ನಾಲ್ಕರ ಪೋರ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್

ಗಂಗಾವತಿ ತಾಲ್ಲೂಕಿನ ಕಾರಟಗಿಯ ರೋಹಿತ್ ಲಿಂಗರಾಜ್ ತನ್ನ ಜ್ಞಾಪಕ ಶಕ್ತಿಯ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದು, ಈತನ ಈ ಸಾಧನೆ "ಇಂಡಿಯಾ ಬುಕ್ ಆಫ್ ರೆಕಾರ್ಡ್"ನಲ್ಲಿ ದಾಖಲಾಗಿದೆ‌.

ನಾಲ್ಕರ ಪೋರ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್

Wednesday November 13, 2019,

2 min Read

ಅವನು ನಾಲ್ಕು ವರ್ಷದ ಪುಟ್ಟ ಪೋರ.‌ ಈ ವಯಸ್ಸಿನ ಮಕ್ಕಳೆಲ್ಲಾ ಆಟ ತುಂಟಾಟದಲ್ಲಿ ತೊಡಗಿದರೆ. ಈ ಪೋರನು ತನ್ನ ಜ್ಞಾಪಕ ಶಕ್ತಿಯ ಮೂಲಕ ಎಲ್ಲರಲ್ಲೂ ಅಚ್ಚರಿಯನ್ನಂಟು‌ ಮಾಡುತ್ತಿದ್ದಾ‌ನೆ.


ಕೊಪ್ಪಳ‌ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಕಾರಟಗಿಯ ಲಿಂಗರಾಜ್ ಬುಕನಟ್ಟಿ ಹಾಗೂ ಜ್ಯೋತಿ ಅವರ ಮಗನಾದ ರೋಹಿತ್ ಬುಕನಟ್ಟಿಯೇ ಆ ಪೋರ.


ಮಾರ್ಚ್ 12, 2015 ರಂದು ಜನಿಸಿದ ರೋಹಿತ್ ಅಂಬೆಗಾಲಿಡುವಾಗಿನಿಂದಲೇ ಚುರುಕಾಗಿದ್ದನು. ಎರಡುವರೆ ವರ್ಷಕ್ಕೆ‌‌ ಮಾತನಾಡಲು ಕಲಿತ ರೋಹಿತ್ ಮೂರನೇ ವಯಸ್ಸಿಗೆ ಸ್ಪಷ್ಟವಾಗಿ ಅ ಆ ಅಕ್ಷರಮಾಲೆಯನ್ನು ಹಾಗೂ ಚಿತ್ರಗಳನ್ನು ಗುರುತಿಸುತ್ತಿದ್ದನು.


ಇಂಡಿಯಾ ಬುಕ್ ಆಫ್ ರೆಕಾರ್ಡ್ ನ ಪ್ರಮಾಣಪತ್ರದೊಂದಿಗೆ ರೋಹಿತ್ (ಚಿತ್ರಕೃಪೆ: ಲಿಂಗರಾಜ್ ಬುಕನಟ್ಟಿ)

ಚಿಕ್ಕ ವಯಸ್ಸಿನಲ್ಲಿ ಇವನ ನೆನಪಿನ ಶಕ್ತಿಯನ್ನು ಕಂಡ ರೋಹಿತ್ ಅವರ ತಂದೆ‌‌‌ ಲಿಂಗರಾಜ್ ಬುಕನಟ್ಟಿ ಇವನಿಗೆ ಹೊಸದನ್ನು, ತಾವು ನೋಡಿರುವುದನ್ನು ಹೇಳಿ ಕೊಡಲಾರಂಭಿಸಿದರು.


