ಬೀದಿನಾಯಿಗಳ ಪಾಲಿನ “ದೇವರು”- 700ಕ್ಕೂ ಹೆಚ್ಚು ಬೀದಿನಾಯಿಗಳ ಪಾಲಿಗೆ ಆಶ್ರಯದಾತ ಸಾಫ್ಟ್ಎಂಜಿನಿಯರ್..!
ಟೀಮ್ ವೈ.ಎಸ್. ಕನ್ನಡ
ನಾಯಿಗಳು ಅಂದ್ರೆ ಎಲ್ಲರಿಗೂ ಬಲು ಪ್ರೀತಿ. ಮನೆಯಲ್ಲಿರುವ ನಾಯಿಯನ್ನು ಮನೆಯ ಸದಸ್ಯನಂತೆ ನೋಡಿಕೊಳ್ಳುವವರಿದ್ದಾರೆ. ಆದ್ರೆ ಬೀದಿ ನಾಯಿಗಳ ಬಗ್ಗೆ ಯಾರಿಗೂ ಅಷ್ಟಾಗಿ ಪ್ರೀತಿ ಇಲ್ಲ. ಬೀದಿ ನಾಯಿಯನ್ನು ಕಂಡ್ರೆ ಕಲ್ಲು ಹೊಡೆಯುವವರೇ ಹೆಚ್ಚು. ಇಂತಹ ಸಮಾಜದಲ್ಲಿ ಬೀದಿ ನಾಯಿಗಳ ಪಾಲಿಗೆ ಅನ್ನದಾತನಾಗಿ, ವಸತಿದಾತನಾಗಿರುವ ಸಾಫ್ಟ್ ಎಂಜಿನಿಯರ್ ಒಬ್ಬರ ಕಥೆ ಇದು. ರಾಕೇಶ್ ಶುಕ್ಲಾ ಬೆಂಗಳೂರಿನ ಹೊರವಲಯದಲ್ಲಿ ಬರೋಬ್ಬರಿ 735 ಬೀದಿ ನಾಯಿಗಳಿಗೆ ಆಶ್ರಯದಾತರಾಗಿದ್ದಾರೆ.
ರಾಕೇಶ್ ಶುಕ್ಲಾ ಮೊದಲು ದೆಹಲಿಯಲ್ಲಿ ಕೆಲಸ ಮಾಡಿ, ಆಮೇಲೆ ಅಮೆರಿಕಾದಲ್ಲೂ ಕಾರ್ಯ ನಿರ್ವಹಿಸಿದ್ದರು. 10 ವರ್ಷಗಳ ಹಿಂದೆ ಬೆಂಗಳೂರಿಗೆ ಆಗಮಿಸಿದ ರಾಕೇಶ್ ತನ್ನ ಪತ್ನಿಯ ಜೊತೆಗೂಡಿ ತನ್ನದೇ ಒಂದು ಸಾಫ್ಟ್ವೇರ್ ಕಂಪನಿಯನ್ನು ಆರಂಭಿಸಿದ್ರು.
