ಕಾಶ್ಮೀರದಿಂದ ಅಮೆರಿಕಾದವರೆಗೆ : ಕಣಿವೆ ರಾಜ್ಯದ ಮಹಿಳಾ ಬ್ಯಾಸ್ಕೆಟ್ ಬಾಲ್ ಆಟಗಾರ್ತಿಯ ಸ್ಪೂರ್ತಿಯ ಕಥೆ

ಅಪಘಾತದಲ್ಲಿ ಬೆನ್ನುಮೂಳೆಗೆ ಗಾಯವಾಗಿ ತಮ್ಮ ಹದಿನೈದನೆಯ ವರ್ಷಕ್ಕೆ ಗಾಲಿ ಕುರ್ಚಿಗೆ ಸೀಮಿತರಾಗಿದ್ದ ಇನ್ಶಾ ಬಶೀರ್, ಇದರ ಹೊರತಾಗಿಯೂ ಬ್ಯಾಸ್ಕೆಟ್ ಬಾಲ್ ಬಗೆಗಿನ ತಮ್ಮ ಪ್ರೀತಿಗಾಗಿ, 2017ರಲ್ಲಿ ರಾಷ್ಟ್ರ ಮಟ್ಟದ ವೀಲ್ ಚೇರ್ ಬ್ಯಾಸ್ಕೆಟ್ ಬಾಲ್ ಸ್ಪರ್ಧೆಯಲ್ಲಿ ಭಾಗವಹಿಸಿದರು. ಈಗ ಯುಎಸ್ ನ ಸ್ಪೋರ್ಟ್ಸ್ ವಿಸಿಟರ್ ಪ್ರೊಗ್ರಾಂ ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ

ಕಾಶ್ಮೀರದಿಂದ ಅಮೆರಿಕಾದವರೆಗೆ : ಕಣಿವೆ ರಾಜ್ಯದ ಮಹಿಳಾ ಬ್ಯಾಸ್ಕೆಟ್ ಬಾಲ್ ಆಟಗಾರ್ತಿಯ ಸ್ಪೂರ್ತಿಯ ಕಥೆ

Thursday August 08, 2019,

2 min Read

ಭಾರತದಲ್ಲಿ ಹಲವಾರು ವಿಕಲಚೇತನ ಕ್ರೀಡಾಪಟುಗಳಿದ್ದು, ಅವರೆಲ್ಲ ವಿವಿಧ ಕ್ರೀಡೆಗಳಲ್ಲಿ ತಮ್ಮ ಸ್ಥಾನ ಗಳಿಸಿದ್ದಾರೆ. ಅವರಲ್ಲಿ ಒಬ್ಬರು 24 ವರ್ಷದ, ಜಮ್ಮು ಕಾಶ್ಮೀರದ ಮೊದಲ ಮಹಿಳಾ ವೀಲ್ಚೇರ್ ಬ್ಯಾಸ್ಕೆಟ್ ಬಾಲ್ ಆಟಗಾರ್ತಿ ಇನ್ಶಾ ಬಶೀರ್.


ಅಪಘಾತದಲ್ಲಿ ಬೆನ್ನುಮೂಳೆಗೆ ಗಾಯವಾಗಿ ತನ್ನ ಹದಿನೈದನೆಯ ವರ್ಷಕ್ಕೆ ಗಾಲಿ ಕುರ್ಚಿಗೆ ಸೀಮಿತರಾಗಿದ್ದ ಇನ್ಶಾ ಬಶೀರ್, ವರ್ಷದ ಮುಂಚೆ ತೀವ್ರ ಹೊಟ್ಟೆನೋವಿಗೆ ಕಾರಣವಾದ ಅಲ್ಸರ್ ನಿಂದಾಗಿ ಕೆಮ್ಮಿದರೆ ಬಾಯಲ್ಲಿ ರಕ್ತ ಬರುತ್ತಿತ್ತು, ಆಗ ಆಕೆಗೆ ಇನ್ನು ಹದಿನಾಲ್ಕು ವರ್ಷ.