ಇದರ ಕುರಿತಾಗಿ ಯುವರ್ ಸ್ಟೋರಿಯೊಂದಿಗೆ ಮಾತನಾಡಿದ, ರೋಹಿತ್ ತಂದೆ‌ ಲಿಂಗರಾಜ್ ಬುಕನಟ್ಟಿ ಅವರು,


"ಅವನು ತುಂಬಾ ಕುತೂಹಲ ಹೊಂದಿದ್ದ, ತಾನು ಕಂಡಿದ್ದನ್ನೆಲ್ಲಾ‌ ನೋಡಿ ಜ್ಞಾಪಕ ಇಟ್ಟುಕೊಳ್ಳುತ್ತಾನೆ. ನಾನು ಎಲ್ಲಾದರೂ ಆಚೆ ಹೋಗುವಾಗ ನನ್ನ ಮಗನನ್ನು ಜೊತೆಗೆ ಕರೆದುಕೊಂಡು ಹೋಗುತ್ತಿದ್ದೆ. ಅಲ್ಲಿ ವಸ್ತುಗಳನ್ನು, ಸ್ಥಳಗಳನ್ನು ತೋರಿಸಿ ಅದರ ಕುರಿತಾಗಿ ಹೇಳುತ್ತಿದ್ದೆ. ಅದನ್ನು ಅವನು ಜ್ಞಾಪಕದಲ್ಲಿಟ್ಟುಕೊಂಡು ಮತ್ತೆ ಆ ಕಡೆಗೆ ಹೋದಾಗ ಅದನ್ನು ಮರೆಯದೆ ಹೇಳುತ್ತಿದ್ದನು".

ಹೀಗೆ ಒಂದು ದಿನ ನಿಂಗರಾಜ್ ಅವರು ಖಾಲಿ ಕೂತಾಗ, ತಮ್ಮ‌ ಮಗನೊಂದಿಗೆ ಮಾತಾನಾಡುತ್ತ ಕೆಲವು ಹಣ್ಣುಗಳ ಹೆಸರು, ರಾಜ್ಯದ ಹೆಸರು, ತಾಲ್ಲೂಕು ಜಿಲ್ಲಾ ಕೇಂದ್ರದ ಹೆಸರು ಮುಂತಾದವುಗಳನ್ನು ಕೇಳುತ್ತಾ ಹೋಗುತ್ತಾರೆ. ಅದಕ್ಕೆ ರೋಹಿತ್ ಪಟಪಟನೆ ತನ್ನ ತೊದಲು‌ ನುಡಿಯಲ್ಲಿ ಉತ್ತರ ನೀಡುತ್ತಾ‌ ಹೋಗುತ್ತಾನೆ. ಇದನ್ನು ವಿಡಿಯೋ ಮಾಡಿ ಹಾಗೇ ತಮ್ಮ ಸ್ನೇಹಿತರಿಗೆ ಕಳಿಸಿದಾಗ ಅಲ್ಲಿ ಎಲ್ಲರೂ ಇದಕ್ಕೆ‌ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಾರೆ. ಹೀಗೆ ಆ ವಿಡಿಯೋ ಒಬ್ಬರಿಂದ ಮತ್ತೊಬ್ಬರಿಗೆ ಹರಿದಾಡುತ್ತಾ ಎಲ್ಲೆಡೆ ವೈರಲ್ ಆಗುತ್ತದೆ. ಟ್ರೋಲ್ ಪೇಜ್ಗಳಲ್ಲಿಯೂ ಇದು ಶೇರ್ ಆಗಿ ಲಕ್ಷಗಟ್ಟಲೆ ಜನರು ಈ ವಿಡಿಯೋವನ್ನು ನೋಡುತ್ತಾರೆ.


