ಆಭರಣಗಳ ತ್ಯಾಜ್ಯದಿಂದ ಗಣೇಶ ತಯಾರಿಸಿ ಪರಿಸರ ಸ್ನೇಹಿ ಚತುರ್ಥಿಯನ್ನು ಪ್ರೋತ್ಸಾಹಿಸುತ್ತಿರುವ ಸಾಮಾಜಿಕ ಉದ್ಯಮ

ಆಭರಣಗಳ ತ್ಯಾಜ್ಯದಿಂದ ಗಣೇಶ ತಯಾರಿಸಿ ಪರಿಸರ ಸ್ನೇಹಿ ಚತುರ್ಥಿಯನ್ನು ಪ್ರೋತ್ಸಾಹಿಸುತ್ತಿರುವ ಸಾಮಾಜಿಕ ಉದ್ಯಮ

Monday September 02, 2019,

2 min Read

ಸಾಮಾನ್ಯವಾಗಿ ಗಣೇಶನ ಚತುರ್ಥಿಯಲ್ಲಿ ಗಣೇಶನ ವಿಗ್ರಹಗಳನ್ನು ಆಡಂಬರದಿಂದ ಆಹ್ವಾನಿಸಿ ಕೊನೆಗೆ ಗೊತ್ತುಪಡಿಸಿದ ದಿನ ನೀರಿನಲ್ಲಿ ವಿಸರ್ಜಿಸುವ ಪದ್ಧತಿ ಇದೆ. ಆದರೆ, ನಮಗೆ ಗೊತ್ತಿದ್ದರೂ ಕಡೆಗಣಿಸುವ ವಿಚಾರವೆಂದರೆ ಗಣೇಶನ ಮೂರ್ತಿಗಳು ಪ್ಲಾಸ್ಟರ್ ಆಫ್ ಪ್ಯಾರೀಸ್ (ಪಿಓಪಿ) ಎಂಬ ವಸ್ತುವಿನಿಂದ ಮಾಡಲ್ಪಟ್ಟಿದ್ದು, ಅವುಗಳ ವಿಸರ್ಜನೆಯ ನಂತರ ಜಲ ಪರಿಸರ ವ್ಯವಸ್ಥೆಗೆ ಬಹಳಷ್ಟು ಹಾನಿಯನ್ನು ಉಂಟುಮಾಡುತ್ತವೆ.


'ಹಸಿರು' ಗಣೇಶ ಚತುರ್ಥಿಯನ್ನು ಆಚರಿಸುವುದು ಜನಪ್ರಿಯವಾಗುತ್ತಿದ್ದಂತೆ ಬಹುಶಃ ಜನರು ಮಣ್ಣಿನ ಹಾಗೂ ರಾಸಾಯನಿಕ ಬಣ್ಣರಹಿತ ಗಣೇಶನನ್ನು ಪೂಜಿಸುವುದನ್ನು ರೂಢಿಸಿಕೊಂಡಿದ್ದರೂ, ಹಸಿರು ಚತುರ್ಥಿಗಾಗಿ ಇನ್ನು ಹೆಚ್ಚಿನದನ್ನು ಮಾಡಬೇಕಾಗಿದೆ ಎಂಬುದನ್ನು ತಿಳಿಯಬೇಕು.


ಡಾ.ಬಿನಿಶ್ ದೇಸಾಯಿ ಅವರ ಪರಿಸರ ಸ್ನೇಹಿ ಉತ್ಪನ್ನಗಳೊಂದಿಗೆ (ಚಿತ್ರ: ಎನ್‌ಡಿಟಿವಿ)


ಹಸಿರು ಸ್ನೇಹಿ ಪರಿಹಾರಗಳನ್ನು ಪ್ರೋತ್ಸಾಹಿಸುತ್ತಿರುವ ಗುಜರಾತಿನ 26 ವರ್ಷದ ಸಾಮಾಜಿಕ ಉದ್ಯಮಿ ಬಿನೇಶ್ ದೇಸಾಯಿ ಎಂಬುವವರು ಫ್ಯಾಷನ್ ಆಭರಣಗಳ ತ್ಯಾಜ್ಯದಿಂದ ಪರಿಸರ ಗಣೇಶನ ಮೂರ್ತಿಗಳನ್ನು ತಯಾರಿಸುತ್ತಿದ್ದಾರೆ.


ಇದು ಹೇಗೆ ಸಾಧ್ಯವಾಯಿತು?


ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ಪರಿಸರ ಎಕೊ ಎಲೆಕ್ಟ್ರಿಕ್ ಟೆಕ್ನಾಲಜಿ ಸಂಸ್ಥಾಪಕರೂ ಸಹ ಆದ ಬಿನೇಶ್, ʼಕೃತಕ ಆಭರಣಗಳ ತಯಾರಿಕೆಯಲ್ಲಿ ಬಳಸುವ ಗಾಜಿನ ಮಣಿಗಳನ್ನು ಉಜ್ಜಲಾಗುತ್ತದೆ. ಇಲ್ಲಿ ಉಳಿದ ಪುಡಿಗಳು ಮರುಬಳಕೆ ಮಾಡಲು ಅಸಾಧ್ಯ. ಇಂತಹ ತ್ಯಾಜ್ಯಗಳನ್ನು ಆಭರಣ ತಯಾರಕರು ಬಿಸಾಡುತ್ತಾರೆ. ನಂತರ ಅವುಗಳು ಭೂಮಿಯೊಳಗೆ ಹೂತುಹೋಗುತ್ತವೆ


"ಈ ತ್ಯಾಜ್ಯವನ್ನು ಭೂಮಿಯೊಳಗೆ ಹುದುಗಿ ಹೋಗುವುದನ್ನು ತಡೆಯಲು ಮತ್ತು ಅದಕ್ಕೆ ಹೊಸ ಜೀವವನ್ನು ನೀಡಲು, ನಾವು ಅದನ್ನು ಪರಿಸರ ಗಣೇಶ ತಯಾರಿಕೆಯಲ್ಲಿ ಬಳಸಲು ನಿರ್ಧರಿಸಿದ್ದೇವೆ. ನಾವು ಆಭರಣ ತ್ಯಾಜ್ಯವನ್ನು ಸಂಗ್ರಹಿಸಿ, ತ್ಯಾಜ್ಯವನ್ನು ಬೈಂಡ್ ಮಾಡಿ ಅದನ್ನು ವಿಗ್ರಹದ ಆಕಾರವನ್ನು ನೀಡಲು ಬೈಂಡರ್ ಗಳನ್ನು ಉಪಯೋಗಿಸುತ್ತೇವೆ‌. ಕೆಂಪು, ಹಳದಿ ಮತ್ತು ತಿಳಿ ನೇರಳೆ ಮೂರು ಬಣ್ಣಗಳಿಂದ ವಿಗ್ರಹಕ್ಕೆ ಪೇಂಟ್ ಮಾಡಲಾಗುತ್ತದೆ. ಎಲ್ಲಾ ಮೂರು ಬಣ್ಣಗಳು ಹೂವುಗಳಿಂದ ತಯಾರಿಸಿರುವುದರಿಂದ ಅವು ಪರಿಸರ ಸ್ನೇಹಿಯಾಗಿರುತ್ತವೆ. ಸಂಪೂರ್ಣ ವಿಗ್ರಹವನ್ನು ಪರಿಸರ ಸ್ನೇಹಿ ತ್ಯಾಜ್ಯದಿಂದ ತಯಾರಿಸಲಾಗುತ್ತದೆ” ಎಂದರು.


ವಿಗ್ರಹವನ್ನು ತ್ಯಾಜ್ಯದಿಂದ ತಯಾರಿಸುವುದು ಮಾತ್ರವಲ್ಲದೇ ವಿಗ್ರಹವನ್ನು ತರುವುದರಿಂದ ಮುಳುಗಿಸುವವರೆಗಿನ ಸಂಪೂರ್ಣ ವಿಧಾನವು ಪರಿಸರ ಸ್ನೇಹಿಯಾಗಿದೆ. ಇಡೀ ಆಚರಣೆಯನ್ನು ನಾಲ್ಕು ಹಂತಗಳಾಗಿ ವಿಂಗಡಿಸಲಾಗಿದೆ, ಮನೆಗೆತರುವುದು, ವಿಸರ್ಜನೆ (ವಿಗ್ರಹವನ್ನು ಮುಳುಗಿಸುವುದು), ಮರುಪಡೆಯುವಿಕೆ ಮತ್ತು ಪುನರಾವರ್ತಿಸುವುದು. ಬಿನೀಶ್ ಅವರ ಪ್ರಕಾರ, ಅವರ ಪರಿಸರ ಗಣೇಶವು ವಿಸರ್ಜನೆಯ ಬ್ಯಾಗ್ ನೊಂದಿಗೆ ಬರುತ್ತದೆ ಹಾಗೂ ಮಾಲಿನ್ಯವನ್ನು ತಪ್ಪಿಸಲು ವಿಗ್ರಹವನ್ನು ನದಿಯ ಬದಲು ನೀರಿನಿಂದ ತುಂಬಿದ ಟಬ್‌ನಲ್ಲಿ ಮುಳುಗಿಸಬಹುದು.


