127 ಸೇತುವೆಗಳ ನಿರ್ಮಾತೃ "ಗಿರೀಶ ಭಾರದ್ವಾಜ್"

91 ತೂಗುಸೇತುವೆಗಳನ್ನು ನಿರ್ಮಿಸಿ, ಕರ್ನಾಟಕದ ಹಳ್ಳಿಗಳನ್ನು ತಮ್ಮ ಸಮೀಪ ಇರುವ ನೆರೆಯರಾಜ್ಯಗಳಾದ ಕೇರಳ, ಓಡಿಸ್ಸಾ, ಆಂಧ್ರಪ್ರದೇಶದೊಂದಿಗೆ ಜೋಡಿಸಿದ ಕೀರ್ತಿ ಪದ್ಮಶ್ರೀ ಪುರಸ್ಕೃತ ಭಾರತದ ಬ್ರಿಡ್ಜ್‌-ಮ್ಯಾನ್ “ಗಿರೀಶ್ ಭಾರದ್ವಾಜ್” ರಿಗೆ ಸಲ್ಲುತ್ತದೆ.

127 ಸೇತುವೆಗಳ ನಿರ್ಮಾತೃ "ಗಿರೀಶ ಭಾರದ್ವಾಜ್"

Thursday September 19, 2019,

2 min Read

ಕರ್ನಾಟಕದ ಮೂಲೆ ಮೂಲೆಗಳಲ್ಲಿ ಇರುವ ದೂರದ ಅದೆಷ್ಟೋ ಹಳ್ಳಿಗಳಲ್ಲಿ ಇಂದಿಗೂ ಕಾಳಜಿಯ ವಿಷಯವಾಗಿರುವುದು, ಊರುಗಳನ್ನು ಬೆಸೆಯುವ ತೂಗುಸೇತುವೆಗಳು. ಇಂತಹ 91 ತೂಗುಸೇತುವೆಗಳನ್ನು ನಿರ್ಮಿಸಿ, ನಮ್ಮ ರಾಜ್ಯದ ಹಳ್ಳಿಗಳನ್ನು ತಮ್ಮ ಸಮೀಪ ಇರುವ ನೆರೆಯರಾಜ್ಯಗಳಾದ ಕೇರಳ, ಓಡಿಸ್ಸಾ, ಆಂಧ್ರಪ್ರದೇಶದೊಂದಿಗೆ ಜೋಡಿಸಿದ ಕೀರ್ತಿ ಭಾರತದ ಬ್ರಿಡ್ಜ್‌-ಮ್ಯಾನ್ “ಗಿರೀಶ್ ಭಾರದ್ವಾಜ್” ರಿಗೆ ಸಲ್ಲುತ್ತದೆ.


(ಚಿತ್ರ ಕೃಪೆ:ಟ್ವಿಟರ್)




ಇವರ ಸಾಮಾಜಿಕ ಸೇವೆಯನ್ನು ಗಮನಿಸಿ ಭಾರತ ಸರ್ಕಾರ 2017 ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗಿರೀಶ್ ಭಾರದ್ವಾಜ್ ರವರನ್ನು ಸನ್ಮಾನಿಸಿದೆ. 66 ವಯಸ್ಸಿನ ಇವರು ಮೂಲತಃ ಮಂಗಳೂರಿನ ಸುಳ್ಯತಾಲೂಕಿನ ಒಂದು ಪುಟ್ಟ ಹಳ್ಳಿಯಿಂದ ಬಂದವರು. 'ಪಿ ಈ ಎಸ್' ಇಂಜಿನಿಯರಿಂಗ್ ಕಾಲೇಜು ಮಂಡ್ಯದಲ್ಲಿ ತಮ್ಮ ಇಂಜಿನಿಯರಿಂಗ್ ಪದವಿ ಪೂರೈಸಿದ ನಂತರ ಗಿರೀಶ್ ತಮ್ಮನ್ನು ತೊಡಗಿಸಿಕೊಂಡಿದ್ದು ಸೇತುವೆಗಳ ನಿರ್ಮಾಣದಲ್ಲಿ. ಸರಕಾರದ ನಿರ್ಮಾಣಗಳಿಗೆ ಹೋಲಿಸಿದರೆ ಗಿರೀಶ್ ಸಂಪ್ರದಾಯಕವಾಗಿ ತಗಲುವ ವೆಚ್ಚದಲ್ಲಿ ಕೇವಲ ಹತ್ತನೇ ಒಂದರಷ್ಟು ಹಣವನ್ನು ಬಳಸಿ ಕೇವಲ ಮೂರೇ ತಿಂಗಳಲ್ಲಿ ಸೇತುವೆಯ ಕೆಲಸವನ್ನು ಮುಗಿಸುವಷ್ಟು ನಿಸ್ಸೀಮರು.


