಲ್ಲಿದ್ದ ಕೆಲಸಕ್ಕೆ ಇಂದ್ರಶಿಶ್ ಗುಡ್ಬೈ ಹೇಳಿದ್ರು. ಅಂತರಾಷ್ಟ್ರೀಯ ಕಂಪನಿಯ ಉದ್ಯೋಗಕ್ಕೆ ರಾಜೀನಾಮೆ ಕೊಟ್ಟು, 2013ರಲ್ಲಿ `ನೀಡ್-ವೆಬ್ಸೈಟ್ಸ್' ಆರಂಭಿಸಿದ್ರು. ನಾಲ್ವರು ಸದಸ್ಯರ ತಂಡದೊಂದಿಗೆ ಆರಂಭವಾದ ಕನಸಿನ ಸಂಸ್ಥೆ ಇದು. ವಿಶೇಷ ಅಂದ್ರೆ ಇಂದ್ರಶಿಶ್ ಅವರ ಕನಸು ಸಾಕಾರಗೊಂಡಿದ್ದು ಐಟಿ ವಲಯದಲ್ಲಲ್ಲ. ಕಟ್ಟಡವೊಂದರ ಸ್ಟೋರ್ ರೂಮ್ನಲ್ಲಿ ಆರಂಭವಾದ ಈ ಸಂಸ್ಥೆ ಈಗ ಮಾಹಿತಿ ತಂತ್ರಜ್ಞಾನ ವಲಯದ ಕೇಂದ್ರ ಸ್ಥಳ ಅನ್ನೋದ್ರಲ್ಲಿ ಅನುಮಾನವೇ ಇಲ್ಲ.
ಇದೊಂದು ಬಿ2ಬಿ ವೇದಿಕೆ ಎನ್ನುತ್ತಾರೆ `ನೀಡ್ ವೆಬ್ಸೈಟ್ಸ್'ನ ಸಹ ಸಂಸ್ಥಾಪಕ ಇಂದ್ರಶಿಶ್. ಜಾಗತಿಕ ಮಟ್ಟದಲ್ಲಿ ಗ್ರಾಹಕರಿಗೆ ನೆರವಾಗುತ್ತಿದೆ. ಉದ್ಯಮಗಳನ್ನು ಆರಂಭಿಸಲು ಅಗತ್ಯ ಸಹಾಯವನ್ನು ಮಾಡ್ತಾ ಇದೆ. ಸಣ್ಣ ಹಾಗೂ ಮಧ್ಯಮ ಪ್ರಮಾಣದ ಉದ್ಯಮಗಳಿಗೆ ಕೈಗೆಟುಕುವ ದರದಲ್ಲಿ, ಆನ್ಲೈನ್ನಲ್ಲಿ ಗುರುತಿಸಿಕೊಳ್ಳಲು ಅಗತ್ಯವಾದ ನೆರವನ್ನು ನೀಡ್-ವೆಬ್ಸೈಟ್ಸ್ ನೀಡ್ತಾ ಇದೆ. ವಿವಿಧ ವೇದಿಕೆಗಳ ಮೂಲಕ, ವಿಶಿಷ್ಟವಾದ ವೃತ್ತಿಪರ ವೆಬ್ಸೈಟ್ಗಳ ನಿರ್ಮಾಣದ ಜೊತೆ ಜೊತೆಗೆ ಡಿಜಿಟಲ್ ಮಾರ್ಕೆಟಿಂಗ್ಗಗೂ ನೀಡ್ಸ್ - ವೆಬ್ಸೈಟ್ಸ್ ವರದಾನವಾಗಿದೆ. ಡಿಜಿಟಲ್ ಮಾರ್ಕೆಟಿಂಗ್ಗೆ ಬೇಕಾದ ಅಪ್ಲಿಕೇಷನ್ಗಳನ್ನೂ ಅಭಿವೃದ್ಧಿಪಡಿಸುತ್ತಿದೆ.