ಕ

ಇನ್ಶಾ ಬಶೀರ್ (ಚಿತ್ರ: ಶೀ ದಿ ಪೀಪಲ್)


ಸರಿಯಾದ ವೈದ್ಯಕೀಯ ಸೌಲಭ್ಯವೂ ಇಲ್ಲದ ಬುದ್ಗಾಮ್ ಜಿಲ್ಲೆಯಿಂದ ಬಂದಿರುವ ಇನ್ಶಾ, ದಿ ಲಾಜಿಕಲ್ ಇಂಡಿಯನ್ ನೊಂದಿಗೆ ಮಾತನಾಡುತ್ತಾ,


"ಈ ಘಟನೆ ನಡೆದಾಗ ನಾನು ಹನ್ನೆರಡನೆಯ ತರಗತಿಯಲ್ಲಿದ್ದೆ. ಬೆನ್ನುಮೂಳೆಗೆ ಸಂಬಂಧಿಸಿದ ಒಂದು ಶಸ್ತ್ರಚಿಕಿತ್ಸೆಯ ಕಾರಣದಿಂದಾಗಿ ನಾನು ವೀಲ್‌‌ಚೇರ್ ಗೆ ಅವಲಂಬಿತಳಾದೆ. ಸರಿಯಾದ ವೈದ್ಯಕೀಯ ಚಿಕಿತ್ಸಾ ಸೌಲಭ್ಯವೂ ಇಲ್ಲದ ಬುದ್ಗಾಮ್ ಇದನ್ನು ಮತ್ತಷ್ಟು ಕಷ್ಟಗೊಳಿಸಿತು‌ ಹಾಗೂ ನಾನು ಒಳಾಂಗಣಕ್ಕೆ ಸೀಮಿತಳಾದೆ. ಆದರೆ ನನ್ನ ಕುಟುಂಬದ ನಿರಂತರ ಬೆಂಬಲ ನನ್ನನ್ನು ಅದರಿಂದ ಹೊರಬರುವಂತೆ ಮಾಡಿತು."ಎಂದರು.


ಇನ್ಶಾ ತನ್ನ ಬಾಲ್ಯದಿಂದಲೂ ಕಟ್ಟಾ ಬ್ಯಾಸ್ಕೆಟ್‌ಬಾಲ್‌ ಪ್ರೇಮಿ. ಆದರೆ ಆಕೆಗೆ ಕ್ರೀಡೆಯನ್ನು ಆರಿಸಿಕೊಳ್ಳುವುದಕ್ಕೆ ಪ್ರೇರಣೆಯಾಗಿದ್ದು ತನ್ನಂತ ಅಂಗವೈಕಲ್ಯವಿರುವವರು ಸಹ ಕ್ರೀಡೆಯನ್ನು ಆಡುತ್ತಾರೆ ಎಂಬುದು.


ಶ್ರೀನಗರದ ಶಫ್ಕಾತ್ ಪುನರ್ವಸತಿ ಕೇಂದ್ರಕ್ಕೆ ಭೇಟಿ ನೀಡಿದಾಗ ಇದನ್ನು ಕಂಡ ಇನ್ಶಾ ಅಂದಿನಿಂದ ಎಂದೂ ಹಿಂತಿರುಗಿ ನೋಡಲಿಲ್ಲ. ಇಡೀ ಕಣಿವೆಯಲ್ಲಿ ಯಾವ ಮಹಿಳಾ ಆಟಗಾರ್ತಿ ಇಲ್ಲದಿದ್ದರೂ ಆಕೆ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಅಭ್ಯಾಸ ಮಾಡತೊಡಗಿದರು ಹಾಗೂ ಪುರುಷರ ತಂಡದೊಂದಿಗೂ ಆಡ ತೊಡಗಿದರು.