“ ಬದುಕಿನಲ್ಲಿ ದೊಡ್ಡ ದೊಡ್ಡ ಕಾರುಗಳನ್ನು ಖರೀದಿ ಮಾಡಿದ್ದೇನೆ. ದುಬಾರಿ ವಾಚ್ಗಳನ್ನು ಖರೀದಿ ಮಾಡಿ ಫ್ಯಾನ್ಸಿ ಬದುಕನ್ನು ನೋಡಿದ್ದೀನಿ. ಜಗತ್ತಿನ ವಿವಿಧೆಡೆಗೆ ಪ್ರಯಾಣ ಮಾಡಿದ್ದೀನಿ. ಆದ್ರೆ ನನಗೆ ಸಂತೋಷ ಮಾತ್ರ ಸಿಕ್ಕಿರಲಿಲ್ಲ ”
- ರಾಕೇಶ್ ಶುಕ್ಲಾ, ನಾಯಿ ಪ್ರೇಮಿ
45 ವರ್ಷದ ರಾಕೇಶ್ ರನ್ನು ಹಲವು “ ನಾಯಿಗಳ ಪಾಲಿನ ಅಪ್ಪ” ಅಂತಲೇ ಕರೆಯುತ್ತಾರೆ. ರಾಕೇಶ್ ಪಾಲಿಗೆ ನಾಯಿಗಳು ಮಕ್ಕಳಾದ್ರೆ, ರಾಕೇಶ್ ಅವುಗಳಿಗೆ ದೇವರು. ರಾಕೇಶ್ ಮೊದಲಿಗೆ ಸಾಕಿದ್ದು 45 ದಿನದ ಗೋಲ್ಡನ್ ರಿಟ್ರೀವರ್ ಥಳಿಯನ್ನು. ಅದಕ್ಕೆ ರಾಕೇಶ್ ಕಾವ್ಯ ಅನ್ನುವ ಹೆಸರಿಟ್ಟಿದ್ದರು.
“ ನಾನು ಆ ನಾಯಿಮರಿಯನ್ನು ಮನೆಗೆ ತಂದಾಗ ಅದು ಭಯದಿಂದ ಮನೆಯ ಯಾವುದೋ ಮೂಲೆಯಲ್ಲಿ ಅಡಗಿ ಕುಳಿತಿತ್ತು. ಅದಕ್ಕೆ ನಾನು ಕಾವ್ಯ ಅನ್ನುವ ಹೆಸರಿಟ್ಟೆ. ಅದೇ ಹೆಸರಿನಿಂದ ಕರೆದ. ನನ್ನ ಪ್ರೀತಿ ಅದಕ್ಕೆ ಅರ್ಥವಾಯಿತು. ಅದನ್ನು ಮುಟ್ಟಿ ನೇವರಿಸಿದಾಗ ನನಗೆ ಸಂತೋಷವಾಯಿತು. ಕಳೆದುಕೊಂಡಿದ್ದು ಮತ್ತೆ ಸಿಕ್ಕಿದಂತಹ ಅನುಭವವಾಯಿತು.”
- ರಾಕೇಶ್ ಶುಕ್ಲಾ, ನಾಯಿ ಪ್ರೇಮಿ
ಕಾವ್ಯ ರಾಕೇಶ್ ಮನಸ್ಸನ್ನೇ ಬದಲಾಯಿಸಿತು. ರಾಕೇಶ್ ಬೀದಿನಾಯಿಗಳನ್ನು ಸಾಕಲು ಶುರು ಮಾಡಿಕೊಂಡರು. ಮನೆಯಲ್ಲಿ ನಾಯಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗಲು ಆರಂಭಿಸಿತು. ಆರಂಭದಲ್ಲಿ ಹೆಂಡತಿಯಿಂದ ರಾಕೇಶ್ ವಿರೋಧವನ್ನು ಕೂಡ ಅನುಭವಿಸಿದ್ದರು. ಆದ್ರೆ ಸಮಯ ಕಳೆದಂತೆ ಎಲ್ಲವೂ ಬದಲಾಯಿತು. ನಾಯಿಗಳ ಸಂಖ್ಯೆ ಹೆಚ್ಚಾದಂತೆ ಬೆಂಗಳೂರಿನ ಹೊರವಲಯದ ದೊಡ್ಡ ಬಳ್ಳಾಪುರದಲ್ಲಿ ಜಾಗ ಖರೀದಿ ಮಾಡಿ ಅವುಗಳಿಗೆ ವಸತಿ ಕಲ್ಪಿಸಿಕೊಟ್ಟರು.
ಇದನ್ನು ಓದಿ: ದೆಹಲಿಯ ಇಬ್ಬರು ಸಹೋದರರ ವಿಭಿನ್ನ ಕಥೆ- ಹೊಸ ಉದ್ಯಮ, ಹೊಸ ಕನಸು..!