ಗ್ರಾಹಕ ಸಂಬಂಧ ನಿರ್ವಹಣೆ ಹಾಗೂ ಉದ್ಯಮ ಸಂಪನ್ಮೂಲ ಸಂಯೋಜನೆಗೆ ಬೇಕಾದ ಸಾಫ್ಟ್ವೇರ್ ಅಭಿವೃದ್ಧಿ ತಂತ್ರಜ್ಞಾನವನ್ನು ಕೂಡ ಇತ್ತೀಚೆಗಷ್ಟೇ ನೀಡ್-ವೆಬ್ಸೈಟ್ಸ್ ಬಿಡುಗಡೆ ಮಾಡಿದೆ. ಈ ವೇದಿಕೆ, ಉತ್ಪನ್ನ ಅಭಿವೃದ್ಧಿ ಮತ್ತು ವಿತರಣೆ ಸೇವೆಗೆ ವೈಜ್ಞಾನಿಕ ವಿಧಾನವನ್ನು ಅನುಸರಿಸುತ್ತದೆ. ಸಂಶೋಧನೆ ಕಾರ್ಯ ಮತ್ತು ಹೊಸ ಆವಿಷ್ಕಾರಗಳ ಬಗ್ಗೆ ತಿಳಿದುಕೊಳ್ಳಲು ಕೂಡ ಈ ವೇದಿಕೆ ಹೇಳಿ ಮಾಡಿಸಿದಂತಹ ತಾಣ. ವಿಶೇಷ ಅಂದ್ರೆ ಈ ವೇದಿಕೆ ಇವತ್ತಿನ ವರೆಗೂ ಸ್ವಂತ ಹಣಬಲದಿಂದ್ಲೇ ಕಾರ್ಯನಿರ್ವಹಿಸುತ್ತಿದೆ. ನೀಡ್ - ವೆಬ್ಸೈಟ್ಸ್ ಇತ್ತೀಚೆಗಷ್ಟೇ ಜಾರ್ಜಿಯಾ ಹಾಗೂ ಅಮೆರಿಕದಲ್ಲೂ ಕಾರ್ಯಾರಂಭ ಮಾಡಿದೆ. ಅಮೆರಿಕ ಮೂಲದ ಕೆಲ ಅಂತರಾಷ್ಟ್ರೀಯ ಕಂಪನಿಗಳು ನೀಡ್-ವೆಬ್ಸೈಟ್ಸ್ ಜೊತೆ ಒಪ್ಪಂದ ಮಾಡಿಕೊಂಡು ಹೊರಗುತ್ತಿಗೆ ಆಧಾರದ ಮೇಲೆ ಪಾಲುದಾರರಾಗಿವೆ.
ಬಹುತೇಕ ಎಲ್ಲ ಉದ್ಯಮಿಗಳು ಇ-ಕಾಮರ್ಸ್ ಹಾಗೂ ಉತ್ಪನ್ನ ಆಧಾರಿತ ಉದ್ಯಮದಲ್ಲಿ ಬಂಡವಾಳ ಹೂಡಿಕೆ ಮಾಡಲು ಇಚ್ಛಿಸುತ್ತಾರೆ ಅನ್ನೋದು ಇಂದ್ರಶಿಶ್ ಚಟರ್ಜಿ ಅವರ ಅಭಿಪ್ರಾಯ. ಹೊಸ ಹೊಸ ಉತ್ಪನ್ನ ಹಾಗೂ ವೆಬ್ಸೈಟ್ಗಳನ್ನು ಬಿಡುಗಡೆ ಮಾಡಿದ್ರೂ ಇವತ್ತಿನ ವರೆಗೂ ನೀಡ್ - ವೆಬ್ಸೈಟ್ಸ್ ಅನ್ನು ಸೇವಾ ಆಧಾರಿತ ಉದ್ಯಮ ಎಂದೇ ಪರಿಗಣಿಸಲಾಗುತ್ತಿದೆ. ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವುದು ಇಂದ್ರಶಿಶ್ ಅವರ ಮುಂದಿರುವ ಗುರಿ. ಅಂತರಾಷ್ಟ್ರೀಯ ಮಟ್ಟದಲ್ಲಿ ನೀಡ್ - ವೆಬ್ಸೈಟ್ಸ್ ಬ್ರಾಂಡ್ ಅನ್ನು ಸೃಷ್ಟಿಸಲು ಇಂದ್ರಶಿಶ್ ಯೋಜನೆ ರೂಪಿಸಿದ್ದಾರೆ.
ಭಾರತ ಅಭಿವೃದ್ಧಿ ಹೊಂದುತ್ತಿರುವ ಮಾರುಕಟ್ಟೆ. ಇತ್ತೀಚೆಗೆ ವಿನೂತನ ಪರಿಕಲ್ಪನೆಗಳನ್ನೂ ಭಾರತದ ಅಪ್ಪಿಕೊಳ್ಳುತ್ತಿದೆ. `ಓಯೋ ರೂಮ್ಸ್', `ವೂಡೂ ಮಬ್ಬಲ್', `ಗ್ರ್ಯಾಬ್ ಹೌಸ್ ಸ್ಕೂಪ್ಸ್' ಸೇರಿದಂತೆ ವಿವಿಧ ಆನ್ಲೈನ್ ಕಂಪನಿಗಳು ವಿಶಿಷ್ಟ ಪರಿಕಲ್ಪನೆಗಳ ಆಧಾರದ ಮೇಲೆ ಬಂಡವಾಳ ಗಿಟ್ಟಿಸಿಕೊಂಡಿವೆ. ತಮ್ಮ ಮೊದಲ ಪರಿಕಲ್ಪನೆಯ ಆ್ಯಪ್ ಬಿಡುಗಡೆಯೊಂದಿಗೆ 2016ರ ವೇಳೆಗೆ ನೀಡ್ - ವೆಬ್ಸೈಟ್ಸ್ ಕೂಡ ಈ ಗುಂಪನ್ನು ಸೇರುವ ನಿರೀಕ್ಷೆಯಲ್ಲಿದೆ.