ಕ

ಇತರ ಆಟಗಾರರೊಂದಿಗೆ ಆಟವಾಡುತ್ತಿರುವ ಇನ್ಶಾ ಬಶೀರ್.(ಚಿತ್ರ : ದಿ ಲಾಜಿಕಲ್ ಇಂಡಿಯನ್)


ಶೀ ದಿ ಪೀಪಲ್ ನೊಂದಿಗೆ ಮಾತನಾಡುತ್ತಾ, ಆಕೆ,


"ನಾನು ನನ್ನಂತಹ ಹಾಗೂ ನನಗಿಂತ ಅತಿಕೆಟ್ಟ ಸ್ಥಿತಿಯಲ್ಲಿರುವವರನ್ನು ನೋಡಿದೆ. ಅವರ ಜೊತೆಗೆ ಸೇರಿಕೊಳ್ಳುವಂತೆ ಅವರು ನನಗೆ ಸೂಚಿಸಿದರು. ಮೊದಲು ನನಗೆ ಆಡಲಿಕ್ಕೆ ಆಗೋಲ್ಲ ಅನಿಸಿತ್ತು. ಆದರೆ ನಂತರದಲ್ಲಿ ನನಗೆ ಸಾಧ್ಯವಾಯಿತು ಹಾಗೂ ಈ ಕ್ರೀಡೆ ಆಸಕ್ತಿದಾಯಕವಾಗಿದೆ ಮತ್ತು ವೀಲ್ ಚೇರ್ ಮೇಲೆ ಕೂತು ಆಡುವುದಕ್ಕೆ ಅನುಕೂಲಕರವಾಗಿದೆ ಎಂದನಿಸಿತು.


2017 ರಲ್ಲಿ ಇನ್ಶಾ ರಾಷ್ಟ್ರೀಯ ಮಟ್ಟದ 'ರೆಸ್ಟ್ ಆಫ್ ಇಂಡಿಯಾ' ಎಂಬ ತಂಡಕ್ಕೆ ಆಯ್ಕೆಯಾದರು.


ಆದರೆ ಆಕೆಗೆ ತನ್ನ ಅವಿರತ ಶ್ರಮ ಹಾಗೂ ಕಷ್ಟಕರವಾದ ಕೆಲಸದ ಪರಿಣಾಮವಾಗಿ ತಾನು ಅಮೆರಿಕದ ಉತ್ತರ ಕೆರೊಲಿನಾದಲ್ಲಿ ನಡೆಯಲಿರುವ ಸ್ಪೋರ್ಟ್ಸ್ ವಿಸಿಟರ್ಸ್ ಪ್ರೊಗ್ರಾಂ 2019 ರಲ್ಲಿ ಭಾಗವಹಿಸಲು ಯುಎಸ್ ರಾಯಭಾರಿ ಕಚೇರಿ ಇಂದ ಆಹ್ವಾನ ಬರಬಹುದು ಎಂಬ ಸಣ್ಣ ಸುಳಿವೂ ಇರಲಿಲ್ಲ.


ಕ

ಪುರುಷರ ಬ್ಯಾಸ್ಕೆಟ್‌ಬಾಲ್‌ ತಂಡದೊಂದಿಗೆ ಇನ್ಶಾ(‌ಚಿತ್ರ : ದಿ ಲಾಜಿಕಲ್ ಇಂಡಿಯನ್)


ಇತರ ಕ್ರೀಡಾಪಟುಗಳಂತೆ ಇನ್ಶಾ ಸಹ ಪ್ರತಿನಿತ್ಯ ಜಿಮ್ ಗೆ ಹೋಗುತ್ತಾರೆ. ಈಗ, ಅವರ ಏಕೈಕ ಗುರಿ ಮಹಿಳೆಯರಿಗಾಗಿ ಭಾರತದ ಕ್ರೀಡಾ ವಲಯದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರುವುದಾಗಿದೆ.


ಎಂದು ಶೀ ದಿ ಪೀಪಲ್ ವರದಿ ಮಾಡಿದೆ.