ನಾಯಿಗಳು ಇರುವ ಈ ಜಾಗದಲ್ಲಿ ಎಲ್ಲವೂ ಇದೆ. ನಾಯಿಗಳು ಈಜಬೇಕು ಅಂದಾಗ ಈಜಲು ವ್ಯವಸ್ಥೆ ಇದೆ. ನಾಯಿಗಳನ್ನು ನೋಡೋದಿಕ್ಕಾಗಿಯೇ ಸುಮಾರು 10 ಎಂಪ್ಲಾಯಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಆರಂಭದಲ್ಲಿ ರಾಕೇಶ್ ಬೀದಿ ನಾಯಿಗಳಿಗೆ ಆಫೀಸ್ನಲ್ಲೇ ವಸತಿ ಒದಗಿಸಿದ್ದರು. ಈಗ 5 ನಾಯಿಗಳು ರಾಕೇಶ್ ಮನೆಯಲ್ಲಿದ್ದರೆ, 10 ನಾಯಿಗಳು ಆಫೀಸ್ನಲ್ಲಿವೆ. ಬೆಂಗಳೂರಿನ ಹೊರವಲಯದಲ್ಲಿ ಹಲವು ನಾಯಿಗಳು ಇವೆ.
ನಾಯಿಗಳಿಗಾಗಿಯೇ ರಾಕೇಶ್ ಪ್ರತಿದಿನ ಸುಮಾರು 50 ಸಾವಿರ ರೂಪಾಯಿಗಳನ್ನು ಖರ್ಚು ಮಾಡುತ್ತಿದ್ದಾರೆ. ಈ ಪೈಕಿ ಶೇಕಡಾ 93ರಷ್ಟು ಹಣ ರಾಕೇಶ್ ಸ್ವತಃ ಕೈಯಿಂದಲೇ ಖರ್ಚು ಮಾಡುತ್ತಿದ್ದಾರೆ. ಅಂದಹಾಗೇ ರಾಕೇಶ್ ನಾಯಿ ಪಾರ್ಕ್ ಬಗ್ಗೆ ಸ್ಥಳೀಯರಿಂದ ಹಲವು ವಿರೋಧಗಳನ್ನೂ ಎದುರಿಸಿದ್ದಾರೆ. ಆದ್ರೆ ಇಲ್ಲಿ ತನಕ ನಾಯಿಗಳ ಮೇಲಿರುವ ಪ್ರೀತಿ ಅವರಿಗೆ ಎಲ್ಲಾ ಅಡೆತಡೆಗಳನ್ನು ಮೆಟ್ಟಿ ನಿಲ್ಲಲು ಸಹಾಯ ಮಾಡಿದೆ. ಬೆಂಗಳೂರಿನ ಬ್ಯೂಸಿ ಜೀವನದ ನಡುವೆ ತನ್ನ ಕಾರ್ಯವನ್ನೇ ಮರೆತ ಹಲವರ ಮಧ್ಯೆ ಬೀದಿನಾಯಿಗಳ ಪಾಲಿನ ದೇವರು ರಾಕೇಶ್ ವಿಭಿನ್ನವಾಗಿ ಕಾಣುತ್ತಾರೆ.
1. ಸೌಂದರ್ಯ ಇದ್ದರೆ ಉದ್ಯೋಗಕ್ಕೊಂದು ಬೆಲೆ- ಆತ್ಮವಿಶ್ವಾಸಕ್ಕೆ ಕೈಗನ್ನಡಿ ಹೆಣ್ಣಿನ ಸೌಂದರ್ಯ
2. ಬೈಕ್ ಏರಿ ಮಹಿಳಾಮಣಿಗಳ ಹಿಮಾಲಯ ಸವಾರಿ!
3. ಕೆಲಸದ ಬಗ್ಗೆ ಚಿಂತೆ ಬಿಡಿ- ಜಾಬ್ ಫಾರ್ ಹರ್ ಮೂಲಕ ಉದ್ಯೋಗಕ್ಕೆ ಟ್ರೈ ಮಾಡಿ..!