ಗಣೇಶ ವಿಗ್ರಹದ ತಯಾರಿಕೆ (ಚಿತ್ರ ಕೃಪೆ : ಎನ್‌ಡಿಟಿವಿ)

ವಿಗ್ರಹವನ್ನು ವಿಸರ್ಜನೆ ಮಾಡಿದಾಗ ಬ್ಯಾಗ್‌ನಲ್ಲಿ ಕರಗದೇ ಇರುವ ವಸ್ತುಗಳನ್ನು ಪ್ಯಾಕ್ ಮಾಡಿ ಅದನ್ನು ಇವರಿಗೆ ಕಳುಹಿಸಬಹುದು. ವಿಗ್ರಹವನ್ನು ಪುನಃ ಪಡೆದ ನಂತರ, ತಂಡದ ಪುನರಾವರ್ತನೆಯ ಕಾರ್ಯ ಪ್ರಾರಂಭವಾಗುತ್ತದೆ, ಕಳುಹಿಸಿದ ವಿಗ್ರಹದ ವಸ್ತುಗಳನ್ನು ಸ್ಮರಣೀಯ ರೂಪವಾಗಿ ಪರಿವರ್ತಿಸಿ ಬಳಕೆದಾರರಿಗೆ ಕಳುಹಿಸಲಾಗುತ್ತದೆ. ಇದರ ಬೆಲೆ 1,800 ರಿಂದ 12,000 ರೂಗಳವರೆಗೆ ಇರುತ್ತದೆ ಮತ್ತು ಮುಂದಿನ ವರ್ಷದಿಂದ ಪರಿಸರ ಗಣೇಶ ಲಭ್ಯವಿರುತ್ತದೆ.


ಪರಿಸರ ಸ್ನೇಹಿ ಗಣೇಶ ಮಾತ್ರವಲ್ಲದೇ ಬಿನೇಶ್ ಸಕ್ರಿಯವಾಗಿ ತ್ಯಾಜ್ಯ ಯೋಧನಾಗಿದ್ದು, ಮರುಬಳಕೆಯ ತ್ಯಾಜ್ಯದಿಂದ ತಯಾರಿಸಿದ ಪೀಠೋಪಕರಣಗಳನ್ನು ಕೂಡ ತಯಾರಿಸುತ್ತಾರೆ.


ಅಲ್ಲದೇ, ಅವರ ಗುಜರಾತ್ ಮೂಲದ ಕಂಪನಿಯು 15 ರೀತಿಯ ಉಳಿಕೆ ವಸ್ತುಗಳಿಂದ ಗಡಿಯಾರಗಳು ಮತ್ತು ದೀಪಗಳಂತಹ ಸಣ್ಣ ಉತ್ಪನ್ನಗಳನ್ನು ಸಹ ಉತ್ಪಾದಿಸುತ್ತದೆ. ಅವರ ಕಚೇರಿಯಲ್ಲಿರುವ ಮೇಜುಗಳನ್ನು ಜವಳಿ, ಮಾನವ ಕೂದಲು ಮತ್ತು ಎಫ್ಲುಯೆಂಟ್ ಟ್ರೀಟ್ಮೆಂಟ್ ಪ್ಲಾಂಟ್ (ಇಟಿಪಿ) ತ್ಯಾಜ್ಯದಿಂದ ತಯಾರಿಸಲಾಗುತ್ತದೆ, ಅಲ್ಲದೇ ನೆಲವನ್ನು ಕಾಗದ ಮತ್ತು ಜವಳಿ ಗಿರಣಿಗಳಿಂದ ಉತ್ಪತ್ತಿಯಾಗುವ ಉಳಿಕೆಗಳಿಂದ ತಯಾರಿಸಲಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.


ಇಲ್ಲಿಯವರೆಗೆ, ಬಿನೇಶ್ 1,780 ಟನ್ ತ್ಯಾಜ್ಯವನ್ನು ಮರುಬಳಕೆ ಮಾಡಿದ್ದು, ಇದರಿಂದ 9,000 ಗೃಹೋಪಯೋಗಿ ಉಪಕರಣಗಳನ್ನು ತಯಾರಿಸಲಾಗಿದೆ.

"ನಾವೆಲ್ಲರೂ ಸುಸ್ಥಿರ ಜವಾಬ್ದಾರಿಯತ್ತ ಕೆಲಸ ಮಾಡಬೇಕೆಂದರೆ ನಾವು ಹಬ್ಬಗಳನ್ನು ಪರಿಸರ ಸ್ನೇಹಿ ರೀತಿಯಲ್ಲಿ ಆಚರಿಸಬೇಕು. ಏಕೆಂದರೆ ಅದು ಪ್ರಕೃತಿ ಮತ್ತು ತಾಯಿ ಭೂಮಿಗೆ ಮಾಡುವ ನಮ್ಮ ದೊಡ್ಡ ಆರಾಧನೆಯಾಗಿದೆ" ಎಂದು ಬಿನೀಶ್ ಮಾಧ್ಯಮಕ್ಕೆ ತಿಳಿಸಿದರು.