"ನಾನು ಹಾಗೇ ವಿಡಿಯೋ ಮಾಡಿದ್ದು ಈ ಮಟ್ಟಿಗೆ ವೈರಲ್ ಆಗುತ್ತೆ ಎಂದುಕೊಂಡಿರಲಿಲ್ಲ. ಇದರಿಂದ ನನ್ನ ಮಗನನ್ನು ಮತ್ತಷ್ಟು ಜನರು ಗುರುತಿಸುವಂತಾಯ್ತು. ಉ.ಕ. ಸ್ಪೇಷಲ್, ಕರ್ನಾಟಕ ವಿಶೇಷ, ಬೆಳಗಾವಿ, ಕನ್ನಡವೇ ಸತ್ಯ ಕನ್ನಡವೇ ನಿತ್ಯ ಮುಂತಾದ ಪೇಜ್ಗಳಲ್ಲಿ ಈ ವಿಡಿಯೋ ಬಂತು. ಇದು ಫೇಸ್‌ಬುಕ್‌ ಅಲ್ಲಿ ವೈರಲ್ ಆಗಿದ್ದು ತುಂಬಾ ಖುಷಿ ತಂದಿದೆ" ಎಂದು ನಿಂಗರಾಜ್ ತಮ್ಮ ಸಂತೋಷವನ್ನು ವ್ಯಕ್ತಪಡಿಸುತ್ತಾರೆ.


ಇದನ್ನು ಕಂಡ ನಿಂಗರಾಜ್ ಅವರು ತಮ್ಮ ಸ್ನೇಹಿತರಾದ ನವೀನರವರ ಸಹಕಾರದೊಂದಿಗೆ "ಇಂಡಿಯಾ ಬುಕ್ ಆಫ್ ರೆಕಾರ್ಡ್" ಗೆ ತಮ್ಮ ಮಗನ ಸಾಧನೆಯನ್ನು ಸೇರಿಸಲು ಪ್ರಯತ್ನಿಸುತ್ತಾರೆ‌. ಅದರಂತೆ ಈ ವರ್ಷ ಆಗಸ್ಟ್ 7 ಕ್ಕೆ ಅನುಮೋದನೆ ಸಿಕ್ಕಿತು. ಅಕ್ಟೋಬರ್ ಒಂದಕ್ಕೆ ಕೊರಿಯರ್ ಮೂಲಕ ಪ್ರಮಾಣ ಪತ್ರ ದೊರಕಿತು. ಈ ವರ್ಷ 'ಲಿಮ್ಕಾ‌ ಬುಕ್ ಆಫ್ ರೆಕಾರ್ಡ್'ಗೆ ಪ್ರಯತ್ನಿಸುವ ಆಸೆ ಇದೆ ಎನ್ನುತ್ತಾರೆ.


"ಇದರಿಂದ ಊರಿನಲ್ಲಿ ಸುಮಾರು ಜನರು ರೋಹಿತ್ ನನ್ನು ಹೆಚ್ಚಾಗಿ ಗಮನಿಸಲು ಪ್ರಾರಂಭಿಸಿದರು. ನಂತರ ನಾನು ಅವನಿಗೆ ರಾಜ್ಯಗಳ ಹೆಸರು, ಜಿಲ್ಲೆಗಳ ಹೆಸರು, ರಾಜಧಾನಿ, ಇಂಗ್ಲೀಷ್ ಶಬ್ದಗಳು ಮುಂತಾದವುಗಳನ್ನು ಮತ್ತಷ್ಟು ಹೇಳಿ ಕೊಡಲು ಆರಂಭಿಸಿದೆ" ಎಂದೆನ್ನುತ್ತಾರೆ ನಿಂಗರಾಜ್ ಅವರು‌.


ಇದುವರೆಗೂ ರೋಹಿತ್ ನೂರಕ್ಕೂ ಹೆಚ್ಚು ಜನರ ಫೋಟೋ ತೋರಿಸಿದರೂ ಅವರನ್ನು ಗುರುತಿಸಿ, ಅವರ ಹೆಸರು ಹೇಳುತ್ತಾನೆ. ತಾನು ಗಮನವಿಟ್ಟು ಕೇಳಿದನ್ನು ಪಟಪಟನೆ ಮತ್ತೆ ಅದರ ಕುರಿತಾಗಿ ಹೇಳುತ್ತಾನೆ. ಇವನ ಈ ಪ್ರತಿಭೆ ಮತ್ತಷ್ಟು ಹೆಚ್ಚಲಿ ಎಂದು ನಾವು ಹಾರೈಸೋಣ.