ಪ್ರಗತಿ ದಾಖಲು
ಭಾರತದಲ್ಲಿ ಮೊದಲು ನಾಲ್ವರು ಸದಸ್ಯರನ್ನೊಳಗೊಂಡಿದ್ದ ನೀಡ್-ವೆಬ್ಸೈಟ್ಸ್ ತಂಡ ಮತ್ತಷ್ಟು ವಿಸ್ತರಿಸಿದ್ದು, 16 ಜನರನ್ನು ಒಳಗೊಂಡಿದೆ. 2016ರ ಆರಂಭದ ವೇಳೆಗೆಲ್ಲಾ ಈ ಸಂಖ್ಯೆಯನ್ನು 30ಕ್ಕೆ ಹೆಚ್ಚಿಸಲು ಇಂದ್ರಶಿಶ್ ಮುಂದಾಗಿದ್ದಾರೆ. ಅತ್ತ ಅಮೆರಿಕದ ಕಚೇರಿಯಲ್ಲಿ ನಾಲ್ವರು ಕೆಲಸ ಮಾಡ್ತಿದ್ದಾರೆ. ಸೇವಾ ವಲಯದಲ್ಲಿ ಪಯಣ ಆರಂಭಿಸುವ ಹಂಬಲ ಇಂದ್ರಶಿಶ್ ಅವರಿಗಿದೆ. ಸಾಫ್ಟ್ವೇರ್ ಹಾಗೂ ಅಪ್ಲಿಕೇಷನ್ ಅಭಿವೃದ್ಧಿಪರಿಸುವತ್ತ ಹೆಚ್ಚಿನ ಗಮನ ಹರಿಸಲು ವಿಭಾಗವೊಂದನ್ನು ತೆರೆಯಲಾಗಿದೆ. 2016ರ ವೇಳೆಗೆ 2 ಮಿಲಿಯನ್ ಡಾಲರ್ ಬಂಡವಾಳದ ಮೂಲಕ ಸಂಸ್ಥೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದೆ. ಸದ್ಯ ನೀಡ್-ವೆಬ್ಸೈಟ್ಸ್ 350 ಗ್ರಾಹಕರನ್ನು ಹೊಂದಿದ್ದು, ಇನ್ನೆರಡು ವರ್ಷಗಳೊಳಗೆ 1000 ಗ್ರಾಹಕರನ್ನು ಹೊಂದಲು ಕಸರತ್ತು ಮಾಡ್ತಾ ಇದೆ. ಸುಮಾರು 5 ಮಿಲಿಯನ್ ಡಾಲರ್ ಬಂಡವಾಳ ಸಂಗ್ರಹಿಸಲು ಕೂಡ ಪ್ರಯತ್ನ ನಡೆಸುತ್ತಿದೆ.
ಸವಾಲುಗಳು
ಮಾರುಕಟ್ಟೆಯಲ್ಲಿ ಪೈಪೋಟಿ ಪ್ರಬಲವಾಗಿದೆ. ಸರಿಯಾದ ಬ್ರಾಂಡಿಂಗ್ ಮತ್ತು ಮಾರ್ಕೆಟಿಂಗ್ ಇಲ್ಲದೇ ಯಾರೂ ಯಶಸ್ವಿಯಾಗಲು ಸಾಧ್ಯವಿಲ್ಲ. ಹಾಗಾಗಿ ತಮ್ಮ ಪಯಣ ನಿಜಕ್ಕೂ ಸವಾಲಿನದ್ದು ಅನ್ನೋದನ್ನು ಇಂದ್ರಶಿಶ್ ಒಪ್ಪಿಕೊಳ್ತಾರೆ. ಸರಿಯಾದ ಹಣಕಾಸು ನಿರ್ವಹಣೆ, ಬೆಳವಣಿಗೆ ದರ ನಿಗದಿ ತಮ್ಮ ಈ ಮಟ್ಟಿನ ಯಶಸ್ಸಿಗೆ ಮೂಲ ಕಾರಣ ಎನ್ನುತ್ತಾರೆ ಇಂದ್ರಶಿಶ್. ಇವರ ಕನಸಿನ ಸಂಸ್ಥೆ ಉದ್ಯಮ ಲೋಕದಲ್ಲಿ ಹೆಜ್ಜೆ ಗುರುತು ಮೂಡಿಸಲಿ ಅನ್ನೋದೇ ಎಲ್ಲರ ಹಾರೈಕೆ.