ಇವರು ನಿರ್ಮಿಸಿದ 127ಸೇತುವೆಗಳಲ್ಲಿ ಬಹುತೇಕ ಸೇತುವೆಗಳು ಗ್ರಾಮೀಣ ಭಾಗದಲ್ಲಿ ನಿರ್ಮಿಸಲ್ಪಟ್ಟವು. 1975ರಲ್ಲಿ ಇವರು "ರಾಶನಲ್ ಎಂಜಿನಿಯರಿಂಗ್ ಇಂಡಸ್ಟ್ರಿ" ಯನ್ನು ತಮ್ಮ ಊರು ಸುಳ್ಳ್ಯಾದಲ್ಲಿ ಆರಂಭಿಸಿದರು.


ಇಂದು, ಇದನ್ನು ಅಯಸಶಿಲ್ಪಾ ಎಂದು ಮರುನಾಮಕರಣ ಮಾಡಲಾಗಿದ್ದು, ಈಗ 'ಸ್ಟೀಲ್ ಫ್ಯಾಬ್ರಿಕೇಶನ್ʼ ಕಾರ್ಯಾಗಾರವಾಗಿ ಸಹ ಕೆಲಸ ಮಾಡುತ್ತಿದೆ. ಸ್ಟಾರ್ ಆಫ್ ಮೈಸೂರ್ ನ ವರದಿಯಂತೆ ಈ ಸಂಸ್ಥೆ ಕೃಷಿ ಯಂತ್ರೋಪಕರಣಗಳನ್ನು ರಿಪೇರಿ ಮಾಡುತ್ತದೆ ಮತ್ತು ಗೋಬರ್ ಗ್ಯಾಸ್ ಪ್ಲಾಂಟ್‌ಗಳ ನಿರ್ಮಾಣದಲ್ಲಿ ಕೂಡ ತನ್ನನ್ನು ತೊಡಗಿಸಿಕೊಳ್ಳುತ್ತಿದೆ.


(ಚಿತ್ರಕೃಪೆ: ನ್ಯೂಸ್ ಕರ್ನಾಟಕ)




ಹಲವಾರು ಗ್ರಾಮೀಣ ಭಾಗದಲ್ಲಿ ಯೋಜನೆಗಳನ್ನು ಕೈಗೊಂಡು ಯಶಸ್ವಿಯಾಗಿ ಪೂರೈಸಿದ ಗಿರೀಶ್ ಡೆಕ್ಕನ್ ಹೆರಾಲ್ಡ್ ನೊಂದಿಗೆ ಮಾತನಾಡುತ್ತಾ,


"ಕೆಲವು ಯೋಜನೆಗಳಲ್ಲಿ ಕೆಲಸವನ್ನು ಹಣದ ಅಭಾವದಿಂದಾಗಿ ಅರ್ಧಕ್ಕೆ ನಿಲ್ಲಿಸುವ ಸಂಧರ್ಭಗಳು ಎದುರಾಗುತ್ತವೆ, ಆ ಸಮಯದಲ್ಲಿ ನನ್ನೊಂದಿಗೆ ಸಂಪರ್ಕದಲ್ಲಿ ಇರುವ ವ್ಯಕ್ತಿಗಳನ್ನು ಭೇಟಿಮಾಡಿ ಅಗತ್ಯವಿರುವ ಸಂಪನ್ಮೂಲಗಳನ್ನು ಒಟ್ಟುಗೂಡಿಸುತ್ತೇನೆ. ಈ ಸಂದರ್ಭದಲ್ಲಿ ಬಹುತೇಕ ಜನರು ಸಕರಾತ್ಮವಾಗಿ ಸ್ಪಂದಿಸುತ್ತಾರೆ. ಕೆಲವು ಸ್ಥಳಗಳಲ್ಲಿ ಹೇಗೆ ಹೆಪ್ಪುಗಟ್ಟಿದ ಮಂಜುಗಡ್ಡೆಯನ್ನು ಒಡೆಯಲು ಸಮಯ ಹಿಡಿಯುತ್ತದೋ ಅಂತೆಯೇ ಗ್ರಾಮಸ್ಥರ ಮನ ಒಲಿಸಲು ಸಮಯ ಹಿಡಿಯುತ್ತದೆ. ಸ್ಥಳೀಯ ಜನರನ್ನು ಈ ಯೋಜನೆಯಲ್ಲಿ ಒಳಗೊಳ್ಳಿಸಿ ಅವರಿಗೂ ಯೋಜನೆಯ ಮಾಲೀಕತ್ವದ ಜವಾಬ್ದಾರಿಯನ್ನು ಖಾತ್ರಿಪಡಿಸುತ್ತೇವೆ. ಏಕೆಂದರೆ ನಮ್ಮ ಉದ್ದೇಶವೇ ಜನರಿಗಾಗಿ, ಅವರ ಕನಸುಗಳ ಈಡೇರಿಕೆಗಾಕಿ ಸೇತುವೆಗಳನ್ನು ನಿರ್ಮಿಸುವುದು."


ಗಿರೀಶರ ತಂಡಲ್ಲಿರುವ 30 ಜನ ತೂಗುಸೇತುವೆ ನಿರ್ಮಾಣದಲ್ಲಿ ಪರಿಣಿತರಾದವರು, ದೂರದ ಹಳ್ಳಿಗಳು ಸೇತುವೆಗಳಿಲ್ಲದೆ ಎದುರಿಸುತ್ತಿರುವ ಸಮಸ್ಯೆಗಳನ್ನು ಪತ್ತೆಹಚ್ಚಿ ನಂತರ ಯೋಜನೆಯನ್ನು ಕೈಗೊಳ್ಳುತ್ತಾರೆ. ಕೆಲವು ಯೋಜನೆಗಳು ಸರ್ಕಾರದ ನಿಧಿಯಲ್ಲೇ ಪೂರ್ಣಗೊಂಡರೂ, ಅದರ ಪ್ರಾರಂಭದ ಕೆಲಸಗಳನ್ನು ಕೈಗೆತ್ತಿಕೊಂಡಿದ್ದು ಸಮುದಾಯವೇ. ನ್ಯೂಸ್ ಕರ್ನಾಟಕದೊಂದಿಗೆ ಮಾತನಾಡಿದ ಗಿರೀಶ್ ಕಳೆದ ಮೂರು ದಶಕಗಳಲ್ಲಿ 91 ಸೇತುವೆಗಳನ್ನು ಕರ್ನಾಟಕದಲ್ಲಿ, 30 ಸೇತುವೆಗಳನ್ನು ಕೇರಳದಲ್ಲಿ, 3 ಸೇತುವೆಗಳನ್ನು ಒರಿಸ್ಸಾ ಹಾಗೂ ಆಂಧ್ರಪ್ರದೇಶದಲ್ಲಿ ಗಿರೀಶ್ ನಿರ್ಮಿಸಿರುವುದಾಗಿ ಹೇಳಿದ್ದಾರೆ.


ಕೆಲವು ದಿನಗಳ ಹಿಂದೆ ಕರ್ನಾಟಕದಲ್ಲಾದ ಭಾರಿ ಪ್ರವಾಹದಿಂದ ಭಾರದ್ವಾಜ್‌ ನಿರ್ಮಿಸಿದ ಸುಮಾರು ತೂಗು ಸೇತುವೆಗಳು ಹಾಳಾಗಿವೆ. ಅವುಗಳನ್ನು ದುರಸ್ತಿ ಮಾಡುವಂತೆ ಹಲವಾರು ಜನರಿಂದ ಮನವಿಗಳು ಬರುತ್ತಿವೆ. ಅವುಗಳನ್ನು ಪರಿಶೀಲಿಸಿ ಮುಂದಿನ ನಿರ್ಧಾರ ಕೈಗೊಳ್ಳಲ್ಲಿದ್ದಾರೆ ಎಂದು ದಿ ಹಿಂದೂ ವರದಿ ಮಾಡಿದೆ.


ನಿಮ್ಮ ಬಳಿಯೂ ಸ್ಪೂರ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.